ಧನಲಾಭ: ಮನೆಯಲ್ಲಿ ಈ 4 ವಸ್ತುಗಳನ್ನು ಈ ರೀತಿ ಇಟ್ಟುಕೊಂಡರೆ ಕಾಡುವ ಆರ್ಥಿಕ ಬಿಕ್ಕಟ್ಟಿನಿಂದ ಸಿಗುತ್ತೆ ಪರಿಹಾರ
ಧನಲಾಭ ಗಳಿಸಲು ವಾಸ್ತುಶಾಸ್ತ್ರದಲ್ಲಿ ಕೆಲವೊಂದು ವಿಷಯಗಳನ್ನು ವಿವರಿಸಲಾಗಿದೆ. ಕೆಲವು ವಸ್ತುಗಳನ್ನು ಮನೆಗೆ ತರುವ ಮೂಲಕ ಮನೆ ಹಾಗೂ ಜೀವನದಲ್ಲಿ ಸಂತೋಷ ಹೆಚ್ಚುತ್ತದೆ. ಈ ನಾಲ್ಕು ವಸ್ತುಗಳು ನಿಮ್ಮ ಮನೆಯಲ್ಲಿ ಇದೆಯೋ ಇಲ್ಲವೋ ಎಂಬುದನ್ನು ನೋಡಿ.

ಐಶಾರಾಮಿ ಜೀವನ ನಡೆಸಬೇಕೆಂಬುದು ಬಹುತೇಕ ಪ್ರತಿಯೊಬ್ಬರೂ ಕನಸು. ಕೈತುಂಬಾ ಸಂಪಾದನೆ, ಒಂದೊಳ್ಳೆ ಮನೆ, ಸುಖ ಜೀವನಕ್ಕೆ ಮನೆಗೆ ಬೇಕಾದ ಎಲ್ಲಾ ಸೌಕರ್ಯಗಳು ಇರಬೇಕೆಂದು ಹೆಚ್ಚಿನ ಜನರು ಬಯಸುತ್ತಾರೆ. ಹಣ ಸಂಪಾದಿಸಲು ಖಚಿತವಾಗಿ ಕಷ್ಟಪಟ್ಟು ಕೆಲಸ ಮಾಡಬೇಕು. ನಿತ್ಯ ಮೈಬಗ್ಗಿಸಿ ಕೆಲಸ ಮಾಡಿದರೂ ಅನೇಕ ಬಾರಿ ಕೆಲವರು ಮಾತ್ರವೇ ನಿರೀಕ್ಷಿತ ಯಶಸ್ಸನ್ನು ಪಡೆಯುತ್ತಾರೆ. ಇನ್ನೂ ಕೆಲವೊಬ್ಬರು ಕಠಿಣ ಪರಿಶ್ರಮ ಪಟ್ಟರೂ ಆರ್ಥಿಕ ಬಿಕ್ಕಟ್ಟು ನಿವಾರಿಸಲು ಮಾತ್ರ ಸಾಧ್ಯವಾಗುವುದಿಲ್ಲ. ಮೇಲಿಂದ ಮೇಲೆ ಹಣಕಾಸಿನ ಸಂಕಷ್ಟ ಕಾಡುತ್ತದೆ. ಹಣ ಕೈಯಲ್ಲಿ ನಿಲ್ಲುವುದಿಲ್ಲ ಎಂದು ಯೋಚಿಸುತ್ತಾರೆ. ಇದಕ್ಕೆ ವಾಸ್ತುಶಾಸ್ತ್ರದ ಪ್ರಕಾರ ಕೆಲವೊಂದು ಪರಿಹಾರಗಳಿವೆ. ಮನೆಗೆ ಕೆಲವೊಂದು ವಸ್ತುಗಳನ್ನು ತರುವ ಮೂಲಕ ಆರ್ಥಿಕ ಬಿಕ್ಕಟ್ಟನ್ನು ದೂರ ಮಾಡಬಹುದು.
ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಟ್ಟು ಸರಿಯಾಗಿ ಜೋಡಿಸಿದರೆ ಲಕ್ಷ್ಮೀ ದೇವಿಯು ಮನೆಯ ಹೊಸ್ತಿಲು ದಾಟಿ ಹೊರ ಹೋಗುವುದಿಲ್ಲ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಹೀಗಾಗಿ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಹರಿವಿಗೆ ಯಾವೆಲ್ಲಾ ವಸ್ತುಗಳು ಇರಬೇಕು ಎಂಬುದನ್ನು ನೋಡೋಣ. ಇದಕ್ಕೆ ಹೆಚ್ಚುವರಿ ಹಣದ ಖರ್ಚು ಆಗುವುದಿಲ್ಲ.
ಗಣೇಶನ ವಿಗ್ರಹ
ಪ್ರಥಮ ಪೂಜಿತ ಗಣೇಶನ ಫೋಟೋ ಅಥವಾ ಪ್ರತಿಮೆಯನ್ನು ಮನೆಯಲ್ಲಿ ಇಡುವುದು ತುಂಬಾ ಮಂಗಳಕರ. ದೇವಾನುದೇವತೆಗಳಲ್ಲಿ ವಿಘ್ನವಿನಾಶಕನಿಗೆ ಮೊದಲ ಪೂಜೆ. ವಾಸ್ತು ಶಾಸ್ತ್ರದ ಪ್ರಕಾರ, ಅಡೆತಡೆಗಳನ್ನು ನಿವಾರಿಸುವ ಗಣೇಶ ಜೀವನದ ಎಲ್ಲಾ ವಿಘ್ನಗಳನ್ನು ತಡೆಯುತ್ತಾನೆ ಎಂದು ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹರಿಯುತ್ತದೆ. ಆ ಮೂಲಕ ವಾಸ್ತು ದೋಷಗಳನ್ನು ಪರಿಹಾರವಾಗುತ್ತವೆ. ಹಣಕಾಸಿನ ಹರಿವು ಸುಧಾರಿಸುತ್ತದೆ.
ಲಕ್ಷ್ಮೀ ದೇವಿ ಅಥವಾ ಕುಬೇರನ ಪ್ರತಿಮೆ
ಹಣಕಾಸಿನ ದೇವತೆ ಲಕ್ಷ್ಮೀ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತೊಡೆದುಹಾಕಲು, ತಾಯಿ ಲಕ್ಷ್ಮೀ ದೇವಿ ಮತ್ತು ಕುಬೇರನ ಪ್ರತಿಮೆ ಅಥವಾ ಫೋಟೋವನ್ನು ಮನೆಯಲ್ಲಿ ಇಡಬೇಕು ಎಂದು ವಾಸ್ತು ಹೇಳುತ್ತದೆ. ಲಕ್ಷ್ಮೀ ದೇವಿ ಮತ್ತು ಕುಬೇರನ ಕೃಪೆಯಿಂದ, ಜೀವನದಲ್ಲಿ ಸಂಪತ್ತಿನ ಕೊರತೆ ಆಗುವುದಿಲ್ಲ ಎಂದು ನಂಬಲಾಗಿದೆ.
ತೆಂಗಿನಕಾಯಿ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ತೆಂಗಿನಕಾಯಿ ಇಡುವುದರಿಂದ ಮನೆಗೆ ಸಕಾರಾತ್ಮಕ ಶಕ್ತಿ ಬರುತ್ತದೆ. ಸಂಪ್ರದಾಯಗಳನ್ನು ಅನುಸರಿಸುವ ಹೆಚ್ಚಿನ ಮನೆಗಳ ದೇವರ ಮನೆಯಲ್ಲಿ ಕಳಶದ ಮೇಲೆ ತೆಂಗಿನಕಾಯಿ ಇಡುವುದನ್ನು ನೋಡಿರುತ್ತೀರಿ. ಅದನ್ನು ಮೊಳಕೆ ಬರಲು ಬಿಡಲಾಗುತ್ತದೆ. ಹೀಗೆ ತೆಂಗಿನಕಾಯಿಯನ್ನು ಮನೆಯಲ್ಲಿ ಇಡುವುದು ತುಂಬಾ ಮಂಗಳಕರ. ಇದು ಮನೆಗೆ ಸಂತೋಷ ಮತ್ತು ಸಂಪತ್ತು ತರುತ್ತದೆ ಎಂದು ನಂಬಲಾಗಿದೆ. ಅಲ್ಲದೆ ಕಾಯಿ ಚಿಗುರೊಡೆದು ಹೊಸ ಮರದ ಜನನಕ್ಕೆ ಕಾರಣವಾಗುವಂತೆ ಸಂಪತ್ತು ವೃದ್ಧಿಸುತ್ತದೆ ಎಂದು ಹೇಳಲಾಗುತ್ತದೆ.
ಶಂಖ
ಮನೆಯ ದೇವರ ಕೋಣೆಯಲ್ಲಿ ಶಂಖವನ್ನು ಇಡುವುದು ಮಂಗಳಕರ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಶಂಖವನ್ನು ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಸಕಾರಾತ್ಮಕ ಸಂವಹನ ನಡೆಯುತ್ತದೆ. ಶಂಖವು ವಾಸ್ತು ದೋಷಗಳನ್ನು ದೂರ ಮಾಡುತ್ತದೆ. ಇದರಿಂದ ಜೀವನದಲ್ಲಿ ನೆಮ್ಮದಿ ಇರುತ್ತದೆ ಎಂದು ನಂಬಲಾಗಿದೆ. ನಿತ್ಯ ಶಂಖ ಊದುವುದು ಆರೋಗ್ಯಕ್ಕೂ ಒಳ್ಳೆಯದು. ಆರೋಗ್ಯ ಭಾಗ್ಯವಿದ್ದರೆ ನೆಮ್ಮದಿ ಹೆಚ್ಚುತ್ತದೆ.
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
ಇನ್ನಷ್ಟು ಸ್ಪಿರಿಚುವಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ತೋರು ಬೆರಳಿಗೆ ಸಮವಿರುವಂತೆ ಹೆಬ್ಬೆರಳು ಹೊಂದಿರುವವರ ಸ್ವಭಾವ ಹೇಗಿರುತ್ತದೆ; ಜ್ಯೋತಿಷ್ಯಶಾಸ್ತ್ರದಲ್ಲಿ ಏನು ಹೇಳಲಾಗಿದೆ?
