ಮನೆಯಲ್ಲಿ ಬಿಲ್ವಪತ್ರೆ ಗಿಡ ಇದ್ದರೆ ಏನಿದೆ ಫಲ? ವಾಸ್ತುಶಾಸ್ತ್ರ ನೀಡುವ ಉತ್ತರ ಇದು-vastu tips what are benefits of planting bel patra plant in the month of sawan arc ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮನೆಯಲ್ಲಿ ಬಿಲ್ವಪತ್ರೆ ಗಿಡ ಇದ್ದರೆ ಏನಿದೆ ಫಲ? ವಾಸ್ತುಶಾಸ್ತ್ರ ನೀಡುವ ಉತ್ತರ ಇದು

ಮನೆಯಲ್ಲಿ ಬಿಲ್ವಪತ್ರೆ ಗಿಡ ಇದ್ದರೆ ಏನಿದೆ ಫಲ? ವಾಸ್ತುಶಾಸ್ತ್ರ ನೀಡುವ ಉತ್ತರ ಇದು

Sawan Vastu Tips: ಶಿವನಿಗೆ ಬಿಲ್ವ ಪತ್ರೆಯೆಂದರೆ ಬಹಳ ಪ್ರಿಯವಾದದ್ದು ಎಂಬುದು ಎಲ್ಲರಿಗೂ ತಿಳಿದ ವಿಷಯ. ಶ್ರಾವಣದ ಪವಿತ್ರ ಮಾಸದಲ್ಲಿ ಬಿಲ್ವ ಪತ್ರೆಯ ಗಿಡವನ್ನು ನೆಡುವುದು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ. ಇದರಿಂದ ಜೀವನದಲ್ಲಿ ಸುಖ–ಸಮೃದ್ಧಿ ಹಾಗೂ ಸಂತೋಷ ಬರುತ್ತದೆ ಎಂದು ನಂಬಲಾಗಿದೆ. (ಬರಹ: ಅರ್ಚನಾ ವಿ.ಭಟ್)

ಮನೆಯಲ್ಲಿ ಬಿಲ್ವಪತ್ರೆ ಗಿಡ ಇದ್ದರೆ ಏನಿದೆ ಫಲ? ವಾಸ್ತುಶಾಸ್ತ್ರ ನೀಡುವ ಉತ್ತರ ಇದು
ಮನೆಯಲ್ಲಿ ಬಿಲ್ವಪತ್ರೆ ಗಿಡ ಇದ್ದರೆ ಏನಿದೆ ಫಲ? ವಾಸ್ತುಶಾಸ್ತ್ರ ನೀಡುವ ಉತ್ತರ ಇದು

ಶ್ರಾವಣ ಮಾಸ ಪ್ರಾರಂಭವಾಗಿದೆ. ಇದು ದೇವರುಗಳನ್ನು ಪೂಜಿಸಿ, ಆಶೀರ್ವಾದ ಪಡೆಯಲು ಉತ್ತಮ ಕಾಲ ಎಂದು ಹೇಳಲಾಗುತ್ತದೆ. ಈ ಮಾಸದಲ್ಲಿ ಅನೇಕ ದೇವರುಗಳನ್ನು ಪೂಜಿಸಲಾಗುತ್ತದೆ. ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು, ಶುಚಿಯಾಗಿ, ದೇವರ ಪೂಜೆ ಮಾಡುತ್ತಾರೆ. ಹತ್ತಿರದ ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನ ಪಡೆಯುತ್ತಾರೆ. ಶ್ರಾವಣ ಮಾಸವು ಶಿವನಿಗೆ ಅತ್ಯಂತ ಪ್ರಿಯವಾದ ಮಾಸ ಎಂದು ನಂಬಲಾಗಿದೆ. ಈ ಪವಿತ್ರ ತಿಂಗಳಿನಲ್ಲಿ ಈಶ್ವರನ್ನು ಆರಾಧಿಸುವುದರಿಂದ ಜೀವನದಲ್ಲಿರುವ ಎಲ್ಲಾ ದುಃಖ ಹಾಗೂ ಕಷ್ಟಗಳಿಂದ ಮುಕ್ತಿ ದೊರೆಯುತ್ತವೆ ಎಂದು ಹೇಳಲಾಗುತ್ತದೆ. ಶಿವನಿಗೆ ಜಲ, ಭಸ್ಮ, ಬಿಲ್ವಪತ್ರೆಗಳೆಂದರೆ ಅಚ್ಚುಮೆಚ್ಚು. ಅದರಲ್ಲೂ ಮೂರು ಎಲೆಗಳಿರುವ ಒಂದು ಬಿಲ್ವಪತ್ರೆಯನ್ನು ಶಿವನ ಮುಡಿಗೆ ಏರಿಸುವುದರಿಂದ ಅವನ ಕರುಣೆಗೆ ಪಾತ್ರರಾಗಬಹುದು ಎಂದು ಹೇಳಲಾಗುತ್ತದೆ. ಮಹಾದೇವನ ಕೃಪಾ ದೃಷ್ಟಿಗೆ ಪಾತ್ರರಾಗಲು ಮನೆಯಲ್ಲಿ ಬಿಲ್ವಪತ್ರೆಯ ಗಿಡವನ್ನು ಬೆಳಸಬಹುದಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಬಿಲ್ವಪತ್ರೆಯ ಗಿಡವನ್ನು ಮನೆಯಲ್ಲಿ ಬೆಳಸುವುದು ಶುಭ ಎಂದು ಹೇಳಲಾಗಿದೆ. ಶಿವನಿಗೂ ಬಿಲ್ವಪತ್ರೆ ಅತ್ಯಂತ ಪ್ರಿಯವಾಗಿದೆ. ಯಾರ ಮನೆಯಲ್ಲಿ ಬಿಲ್ವಪತ್ರೆಯ ಗಿಡವಿರುತ್ತದೆಯೋ ಅವರ ಮನೆಯ ಪ್ರತಿ ಸದಸ್ಯರ ಮೇಲೂ ಭಗವಾನ್‌ ಶಿವನ ಆಶೀರ್ವಾದ ಇರುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೇ ಸುಖ–ಸಮೃದ್ಧಿಯನ್ನೂ ಕರುಣಿಸುತ್ತಾನೆ. ನೀವೂ ನಿಮ್ಮ ಮನೆಯಲ್ಲಿ ಬಿಲ್ವಪತ್ರೆಯ ಗಿಡವನ್ನು ಬೆಳೆಸುವ ಆಸೆಯಿದ್ದರೆ ಕೆಲವು ವಾಸ್ತು ನಿಯಮಗಳನ್ನು ಖಂಡಿತ ತಿಳಿದುಕೊಳ್ಳಿ.

ಶಿವನಿಗೂ ಬಿಲ್ವಪತ್ರೆಗೂ ಇರುವ ಸಂಬಂಧವೇನು?

ದೇವತೆಗಳು ಮತ್ತು ಅಸುರರು ಸೇರಿ ಅಮೃತಕ್ಕಾಗಿ ಸಮುದ್ರ ಮಂಥನವನ್ನು ನಡೆಸುತ್ತಾರೆ. ಆಗ ಅನೇಕ ವಸ್ತುಗಳು ಹೊರಬರುತ್ತವೆ. ಅದರಲ್ಲಿ ವಿಷ ಸಹ ಬರುತ್ತದೆ. ಆ ವಿಷ, ಜಗತ್ತನ್ನೇ ನಾಶ ಮಾಡುತ್ತದೆ ಎಂದು ತಿಳಿದು, ಶಿವನು ಅದನ್ನು ಕುಡಿಯುತ್ತಾನೆ. ಗಂಟಲಿನಲ್ಲಿರುವ ವಿಷದ ಪ್ರಾಭಾವದಿಂದ ಅದು ಶಿವನಿಗೆ ಸಹಿಸಲು ಅಸಾಧ್ಯವೆನಿಸುವಷ್ಟು ಉರಿಯ ಅನುಭವವನ್ನು ನೀಡುತ್ತದೆ. ಆಗ ಅದನ್ನು ಶಮನಮಾಡಲು ಶಿವನು ಬಿಲ್ವಪತ್ರೆಯನ್ನು ತಿಂದನು. ಅದರ ಪರಿಣಾಮವಾಗಿ ಶಿವನಿಗೆ ಉರಿಯ ಪ್ರಭಾವ ಕಡಿಮೆಯಾಯಿತು ಎಂದು ಹೇಳಲಾಗುತ್ತದೆ. ಅಂದಿನಿಂದ ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸಲಾಗುತ್ತದೆ ಎಂದು ಪುರಾಣದ ಕಥೆ ಹೇಳುತ್ತದೆ.

ಬಿಲ್ವಪತ್ರೆ ಗಿಡವನ್ನು ಬೆಳೆಸಲು ಇರುವ ವಾಸ್ತು ನಿಯಮಗಳು

1) ವಾಸ್ತು ಶಾಸ್ತ್ರದ ಪ್ರಕಾರ, ಬಿಲ್ವಪತ್ರೆಯ ಗಿಡವನ್ನು ಮನೆಯ ಉತ್ತರ ಅಥವಾ ಪಶ್ಚಿಮ ದಿಕ್ಕಿನಲ್ಲಿ ಬೆಳೆಸುವುದು ಲಾಭದಾಯಕ ಎಂದು ಹೇಳಲಾಗಿದೆ.

2) ನಕಾರಾತ್ಮಕ ಶಕ್ತಿಯನ್ನು ದೂರ ಮಾಡಲು ಮನೆಯ ಅಂಗಳದಲ್ಲೂ ಸಹ ಬಿಲ್ವಪತ್ರೆಯ ಗಿಡವನ್ನು ನೆಡಬಹುದಾಗಿದೆ. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಸಂಚಾರವಾಗುತ್ತದೆ ಎಂದು ನಂಬಲಾಗಿದೆ.

3) ಮನೆಯಲ್ಲಿ ಬಿಲ್ವಪತ್ರೆಯ ಗಿಡವಿದ್ದರೆ ಚಂದ್ರ ದೋಷದಿಂದ ಪರಿಹಾರ ಸಿಗುತ್ತದೆ ಎಂದು ಹೇಳಲಾಗುತ್ತದೆ.

4) ಶ್ರಾವಣ ಮಾಸದಲ್ಲಿ ಪವಿತ್ರ ಬಿಲ್ವಪತ್ರೆಯ ಗಿಡವನ್ನು ಪೂಜಿಸುವುದರಿಂದ ಶುಭ ಫಲಗಳು ಸಿಗುತ್ತವೆ. ಬಿಲ್ವಪತ್ರೆಯ ಗಿಡಕ್ಕೆ ಕೆಂಪು ದಾರ ಕಟ್ಟುವುದರಿಂದ ಜಾತಕದಲ್ಲಿರುವ ರಾಹುವಿನ ಅಶುಭ ಪರಿಣಾಮಗಳು ದೂರವಾಗುತ್ತವೆ.

5) ಬಿಲ್ವಪತ್ರೆಯ ಮರದ ಕಾಂಡದಲ್ಲಿ ಕೆಂಪು ದಾರವನ್ನು ಕಟ್ಟಿ, ನೀರೆರೆದು ಪೂಜಿಸುವುದರಿಂದ ಪಿತೃ ದೋಷದಿಂದ ಉಂಟಾಗುವ ತೊಂದರೆಗಳಿಂದ ಪರಿಹಾರ ದೊರೆಯುತ್ತದೆ.

ಯಾವ ದಿನ ಬಿಲ್ವಪತ್ರೆಯನ್ನು ಕೀಳಬಾರದು?

ವಾಸ್ತು ಶಾಸ್ತ್ರದ ನಿಯಮಗಳ ಪ್ರಕಾರ ಚತುರ್ಥಿ, ಅಷ್ಟಮಿ, ನವಮಿ, ಚತುರ್ದಶಿ ಹಾಗೂ ಅಮವಾಸ್ಯೆಯ ದಿನಗಳಂದು ಬಿಲ್ವ ಪತ್ರೆಯನ್ನು ಕೀಳಬಾರದು. ವಾರಗಳಲ್ಲಿ ಸೋಮವಾರದಂದು ಬಿಲ್ವಪತ್ರೆಯನ್ನು ಎಂದಿಗೂ ಕೀಳಬಾರದು.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.