ಮುಶ್ಫಿಕರ್‌ ಅರ್ಧಶತಕ; ಚೆಪಾಕ್‌ ಮೈದಾನದಲ್ಲಿ ಕಿವೀಸ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದ ಬಾಂಗ್ಲಾದೇಶ
ಕನ್ನಡ ಸುದ್ದಿ  /  ಕ್ರಿಕೆಟ್  /  ಮುಶ್ಫಿಕರ್‌ ಅರ್ಧಶತಕ; ಚೆಪಾಕ್‌ ಮೈದಾನದಲ್ಲಿ ಕಿವೀಸ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದ ಬಾಂಗ್ಲಾದೇಶ

ಮುಶ್ಫಿಕರ್‌ ಅರ್ಧಶತಕ; ಚೆಪಾಕ್‌ ಮೈದಾನದಲ್ಲಿ ಕಿವೀಸ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದ ಬಾಂಗ್ಲಾದೇಶ

New Zealand vs Bangladesh ICC ODI World Cup 2023: ಚೆಪಾಕ್‌ ಮೈದಾನದಲ್ಲಿ ನಡೆಯುತ್ತಿರುವ ನ್ಯೂಜಿಲ್ಯಾಂಡ್‌ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ಬಾಂಗ್ಲಾದೇಶ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿದೆ.

ಮುಶ್ಫಿಕರ್‌ ರಹೀಮ್‌ ಕ್ಲೀನ್‌ ಬೋಲ್ಡ್‌ ಆದ ಪರಿ
ಮುಶ್ಫಿಕರ್‌ ರಹೀಮ್‌ ಕ್ಲೀನ್‌ ಬೋಲ್ಡ್‌ ಆದ ಪರಿ (AP)

ಏಕದಿನ ವಿಶ್ವಕಪ್‌ನಲ್ಲಿ (ICC ODI World Cup 2023) ಹ್ಯಾಟ್ರಿಕ್‌ ಗೆಲುವಿನ ಸನಿಹದಲ್ಲಿರುವ ನ್ಯೂಜಿಲ್ಯಾಂಡ್‌, ಬಾಂಗ್ಲಾದೇಶ ತಂಡವನ್ನು (New Zealand vs Bangladesh) ಸ್ಪರ್ಧಾತ್ಮಕ ಮೊತ್ತಕ್ಕೆ ಕಟ್ಟಿಹಾಕಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಶ್ವಕಪ್‌ನ 11ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಶಕೀಬ್‌ ಅಲ್‌ ಹಸನ್‌ ಪಡೆ, 9 ವಿಕೆಟ್‌ ಕಳೆದುಕೊಂಡು 245 ರನ್‌ ಕಲೆ ಹಾಕಿದೆ. ಆ ಮೂಲಕ ಕೇನ್‌ ವಿಲಿಯಮ್ಸನ್‌ ಬಳಗಕ್ಕೆ 246 ರನ್‌ ಗುರಿ ನೀಡಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಆರಂಭಿಸಿದ ಬಾಂಗ್ಲಾದೇಶ, ಬೋಲ್ಟ್‌ ಎಸೆದ ಮೊದಲ ಎಸೆತದಲ್ಲೇ ಮೊದಲ ವಿಕೆಟ್‌ ಕಳೆದುಕೊಂಡಿತು. ಆರಂಭಿಕ ಆಟಗಾರ ಲಿಟ್ಟನ್‌ ದಾಸ್‌ ಗೋಲ್ಡನ್‌ ಡಕ್‌ ಆದರು. ಮೊದಲ ವಿಕೆಟ್‌ ಪತನದ ಬಳಿಕ ಜವಾಬ್ದಾರಿಯುತ ಆಟವಾಡಿದ ತನ್ಜಿದ್‌ ಹಸನ್‌ ಮತ್ತು ಮೆಹಿದಿ ಹಸನ್‌ ನಿಧಾನಗತಿಯಲ್ಲಿ ಬ್ಯಾಟ್‌ ಬೀಸಿದರು. ಆದರೆ 16(17) ರನ್‌ ಗಳಿಸಿದ್ದ ತನ್ಜಿದ್‌ ಹಸನ್‌, ಲಾಕಿ ಫರ್ಗ್ಯುಸನ್‌ಗೆ ವಿಕೆಟ್‌ ಒಪ್ಪಿಸಿದರು.

30 ರನ್‌ ಗಳಿಸಿ ಮೆಹಿದಿ ಹಸನ್‌ ಮಿರಾಜ್‌ ಕೂಡಾ ಔಟಾದರು. ಅವರ ಬೆನ್ನಲ್ಲೇ ಶಾಂಟೊ ಕೂಡಾ ಕೇವಲ 7 ರನ್‌ ಗಳಿಸಿ ನಿರ್ಗಮಿಸಿದರು. ನಾಲ್ಕು ವಿಕೆಟ್‌ ಕಳೆದುಕೊಂಡು ತಂಡವು ಸಂಕಷ್ಟದಲ್ಲಿದ್ದ ವೇಳೆ ಒಂದಾದ ಅನುಭವಿ ಆಟಗಾರರಾದ ಮುಶ್ಫಿಕರ್‌ ರಹೀಮ್ ಮತ್ತು ನಾಯಕ ಶಕೀಬ್‌‌ ಅಲ್‌ಹಸನ್‌ ಅರ್ಧಶತಕದ ಜೊತೆಯಾಟವಾಡಿದರು. ಅಲ್ಲದೆ ಬಾಂಗ್ಲಾದೇಶವನ್ನು 100 ರನ್‌ ಗಡಿ ದಾಟಿಸಿದರು.

96 ರನ್‌ ಜೊತೆಯಾಟ, ಮುಶ್ಫಿಕರ್‌ ಅರ್ಧಶತಕ

40 ರನ್‌ ಗಳಿಸಿದ್ದ ನಾಯಕ ಶಕೀಬ್‌ ಅಲ್‌ ಹಸನ್‌ ಫರ್ಗ್ಯುಸನ್ ಎಸೆತದಲ್ಲಿ ಕ್ಯಾಚ್‌ ನೀಡಿ ಔಟಾದರು. ಅಲ್ಲಿಗೆ ಮುಶ್ಫಿಕರ್‌ ಮತ್ತು ಶಕೀಬ್‌ ನಡುವಿನ 96(108) ರನ್‌ಗಳ‌ ಜೊತೆಯಾಟ ಅಂತ್ಯವಾಯ್ತು.‌ ಕ್ರೀಸ್‌ಕಚ್ಚಿ ರಕ್ಷಣಾತ್ಮ ಆಟವಾಡುತ್ತಿದ್ದ ಅನುಭವಿ ಆಟಗಾರ ಮುಶ್ಫಿಕರ್ ಆಕರ್ಷಕ ಅರ್ಧಶತಕ ಸಿಡಿಸಿದರು. 66 ರನ್‌ ಗಳಿಸಿ ಔಟಾದ ಬೆನ್ನಲ್ಲೇ, ತೌಹಿದ್‌ ಕೂಡಾ 13 ರನ್‌ ಗಳಿಸಿ ಪೆವಿಲಿಯನ್‌ ಸೇರಿಕೊಂಡರು. ಡೆತ್‌ ಓವರ್‌ಗಳಲ್ಲಿ ಮಹಮದುಲ್ಲಾ ಜೊತೆ ಸೇರಿ ಆಡುತ್ತಿದ್ದ ತಸ್ಕಿನ್‌ ಅಹ್ಮದ್‌ 17 ರನ್‌ ಗಳಿಸಿ ಸ್ಯಾಂಟ್ನರ್‌ಗೆ ವಿಕೆಟ್‌ ಒಪ್ಪಿಸಿದರು. ಡೆತ್‌ ಓವರ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಮಹಮದುಲ್ಲಾ, ಅಜೇಯ 41 ರನ್‌ ಗಳಿಸಿ ತಂಡದ ಮೊತ್ತ ಹಿಗ್ಗಿಸಿದರು.

ನ್ಯೂಜಿಲ್ಯಾಂಡ್‌ ಪರ ಲಾಕಿ ಫರ್ಗ್ಯುಸನ್‌ 3 ವಿಕೆಟ್‌ ಪಡೆದರೆ, ಟ್ರೆಂಟ್‌ ಬೋಲ್ಟ್‌ ಮತ್ತು ಮ್ಯಾಟ್‌ ಹೆನ್ರಿ ತಲಾ 2 ವಿಕೆಟ್‌ ಕಬಳಿಸಿದರು.

ಉಭಯ ತಂಡಗಳಲ್ಲಿ ಮಹತ್ವದ ಬದಲಾವಣೆ

ಕಿವೀಸ್‌ ತಂಡದ ಆರಂಭಿಕ ಆಟಗಾರ ವಿಲ್ ಯಂಗ್ ಸ್ಥಾನದಲ್ಲಿ ಇಂದು ತಂಡದ ಕಾಯಂ ನಾಯಕ ಕೇನ್ ವಿಲಿಯಮ್ಸನ್​ ಕಣಕ್ಕಿಳಿದಿದ್ದಾರೆ. ಗಾಯದಿಂದಾಗಿ ಸುದೀರ್ಘ ಅವಧಿಗೆ ತಂಡದಿಂದ ಸುದೀರ್ಘ ಅವಧಿಗೆ ಹೊರಗುಳಿದಿದ್ದ ಕೇನ್‌, ಬರೋಬ್ಬರಿ ಒಂಬತ್ತು ತಿಂಗಳ ಬಳಿಕ ನ್ಯೂಜಿಲ್ಯಾಂಡ್ ತಂಡ ಸೇರಿಕೊಂಡಿದ್ದಾರೆ. ಆರಂಭಿಕರಾಗಿ ಡೆವೋನ್ ಕಾನ್ವೆ ಮತ್ತು ರಚಿನ್ ರವೀಂದ್ರ ಕಣಕ್ಕಿಳಿಯಲಿದ್ದಾರೆ. ಅತ್ತ ಬಾಂಗ್ಲಾ ತಂಡದಲ್ಲಿ ಮೆಹದಿ ಬದಲಿಗೆ ಅನುಭವಿ ಮಹಮದ್ದುಲ್ಲಾ ಬಾಂಗ್ಲಾ ತಂಡವನ್ನು ಸೇರಿಕೊಂಡಿದ್ದಾರೆ.

ಬಾಂಗ್ಲಾದೇಶ ಆಡುವ ಬಳಗ: ಲಿಟ್ಟನ್ ದಾಸ್, ತಂಜಿದ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಮೆಹಿದಿ ಹಸನ್ ಮಿರಾಜ್, ಶಕೀಬ್ ಅಲ್ ಹಸನ್(ಸಿ), ಮುಶ್ಫಿಕರ್ ರಹೀಮ್(ಪ), ತೌಹಿದ್ ಹೃದಯೊಯ್, ಮಹಮ್ಮದುಲ್ಲಾ, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮುಸ್ತಫಿಜುರ್ ರೆಹಮಾನ್.

ನ್ಯೂಜಿಲ್ಯಾಂಡ್ ಆಡುವ ಬಳಗ: ಡೆವೊನ್ ಕಾನ್ವೇ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್ (ನಾಯಕ), ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ವಿಕೆಟ್‌ ಕೀಪರ್), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೋಲ್ಟ್‌.

Whats_app_banner