30 ವರ್ಷದಿಂದ ಜೈಲಲ್ಲಿರುವ ಪಶ್ಚಿಮ ಬಂಗಾಳದ ವ್ಯಕ್ತಿಗೆ ಈಗ 104 ವರ್ಷ, ಜಾಮೀನು ಕೇಳಿದ್ರು; ಸುಪ್ರೀಂ ಕೋರ್ಟ್ ಹೇಳಿದ್ದಿಷ್ಟು
Supreme Court of India: ಆ ವ್ಯಕ್ತಿಗೆ ಈಗ 104 ವರ್ಷ. ಕಳೆದ 30 ವರ್ಷಗಳಿಂದ ಜೈಲಿನಲ್ಲಿದ್ದಾರೆ. ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ವ್ಯಕ್ತಿ ಜಾಮೀನು ಅರ್ಜಿ ಪರಿಶೀಲಿಸಿದ ಸುಪ್ರೀಂ ಕೋರ್ಟ್ ಕೆಲವು ಅಂಶಗಳನ್ನು ಗಮನಿಸಿ ಹೇಳಿದ್ದಿಷ್ಟು-
ನವದೆಹಲಿ: ಮೂವತ್ತು ವರ್ಷದಿಂದ ಜೈಲಲ್ಲಿರುವ ವ್ಯಕ್ತಿಗೆ ಈಗ 104 ವರ್ಷ. ಜಾಮೀನು ಬೇಕು ಎಂದು ಅರ್ಜಿ ಸಲ್ಲಿಸಿದ ವ್ಯಕ್ತಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಮಧ್ಯಂತರ ಜಾಮೀನು ನೀಡಿದೆ. ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠ ಶುಕ್ರವಾರ ಈ ತೀರ್ಪು ನೀಡಿದೆ. ಮೂರು ದಶಕದಿಂದ ಜೈಲಲ್ಲಿರುವ ವಯೋವೃದ್ಧನ ಹೆಸರು ರಸಿಕ ಚಂದ್ರ ಮಂಡಲ್. 1920ರಲ್ಲಿ ಜನಿಸಿದ್ದಾರೆ. ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯವರು. ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ವ್ಯಕ್ತಿಗೆ ವಯೋಸಹಜ ತೊಂದರೆಗಳಿವೆ ಎಂದು ಜಾಮೀನು ಅರ್ಜಿಯಲ್ಲಿ ತಿಳಿಸಲಾಗಿತ್ತು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರ ಪೀಠವು ತನ್ನ ಆದೇಶದಲ್ಲಿ, 'ರಿಟ್ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ವಿಚಾರಣಾ ನ್ಯಾಯಾಲಯದ ನಿಯಮಗಳು ಮತ್ತು ಷರತ್ತುಗಳನ್ನು ಗಮನದಲ್ಲಿಟ್ಟುಕೊಂಡು ಅರ್ಜಿದಾರ ರಸಿಕ ಚಂದ್ರ ಮಂಡಲ್‌ಗೆ ಮಧ್ಯಂತರ ಜಾಮೀನು ನೀಡುವಂತೆ ನಾವು ನಿರ್ದೇಶಿಸುತ್ತೇವೆ' ಎಂದು ಹೇಳಿದೆ.
30 ವರ್ಷದಿಂದ ಜೈಲಲ್ಲಿರುವ ವ್ಯಕ್ತಿಗೆ ಈಗ 104 ವರ್ಷ; ಆತನಿಗೇಕೆ ಜೀವಾವಧಿ ಶಿಕ್ಷೆ
ಪಶ್ಚಿಮ ಬಂಗಾಳದ ರಸಿಕ ಚಂದ್ರ ಮಂಡಲ್ 1988ರ ಕೊಲೆ ಪ್ರಕರಣದ ಆರೋಪಿಯಾಗಿದ್ದರು. ಅವರ ವಿರುದ್ಧದ ಆರೋಪ ಸಾಬೀತಾಗಿ 1994ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದರು. ಅವರನ್ನು ಪೊಲೀಸರು ಬಂಧಿಸಿ ಸೆರೆಮನೆಗೆ ಕಳುಹಿಸಿದರು. ಆಗ ಅವರಿಗೆ 68 ವರ್ಷ ವಯಸ್ಸಾಗಿತ್ತು. ಈ ಶಿಕ್ಷೆಯ ವಿರುದ್ಧ ಅವರು ಕಲ್ಕತ್ತಾ ಹೈಕೋರ್ಟ್‌ನಲ್ಲಿ ಅಪೀಲು ಸಲ್ಲಿಸಿದ್ದರು. 2018ರಲ್ಲಿ ಈ ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಇದಾದ ನಂತರ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಇಲ್ಲಿಯೂ ಅವರಿಗೆ ನಿರಾಸೆಯಾಗಿದೆ. ಕೊನೆಗೆ ರಸಿಕ ಚಂದ್ರ ಮಂಡಲ್ ಅವರು 99 ವರ್ಷದವರಾಗಿದ್ದಾಗ 2020 ರಲ್ಲಿ ಮತ್ತೊಮ್ಮೆ ಸುಪ್ರೀಂ ಕೋರ್ಟ್‌ಗೆ ಹೊಸ ಮನವಿ ಸಲ್ಲಿಸಿದರು. ವೃದ್ಧಾಪ್ಯ ಮತ್ತು ಅನಾರೋಗ್ಯದ ಕಾರಣ ನೀಡಿ, ಶಿಕ್ಷೆಯ ಅವಧಿಗೂ ಮೊದಲೇ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಅದರ ವಿಚಾರಣೆ ಇನ್ನೂ ಬಾಕಿ ಇದೆ.
ಸುಪ್ರೀಂ ಕೋರ್ಟ್‌ನಲ್ಲಿ ಏನೇನಾಯಿತು
ಈ ಹಿಂದೆ, 2021ರಲ್ಲಿ ಅಂದಿನ ನ್ಯಾಯಮೂರ್ತಿ ಎ ಅಬ್ದುಲ್ ನಜೀರ್ ಮತ್ತು ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿದ್ದ ಪೀಠವು ಈ ಪ್ರಕರಣದಲ್ಲಿ ಮೇ 7 ರಂದು ಪಶ್ಚಿಮ ಬಂಗಾಳ ಸರ್ಕಾರಕ್ಕೆ ನೋಟಿಸ್ ನೀಡಿತು. ಜೈಲಿನಲ್ಲಿರುವ ಮಂಡಲ್ ಅವರ ದೈಹಿಕ ಸ್ಥಿತಿ ಮತ್ತು ಆರೋಗ್ಯದ ಕುರಿತಾಗಿ 2019ರ ಜನವರಿ 14 ರಿಂದ ಈಚೆಗಿನ ವರದಿಯನ್ನು ಸಲ್ಲಿಸುವಂತೆ ಅದು ಸುಧಾರಣಾ ಗೃಹದ ಅಧೀಕ್ಷಕರನ್ನು ಕೇಳಿತ್ತು.
ಅದಾಗಿ, ಶುಕ್ರವಾರ (ನವೆಂಬರ್ 29) ಈ ಪ್ರಕರಣದಲ್ಲಿ ಸಲ್ಲಿಕೆಯಾಗಿದ್ದ ಜಾಮೀನು ಅರ್ಜಿ ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರ ಪೀಠದ ಮುಂದೆ ಪಟ್ಟಿ ಮಾಡಲಾಯಿತು. ಇಲ್ಲಿ ಮಂಡಲ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು. ಈ ಕುರಿತು ಪಶ್ಚಿಮ ಬಂಗಾಳ ರಾಜ್ಯದ ವಕೀಲೆ ಆಸ್ತಾ ಶರ್ಮಾ, ಮಂಡಲ್‌ಗೆ ಆರೋಗ್ಯ ಸಮಸ್ಯೆಗಳಿವೆ ಎಂದು ಪೀಠಕ್ಕೆ ತಿಳಿಸಿದರು. ಆದರೆ, ಅವರ ಸ್ಥಿತಿ ಸ್ಥಿರವಾಗಿದೆ. ಶೀಘ್ರದಲ್ಲೇ ಅವರು ತಮ್ಮ 104 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ ಎಂದು ವಿವರಿಸಿದರು.
ಇದಾದ ಬಳಿಕ, ಪಶ್ಚಿಮ ಬಂಗಾಳದ ರಸಿಕ ಚಂದ್ರ ಮಂಡಲ್ ಅವರ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್ ಮಂಡಲ್ ಅವರಿಗೆ ಮಧ್ಯಂತರ ಜಾಮೀನು ನೀಡಿದೆ.