ದೆಹಲಿ ರೈತ ಪ್ರತಿಭಟನೆ; ನಾಳೆ ಟ್ರ್ಯಾಕ್ಟರ್ ಜಾಥಾ, 18ಕ್ಕೆ ರೈಲ್‌ ರೋಕೊ ಪ್ರತಿಭಟನೆಗೆ ಕರೆ ನೀಡಿದ ರೈತ ಸಂಘಟನೆ, 5 ಮುಖ್ಯ ಅಂಶಗಳು
ಕನ್ನಡ ಸುದ್ದಿ  /  ಕರ್ನಾಟಕ  /  ದೆಹಲಿ ರೈತ ಪ್ರತಿಭಟನೆ; ನಾಳೆ ಟ್ರ್ಯಾಕ್ಟರ್ ಜಾಥಾ, 18ಕ್ಕೆ ರೈಲ್‌ ರೋಕೊ ಪ್ರತಿಭಟನೆಗೆ ಕರೆ ನೀಡಿದ ರೈತ ಸಂಘಟನೆ, 5 ಮುಖ್ಯ ಅಂಶಗಳು

ದೆಹಲಿ ರೈತ ಪ್ರತಿಭಟನೆ; ನಾಳೆ ಟ್ರ್ಯಾಕ್ಟರ್ ಜಾಥಾ, 18ಕ್ಕೆ ರೈಲ್‌ ರೋಕೊ ಪ್ರತಿಭಟನೆಗೆ ಕರೆ ನೀಡಿದ ರೈತ ಸಂಘಟನೆ, 5 ಮುಖ್ಯ ಅಂಶಗಳು

Farmer Protest; ದೆಹಲಿಯಲ್ಲಿ ರೈತ ಪ್ರತಿಭಟನೆ ಶುರುವಾಗಿದ್ದು, ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿದ್ದಾರೆ. ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ, ನಾಳೆ ಟ್ರ್ಯಾಕ್ಟರ್ ಜಾಥಾ, 18ಕ್ಕೆ ರೈಲ್‌ ರೋಕೊ ಪ್ರತಿಭಟನೆಗೆ ರೈತರು ಕರೆ ನೀಡಿದ್ದಾರೆ. ಗಮನ ಸೆಳೆದ 5 ಮುಖ್ಯ ಅಂಶಗಳ ವಿವರ ಇಲ್ಲಿದೆ.

ದೆಹಲಿ ರೈತ ಪ್ರತಿಭಟನೆ ಮುಂದುವರಿದಿದೆ. ನಾಳೆ ಟ್ರ್ಯಾಕ್ಟರ್ ಜಾಥಾ, 18ಕ್ಕೆ ರೈಲ್‌ ರೋಕೊ ರೈತ ನಾಯಕ ಸರ್ವಾನ್ ಸಿಂಗ್ ಪಂಧೇರ್ (ಎಡ ಚಿತ್ರ) ಪ್ರತಿಭಟನೆಗೆ ಕರೆ ನೀಡಿದೆ. ಬಲ ಚಿತ್ರದಲ್ಲಿರುವುದು ಪ್ರತಿಭಟನಾ ಜಾಥಾದ ದೃಶ್ಯ.
ದೆಹಲಿ ರೈತ ಪ್ರತಿಭಟನೆ ಮುಂದುವರಿದಿದೆ. ನಾಳೆ ಟ್ರ್ಯಾಕ್ಟರ್ ಜಾಥಾ, 18ಕ್ಕೆ ರೈಲ್‌ ರೋಕೊ ರೈತ ನಾಯಕ ಸರ್ವಾನ್ ಸಿಂಗ್ ಪಂಧೇರ್ (ಎಡ ಚಿತ್ರ) ಪ್ರತಿಭಟನೆಗೆ ಕರೆ ನೀಡಿದೆ. ಬಲ ಚಿತ್ರದಲ್ಲಿರುವುದು ಪ್ರತಿಭಟನಾ ಜಾಥಾದ ದೃಶ್ಯ. (LH / PTI)

Farmer Protest; ಕೇಂದ್ರ ಸರ್ಕಾರದ ವಿರುದ್ದ ಪಂಜಾಬ್‌ ರೈತರ ಪ್ರತಿಭಟನೆ ಮುಂದುವರಿದಿದ್ದು, ಶಂಭು ಗಡಿಯಿಂದ ದೆಹಲಿಗೆ ಮೂರು ಬಾರಿ ಪಾದಯಾತ್ರೆ ವಿಫಲವಾದ ನಂತರ ಇದೀಗ ರೈತ ಮುಖಂಡರು ಹೊಸ ತಂತ್ರ ರೂಪಿಸಿದ್ದಾರೆ. ಇದೀಗ ಡಿಸೆಂಬರ್ 16 ರಂದು ಅಂದರೆ ನಾಳೆ ಟ್ರ್ಯಾಕ್ಟರ್ ಜಾಥಾ ನಡೆಯಲಿದೆ ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಸುದ್ದಿಗಾರರಿಗೆ ತಿಳಿಸಿದರು. ಈ ಅವಧಿಯಲ್ಲಿ, ಪಂಜಾಬ್ ಹೊರತುಪಡಿಸಿ ಇಡೀ ದೇಶದಲ್ಲಿ ಟ್ರ್ಯಾಕ್ಟರ್ ಜಾಥಾ ನಡೆಸುವಂತೆ ಕರೆ ನೀಡಲಾಗಿದೆ. ಇನ್ನು ಡಿಸೆಂಬರ್ 18 ರಂದು ಮಧ್ಯಾಹ್ನ 12 ರಿಂದ ಅಪರಾಹ್ನ 3 ಗಂಟೆ ತನಕ ರೈಲುಗಳನ್ನು ತಡೆದು ರೈಲು ರೋಕೋ ಪ್ರತಿಭಟನೆ ನಡೆಸಲಾಗುತ್ತದೆ. ದೆಹಲಿಗೆ ಪಾದಯಾತ್ರೆ ನಡೆಸುವ ಮುಂದಿನ ತಂಡದಲ್ಲಿ ಹರಿಯಾಣದ ರೈತರು ಮತ್ತು ಮಹಿಳೆಯರೂ ಇರುತ್ತಾರೆ ಎಂದು ಹೇಳಿದರು.

ದೆಹಲಿ ರೈತ ಪ್ರತಿಭಟನೆ; ಗಮನಸೆಳೆದ 5 ಮುಖ್ಯ ಅಂಶ

1) ದೆಹಲಿ ಸಮೀಪದ ಅಂಬಾಲ ಶಂಭು ಗಡಿಯಲ್ಲಿ ರೈತರ ಪ್ರತಿಭಟನೆ ಶುರುವಾಗಿ ಬಹಳ ದಿನಗಳಾಗಿವೆ. ಈ ತಿಂಗಳು (ಡಿಸೆಂಬರ್‌) ಮತ್ತೊಮ್ಮೆ ದೆಹಲಿ ಚಲೋ ಪ್ರತಿಭಟನೆ ನಡೆಸುವುದಾಗಿ ರೈತರು ಘೋಷಿಸಿದ್ದರು. ಡಿಸೆಂಬರ್ 6 ರಂದು 101 ರೈತರ ಮೊದಲ ತಂಡ ದೆಹಲಿಯತ್ತ ಹೊರಟಿತ್ತು. ಆದರೆ ಇದನ್ನು ಪೊಲೀಸರು ತಡೆದಿದ್ದರು. ಪ್ರತಿಭಟನಾ ಜಾಥಾ ಹೊರಟಿದ್ದ ರೈತರ ವಿರುದ್ಧ ಪೊಲೀಸರು ಅಶ್ರುವಾಯು ಸಿಡಿಸಿದ್ದರು. ಗಾಯಗೊಂಡ ರೈತರು ಕೆಲ ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

2) ದೆಹಲಿ ಗಡಿಗಳಲ್ಲಿ ಹೊಸದಾಗಿ ರೈತ ಪ್ರತಿಭಟನೆಗಳು ಗಮನಸೆಳೆಯತೊಡಗಿವೆ. ಪಶ್ಚಿಮ ಉತ್ತರ ಪ್ರದೇಶದ ರಾಷ್ಟ್ರೀಯ ರಾಜಧಾನಿ ಪ್ರದೇಶದ ಕೆಲವು ಭಾಗಗಳಲ್ಲಿ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ವರ್ಧಿತ ಪರಿಹಾರ ನೀಡಬೇಕು ಎಂಬ ಬೇಡಿಕೆ ಹೆಚ್ಚಾಗಿದೆ. ಇದಲ್ಲದೇ ದೀರ್ಘಾವಧಿಯ ಕೃಷಿ ಸವಾಲುಗಳ ಕುರಿತು ಕೇಂದ್ರ ಸರ್ಕಾರದ ಭರವಸೆಗಳನ್ನು ಈಡೇರಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ. ಅದೇ ರೀತಿ ಕನಿಷ್ಠ ಬೆಂಬಲ ಬೆಲೆ ಜಾರಿಗೊಳಿಸುವುದಕ್ಕೆ ಕಾನೂನು ಜಾರಿಗೊಳಿಸಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.

3) ಪ್ರತಿ ಸಂಸತ್ ಅಧಿವೇಶನ ಶುರುವಾಗುವಾಗಲೂ ಕೃಷಿಕರ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ವಾಡಿಕೆ ಪ್ರತಿಭಟನೆಯಾಗಿ ಇದು ಕಂಡುಬಂದಿದೆ. ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದ ಹೆಗ್ಗುರುತಾಗಿರುವ ರೈತರ ಚಳವಳಿ ಈಗ ರೈತರ ಪ್ರತಿಭಟನೆಗೆ ಪ್ರೇರಣೆಯಾಗಿ ನಿಂತಿದೆ.

4) ಈ ಹಿಂದೆ, ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರವರ್ತನೆ ಮತ್ತು ಅನುಕೂಲ) ಕಾಯಿದೆ, 2020; ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯಿದೆ, 2020; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯಿದೆ, 2020 ಎಂಬ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಒತ್ತಾಯಿಸಿದ ಪ್ರತಿಭಟನೆ ಯಶಸ್ವಿಯಾಗಿ ನಾಲ್ಕು ವರ್ಷಗಳು ಕಳೆದಿವೆ.

5) ಈಗ ಯುನೈಟೆಡ್ ಕಿಸಾನ್ ಮೋರ್ಚಾದ (ರಾಜಕೀಯೇತರ) ಸಂಚಾಲಕ ರೈತ ಜಗಜಿತ್ ಸಿಂಗ್ ಅವರು ಖಾನೌರಿ ಗಡಿಯಲ್ಲಿ ಆಮರಣಾಂತ ಉಪವಾಸ ಕುಳಿತಿದ್ದಾರೆ. ಹದಗೆಡುತ್ತಿರುವ ಅವರ ಆರೋಗ್ಯ ಎಲ್ಲರ ಮುಂದಿದೆ. ತಮ್ಮ ಬೇಡಿಕೆ ಈಡೇರುವವರೆಗೂ ಚಳವಳಿ ಮುಂದುವರಿಯಲಿದೆ ಎಂದು ಪಂಧೇರ್ ತಿಳಿಸಿದ್ದಾರೆ.

ಜಗಜಿತ್ ಸಿಂಗ್ ದಲ್ಲೆವಾಲ್‌ ಆಮರಣಾಂತ ಉಪವಾಸ ಸತ್ಯಾಗ್ರಹ

ದೆಹಲಿಯ ಖನ್ನೌರಿ ಗಡಿಯಲ್ಲಿ, ಸಂಯುಕ್ತ ಕಿಸಾನ್ ಮೋರ್ಚಾದ (ರಾಜಕೀಯೇತರ) ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಅವರು ಸತತ 20 ನೇ ದಿನವೂ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸಿದರು. ಅವರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ವೈದ್ಯರು ಮೆಡಿಕಲ್ ಬುಲೆಟಿನ್ ಬಿಡುಗಡೆ ಮಾಡಿದ್ದಾರೆ. ಈ ನಡುವೆ, ದಲ್ಲೆವಾಲ್ ಅವರ ಆರೋಗ್ಯದ ಕಡೆಗೆ ಗಮನಹರಿಸುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ. “ಸರಕಾರದ ತಪ್ಪು ನೀತಿಗಳಿಂದ ಆತ್ಮಹತ್ಯೆಗೆ ಒಳಗಾಗುವ ರೈತರ ಜೀವನವು ನನ್ನ ಜೀವನಕ್ಕಿಂತ ಹೆಚ್ಚು ಮೌಲ್ಯ ಉಳ್ಳದ್ದು ಎಂದು ನಾನು ನಂಬುತ್ತೇನೆ. ಕಳೆದ 25 ವರ್ಷಗಳಲ್ಲಿ 5 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂಬುದನ್ನು ಅವರು ನೆನಪಿಸಿದ್ದಾರೆ. ಈ ಮಧ್ಯೆ ಭಾರತೀಯ ಕಿಸಾನ್ ಯೂನಿಯನ್ (ಚಾರುಣಿ) ನೊಂದಿಗೆ ಸಂಬಂಧಿಸಿದ ರೈತರು ಸಭೆ ನಡೆಸಿ ಖಾನೌರಿ ಗಡಿ ತಲುಪಿ, ಪ್ರತಿಭಟನೆಗೆ ಕೈಜೋಡಿಸಲು ನಿರ್ಧರಿಸಿದ್ದಾರೆ.

Whats_app_banner