ಸ್ಟಾರ್‌ಗಳ ದೃಷ್ಟಿಯಲ್ಲಿ ಫ್ಯಾನ್ಸ್‌ಗಳೆಂದರೆ ..; ಫ್ಯಾನಾಟಿಕ್ಸ್ ಸಾಕ್ಷ್ಯಚಿತ್ರದಲ್ಲಿ ಕಿಚ್ಚ ಸುದೀಪ್, ಅಲ್ಲು ಅರ್ಜುನ್, ಸೇತುಪತಿ
Fanatics OTT Release Date: ಫ್ಯಾನಾಟಿಕ್ಸ್ ಸಾಕ್ಷ್ಯಚಿತ್ರದಲ್ಲಿ ಕಿಚ್ಚ ಸುದೀಪ್ ಜತೆಗೆ ಅಲ್ಲು ಅರ್ಜುನ್ ಮತ್ತು ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಟ್ರೇಲರ್ ಹೊರತಂದಿರುವ ಈ ಸಾಕ್ಷ್ಯಚಿತ್ರ ಡಿಸೆಂಬರ್ ಮೊದಲ ವಾರದಲ್ಲಿಯೇ ಒಟಿಟಿಗೆ ಪ್ರವೇಶಿಸಲಿದೆ.
Fanatics Documentary: ಫ್ಯಾನ್ಸ್ ಅಂದರೆ ಅದು ಸೌತ್ ಸಿನಿಮಾ ಇಂಡಸ್ಟ್ರಿಯದ್ದೇ! ಹೀಗೊಂದು ಮಾತನ್ನು ನಮಗೆ ನಾವೇ ಹೇಳಿಕೊಳ್ಳುತ್ತಿಲ್ಲ. ಉತ್ತರ ಭಾರತದವರೂ, ಬಾಲಿವುಡ್‌ನವರೂ ಹೀಗೆ ದಕ್ಷಿಣ ಭಾರತದ ಸಿನಿಮಾರಂಗದ ಬಗ್ಗೆ ಮಾತನಾಡಿಕೊಳ್ಳುತ್ತಾರೆ. ಏಕೆಂದರೆ, ಸಿನಿಮಾ ಮತ್ತು ಸಿನಿಮಾ ಸೆಲೆಬ್ರಿಟಿಗಳ ಕ್ರೇಜ್ ಇಲ್ಲಿ ಒಂದು ತೂಕ ಜಾಸ್ತಿ. ಮೈ ಕೈ ಮೇಲೆಲ್ಲ ಹಚ್ಚೆಗಳಿಂದ ಅಭಿಮಾನ ಕಂಡರೆ, ಚಿತ್ರಮಂದಿರಗಳ ಮುಂದೆ ನೆಚ್ಚಿನ ನಟನ ಕಟೌಟ್‌ಗೆ ಹಾಲಿನ ಅಭಿಷೇಕವೂ ನಡೆಯುತ್ತದೆ. ಒಮ್ಮೊಮ್ಮೆ ಅತಿರೇಕಕ್ಕೆ ಹೋದ ಉದಾಹರಣೆಗಳೂ ಸಾಕಷ್ಟಿವೆ. ಈಗ್ಯಾಕೆ ಈ ಮಾತು ಬಂತು? ಅದಕ್ಕೆ ಫ್ಯಾನಾಟಿಕ್ಸ್ (Fanatics) ಸಾಕ್ಷ್ಯಚಿತ್ರ ಉತ್ತರ ನೀಡಲಿದೆ.
ಸೌತ್‌ನ ತ್ರಿವಳಿ ಸ್ಟಾರ್ ನಟರು
ಈ ಸಾಕ್ಷ್ಯಚಿತ್ರದಲ್ಲಿ ಸೌತ್ ಸಿನಿ ದುನಿಯಾದ ಸ್ಟಾರ್ ನಟರಾದ ಕನ್ನಡದಿಂದ ಕಿಚ್ಚ ಸುದೀಪ್, ತೆಲುಗಿನಿಂದ ಅಲ್ಲು ಅರ್ಜುನ್ ಮತ್ತು ತಮಿಳಿನಿಂದ ವಿಜಯ್ ಸೇತುಪತಿ ಫ್ಯಾನಾಟಿಕ್ಸ್ ಟ್ರೇಲರ್‌ನಲ್ಲಿ ತಮ್ಮ ಅಭಿಮಾನಿಗಳ ಬಗ್ಗೆ ಮಾತನಾಡಿದ್ದಾರೆ. ಮೊದಲಿಗೆ ಕಿಚ್ಚ ಸುದೀಪ್ ಅವರಿಂದಲೇ ಟ್ರೇಲರ್ ತೆರೆದುಕೊಳ್ಳುತ್ತದೆ. "ಆದಾಯ ಬರುವುದು ನಿಮ್ಮ ಸ್ಟಾರ್‌ಡಮ್‌ನಿಂದ. ಅವರೇ ನಿಮ್ಮನ್ನು ಹೊಂದಿದ್ದಾರೆ.. ಅವರೇ ನಿಮ್ಮ ಮಾಲೀಕರು.. ನೀವು ಅವರಿಗೆ ಸೇರಿದವರು" ಎಂದು ಅಭಿಮಾನಿಗಳ ಬಗ್ಗೆ ಮಾತನಾಡುವ ಕಿಚ್ಚ, ಈ ಹೊಸ ಸಾಕ್ಷ್ಯಚಿತ್ರದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿನ ಫ್ಯಾನ್ಸ್ ಕ್ರೇಜ್, ಅಭಿಮಾನಿಗಳ ವರ್ತನೆಯನ್ನು ಡಿಕೋಡ್ ಮಾಡಲು ಪ್ರಯತ್ನಿಸಿದ್ದಾರೆ.
ಬರೀ ಕಿಚ್ಚ ಸುದೀಪ್ ಮಾತ್ರವಲ್ಲದೆ, ತೆಲುಗು ಚಿತ್ರರಂಗದಿಂದ ಅಲ್ಲು ಅರ್ಜುನ್ ಮತ್ತು ತಮಿಳು ಚಿತ್ರೋದ್ಯಮದ ಸ್ಟಾರ್ ನಟ ವಿಜಯ್ ಸೇತುಪತಿ ಸ್ಟಾರ್‌ಗಳಾಗಿ ಈ ಸಾಕ್ಷ್ಯಚಿತ್ರದಲ್ಲಿ ಭಾಗವಹಿಸಿದರೆ, ಇವರ ಜೊತೆಗೆ ವೀಕ್ಷಕರು ಮತ್ತು ಮೆಂಟಲ್ ಹೆಲ್ತ್ ಎಕ್ಸ್‌ಪರ್ಟ್‌ಗಳು ಫ್ಯಾನಾಟಿಕ್ಸ್ ಸಾಕ್ಷ್ಯಚಿತ್ರದಲ್ಲಿ ಅಭಿಮಾನಿಗಳ ಈ ಗೀಳಿನ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಟ್ರೇಲರ್‌ನಲ್ಲಿ ಏನಿದೆ?
ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು, ಅಭಿಮಾನಿಗಳೇ ಸರ್ವಸ್ವವೆಂದು ಘೋಷಿಸುವ ಫೂಟೇಜ್‌ನೊಂದಿಗೆ ಟ್ರೇಲರ್ ತೆರೆದುಕೊಳ್ಳುತ್ತದೆ. ನಂತರ ಅಲ್ಲು ಅರ್ಜುನ್ ಅವರು ದಕ್ಷಿಣದಲ್ಲಿ ಸ್ಟಾರ್‌ಗಳನ್ನು ಹೇಗೆ ಆರಾಧಿಸಲಾಗುತ್ತದೆ ಎಂಬ ಬಗ್ಗೆ ಮಾತನಾಡಿದ್ದಾರೆ. ಕಿಚ್ಚ ಸುದೀಪ್ ಸಹ ಮಾತನಾಡಿ, ಅಭಿಮಾನಿಗಳು ನೆಚ್ಚಿನ ನಟನ ಕಟ್‌ಔಟ್‌ಗಳಿಗೆ ಹಾಲಿನ ಅಭಿಷೇಕ ಮಾಡುತ್ತಾರೆ, ದೇವರು ಎಂಬಂತೆ ಪರಿಗಣಿಸುತ್ತಾರೆ ಎಂದು ಸುದೀಪ್ ಹೇಳುತ್ತಾರೆ. ಇದರ ಜತೆಗೆ ಇದೇ ಅಭಿಮಾನದ ಗೀಳು ಎಷ್ಟೆಲ್ಲ ಅಪಾಯಕ್ಕೂ ಕಾರಣವಾಗಬಹುದೆಂದು ತಜ್ಞರೂ ಕಳವಳ ವ್ಯಕ್ತಪಡಿಸಿದ್ದಾರೆ.
ಯಾವ ಒಟಿಟಿ, ಯಾವಾಗಿನಿಂದ ಸ್ಟ್ರೀಮಿಂಗ್?
ಆರ್ಯನ್ ಡಿ ರಾಯ್ ನಿರ್ದೇಶನದಲ್ಲಿ ಮೂಡಿಬಂದಿದೆ ಫ್ಯಾನಾಟಿಕ್ಸ್ ಸಾಕ್ಷ್ಯಚಿತ್ರ. ಈ ಸಾಕ್ಷ್ಯಚಿತ್ರವನ್ನು ಅರ್ಪಿತಾ ಚಟರ್ಜಿ ನಿರ್ಮಿಸಿದ್ದಾರೆ. ಇನ್ನೇನು ಇದೇ ಡಿಸೆಂಬರ್ 7ರಿಂದ DocuBay ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಒಟಿಟಿಪ್ಲೇಯ ಪ್ರೀಮಿಯಂ ಕೊಡುಗೆ ಇದಾಗಿದೆ. ಇತ್ತೀಚೆಗಷ್ಟೇ ಫ್ಯಾನಾಟಿಕ್ಸ್ ಸಾಕ್ಷ್ಯಚಿತ್ರದ ಟ್ರೇಲರ್ ಸಹ ಬಿಡುಗಡೆ ಆಗಿದ್ದು, ಈ ಸಾಕ್ಷ್ಯಚಿತ್ರದಲ್ಲಿ ಅಭಿಮಾನಿಗಳ ಅಭಿಮಾನವನ್ನು ಸಿನಿಮಾ ಸೂಪರ್‌ಸ್ಟಾರ್ ನೋಡುವ ದೃಷ್ಟಿಕೋನ ಹೇಗಿರುತ್ತದೆ? ಎಂಬ ಪರಿಕಲ್ಪನೆಯಲ್ಲಿ ಇದನ್ನು ಹೆಣೆಯಲಾಗಿದೆ.
ವಿಭಾಗ