ದೀಪಾವಳಿ 2024: ಹಬ್ಬದ ದಿನಾಂಕ, ಸಮಯ, ಆಚರಣೆಯ ಮಹತ್ವ, ಬೆಳಕಿನ ಹಬ್ಬದ ಐತಿಹ್ಯದ ಕುರಿತ ವಿವರ ಇಲ್ಲಿದೆ
Diwali Festival 2024: ದೀಪಾವಳಿ ಎಂದರೆ ಬೆಳಕಿನ ಹಬ್ಬ. ಭಾರತದಾದ್ಯಂತ ದೀಪಾವಳಿ ಹಬ್ಬವನ್ನು ಬಹಳ ಸಂಭ್ರಮ–ಸಡಗರದಿಂದ ಆಚರಿಸುತ್ತಾರೆ. 2024ರಲ್ಲಿ ದೀಪಾವಳಿ ಹಬ್ಬ ಯಾವಾಗ, ಈ ಹಬ್ಬದ ಐತಿಹ್ಯ, ಮಹತ್ವ, ಆಚರಣೆಯ ಕ್ರಮ ಇನ್ನಿತರ ವಿವರ ಇಲ್ಲಿದೆ.
When is Diwali 2024: ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ದೀಪಾವಳಿ ಕೂಡ ಒಂದು. ಇದನ್ನು ಬೆಳಕಿನ ಹಬ್ಬ ಎಂದೂ ಕರೆಯುಲಾಗುತ್ತದೆ. ಭಾರತ ಮಾತ್ರವಲ್ಲದೇ ಪ್ರಪಂಚದಾದ್ಯಂತ ಇರುವ ಹಿಂದೂಗಳು ಈ ಹಬ್ಬವನ್ನು ಸಂಭ್ರಮದೊಂದಿಗೆ ಭಕ್ತಿ–ಭಾವದಿಂದ ದೀಪ ಬೆಳಗುವ ಮೂಲಕ ಆಚರಿಸುತ್ತಾರೆ.
ದೀಪಾವಳಿಯು 5 ದಿನಗಳ ಹಬ್ಬ, ದಕ್ಷಿಣ ಭಾರತದಲ್ಲಿ ಈ ಹಬ್ಬವನ್ನು ಮೂರು ದಿನಗಳ ಕಾಲ ಆಚರಿಸಲಾಗುತ್ತದೆ. ಧನ್‌ತೇರಸ್ ಅಥವಾ ಧನ ತ್ರಯೋದಶಿಯಿಂದ ಆರಂಭವಾಗುವ ದೀಪಾವಳಿ ಹಬ್ಬವನ್ನು ಭಾಯಿದೂಜ್‌ನೊಂದಿಗೆ ಮುಕ್ತಾಯ ಮಾಡುತ್ತಾಳೆ ಉತ್ತರ ಭಾರತೀಯರು.
ದೀಪಾವಳಿಯ ದೀಪವನ್ನು ಸಂತೋಷ ಹಾಗೂ ಸಮೃದ್ಧಿಯ ಸಂಕೇತ ಎನ್ನಲಾಗುತ್ತದೆ. ಈ ಹಬ್ಬದಲ್ಲಿ ಲಕ್ಷ್ಮೀದೇವಿ ಹಾಗೂ ಬಲೀಂದ್ರ ದೇವನನ್ನು ಪೂಜಿಸುವುದು ವಾಡಿಕೆ. ದೀಪಾವಳಿಯನ್ನು ಕಾರ್ತಿಕ ಮಾಸದ ಕಾರ್ತಿಕ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ.
ದೀಪ ಹಬ್ಬದಂದು ಮನೆ, ಮನೆಗಳಲ್ಲಿ, ಬೀದಿಗಳಲ್ಲಿ ದೀಪ ಬೆಳಗುವ ಮೂಲಕ ನಾಡಿಗೆ ಸಮೃದ್ಧಿ, ಸಂತೋಷ ಬರಲಿ ಹಾರೈಸುತ್ತಾರೆ. ಹೊಸ ಬಟ್ಟೆಗಳನ್ನು ಧರಿಸಿ, ಸಿಹಿ ತಿನಿಸುಗಳನ್ನು ವಿನಿಮಯ ಮಾಡಿಕೊಂಡು, ಉಡುಗೊರೆ ನೀಡಿ ಪಟಾಕಿ ಹಚ್ಚಿ ಸಂಭ್ರಮಿಸಲಾಗುತ್ತದೆ. ದೀಪಾವಳಿ ಸಮಯದಲ್ಲಿ ವಿಶೇಷ ಖಾದ್ಯಗಳನ್ನ ಮಾಡಿ ಕೇವರಿಗೆ ನೈವೇದ್ಯ ಮಾಡುವುದು ವಿಶೇಷ.
2024ರಲ್ಲಿ ದೀಪಾವಳಿ ಯಾವಾಗ? ಶುಭ ಮುಹೂರ್ತ ಯಾವುದು?
ದೀಪಾವಳಿ ಹಬ್ಬವನ್ನು ಹಿಂದೂ ಚಾಂದ್ರಮಾನ ತಿಂಗಳುಗಳಾದ ಅಶ್ವಿನ್ ಮತ್ತು ಕಾರ್ತಿಕ ಮಾಸದಲ್ಲಿ ಆಚರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಅಕ್ಟೋಬರ್ 15 ರಿಂದ ಮತ್ತು ನವೆಂಬರ್ 15ರ ನಡುವೆ ಬರುತ್ತದೆ. ಪ್ರಾಚೀನ ಹಿಂದೂ ಕ್ಯಾಲೆಂಡರ್ ಪ್ರಕಾರ, ದೀಪಾವಳಿಯನ್ನು ವಾರ್ಷಿಕವಾಗಿ ಅಮವಾಸ್ಯೆಯಂದು ಆಚರಿಸಲಾಗುತ್ತದೆ, ಅಂದರೆ ಕಾರ್ತಿಕ ಮಾಸದ ಹದಿನೈದನೇ ದಿನ ದೀಪಾವಳಿ ಆಚರಣೆ ಇರುತ್ತದೆ.
2024ರಲ್ಲಿ ಬೆಳಕಿನ ಹಬ್ಬವನ್ನು ನವೆಂಬರ್ 1 ರಂದು ಆಚರಿಸಲಾಗುತ್ತದೆ. ದೃಕ್‌ಪಂಚಾಂಗ್ ಪ್ರಕಾರ, ದೀಪಾವಳಿ ಆಚರಣೆಗೆ ಶುಭ ಮುಹೂರ್ತ ಸಂಜೆ 5.36 ರಿಂದ ಸಂಜೆ 6.16ರ ವರೆಗೆ ಇದೆ.
ಈ ವರ್ಷ ದೀಪಾವಳಿ ದಿನಾಂಕಗಳು:
ಧನ್‌ತೇರಸ್: ಅಕ್ಟೋಬರ್ 29, 2024
ಕಲಿ ಚೌದಾಸ್ (ಉತ್ತರ ಭಾರತದ ಆಚರಣೆ): ಅಕ್ಟೋಬರ್ 30, 2024
ನರಕ ಚತುರ್ದಶಿ: ಅಕ್ಟೋಬರ್ 31, 2024
ದೀಪಾವಳಿ (ಲಕ್ಷ್ಮೀ ಪೂಜೆ): ನವೆಂಬರ್ 1, 2024
ಗೋಪೂಜೆ: ನವೆಂಬರ್ 2, 2024
ಭಾಯಿ ದೂಜ್: ನವೆಂಬರ್ 3, 2024
ಈ ವರ್ಷ ಅಮವಾಸ್ಯೆ ತಿಥಿ ಅಕ್ಟೋಬರ್ 31 ರಂದು ಮಧ್ಯಾಹ್ನ 3:52 ರಿಂದ ಆರಂಭವಾಗಿ ನವೆಂಬರ್ 1 ರಂದು ಸಂಜೆ 6:16ಕ್ಕೆ ಕೊನೆಗೊಳ್ಳುತ್ತದೆ.
ದೀಪಾವಳಿ ಆಚರಣೆಯ ಇತಿಹಾಸ ಮತ್ತು ಮಹತ್ವ
ದೀಪಾವಳಿ ಆಚರಣೆಯ ಹಿಂದೆ ಹಲವು ಪೌರಾಣಿಕ ಕಥೆಗಳಿವೆ. ಇದು ರಾಮಾಯಣದ ಕಾಲದಿಂದ ಆರಂಭವಾಯಿತು ಎಂದು ಹೇಳಲಾಗುತ್ತದೆ. ರಾಮನು ವನವಾಸ ಮುಗಿಸಿ ಅಯೋಧ್ಯೆಗೆ ಬಂದ ದಿನವಿದು ಎಂದು ಪೌರಾಣಿಕ ಕಥೆಗಳು ಹೇಳುತ್ತವೆ. ಈ ಹಬ್ಬವು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಇದು ಕತ್ತಲೆಯ ಮೇಲೆ ಬೆಳಕು, ಕೆಟ್ಟದ್ದರ ಮೇಲೆ ಒಳ್ಳೆಯದು ಮತ್ತು ಅಜ್ಞಾನದ ಮೇಲೆ ಜ್ಞಾನದ ವಿಜಯವನ್ನು ಸಂಕೇತಿಸುತ್ತದೆ.
ದೀಪಾವಳಿಯ ಇತಿಹಾಸ
ದಂತಕಥೆಯ ಪ್ರಕಾರ, ಭಗವಾನ್ ವಿಷ್ಣುವಿನ ಏಳನೇ ಅವತಾರವಾದ ಭಗವಾನ್ ರಾಮನು ರಾಕ್ಷಸ ರಾಜ ರಾವಣನನ್ನು ಸೋಲಿಸಿದ ನಂತರ ಅಯೋಧ್ಯೆಯ ತನ್ನ ರಾಜ್ಯಕ್ಕೆ ಹಿಂದಿರುಗಿದನು.
ಹಿಂದೂ ತಿಂಗಳ ಕಾರ್ತಿಕದಲ್ಲಿ ಅಮಾವಾಸ್ಯೆಯ ದಿನವಾದ ಕಾರಣ, ಅವರು ಹಿಂತಿರುಗಿದ ರಾತ್ರಿ, ಅಯೋಧ್ಯೆಯ ಜನರು ದೀಪಗಳನ್ನು (ಮಣ್ಣಿನ ದೀಪಗಳು) ಬೆಳಗಿಸುವ ಮೂಲಕ ಮತ್ತು ತಮ್ಮ ಮನೆಗಳನ್ನು ರಂಗೋಲಿಗಳಿಂದ (ಬಣ್ಣದ ಮಾದರಿಗಳು) ಅಲಂಕರಿಸುವ ಮೂಲಕ ಶ್ರೀರಾಮನನ್ನು ಸ್ವಾಗತಿಸಿದರು ಎನ್ನಲಾಗುತ್ತದೆ.
ಮತ್ತೊಂದೆಡೆ, ದಕ್ಷಿಣ ಭಾರತದಲ್ಲಿ, ಶ್ರೀಕೃಷ್ಣನು ನರಕಾಸುರನನ್ನು ಸೋಲಿಸಿದ ದಿನವೆಂದು ಜನರು ಆಚರಿಸುತ್ತಾರೆ. ಹೆಚ್ಚುವರಿಯಾಗಿ, ಈ ದಿನದಂದು ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಯು ವಿವಾಹವಾದರು ಎಂದು ನಂಬಲಾಗಿದೆ. ಕಾರ್ತಿಕ ಮಾಸದ ಅಮಾವಾಸ್ಯೆಯಂದು ಲಕ್ಷ್ಮಿ ದೇವಿಯು ಜನಿಸಿದಳು ಎಂದು ಪರ್ಯಾಯ ದಂತಕಥೆಗಳು ಹೇಳುತ್ತವೆ.
ಪ್ರಪಂಚದಾದ್ಯಂತ ಜನರು ಬೆಳಕಿನ ಹಬ್ಬವಾದ ದೀಪಾವಳಿಯನ್ನು ಬಹಳ ಸಂತೋಷ ಮತ್ತು ಉತ್ಸಾಹದಿಂದ ಆಚರಿಸುತ್ತಾರೆ. ಪ್ರತಿ ಮನೆಯಲ್ಲೂ ಜನರು ಬೆಲೆಬಾಳುವ ವಸ್ತುಗಳ ಜೊತೆಗೆ ಗಣೇಶ ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ.