Watch: ಔಟಾದ ಹತಾಶೆಗೆ ಸ್ಟಂಪ್ಸ್ಗೆ ಕಾಲಿಂದ ಒದ್ದ ಹೆನ್ರಿಚ್ ಕ್ಲಾಸೆನ್; ದಂಡ ವಿಧಿಸಿದ ಐಸಿಸಿ, ಆಕ್ರೋಶ
Heinrich Klaasen: ಕೇವಲ 3 ರನ್‌ಗಳ ಅಂತರದಿಂದ ಶತಕ ವಂಚಿತ ಮತ್ತು ಪಂದ್ಯವನ್ನು ಗೆಲ್ಲಿಸಿಕೊಡಲು ವಿಫಲವಾದ ಸೌತ್ ಆಫ್ರಿಕಾ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ ಸ್ಟಂಪ್ಸ್ಗೆ ಕಾಲಿಂದ ಒದ್ದಿದ್ದಾರೆ. ಅವರಿಗೆ ಐಸಿಸಿ ದಂಡ ವಿಧಿಸಿದೆ.
ಪಾಕಿಸ್ತಾನ ವಿರುದ್ಧದ ಎರಡನೇ ಏಕದಿನ ಪಂದ್ಯದ ವೇಳೆ ಐಸಿಸಿ ನೀತಿ ಸಂಹಿತೆಯ ಲೆವೆಲ್-1 ಉಲ್ಲಂಘಿಸಿದ್ದಕ್ಕಾಗಿ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್ ಹೆನ್ರಿಚ್ ಕ್ಲಾಸೆನ್ ಅವರಿಗೆ ಪಂದ್ಯ ಶುಲ್ಕದ ಶೇ 15ರಷ್ಟು ದಂಡ ವಿಧಿಸಲಾಗಿದೆ. ದಂಡದ ಜೊತೆಗೆ, ಕ್ಲಾಸೆನ್ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.2 ಅನ್ನು ಉಲ್ಲಂಘಿಸಿದ್ದಕ್ಕಾಗಿ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸಹ ಪಡೆದಿದ್ದಾರೆ.
ಈ ನಿಯಮ ವಿಕೆಟ್ ಅಥವಾ ಕ್ರಿಕೆಟ್ ಉಪಕರಣಗಳನ್ನು ಹೊಡೆಯುವುದು ಅಥವಾ ಒದೆಯುವುದು, ಜಾಹೀರಾತು ಫಲಕ, ಗಡಿ ಬೇಲಿ, ಡ್ರೆಸ್ಸಿಂಗ್ ಕೋಣೆಯ ಬಾಗಿಲು, ಕನ್ನಡಿ, ಕಿಟಕಿ, ಇತರ ಫಿಕ್ಚರ್‌ಗಳು ಮತ್ತು ಫಿಟ್ಟಿಂಗ್‌ಗಳಿಗೆ ಹಾನಿಯನ್ನುಂಟು ಅಥವಾ ದುರುಪಯೋಗಕ್ಕೆ ಸಂಬಂಧಿಸಿದೆ.
97 ರನ್ ಗಳಿಸಿ ಔಟಾದಾಗ ಘಟನೆ
ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್‌ನ 43ನೇ ಓವರ್‌ನಲ್ಲಿ ಕ್ಲಾಸೆನ್ ಅವರ ಔಟಾದರು. ಆದರೆ ಹತಾಶೆಗೊಂಡು ಸ್ಟಂಪ್‌ಗೆ ಒದ್ದ ಘಟನೆ ಸಂಭವಿಸಿದೆ. ಕ್ಲಾಸೆನ್ ಅವರ ಈ ವರ್ತನೆ ಉಲ್ಲೇಖಿಸಿ ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ ದಂಡ ವಿಧಿಸಿದರು. ಸಂಕಷ್ಟಕ್ಕೆ ಸಿಲುಕಿದ್ದ ದಕ್ಷಿಣ ಆಫ್ರಿಕಾಗೆ ನೆರವಾಗಿದ್ದ ಕ್ಲಾಸೆನ್ 74 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್ ಸಹಿತ 131ರ ಬ್ಯಾಟಿಂಗ್ ಸ್ಟ್ರೈಕ್ರೇಟ್ನಲ್ಲಿ 97 ರನ್ ಗಳಿಸಿ ನಸೀಮ್ ಶಾ ಬೌಲಿಂಗ್ ಕ್ಯಾಚ್ ನೀಡಿದರು.
ಈ ವೇಳೆ ಈ ಘಟನೆ ಸಂಭವಿಸಿದೆ. ಇದು ಕ್ರಿಕೆಟ್ ವಲಯದಲ್ಲಿ ಆಕ್ರೋಶಕ್ಕೂ ಗುರಿಯಾಗಿದೆ. ಔಟಾದ ಮಾತ್ರಕ್ಕೆ ವಿಕೆಟ್ಗೆ ಒದೆಯುವುದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಸದಾ ಶಾಂತವಾಗಿರುವ ವ್ಯಕ್ತಿಗೆ ಇಷ್ಟು ಆಕ್ರೋಶವೇ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
2ನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ್ದ 330 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಪರ ಕ್ಲಾಸೆನ್ 74 ಎಸೆತಗಳಲ್ಲಿ 97 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಆದರೆ, ಮತ್ತೊಂದು ತುದಿಯಿಂದ ಇನ್ನೊಬ್ಬ ಆಟಗಾರನಿಂದ ಸಿಗದ ಕಾರಣ ಅವರ ಪ್ರಯತ್ನ ವಿಫಲವಾಯಿತು. ಈ ರನ್ ಚೇಸ್ನಲ್ಲಿ ಇಡೀ ದಕ್ಷಿಣ ಆಫ್ರಿಕಾ ತಂಡ 248 ರನ್ ಗಳಿಗೆ ಆಲೌಟ್ ಆಗಿದ್ದು, ಪಾಕಿಸ್ತಾನ 81 ರನ್ಗಳಿಂದ ಪಂದ್ಯ ಗೆದ್ದುಕೊಂಡಿದೆ.
ಕ್ಲಾಸೆನ್ ದಕ್ಷಿಣ ಆಫ್ರಿಕಾದ ಕೊನೆಯ ವಿಕೆಟ್ ಆಗಿದ್ದರು. ಅವರೊಂದಿಗೆ ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್ ಕೂಡ ಕೊನೆಗೊಂಡಿತು. ಇನ್ನೂ 7 ಓವರ್ಗಳು ಬಾಕಿ ಉಳಿದಿದ್ದ ಕಾರಣ ಪಂದ್ಯ ಗೆಲ್ಲಿಸಿಕೊಡುವ ವಿಶ್ವಾಸದಲ್ಲಿದ್ದ ಕ್ಲಾಸೆನ್, ಔಟಾಗಿದ್ದು ನಿರಾಸೆ ಮೂಡಿಸಿತು.
ಸೌತ್ ಆಫ್ರಿಕಾ vs ಪಾಕಿಸ್ತಾನ 2ನೇ ಏಕದಿನ ಪಂದ್ಯದ ಸಂಕ್ಷಿಪ್ತ ಸ್ಕೋರ್
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ 49.5 ಓವರ್‌ಗಳಲ್ಲಿ 329 ರನ್ ಗಳಿಸಿತು. ಒಂದು ಎಸೆತ ಬಾಕಿ ಉಳಿಸಿ ಆಲೌಟ್ ಆದ ಪಾಕಿಸ್ತಾನ ತಂಡ, ಆತಿಥೇಯರಿಗೆ 330 ರನ್‌ಗಳ ಬೃಹತ್ ಗುರಿ ನೀಡಿ ಒತ್ತಡ ಹೇರಿತು. ಈ ವೇಳೆ ಮೊಹಮ್ಮದ್ ರಿಜ್ವಾನ್ (73), ಬಾಬರ್ ಅಜಮ್ (80) ಅರ್ಧಶತಕ ಗಳಿಸಿದರೆ, 6ನೇ ಕ್ರಮಾಂಕದಲ್ಲಿ ಬಂದ ಕಮ್ರಾನ್ ಗುಲಾಮ್ 32 ಎಸೆತಗಳಲ್ಲಿ 63 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡುವ ಮೂಲಕ ಪ್ರಮುಖ ಪಾತ್ರ ವಹಿಸಿದರು.
ಮತ್ತೊಂದೆಡೆ ಬೌಲಿಂಗ್ನಲ್ಲೂ ಮಿಂಚಿದ ಪಾಕ್ ಪರ ಶಾಹೀನ್ ಶಾ ಆಫ್ರಿದಿ ಮತ್ತು ನಸೀಮ್ ಶಾ ಒಟ್ಟು 7 ವಿಕೆಟ್ ಕಬಳಿಸಿದರು. ದಕ್ಷಿಣ ಆಫ್ರಿಕಾವನ್ನು 43.1 ಓವರ್‌ಗಳಲ್ಲಿ 248 ರನ್‌ಗಳಿಗೆ ಆಲೌಟ್ ಮಾಡಿದರು.