Panchakanyas: ಪುರಾಣದಲ್ಲಿ ಉಲ್ಲೇಖವಿರುವ ಪಂಚಕನ್ಯೆಯರಿವರು; ಇವರನ್ನ ಪ್ರಾತಃ ಸ್ಮರಣೀಯರೆನ್ನರಲು ಇದುವೇ ಕಾರಣ
ಭಾರತೀಯ ಸಂಸ್ಕೃತಿಯು ವೇದ ಪುರಾಣಗಳಿಲ್ಲದೆ ಸಂಪೂರ್ಣವಾಗುವುದಿಲ್ಲ. ಅಂತಹ ಪುರಾಣದಲ್ಲಿ ಉಲ್ಲೇಖವಿರುವ ಪಂಚ ಕನ್ಯೆಯರು ಯಾರು? ಭಾರತೀಯ ಸಂಸ್ಕೃತಿಯಲ್ಲಿ ಯಾಕಾಗಿ ಅವರನ್ನು ಪ್ರಾತಃಸ್ಮರಣೀಯರು ಎಂಬುದಾಗಿ ಪೂಜಿಸಿ, ಗೌರವಿಸುತ್ತಾರೆ? ಇಲ್ಲಿದೆ ಮಾಹಿತಿ.
ʼಅಹಲ್ಯಾ, ದ್ರೌಪದಿ, ಕುಂತಿ, ತಾರಾ, ಮಂಡೋದರಿ ತಥಾ, ಪಂಚಕನ್ಯಾ ಸ್ಮರೇನ್ ನಿತ್ಯಂ ಮಹಾ ಪಾತಕ ನಾಶನಮ್ʼ... ಎಂಬ ಮಂತ್ರಗಳನ್ನು ನಾವು ಸಾಕಷ್ಟು ಬಾರಿ ಹಲವು ಸಂದರ್ಭಗಳಲ್ಲಿ ಕೇಳಿರುತ್ತೇವೆ. ಹಿಂದೂ ಧರ್ಮ ಗ್ರಂಥಗಳಾದ ರಾಮಾಯಣ, ಮಹಾಭಾರತದಲ್ಲಿ ಬರುವಂತಹ ಈ ಪಂಚಕನ್ಯೆಯರ ನಾಮಸ್ಮರಣೆಯಿಂದ ನಮ್ಮೆಲ್ಲಾ ಪಾಪಗಳು ಕಳೆಯುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಆದರೆ ಅಂತಹ ಅಪೂರ್ವ ಮಹಿಳೆಯರ ಕುರಿತು ತಿಳಿದಷ್ಟೂ ಕಡಿಮೆಯೇ.
ಅಹಲ್ಯಾ ಶಾಪ ವಿಮೋಚನೆ
ಮಹಾಪತಿವ್ರತೆ ಅಹಲ್ಯೆ ಗೌತಮ ಮಹರ್ಷಿಯ ಪತ್ನಿ. ಜಗತ್ತಿನ ಅತ್ಯಂತ ಲಾವಣ್ಯವತಿಯರ ಪೈಕಿ ಅಹಲ್ಯೆಯೂ ಒಬ್ಬಾಕೆ. ದೇವರಾಜ ಇಂದ್ರ ಅವಳ ರೂಪಕ್ಕೆ ಮಾರುಹೋಗಿ, ಆಶ್ರಮದಲ್ಲಿ ಗೌತಮ ಮಹರ್ಷಿಯಿಲ್ಲದ ವೇಳೆ, ಅವರ ರೂಪವನ್ನು ತಾಳಿ ಅಹಲ್ಯೆಯನ್ನು ಒಲಿಸಿಕೊಳ್ಳುತ್ತಾನೆ. ಇದೇ ವೇಳೆ ಆಶ್ರಮಕ್ಕೆ ಹಿಂದಿರುಗಿದ ಗೌತಮ ಮುನಿ ಕೋಪಗೊಂಡು ಇಬ್ಬರನ್ನೂ ಶಪಿಸುತ್ತಾರೆ. ಅಹಲ್ಯೆಗೆ ಅನ್ನಾಹಾರವಿಲ್ಲದೆ ಆಶ್ರಮದ ಬಳಿ ಕಲ್ಲಾಗುವಂತೆ ಶಾಪವನ್ನು ನೀಡುತ್ತಾರೆ. ಅಲ್ಲದೇ ಶ್ರೀರಾಮನಿಂದ ಅಹಲ್ಯೆಯ ಶಾಪ ವಿಮೋಚನೆಯಾಗುವುದಾಗಿ ತಿಳಿಸುತ್ತಾರೆ. ಅದರಂತೆಯೇ ಮುಂದೊಮ್ಮೆ ಶ್ರೀರಾಮಚಂದ್ರನಿಂದ ಅಹಲ್ಯೆಯ ಶಾಪ ವಿಮೋಚನೆಯಾಗಿ ಅಹಲ್ಯೆ ಮರಳಿ ಮಾನವ ರೂಪವನ್ನು ಪಡೆದು, ಗೌತಮ ಮಹರ್ಷಿಯೊಂದಿಗೆ ಆದರ್ಶಮಯ ಜೀವನ ನಡೆಸುತ್ತಾಳೆ.
ಕಷ್ಟಗಳನ್ನು ದಾಟಿಬಂದ ಮಹಾಪತಿವೃತೆ ದ್ರೌಪದಿ
ಪಾಂಚಾಲ ದೇಶದ ದೊರೆ ದ್ರುಪದನ ಪುತ್ರಿ ದ್ರೌಪತಿ, ಸ್ವಯಂವರದಲ್ಲಿ ಅರ್ಜುನನ್ನು ವರಿಸುತ್ತಾಳೆ. ಆದರೆ ಅತ್ತೆ ಕುಂತಿಯ ಮಾತಿನಂತೆ ಪಂಚ ಪಾಂಡವರ ಪತ್ನಿಯಾಗಿ ಎಲ್ಲರಿಗೂ ಸಮಾನವಾದ ಪ್ರೀತಿ ಮತ್ತು ಗೌರವವನ್ನು ನೀಡುವ ಮೂಲಕ ಜೀವನ ನಡೆಸಿದವಳು. ಆದರೂ ಕಷ್ಟಗಳು ಅವಳೊಂದಿಗೆ ಹೆಜ್ಜೆಹಾಕುತ್ತಲೇ ಇತ್ತು. ದ್ರೌಪದಿ ವಸ್ತ್ರಾಪಹರಣದಿಂದ ತುಂಬಿದ ರಾಜಸಭೆಯಲ್ಲಿ ಆಕೆಗಾದ ಅವಮಾನ, ಕೌರವರೊಂದಿಗಿನ ಪಗಡೆಯಾಟದಲ್ಲಿ ಸೋತು 13 ವರ್ಷಗಳ ವನವಾಸ, ವೇಷ ಮರೆಸಿಕೊಂಡು ರಾಣಿಯ ಸೇವಕಿಯಾಗಿ 1 ವರ್ಷ ಅಜ್ಞಾತವಾಸ. ಹೀಗೆ ಸಾಲು ಸಾಲು ಸಮಸ್ಯೆಗಳ ನಡುವೆಯೂ ಧೃತಿಗಡದ ದ್ರೌಪದಿ, ಪಂಚ ಪಾಂಡವರ ಜೊತೆಗೆ ನಿಲ್ಲಬಲ್ಲ ಸಾಮರ್ಥ್ಯವನ್ನು ಹೊಂದಿದ್ದಳು. ಮಹಾಪತಿವೃತೆ, ಅಸಾಧ್ಯ ಬುದ್ಧಿವಂತಿಕೆ ಸೇರಿದಂತೆ ಅನೇಕ ಸನ್ನಡತೆಗಳನ್ನು ಹೊಂದಿರುವ ದ್ರೌಪದಿಯ ನಾಮಸ್ಮರಣೆ ಎಲ್ಲ ಪಾಪಗಳನ್ನು ನಾಶಗೊಳಿಸುತ್ತದೆ ಎಂಬುದು ನಂಬಿಕೆ.
ಕುಂತಿ ಎಂಬ ಮಹಾ ತಾಯಿ
ಯಾದವ ರಾಜ ಶೂರಸೇನನ ಮಗಳಾದ ಕುಂತಿ, ಪಾಂಡು ಪತ್ನಿ. ಪಂಚ ಪಾಂಡವರ ತಾಯಿ. ಆದರೆ ಅವರಲ್ಲಿ ಆಕೆ ಜನ್ಮ ನೀಡಿದ್ದು ಯುಧಿಷ್ಠಿರ, ಭೀಮ ಮತ್ತು ಅರ್ಜುನನಿಗೆ ಮಾತ್ರ. ದೂರ್ವಾಸ ಮುನಿಗಳು ಆಕೆಗೆ ಹೇಳಿಕೊಟ್ಟಿದ್ದ ಮಂತ್ರವನ್ನು ಪ್ರಯೋಜಿಸಿ ಸೂರ್ಯದೇವನಿಂದ ಕರ್ಣನನ್ನು ಹೆತ್ತಳು. ಮದುವೆಗೂ ಮೊದಲೇ ಮಗುವಾದರೆ ಸಮಾಜ ಏನನ್ನುತ್ತದೆಯೋ ಎಂಬ ಭಯದಲ್ಲಿ ಕರ್ಣನನ್ನು ತೊರೆದಳು. ಮದುವೆಯಾಗಿ ಅವಳು ತನ್ನ ಗಂಡನನ್ನು ಚಿಕ್ಕವಯಸ್ಸಿನಲ್ಲಿ ಕಳೆದುಕೊಂಡಳಾದರೂ ಜೀವನದ ತಿರುವುಗಳನ್ನು ಧೈರ್ಯದಿಂದ ಎದುರುಗೊಂಡವಳು. ಪ್ರತಿಯೊಬ್ಬರಿಗೂ ಸಮಾನ ಪ್ರೀತಿ ಮತ್ತು ಕಾಳಜಿಯನ್ನು ಹಂಚಿದವಳು. ಇವಳಲ್ಲವೇ ಪ್ರಾತಃಸ್ಮರಣೀಯಳು..
ವಾನರ ಸಾಮ್ರಾಜ್ಯವನ್ನಾಳಿದ ರಾಣಿ ತಾರಾ
ಕಿಷ್ಕಿಂಧೆಯ ರಾಣಿ, ವಾನರ ರಾಜನಾದ ವಾಲಿಯ ಪತ್ನಿ ಮಾತ್ರವಲ್ಲದೆ ಅಂಗದನ ತಾಯಿ ತಾರಾ. ರಾಜನೀತಿಜ್ಞೆ, ಶಾಸ್ತ್ರಜ್ಞಾನವುಳ್ಳವಳೂ ಆಗಿದ್ದ ತಾರಾ ವಾಲಿಯ ಮರಣಾನಂತರ ಮುಂದೆ ವಾಲಿಯ ತಮ್ಮ ಸುಗ್ರೀವನನ್ನು ವಿವಾಹವಾಗುತ್ತಾಳೆ. ಅಲ್ಲದೆ ವಾನರ ಸಾಮ್ರಾಜ್ಯವನ್ನು ಆಳುತ್ತಾಳೆ. ಬುದ್ಧಿವಂತಿಕೆ, ವ್ಯವಹಾರ ಜ್ಞಾನವನ್ನೂ ಹೊಂದಿದ್ದ ತಾರಾ ಒಬ್ಬಂಟಿಯಾಗಿಯೇ ಸಾಮರಾಜ್ಯವನ್ನು ಕಟ್ಟಿ, ಬೆಳೆಸಿ ಮಾದರಿಯಾದವಳು.
ರಾವಣನಂತಲ್ಲ ಪತ್ನಿ ಮಂಡೋದರಿ
ರಾಕ್ಷಸರ ರಾಜ ಮಾಯಾಸುರನ ದತ್ತು ಮಗಳು ಎಂಬುದಕ್ಕಿಂತಲೂ ರಾವಣನ ಪತ್ನಿ ಮಂಡೋದರಿಯಾಗಿಯೇ ಚಿರಪರಿಚಿತಳು. ಅವಳ ಬಾಲ್ಯದಿಂದಲೇ ಅವಳು ತನ್ನ ಪರಿಶುದ್ಧತೆ, ಸದಾಚಾರ ಮತ್ತು ಬುದ್ಧಿವಂತಿಕೆಗೆ ಹೆಸರುವಾಸಿಯಾಗಿದ್ದಳು. ಸ್ವರ್ಗೀಯ ಅಪ್ಸರೆ ಮಂಡೋದರಿಯನ್ನು ರಾವಣ ಪ್ರೀತಿಸಿ ವಿವಾಹವಾದರೂ ಆತನ ದುಷ್ಕೃತ್ಯಗಳನ್ನು ದಿಟ್ಟತನದಿಂದ ವಿರೋಧಿಸಿ ಛಲಗಾತಿ.
ಜೀವನದ ಪ್ರತಿಯೊಂದು ಘಟ್ಟಗಳನ್ನೂ ದಿಟ್ಟತನದಿಂದ ಎದುರಿಸಿ, ಆದರ್ಶಮಯ ಬದುಕನ್ನು ಕಟ್ಟಿಕೊಂಡವರು ಈ ಪಂಚಕನ್ಯೆಯರು. ಈ ಕಾರಣಕ್ಕಾಗಿಯೇ ಇಂದಿಗೂ ಅವರನ್ನು ಪ್ರಾತಃ ಸ್ಮರಣೀಯರೆಂದು ಪೂಜಿಸಿ, ಗೌರವಿಸಲಾಗುತ್ತದೆ.