Bhagavad Gita: ಶ್ರೀಕೃಷ್ಣನನ್ನು ಪೂಜಿಸುವ ಪರಿಶುದ್ಧ ಭಕ್ತ ಜೀವನದಲ್ಲಿ ಗೆಲ್ಲುತ್ತಾನೆ; ಗೀತೆಯ ಸಾರಾಂಶ ಹೀಗಿದೆ
Bhagavad Gita: ಶ್ರೀಕೃಷ್ಣನನ್ನು ಪೂಜಿಸುವ ಪರಿಶುದ್ಧ ಭಕ್ತ ಜೀವನದಲ್ಲಿ ಗೆಲ್ಲುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 9ನೇ ಅಧ್ಯಾಯ ರಹಸ್ಯತಮ ಜ್ಞಾನದ ಶ್ಲೋಕ 25ರಲ್ಲಿ ತಿಳಿಯಿರಿ.
9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 25
ಯಾನ್ತಿ ದೇವವ್ರತಾ ದೇವಾನ್ ಪಿತೃನ್ ಯಾನ್ತಿ ಪಿತೃವ್ರತಾ |
ಭೂತಾನಿ ಯಾನ್ತಿ ಭೂತೇಜ್ಯಾ ಯಾನ್ತಿ ಮದ್ಯಾಜಿನೋಪಿ ಮಾಮ್ ||25||
ಅನುವಾದ: ದೇವತೆಗಳನ್ನು ಪೂಜಿಸುವವರು ದೇವತೆಗಳ ಮಧ್ಯೆ ಹುಟ್ಟುತ್ತಾರೆ. ಪಿತೃಗಳನ್ನು ಪೂಜಿಸುವವರು ಪಿತೃಗಳ ಬಳಿಗೆ ಹೋಗುತ್ತಾರೆ. ಭೂತಗಳನ್ನು ಪೂಜಿಸುವವರು ಭೂತಗಳ ಮಧ್ಯೆ ಹುಟ್ಟುತ್ತಾರೆ. ನನ್ನನ್ನು ಪೂಜಿಸುವವರು ನನ್ನೊಡನೆ ಇರುತ್ತಾರೆ.
ಭಾವಾರ್ಥ: ಚಂದ್ರ, ಸೂರ್ಯ ಅಥವಾ ಬೇರೆ ಯಾವುದೇ ಲೋಕಕ್ಕೆ ಹೋಗಲು ಬಯಸುವವನು ಈ ಉದ್ದೇಶ ಸಾಧನೆಗಾಗಿ ವೇದಗಳಲ್ಲಿ ಹೇಳಿರುವುದು ನಿರ್ದಿಷ್ಟ ತತ್ವಗಳಿಗೆ. ಉದಾಹರಣೆಗೆ, ದರ್ಶಪೌರ್ಣಮಾಸೀ ಎಂದು ಪಾರಿಭಾಷಿಕವಾಗಿ ಕರೆಯುವ ಪ್ರಕ್ರಿಯೆಯನ್ನು - ಅನುಸರಿಸಿ ಭಾಗದಲ್ಲಿ ಇವನ್ನು ವಿವರವಾಗಿ ವರ್ಣಿಸಿದೆ. ಬೇರೆ ಬೇರೆ ಸ್ವರ್ಗಲೋಕಗಳಲ್ಲಿ ನೆಲೆಸಿರುವ ದೇವತೆಗಳ ನಿರ್ದಿಷ್ಟ ಪೂಜೆಯನ್ನು ವೇದಗಳು ಸೂಚಿಸುತ್ತವೆ. ಇದೇ ರೀತಿಯಲ್ಲಿ ಒಂದು ನಿರ್ದಿಷ್ಟ ಯಜ್ಞವನ್ನು ಮಾಡಿ ಪಿತೃಲೋಕಕ್ಕೆ ಹೋಗಬಹುದು.
ಹೀಗೆಯೇ ಅನೇಕ ಭೂತಲೋಕಗಳಿಗೆ ಹೋಗಿ ಯಕ್ಷ, ರಾಕ್ಷಸ ಅಥವಾ ಪಿಶಾಚಿ ಆಗಬಹುದು. ಪಿಶಾಚಿ ಪೂಜೆಯನ್ನು ಮಾಟ ಅಥವಾ ಅಭಿಚಾರ ಎಂದು ಕರೆಯುತ್ತಾರೆ. ಅಂತಹ ಮಾಟ ಅಥವಾ ಅಭಿಚಾರವನ್ನು ಅಭ್ಯಾಸಮಾಡುವವರು ಅನೇಕರಿದ್ದಾರೆ. ಅವರು ಅದು ಅಧ್ಯಾತ್ಮಿಕ ಎಂದು ಭಾವಿಸುತ್ತಾರೆ. ಆದರೆ ಇಂತಹ ಚಟುವಟಿಕೆಗಳು ಸಂಪೂರ್ಣವಾಗಿ ಪ್ರಾಪಂಚಿಕವಾದವು. ಅದೇ ರೀತಿಯಲ್ಲಿ, ದೇವೋತ್ತಮ ಪರಮ ಪುರುಷನನ್ನು ಪೂಜಿಸುವ ಪರಿಶುದ್ಧ ಭಕ್ತನು ನಿಸ್ಸಂದೇಹವಾಗಿಯೂ ವೈಕುಂಠ ಮತ್ತು ಕೃಷ್ಣ ಲೋಕವನ್ನು ಸೇರುವನು.
ದೇವತೆಗಳನ್ನು ಪೂಜಿಸಿದ ಮಾತ್ರದಿಂದಲೇ ದೇವಲೋಕಗಳನ್ನು ಸೇರಬಹುದಾದರೆ, ಪಿತೃಗಳನ್ನು ಪೂಜಿಸಿ ಪಿತೃಲೋಕಗಳನ್ನು ಸೇರಬಹುದಾದರೆ, ಮಾಟದಿಂದ ಭೂತಗಳ ಲೋಕವನ್ನು ಸೇರಬಹುದಾದರೆ ಪರಿಶುದ್ಧ ಭಕ್ತನು ಕೃಷ್ಣ ಅಥವಾ ವಿಷ್ಣಲೋಕವನ್ನು ಸೇರುವುದು ಏಕೆ ಸಾಧ್ಯವಿಲ್ಲ? ಈ ಮುಖ್ಯವಾದ ಶ್ಲೋಕದಿಂದ ಇದನ್ನು ಅರ್ಥಮಾಡಿಕೊಳ್ಳುವುದು ಬಹು ಸುಲಭ. ದುರದೃಷ್ಟದಿಂದ ಬಹು ಮಂದಿಗೆ ಕೃಷ್ಣನೂ ವಿಷ್ಣುವೂ ವಾಸಿಸುವ ಈ ಭವ್ಯಲೋಕಗಳ ವಿಷಯದಲ್ಲಿ ಸಾಕಷ್ಟು ತಿಳಿವಳಿಕೆ ಇಲ್ಲ.
ಅವರ ಅಜ್ಞಾನದಿಂದಾಗಿ ಅವರು ಪತನ ಹೊಂದುತ್ತಾರೆ. ನಿರಾಕಾರವಾದಿಗಳು ಸಹ ಬ್ರಹ್ಮಜ್ಯೋತಿಯಿಂದ ಉರುಳುತ್ತಾರೆ. ಹರೇಕೃಷ್ಣ ಮಂತ್ರವನ್ನು ಜಪಿಸಿದ ಮಾತ್ರದಿಂದಲೇ ಮನುಷ್ಯನು ಈ ಲೋಕದಲ್ಲಿ ಪರಿಪೂರ್ಣವಾಗಿ ಭಗವದ್ಧಾಮಕ್ಕೆ ಹೋಗಬಹುದು. ಕೃಷ್ಣಪ್ರಜ್ಞೆಯು ಈ ಭವ್ಯ ತಿಳಿವಳಿಕೆಯನ್ನು ಇಡೀ ಮಾನವ ಸಮಾಜದಲ್ಲಿ ಪ್ರಸಾರ ಮಾಡುತ್ತಿದೆ.