ಮೈನವಿರೇಳಿಸಲಿದೆ ವೈಭವದ ವಿಶ್ವಕಪ್ ಉದ್ಘಾಟನಾ ಸಮಾರಂಭ; ಲೇಸರ್ ಶೋ, ಬಾಲಿವುಡ್​ ತಾರೆಗಳಿಂದ ಪ್ರದರ್ಶನ
ಕನ್ನಡ ಸುದ್ದಿ  /  ಕ್ರಿಕೆಟ್  /  ಮೈನವಿರೇಳಿಸಲಿದೆ ವೈಭವದ ವಿಶ್ವಕಪ್ ಉದ್ಘಾಟನಾ ಸಮಾರಂಭ; ಲೇಸರ್ ಶೋ, ಬಾಲಿವುಡ್​ ತಾರೆಗಳಿಂದ ಪ್ರದರ್ಶನ

ಮೈನವಿರೇಳಿಸಲಿದೆ ವೈಭವದ ವಿಶ್ವಕಪ್ ಉದ್ಘಾಟನಾ ಸಮಾರಂಭ; ಲೇಸರ್ ಶೋ, ಬಾಲಿವುಡ್​ ತಾರೆಗಳಿಂದ ಪ್ರದರ್ಶನ

ICC ODI World Cup 2023 Grand Opening Ceremony: ಅಕ್ಟೋಬರ್​​ 4ರಂದು ಏಕದಿನ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಸಮಾರಂಭ ನಡೆಯಲಿದೆ. ಬಾಲಿವುಡ್ ತಾರೆಗಳಿಂದ ಅಮೋಘ ಪ್ರದರ್ಶನ ಇರಲಿದ್ದು, ಹತ್ತು ತಂಡಗಳ ಆಟಗಾರರು ಪಾಲ್ಗೊಳ್ಳಲಿದ್ದಾರೆ.

ಮೈನವಿರೇಳಿಸಲಿದೆ ವೈಭವದ ವಿಶ್ವಕಪ್ ಉದ್ಘಾಟನಾ ಸಮಾರಂಭ.
ಮೈನವಿರೇಳಿಸಲಿದೆ ವೈಭವದ ವಿಶ್ವಕಪ್ ಉದ್ಘಾಟನಾ ಸಮಾರಂಭ.

ಐಸಿಸಿ ಏಕದಿನ ವಿಶ್ವಕಪ್ 2023ರ ಟೂರ್ನಿಗೆ (ICC ODI World Cup 2023) ವೇದಿಕೆ ಸಿದ್ದಗೊಂಡಿದೆ. ಅಕ್ಟೋಬರ್​ 5ರಂದು ಆರಂಭಿಕ ಪಂದ್ಯಕ್ಕೂ ಮುನ್ನಾ ದಿನ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಅಕ್ಟೋಬರ್ 4ರಂದು ಗುಜರಾತ್​​ನ ಅಹ್ಮದಾಬಾದ್​ನ​ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra modi stadium ahmedabad) ವರ್ಣರಂಜಿತ ಕಾರ್ಯಕ್ರಮ ನಡೆಯಲಿದೆ. ಗ್ರ್ಯಾಂಡ್​ ಓಪನಿಂಗ್​ ಶೋ ನಡೆಸಲು ಬಾಲಿವುಡ್ ತಾರೆಗಳ ದಂಡೇ ಹಾಜರಿ ಹಾಕಲಿದೆ.

ಸಂಜೆ 7 ಗಂಟೆಗೆ ಗ್ರ್ಯಾಂಡ್ ಓಪನಿಂಗ್​ ಶೋ ನಡೆಯಲಿದೆ. ಏಕದಿನ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಸಮಾರಂಭಕ್ಕೆ ರಣವೀರ್ ಸಿಂಗ್ (Ranveer Singh), ಖ್ಯಾತ ಗಾಯಕರಾದ ಶ್ರೇಯಾ ಘೋಷಾಲ್ (Shreya Ghoshal), ಅರಿಜಿತ್ ಸಿಂಗ್ (Arijit Singh) ಮತ್ತು ಆಶಾ ಭೋಂಸ್ಲೆ (Asha Bhosle) ಸೇರಿದಂತೆ ಹಲವಾರು ಬಾಲಿವುಡ್ ತಾರೆಯರನ್ನು ಬಿಸಿಸಿಐ (BCCI) ಆಹ್ವಾನಿಸಿದೆ. ಭಾರತೀಯ ಪರಂಪರೆಯನ್ನು ಪ್ರದರ್ಶನದ ಜೊತೆಗೆ ಲೇಸರ್ ಶೋ ಮತ್ತು ಪಟಾಕಿ ಸದ್ದು ಇರಲಿದೆ. ಈ ವೇಳೆ ಎಲ್ಲಾ ಹತ್ತು ತಂಡಗಳ ನಾಯಕರು ಉಪಸ್ಥಿತರಿರುತ್ತಾರೆ.

ಅಭಿಮಾನಿಗಳಿಗೂ ಅವಕಾಶ

ವೈಭವದ ಉದ್ಘಾಟನಾ ಕಾರ್ಯಕ್ರಮವನ್ನು ಅಭಿಮಾನಿಗಳು ಸಹ ಕಣ್ತುಂಬಿಕೊಳ್ಳಬಹುದು. ಅಕ್ಟೋಬರ್​ 5ರಂದು ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಉದ್ಘಾಟನಾ ಪಂದ್ಯಕ್ಕೆ ಟಿಕೆಟ್ ಖರೀದಿಸಿದ ಅಭಿಮಾನಿಗಳು ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶ ಇದೆ. ಮೈದಾನದ ತುಂಬೆಲ್ಲಾ ಕಲರ್​​ಫುಲ್ ಲೈಟಿಂಗ್ ವ್ಯವಸ್ಥೆ ಮಾಡಿದ್ದು, ಈ ಹಿಂದೆಂದೂ ಮಾಡದ ವಿಭಿನ್ನ ಕಾರ್ಯಕ್ರಮ ನಡೆಯಲಿದೆ. ಭಾರತೀಯ ಸಾಂಪ್ರದಾಯಿಕ ಶೈಲಿಯಲ್ಲಿ ಸಮಾರಂಭ ನಡೆಯಲಿದೆ.

ಯಾರೆಲ್ಲಾ ಪ್ರದರ್ಶನ ನೀಡಲಿದ್ದಾರೆ?

ಆಶಾ ಭೋಂಸ್ಲೆ ತಮ್ಮ ಸುಂದರವಾದ ಧ್ವನಿಯಿಂದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಲು ಸಜ್ಜಾಗಿದ್ದಾರೆ. ಗಾಯನದ ದಿಗ್ಗಜರಲ್ಲದೆ, ಶ್ರೇಯಾ ಘೋಷಾಲ್, ಶಂಕರ್ ಮಹಾದೇವನ್ ಮತ್ತು ಅರಿಜಿತ್ ಸಿಂಗ್ ಕೂಡ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಐಸಿಸಿಯ ವಿಶ್ವಕಪ್ ಗೀತೆಯ ಮುಖವಾಗಿದ್ದ ರಣವೀರ್ ಸಿಂಗ್ ಕೆಲವು ಬಾಲಿವುಡ್ ಮತ್ತು ಟಾಲಿವುಡ್ ಪ್ರಮುಖರು ಸಹ ಪ್ರದರ್ಶನ ನೀಡಲಿದ್ದಾರೆ.

ಸಿದ್ಧತೆಗಳು ಹೇಗಿದೆ?

ಉದ್ಘಾಟನಾ ದಿನದ ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗಿವೆ. ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿದ್ದು, ತಾಲೀಮು ನಡೆಸಲಾಗುತ್ತಿದೆ. ಗ್ರ್ಯಾಂಡ್ ಓಪನಿಂಗ್‌ಗೂ ಮುನ್ನ ಎಲ್ಲಾ 10 ನಾಯಕರು ಅಕ್ಟೋಬರ್ 3 ರಂದು ಅಹಮದಾಬಾದ್‌ಗೆ ಆಗಮಿಸಲಿದ್ದಾರೆ. ಆದರೆ ಅಕ್ಟೋಬರ್​ 3ರಂದು ಅಭ್ಯಾಸ ಪಂದ್ಯಗಳು ನಡೆಯಲಿದ್ದು, ಆ ತಂಡಗಳ ನಾಯಕರು ಅಕ್ಟೋಬರ್​ 4ರಂದು ಅಹ್ಮದಾಬಾದ್ ತಲುಪಲಿದ್ದಾರೆ.

ಅ. 4ರಂದೇ ಕಾರ್ಯಕ್ರಮ ನಡೆಸಲು ಕಾರಣವೇನು?

ಉದ್ಘಾಟನಾ ಪಂದ್ಯ ಅಕ್ಟೋಬರ್ 5ರಂದು ನಡೆಯಲಿದೆ. ಆದರೆ ಉದ್ಘಾಟನಾ ಕಾರ್ಯಕ್ರಮ 4ರಂದು ನಡೆಸುವುದೇಕೆ ಎಂಬ ಪ್ರಶ್ನೆ ಎದ್ದಿದೆ. ಪಂದ್ಯಗಳು ಮಧ್ಯಾಹ್ನ 2 ಗಂಟೆಗೆ ಶುರುವಾಗಲಿದ್ದು, ಹಗಲಿನಲ್ಲಿ ಲೇಸರ್​ ಶೋ ನಡೆಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಪಂದ್ಯದ ಹಿಂದಿನ ದಿನ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಅಭಿಮಾನಿಗಳ ಹೊರತಾಗಿ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮತ್ತು ಬಿಸಿಸಿಐನ ಉನ್ನತ ಅಧಿಕಾರಿಗಳು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಏಕದಿನ ವಿಶ್ವಕಪ್ ತಂಡಗಳ ನಾಯಕರು

ಭಾರತ: ರೋಹಿತ್ ಶರ್ಮಾ

ಪಾಕಿಸ್ತಾನ: ಬಾಬರ್ ಅಜಮ್

ಇಂಗ್ಲೆಂಡ್: ಜೋಸ್ ಬಟ್ಲರ್

ಆಸ್ಟ್ರೇಲಿಯಾ: ಪ್ಯಾಟ್ ಕಮ್ಮಿನ್ಸ್

ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್

ಶ್ರೀಲಂಕಾ: ದಸುನ್ ಶನಕ

ಬಾಂಗ್ಲಾದೇಶ: ಶಕೀಬ್ ಅಲ್ ಹಸನ್

ನೆದರ್ಲೆಂಡ್ಸ್: ಸ್ಕಾಟ್ ಎಡ್ವರ್ಡ್ಸ್

ದಕ್ಷಿಣ ಆಫ್ರಿಕಾ: ಟೆಂಬಾ ಬಾವುಮಾ

ಅಫ್ಘಾನಿಸ್ತಾನ: ಹಶ್ಮತುಲ್ಲಾ ಶಾಹಿದಿ

Whats_app_banner