ಭಗವದ್ಗೀತೆ: ಶಾಂತಿಯಿಲ್ಲದ ಮನುಷ್ಯ ಎಂದೂ ಸಂತೋಷದಿಂದ ಇರುವುದಿಲ್ಲ; ಗೀತೆಯಲ್ಲಿನ ಸಾರಾಂಶ ತಿಳಿಯಿರಿ
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಶಾಂತಿಯಿಲ್ಲದ ಮನುಷ್ಯ ಎಂದೂ ಸಂತೋಷದಿಂದ ಇರುವುದಿಲ್ಲ ಎಂಬ ಗೀತೆಯ ಅರ್ಥ ಹೀಗಿದೆ.
ಪ್ರಸಾದೇ ಸರ್ವದುಃಖಾನಾಂ ಹಾನಿರಸ್ಯೋಷಜಾಯತೇ |
ಪ್ರಸನ್ನಚೇತಸೋ ಹ್ಯಾಶು ಬುದ್ಧಿಃ ಪರ್ಯವತಿಷ್ಟತೇ ||65||
(ಕೃಷ್ಣಪ್ರಜ್ಞೆಯಲ್ಲಿ) ಹೀಗೆ ತೃಪ್ತಿಹೊಂದಿದವನಿಗೆ ಐಹಿಕ ಬದುಕಿನ ಮೂರು ಕ್ಲೇಶಗಳು ಇರುವುದಿಲ್ಲ. ಇಂತಹ ತೃಪ್ತಿಯನ್ನು ಕಂಡ ಪ್ರಜ್ಞೆಯಲ್ಲಿ ಮನುಷ್ಯನ ಬುದ್ಧಿಯು ಸ್ಥಿರವಾಗುವುದು.
ನಾಸ್ತಿ ಬುದ್ಧಿರಯುಕ್ತಸ್ಯ ನ ಚಾಯುಕ್ತಸ್ತ್ಯ ಭಾವನಾ |
ನ ಚಾಭಾವಯತಃ ಶಾನ್ತಿರಶಾನ್ತಸ್ಯ ಕುತಃ ಸುಖಮ್ ||66||
(ಕೃಷ್ಣಪ್ರಜ್ಞೆಯಲ್ಲಿ) ಪರಾತ್ಪರದೊಂದಿಗೆ ಸಂಬಂಧವನ್ನು ಪಡೆಯದವನಿಗೆ ಅಲೌಕಿಕ ಬುದ್ಧಿಶಕ್ತಿಯಾಗಲಿ ಸ್ಥಿರವಾದ ಮನಸ್ಸಾಗಲಿ ಇರುವುದಿಲ್ಲ. ಇವುಗಳಲ್ಲದೆ ಶಾಂತಿಯಿಲ್ಲ. ಶಾಂತಿಯಿಲ್ಲದವನಿಗೆ ಸುಖವೆಲ್ಲಿ?
ಕೃಷ್ಣಪ್ರಜ್ಞೆಯಲ್ಲಿ ನೆಲೆಸದಿರುವವನಿಗೆ ಶಾಂತಿಯು ಸಾಧ್ಯವೇ ಇಲ್ಲ. ಆದುದರಿಂದ ಐದನೆಯ ಅಧ್ಯಾಯದಲ್ಲಿ (5.29) ಇದನ್ನು ದೃಢಪಡಿಸಿದೆ. ಕೃಷ್ಣನೇ ಎಲ್ಲ ಯಾಗಗಳ ಮತ್ತು ತಪಸ್ಸಿನ ಸತ್ಫಲಗಳನ್ನು ಸವಿಯುವವನು. ಕೃಷ್ಣನೇ ಜಗತ್ತಿನ ಎಲ್ಲ ಅಭಿವ್ಯಕ್ತಿಗಳ ಒಡೆಯ ಮತ್ತು ಕೃಷ್ಣನೇ ಎಲ್ಲ ಜೀವಿನಗಳ ಮಿತ್ರ ಎನ್ನುವುದನ್ನು ಅರ್ಥಮಾಡಿಕೊಂಡಾಗಲೇ ಮನುಷ್ಯನಿಗೆ ನಿಜವಾದ ಶಾಂತಿ. ಆದುದರಿಂದ ಕೃಷ್ಣ ಪ್ರಜ್ಞೆಯಿಲ್ಲದಿದ್ದರೆ ಮನಸ್ಸಿಗೆ ಒಂದು ಅಂತಿಮ ಗುರಿ ಇರಲು ಸಾಧ್ಯವಿಲ್ಲ.
ಅಂತಿಮ ಗುರಿ ಇಲ್ಲದಿರುವುದೇ ತಳಮಳಕ್ಕೆ ಕಾರಣ. ಕೃಷ್ಣನೇ ಎಲ್ಲರನ್ನೂ ಮತ್ತು ಎಲ್ಲ ವಸ್ತುಗಳನ್ನೂ ಸವಿಯುವವನು, ಎಲ್ಲರ ಮತ್ತು ಎಲ್ಲ ವಸ್ತುಗಳ ಒಡೆಯ ಮತ್ತು ಮಿತ್ರ ಎನ್ನುವುದು ಖಚಿತವಾದಾಗ ಮನುಷ್ಯನು ದೃಢ ಮನಸ್ಸಿನಿಂದ ಶಾಂತಿಯನ್ನು ಸಾಧಿಸಬಲ್ಲ. ಆದುದರಿಂದ ಕೃಷ್ಣನೊಡನೆ ಸಂಬಂಧವಿಲ್ಲದೆ ಕಾರ್ಯಪ್ರವೃತ್ತನಾದವನು ತನ್ನ ಬದುಕಿನಲ್ಲಿ ಶಾಂತಿಯಿದೆ ಮತ್ತು ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸಿದ್ದೇನೆ ಎಂದು ಎಷ್ಟೇ ಹೊರಗೆ ತೋರಿಸಿಕೊಂಡರೂ ಖಂಡಿತವಾಗಿಯೂ ಅವನು ಯಾವಾಗಲೂ ದುಃಖದಲ್ಲಿರುತ್ತಾನೆ ಮತ್ತು ಅವನಿಗೆ ಶಾಂತಿಯಿರುವುದಿಲ್ಲ. ಕೃಷ್ಣಪ್ರಜ್ಞೆಯು ಸ್ವಯಂ ಅಭಿವ್ಯಕ್ತಿಯುಳ್ಳ ಶಾಂತಸ್ಥಿತಿ ಇದನ್ನು ಕೃಷ್ಣನೊಡನೆ ಸಂಬಂಧ ಸಾಧಿಸಿಯೇ ಪಡೆಯಬೇಕು.
ಇನ್ದ್ರಿಯಾಣಾಂ ಹಿ ಚರತಾಂ ಯನ್ಮನೋನುವಿಧೀಯತೇ |
ತದಸ್ಯ ಹರತಿ ಪ್ರಜ್ಞಾಂ ವಾಯುರ್ನಾವಮಿವಾಮ್ಭಸಿ ||67||
ಚಂಡಮಾರುತವು ನೀರಿನಲ್ಲಿರುವ ದೋಣಿಯನ್ನು ಹೊಡೆದುಕೊಂಡು ಹೋಗುತ್ತದೆ. ಅದೇ ರೀತಿಯಲ್ಲಿ ಅಲೆದಾಡುವ ಇಂದ್ರಿಯಗಳಲ್ಲಿ ಒಂದರಲ್ಲಿ ಮನಸ್ಸು ನೆಟ್ಟರೂ ಅದು ಮನುಷ್ಯನ ಬುದ್ಧಿಶಕ್ತಿಯನ್ನು ಅಪಹರಿಸಬಲ್ಲದು.
ಎಲ್ಲ ಇಂದ್ರಿಯಗಳೂ ಭಗವಂತನ ಸೇವೆಯಲ್ಲಿ ತೊಡಗಿರಬೇಕು. ಅವುಗಳಲ್ಲಿ ಒಂದೇ ಒಂದು ಇಂದ್ರಿಯ ಭೋಗದಲ್ಲಿ ತೊಡಗಿದರೆ ಅದು ಭಕ್ತನನ್ನು ಅಲೌಕಿಕ ಪ್ರಗತಿಯ ಹಾದಿಯಿಂದ ಬೇರೆಡೆಗೆ ಎಳೆಯಬಹುದು. ಅಂಬರೀಷ ಮಹಾರಾಜನ ಬದುಕಿನಲ್ಲಿ ಹೇಳಿದಂತೆ ಎಲ್ಲ ಇಂದ್ರಿಯಗಳೂ ಕೃಷ್ಣಪ್ರಜ್ಞೆಯಲ್ಲಿ ತೊಡಗಿರಬೇಕು. ಮನಸ್ಸಿನ ನಿಯಂತ್ರಣಕ್ಕೆ ಇದೇ ಸರಿಯಾದ ತಂತ್ರ.