Bhagavad Gita: ಜಗತ್ತನ್ನು ಗ್ರಹಿಸಲು ಪಂಚೇಂದ್ರಿಯಗಳನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು; ಗೀತೆಯ ಅರ್ಥ ತಿಳಿಯಿರಿ
Bhagavad Gita Updesh: ಜಗತ್ತನ್ನು ಗ್ರಹಿಸಲು ನೆರವಾಗುವ ಇಂದ್ರಿಯಗಳಾದ ಕಣ್ಣುಗಳು, ಕಿವಿಗಳು, ಮೂಗು, ನಾಲಿಗೆ ಮತ್ತು ಸ್ಪರ್ಶ ಇವನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು ಎಂಬುದರ ಅರ್ಥವನ್ನು ಭಗವದ್ಗೀತೆಯ 8ನೇ ಅಧ್ಯಾಯದ ಶ್ಲೋಕ 11 ಮತ್ತು 12 ರಲ್ಲಿ ಓದಿ.
8ನೇ ಅಧ್ಯಾಯ ಭಗವತ್‌ಪ್ರಾಪ್ತಿ - ಶ್ಲೋಕ - 12
ಸರ್ವದ್ವಾರಾಣಿ ಸಂಯಮ್ಯ ಮನೋ ಹೃದಿ ನಿರುದ್ಧ್ಯ ಚ |
ಮೂರ್ಧ್ನ್ಯಾಧಾಯಾತ್ಮನಃ ಪ್ರಾಣಮಾಸ್ಥಿತೋ ಯೋಗಧಾರಣಾಮ್ ||12||
ಅನುವಾದ: ಎಲ್ಲ ಇಂದ್ರಿಯಗಳ ಚಟುವಟಿಕೆಗಳ ವಿಷಯದಲ್ಲಿ ನಿರ್ಲಿಪ್ತನಾಗಿರುವುದೇ ಯೋಗಸ್ಥಿತಿ. ಎಲ್ಲ ಇಂದ್ರಿಯದ್ವಾರಗಳನ್ನು ಮುಚ್ಚಿ, ಮನಸ್ಸುನ್ನು ಹೃದಯದಲ್ಲಿ ನಿಲ್ಲಿಸಿ ಪ್ರಾಣವಾಯುವನ್ನು ಶಿರಸ್ಸಿನಲ್ಲಿ ನಿಲ್ಲಿಸಿ ಮನುಷ್ಯನು ಯೋಗಧಾರಣೆ ಮಾಡುತ್ತಾನೆ.
ಭಾವಾರ್ಥ: ಇಲ್ಲಿ ಸೂಚಿಸಿರುವಂತೆ ಯೋಗಾಭ್ಯಾಸವನ್ನು ಮಾಡಲು ಮೊದಲು ಎಲ್ಲ ಇಂದ್ರಿಯಭೋಗದ ಬಾಗಿಲುಗಳನ್ನೂ ಮುಚ್ಚಬೇಕು. ಇದಕ್ಕೆ ಪ್ರತ್ಯಾಹಾರ ಎಂದು ಹೆಸರು. ಹೀಗೆಂದರೆ ಇಂದ್ರಿಯಗಳನ್ನು ಅವುಗಳ ವಸ್ತುಗಳಿಂದ ಹಿಂದಕ್ಕೆ ಎಳೆದುಕೊಳ್ಳುವುದು. ಜಗತ್ತನ್ನು ಗ್ರಹಿಸಲು ನೆರವಾಗುವ ಇಂದ್ರಿಯಗಳಾದ ಕಣ್ಣುಗಳು, ಕಿವಿಗಳು, ಮೂಗು, ನಾಲಿಗೆ ಮತ್ತು ಸ್ಪರ್ಶ ಇವನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು. ಅವು ತಮ್ಮ ತೃಪ್ತಿಯಲ್ಲಿ ತೊಡಗದಂತೆ ನೋಡಿಕೊಳ್ಳಬೇಕು. ಹೀಗೆ ಮನಸ್ಸು ಹೃದಯದಲ್ಲಿರುವ ಪರಮಾತ್ಮನಲ್ಲಿ ಕೇಂದ್ರೀಕೃತವಾಗುತ್ತದೆ. ಜೀವಶಕ್ತಿಯು ಶಿರಸ್ಸಿನ ತುದಿಗೆ ಏರುತ್ತದೆ. ಆರನೆಯ ಅಧ್ಯಾಯದಲ್ಲಿ ಈ ಪ್ರಕ್ರಿಯೆಯನ್ನು ವಿವರವಾಗಿ ವರ್ಣಿಸಿದೆ. ಆದರೆ ಹಿಂದೆಯೇ ಹೇಳಿದಂತೆ ಈ ಅಭ್ಯಾಸವು ಈ ಯುಗದಲ್ಲಿ ಕಾರ್ಯ ಸಾಧ್ಯವಲ್ಲ. ಅತ್ಯುತ್ತಮ ರೀತಿ ಎಂದರೆ ಕೃಷ್ಣಪ್ರಜ್ಞೆ. ಮನುಷ್ಯನು ತನ್ನ ಮನಸ್ಸನ್ನು ಭಕ್ತಿಪೂರ್ವಕ ಸೇವೆಯಲ್ಲಿ - ಸದಾ ಕೃಷ್ಣನಲ್ಲಿ - ನಿಲ್ಲಿಸಲು ಸಾಧ್ಯವಾದರೆ ಆತನಿಗೆ ಸಮಾಧಿಸ್ಥಿತಿಯಲ್ಲಿ ನಿಲ್ಲುವುದು ಬಹಳ ಸುಲಭವಾಗುತ್ತದೆ.
8ನೇ ಅಧ್ಯಾಯ ಭಗವತ್‌ಪ್ರಾಪ್ತಿ - ಶ್ಲೋಕ - 13
ಓಂ ಇತ್ಯೇಕಾಕ್ಷರಂ ಬ್ರಹ್ಮ ವ್ಯಾಹರನ್ಮಾಮಸ್ಮರನ್ |
ಯಃ ಪ್ರಯಾತಿ ತ್ಯಜನ್ ದೇಹಂ ಸ ಯಾತಿ ಪರಮಾಂ ಗತಿಮ್ ||13||
ಅನುವಾದ: ಈ ಯೋಗಧಾರಣೆಯ ಸ್ಥಿತಿಯನ್ನು ಸಾಧಿಸಿ ವರ್ಣಗಳ ಪರಮ ಸಂಯೋಜನೆಯಾದ ಓಂ ಎಂಬ ಅಕ್ಷರವನ್ನು ಉಚ್ಚರಿಸುತ್ತ, ದೇವೋತ್ತಮ ಪರಮ ಪುರುಷನನ್ನು ಕುರಿತು ಧ್ಯಾನಿಸುತ್ತ ದೇಹವನ್ನು ಬಿಟ್ಟವನು ನಿಶ್ಚಯವಾಗಿಯೂ ಅಧ್ಯಾತ್ಮಿಕ ಲೋಕಗಳನ್ನು ಹೊಂದುವನು.
ಭಾವಾರ್ಥ: ಓಂ, ಬ್ರಹ್ಮನ್ ಮತ್ತು ಶ್ರೀಕೃಷ್ಣ ಬೇರೆ ಬೇರೆಯಲ್ಲ ಎಂದು ಇಲ್ಲಿ ಸ್ಪಷ್ಟವಾಗಿ ಹೇಳಿದೆ. ಕೃಷ್ಣನ ನಿರಾಕಾರ ಶಬ್ದವೇ ಓಂ. ಹರೇ ಕೃಷ್ಣ ಶಬ್ದದಲ್ಲಿ ಓಂ ಸೇರಿದೆ. ಈ ಯುಗದಲ್ಲಿ ಹರೇ ಕೃಷ್ಣ ಮಂತ್ರದ ಜಪವನ್ನು ಮಾಡಬೇಕೆಂದು ಸ್ಪಷ್ಟವಾಗಿ ಸೂಚನೆ ಮಾಡಿದೆ. ಆದುರಿಂದ ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ - ಹರೇ ರಾಮ, ಹರೇ ರಾಮ, ರಾಮ ರಾಮ ಹರೇ ಹರೇ ಮಂತ್ರವನ್ನು ಉಚ್ಚರಿಸುತ್ತ ಮನುಷ್ಯನು ದೇಹವನ್ನು ಬಿಟ್ಟರೆ, ಅವನ ಅಭ್ಯಾಸ ರೀತಿಗೆ ಅನುಗುಣವಾಗಿ ಅವನ ಖಂಡಿತವಾಗಿಯೂ ದಿವ್ಯಲೋಕಗಳಲ್ಲಿ ಒಂದನ್ನು ಸೇರುವನು. ಕೃಷ್ಣನ ಭಕ್ತರು ಕೃಷ್ಣ ಲೋಕವಾದ ಗೋಲೋಕ ವೃಂದಾವನನ್ನು ಸೇರುವರು. ಸಾಕಾರವಾದಿಗಳಿಗೆ ಅಧ್ಯಾತ್ಮಿಕ ಗಗನದಲ್ಲಿ ವೈಕುಂಠಲೋಕಗಳೆಂಬ ಹೆಸರಿನ ಇತರ ಅಸಂಖ್ಯಾತ ಲೋಕಗಳಿವೆ. ನಿರಾಕಾರವಾದಿಗಳು ಬ್ರಹ್ಮಜ್ಯೋತಿಯಲ್ಲೇ ಉಳಿಯುವರು.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.