ಭಗವದ್ಗೀತೆ: ಮನುಷ್ಯನ ದೇಹ ಒಂದು ಉಡುಪಿನಂತೆ ಎನ್ನುವುದನ್ನು ಸದಾ ನೆನಪಿಡಬೇಕು; ಗೀತೆಯಲ್ಲಿನ ಸಾರಾಂಶ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಮನುಷ್ಯನ ದೇಹ ಒಂದು ಉಡುಪಿನಂತೆ ಎನ್ನುವುದನ್ನು ಸದಾ ನೆನಪಿಡಬೇಕು; ಗೀತೆಯಲ್ಲಿನ ಸಾರಾಂಶ ತಿಳಿಯಿರಿ

ಭಗವದ್ಗೀತೆ: ಮನುಷ್ಯನ ದೇಹ ಒಂದು ಉಡುಪಿನಂತೆ ಎನ್ನುವುದನ್ನು ಸದಾ ನೆನಪಿಡಬೇಕು; ಗೀತೆಯಲ್ಲಿನ ಸಾರಾಂಶ ತಿಳಿಯಿರಿ

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅವ್ಯಕ್ತಾದೀನಿ ಭೂತಾನಿ ವ್ಯಕ್ತಮಧ್ಯಾನಿ ಭಾರತ |

ಅವ್ಯಕ್ತನಿಧನಾನ್ಯೇವ ತತ್ರ ಕಾ ಪರಿದೇವನಾ ||28||

ಸೃಷ್ಟಿಯಾದ ಎಲ್ಲ ಜೀವಿಗಳೂ ಮೊದಲು ಕಾಣಿಸುವುದಿಲ್ಲ, ಮಧ್ಯೆ ಕೆಲಕಾಲ ಕಾಣಿಸುತ್ತವೆ ಮತ್ತು ನಾಶವಾದ ಮೇಲೆ ಕಾಣಿಸುವುದಿಲ್ಲ. ಹೀಗಿರುವಾಗ ಶೋಕಕ್ಕೆ ಕಾರಣವೆಲ್ಲಿದೆ?

ತತ್ವಶಾಸ್ತ್ರಜ್ಞರಲ್ಲಿ ಎರಡು ವರ್ಗಳಿವೆ ಎಂದು ಒಪ್ಪೋಣ. ಒಂದು ವರ್ಗವು ಆತ್ಮದ ಅಸ್ತಿತ್ವವನ್ನು ನಂಬುತ್ತದೆ. ಇನ್ನೊಂದು ಆತ್ಮದ ಅಸ್ತಿತ್ವವನ್ನು ನಂಬುವುದಿಲ್ಲ. ಇವೆರಡು ವರ್ಗಗಳಲ್ಲಿ ಯಾವುದನ್ನು ನಾವು ಒಪ್ಪಿದರೂ ಶೋಕಕ್ಕೆ ಕಾರಣವಿಲ್ಲ. ಆತ್ಮದ ಅಸ್ತಿತ್ವವನ್ನು ನಂಬದಿರುವವರನ್ನು, ವೇದದ ಜ್ಞಾನವನ್ನು ಅನುಸರಿಸುವವರು, ನಾಸ್ತಿಕರು ಎಂದು ಕರೆಯುತ್ತಾರೆ.

ವಾದಕ್ಕೋಸ್ಕರ ನಾವು ಈ ನಾಸ್ತಿಕವಾದವನ್ನು ಒಪ್ಪಿದರೂ ದುಃಖಿಸಲು ಕಾರಣವಿಲ್ಲ. ಆತ್ಮದ ಪ್ರತ್ಯೇಕ ಅಸ್ತಿತ್ವವನ್ನು ಬಿಟ್ಟರೆ ಭೌತಿಕ ಅಂಶಗಳು ಸೃಷ್ಟಿಗೆ ಮೊದಲು ಅವ್ಯಕ್ತವಾಗಿರುತ್ತವೆ. ಆಕಾಶದಿಂದ ವಾಯುವು ಉತ್ಪತ್ತಿಯಾಗುವಂತೆ, ವಾಯುವಿನಿಂದ ಅಗ್ನಿಯು ಉತ್ಪತ್ತಿಯಾಗುವಂತೆ, ಅಗ್ನಿಯಿಂದ ನೀರು ಉತ್ಪತ್ತಿಯಾಗುವಂತೆ ಮತ್ತು ನೀರಿನಿಂದ ಭೂಮಿಯು ವ್ಯಕ್ತವಾಗುವಂತೆ ಈ ಸೂಕ್ಷ್ಮ ಅವ್ಯಕ್ತ ಸ್ಥಿತಿಯಿಂದ ವ್ಯಕ್ತತೆಯು ಉಂಟಾಗುತ್ತದೆ. ಭೂಮಿಯಿಂದ ವ್ಯಕ್ತತೆಯ ನಾನಾ ಬಗೆಗಳು ಉಂಟಾಗುತ್ತವೆ.

ಉದಾಹರಣೆಗೆ, ಭೂಮಿಯಿಂದ ರೂಪತಾಳುವ ಗಗನಚುಂಬಿಯನ್ನು ನೋಡಿ. ಅದನ್ನು ಒಡೆದು ಹಾಕಿದಾಗ ವ್ಯಕ್ತತೆಯು ಅವ್ಯಕ್ತವಾಗುತ್ತದೆ ಮತ್ತು ಕಟ್ಟಕಡೆಯ ಘಟ್ಟದಲ್ಲಿ ಅಣುಗಳಾಗಿ ಉಳಿಯುತ್ತದೆ. ಶಕ್ತಿಸ್ಥಾಯಿತ್ವ ನಿಯಮವು ಇದ್ದೇ ಇದೆ. ಆದರೆ ಕಾಲಗತಿಯಲ್ಲಿ ವಸ್ತುಗಳು ವ್ಯಕ್ತವಾಗುತ್ತವೆ ಮತ್ತು ಅವ್ಯಕ್ತವಾಗುತ್ತದೆ. ಇದೇ ವ್ಯತ್ಯಾಸ. ಆದುದರಿಂದ ವ್ಯಕ್ತತೆಯ ಘಟ್ಟವಾಗಲೀ, ಅವ್ಯಕ್ತತೆಯ ಘಟ್ಟವಾಗಲೀ ಶೋಕಕ್ಕೆ ಕಾರಣವೆಲ್ಲಿದೆ? ಹೇಗೋ ಏನೋ, ಅವ್ಯಕ್ತ ಸ್ಥಿತಿಯಲ್ಲಿ ಸಹ ವಸ್ತುಗಳು ನಷ್ಟವಾಗುವುದಿಲ್ಲ. ಪ್ರಾರಂಭದಲ್ಲಿ ಮತ್ತು ಕೊನೆಯಲ್ಲಿ ಎಲ್ಲ ಮೂಲ ಅಂಶಗಳು ಅವ್ಯಕ್ತವಾಗೇ ಇರುತ್ತವೆ. ಮಧ್ಯದಲ್ಲಿ ಮಾತ್ರ ಅವು ವ್ಯಕ್ತವಾಗುತ್ತವೆ. ಇದರಿಂದ ಅಂತಹ ಗುಣನೀಯ ಭೌತಿಕ ವ್ಯತ್ಯಾಸವೇನೂ ಆಗುವುದಿಲ್ಲ.

ಕಾಲಕ್ರಮದಲ್ಲಿ ಈ ಐಹಿಕ ದೇಹಗಳು ನಾಶವಾಗುತ್ತವೆ. (ಅನ್ತವನ್ತ ಇಮೇ ದೇಹಾಃ) ಆದರೆ ಆತ್ಮ ನಿತ್ಯವಾದದ್ದು (ನಿತ್ಯಸ್ತ್ಯೋಃ ಶರೀರಿಣಃ) ಎನ್ನುವ ವೈದಿಕ ನಿರ್ಣಯವನ್ನು ಭಗವದ್ಗೀತೆಯು ಹೇಳುತ್ತದೆ. ಇದನ್ನು ನಾವು ಒಪ್ಪಿಕೊಂಡರೆ ದೇಹವು ಒಂದು ಉಡುಪಿನಂತೆ ಎನ್ನುವುದನ್ನು ಸದಾ ನೆನಪಿಡಬೇಕು. ಉಡುಪಿನ ಬದಲಾವಣೆ ಆಯಿತೆಂದು ದುಃಖಪಡುವುದು ಏಕೆ? ನಿತ್ಯವಾದ ಆತ್ಮಕ್ಕೆ ಸಂಬಂಧಿಸಿದಂತೆ ಐಹಿಕ ಶರೀರಕ್ಕೆ ವಾಸ್ತವಿಕವಾದ ಅಸ್ತಿತ್ವವಿಲ್ಲ. ಅದು ಕನಸಿನಂತೆ.

ಕನಸಿನಲ್ಲಿ ನಾವು ಆಕಾಶದಲ್ಲಿ ಹಾರಾಡುವ ಯೋಜನೆಯನ್ನು ಮಾಡಬಹುದು. ರಾಜನಂತೆ ರಥದಲ್ಲಿ ಕುಳಿತುಕೊಳ್ಳುವ ಯೋಚನೆಯನ್ನು ಮಾಡಬಹುದು. ಆದರೆ ಎಚ್ಚರಿಕೆಯಾದಾಗ ನಾವು ಆಕಾದಲ್ಲಿಯೂ ಇಲ್ಲ, ರಥದಲ್ಲಿಯೂ ಕುಳಿತಿಲ್ಲ ಎನ್ನುವುದನ್ನು ಕಾಣಬಹುದು. ವೇದಜ್ಞಾನವು ಐಹಿಕ ದೇಹವು ಅಸ್ತಿತ್ವದಲ್ಲಿರುವುದಿಲ್ಲ ಎನ್ನುವ ಆಧಾರದ ಮೇಲೆ ಆತ್ಮ ಸಾಕ್ಷಾತ್ಕಾರಕ್ಕೆ ಪ್ರೋತ್ಸಾಹ ನೀಡುತ್ತದೆ. ಆದುದರಿಂದ, ಆತ್ಮವು ಇದೆ ಎಂದು ನಂಬಲಿ ಅಥವಾ ಇಲ್ಲ ಎಂದು ನಂಬಲಿ, ದೇಹವು ನಷ್ಟವಾಯಿತೆಂದು ದುಃಖಪಡಲು ಕಾರಣವೇ ಇಲ್ಲ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.