ಭಗವದ್ಗೀತೆ: ಕೋಪ ಮನುಷ್ಯನ ಬುದ್ಧಿಯನ್ನು ನಾಶಮಾಡುತ್ತೆ; ಗೀತೆಯಲ್ಲಿನ ಅರ್ಥ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಕೋಪ ಮನುಷ್ಯನ ಬುದ್ಧಿಯನ್ನು ನಾಶಮಾಡುತ್ತೆ; ಗೀತೆಯಲ್ಲಿನ ಅರ್ಥ ತಿಳಿಯಿರಿ

ಭಗವದ್ಗೀತೆ: ಕೋಪ ಮನುಷ್ಯನ ಬುದ್ಧಿಯನ್ನು ನಾಶಮಾಡುತ್ತೆ; ಗೀತೆಯಲ್ಲಿನ ಅರ್ಥ ತಿಳಿಯಿರಿ

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಕೋಪ ಮನುಷ್ಯನ ಬುದ್ಧಿಯನ್ನು ನಾಶಮಾಡುತ್ತೆ ಎಂಬುದರ ಅರ್ಥ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಕ್ರೋಧಾಮ್ ಭವತಿ ಸಮ್ಮೋಹಃ ಸಮ್ಮೋಹಾತ್ಸ್ಮತಿವಿಭ್ರಮಃ |

ಸ್ಮೃತಿಭ್ರಂಶಾದ್ ಬುದ್ಧಿನಾಶೋ ಬುದ್ಧಿನಾಶಾತ್ಪ್ರಣಶ್ಯತಿ ||63||

ಕ್ರೋಧದಿಂದ ಸಂಮೋಹವು ಉಂಟಾಗುತ್ತದೆ. ಸಂಮೋಹದಿಂದ ಸ್ಮೃತಿಯ ಭ್ರಮೆಯುಂಟಾಗುತ್ತದೆ. ಸ್ಮೃತಿಭ್ರಮೆಯಿಂದ ಬುದ್ಧಿನಾಶವಾಗುತ್ತದೆ. ಬುದ್ಧಿನಾಶವಾದಾಗ ಮನುಷ್ಯ ಮತ್ತೆ ಐಹಿಕ ಪ್ರಪಂಚದಲ್ಲಿ ಮುಳುಗುತ್ತಾರೆ.

ಶ್ರೀಲ ರೂಪ ಗೋಸ್ವಾಮಿಯವರು ಈ ಆದೇಶವನ್ನು ನೀಡಿದ್ದಾರೆ.

ಪ್ರಾಪಂಚಿಕತಯಾ ಬುದ್ಧ್ಯಾ ಹರಿಸಮ್ಬನ್ಧಿವಸ್ತುನಃ|

ಮುಮುಕ್ಷುಭಿಃ ಪರಿತ್ಯಾಗೋ ವೈರಾಗ್ಯಂ ಫಲ್ಗು ಕಥ್ಯತೇ ||

ಕೃಷ್ಣಪ್ರಜ್ಞೆಯನ್ನು ಬೆಳೆಸಿಕೊಂಡರೆ ಪ್ರತಿಯೊಂದು ವಸ್ತುವೂ ಭಗವಂತನ ಸೇವೆಗೆ ಒದಗುತ್ತದೆ ಎಂದು ತಿಳಿಯುತ್ತದೆ. ಕೃಷ್ಣಪ್ರಜ್ಞೆಯ ಅರಿವಿಲ್ಲದವರು ಕೃತಕವಾಗಿ ಪ್ರಾಪಂಚಿಕ ವಸ್ತುಗಳನ್ನು ದೂರವಿಡಲು ಪ್ರಯತ್ನಿಸುತ್ತಾರೆ. ಪರಿಣಾಮವಾಗಿ ಅವರು ಐಹಿಕ ಬಂಧನದಿಂದ ಬಿಡುಗಡೆಯನ್ನು ಬಯಸಿದರೂ ವೈರಾಗ್ಯದ ಪರಿಪೂರ್ಣ ಹಂತವನ್ನು ಮುಟ್ಟುವುದಿಲ್ಲ. ಹಾಗೆಂದು ಕರೆಯಲಾಗುವ ಅವರ ವೈರಾಗ್ಯ ಫಲ್ಗು, ಅಥವಾ ಅಷ್ಟು ಮುಖ್ಯವಲ್ಲದ್ದು. ಇದಕ್ಕೆ ಪ್ರತಿಯಾಗಿ ಕೃಷ್ಣಪ್ರಜ್ಞೆ ಇರುವವನು ಪ್ರತಿಯೊಂದು ವಸ್ತುವನ್ನೂ ಭಗವಂತನ ಸೇವೆಯಲ್ಲಿ ಹೇಗೆ ಬಳಸಬೇಕು ಎಂದು ತಿಳಿದಿರುತ್ತಾನೆ. ಆದ್ದರಿಂದ ಆತನು ಐಹಿಕ ಪ್ರಜ್ಞೆಗೆ ಬಲಿಯಾಗುವುದಿಲ್ಲ.

ಉದಾಹರಣೆಗೆ, ನಿರಾಕಾರವಾದಿಯ ದೃಷ್ಟಿಯಲ್ಲಿ ಭಗವಂತ ಅಥವಾ ಪರಾತ್ಪರವಾದದ್ದು ನಿರಾಕಾರವಾದದ್ದರಿಂದ ಏನನ್ನೂ ತಿನ್ನಲಾರದು. ನಿರಾಕಾರವಾದಿಯು ಒಳ್ಳೆಯ ತಿಂಡಿತಿನಿಸುಗಳನ್ನು ದೂರವಿಡಲು ಪ್ರಯತ್ನಿಸುತ್ತಾನೆ. ಆದರೆ ಕೃಷ್ಣನು ಪರಮಭೋಗಿ ಎಂದೂ ಅವನಿಗೆ ಮಾಡಿದ ರುಚಿಯಾದ ನೈವೇದ್ಯವನ್ನೆಲ್ಲ ಅವನು ತಿನ್ನುತ್ತಾನೆ ಎಂದೂ ಭಕ್ತನಿಗೆ ಗೊತ್ತು. ಆದುದರಿಂದ ಭಗವಂತನಿಗೆ ರುಚಿಯಾದ ತಿಂಡಿಗಳನ್ನು ನೈವೇದ್ಯ ಮಾಡಿ ಭಕ್ತನು ಉಳಿದ ಪ್ರಸಾದವನ್ನು ಸ್ವೀಕರಿಸುತ್ತಾರೆ.

ಹೀಗೆ ಎಲ್ಲವೂ ಆಧ್ಯಾತ್ಮಿಕವಾಗುತ್ತದೆ ಮತ್ತು ಪತನದ ಭಯವಿಲ್ಲ. ಭಕ್ತನು ಕೃಷ್ಣಪ್ರಜ್ಞೆಯಿಂದ ಪ್ರಸಾದವನ್ನು ಸ್ವೀಕರಿಸುತ್ತಾನೆ. ಆದರೆ ಭಕ್ತನಲ್ಲದವನು ಅದು ಪ್ರಾಪಂಚಿಕವಾದದ್ದೆಂದು ತಿರಸ್ಕರಿಸುತ್ತಾನೆ. ಆದುದರಿಂದ ನಿರಾಕಾರವಾದಿಯಾದವನು ತನ್ನ ಕೃತಕ ವೈರಾಗ್ಯದ ಫಲವಾಗಿ ಬದುಕನ್ನು ಸವಿಯಲಾರ. ಈ ಕಾರಣಕ್ಕಾಗಿ ಮನಸ್ಸು ಸ್ವಲ್ಪ ಕಲಕಿದರೂ ಆತನು ಐಹಿ ಬದುಕಿಗೆ ಬೀಳುತ್ತಾನೆ. ಇಂತಹ ಆತ್ಮನ ಮುಕ್ತಿಯವರೆಗೆ ಏರಿದರೂ ಸಹ ಅವನಿಗೆ ಭಕ್ತಿಪೂರ್ವಕ ಸೇವೆಯ ನೆರವಿಲ್ಲದಿರುವುದರಿಂದ ಮತ್ತೆ ಕೆಳಕ್ಕೆ ಬೀಳುತ್ತಾನೆ ಎಂದು ಹೇಳಲಾಗಿದೆ.

ರಾಗದ್ವೇಷವಿಮುಕ್ತೈಸ್ತು ವಿಷಯಾನಿನ್ದ್ರಿಯೈಶ್ಚರನ್ |

ಆತ್ಮವಶ್ಯೈರ್ವಿಧೇಯಾತ್ಮಾ ಪ್ರಸಾದಮಧಿಗಚ್ಛತಿ ||64||

ಆದರೆ ರಾಗದ್ವೇಷಗಳಿಂದ ಬಿಡುಗಡೆಯಾಗಿ ಸ್ವಾತಂತ್ರ್ಯವನ್ನು ಕ್ರಮಗೊಳಿಸುವ ತತ್ವಗಳ ಮೂಲಕ ತನ್ನ ಇಂದ್ರಿಯಗಳನ್ನು ನಿಯಂತ್ರಿಸಬಲ್ಲವನು ಭಗವಂತನ ಪೂರ್ಣ ದಯೆನ್ನು ಪಡೆಯಬಲ್ಲ.

ಒಬ್ಬ ಮನುಷ್ಯನು ಯಾವುದಾದರೂ ಕೃತಕ ರೀತಿಗಳಲ್ಲಿ ಹೊರಗಿನಿಂದ ಇಂದ್ರಿಯಗಳನ್ನು ನಿಯಂತ್ರಿಸಬಹುದು. ಆದರೆ ಇಂದ್ರಿಯಗಳು ಭಗವಂತನ ದಿವ್ಯ ಸೇವೆಯಲ್ಲಿ ತೊಡಗಿಲ್ಲದಿದ್ದರೆ ಅವನು ಪತನವಾಗುವ ಸಾಧ್ಯತೆಯಿದೆ ಎಂದು ಆಗಲೇ ವಿವರಿಸಿದೆ. ಸಂಪೂರ್ಣ ಕೃಷ್ಣಪ್ರಜ್ಞೆಯಲ್ಲಿರುವವನು ಭೋಗಾಸಕ್ತಿಯ ಮಟ್ಟದಲ್ಲಿನೆ ಎಂದು ಕಂಡರೂ ಅವನಿಗೆ ಕೃಷ್ಣಪ್ರಜ್ಞೆಯಿರುವುದರಿಂದ ಭೋಗಾಸಕ್ತಿ ಇರುವುದಿಲ್ಲ. ಕೃಷ್ಣಪ್ರಜ್ಞೆ ಇರುವ ಮನುಷ್ಯನಿಗೆ ಕೃಷ್ಣನ ತೃಪ್ತಿಯೇ ಮುಖ್ಯ. ಬೇರೇನೂ ಅಲ್ಲ. ಆದುದರಿಂದ ಅವನು ಎಲ್ಲ ಮೋಹ - ನಿರ್ಮೋಹಗಳನ್ನು ಮೀರಿದವನು.

ಕೃಷ್ಣನು ಬಯಸಿದರೆ ಭಕ್ತನು ಸಾಮಾನ್ಯವಾಗಿ ಅಪೇಕ್ಷಣೀಯವಲ್ಲ ಎಂದು ಭಾವಿಸಿದುದನ್ನು ಮಾಡಬಹುದು. ಕೃಷ್ಣನು ಅಪೇಕ್ಷಿಸದಿದ್ದರೆ ಸಾಮಾನ್ಯವಾಗಿ ತನ್ನ ತೃಪ್ತಿಗಾಗಿ ಅವನು ಮಾಡುತ್ತಿದ್ದದನ್ನೂ ಮಾಡಲಾಗುದು. ಆದುದರಿಂದ ಏನನ್ನಾದರೂ ಮಾಡುವುದು ಅಥವಾ ಮಾಡದಿರುವುದು ಅವನ ಕೈಯಲ್ಲಿದೆ. ಏಕೆಂದರೆ ಅವನು ಕೃಷ್ಣನ ಆದೇಶಕ್ಕೆ ಅನುಗುವಣವಾಗಿಯೇ ಕೆಲಸ ಮಾಡುತ್ತಾನೆ. ಈ ಪ್ರಜ್ಞೆಯು ಭಗವಂತನ ಅನಿಮಿತ್ತ ಕರುಣೆ. ಭಕ್ತನು ಇಂದ್ರಿಯಾಸಕ್ತಿಯನ್ನು ಹೊಂದಿದ್ದರೂ ಈ ಕರುಣೆಯನ್ನು ಪಡೆಯಬಹದು.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.