ಕನ್ನಡ ಸುದ್ದಿ  /  Cricket  /  Brett Lee Steve Smith Questions Mumbai Indians Captain Hardik Pandya Tactics Of Using Jasprit Bumrah Against Srh Jra

ವಿಶ್ವದ ಅತ್ಯುತ್ತಮ ಬೌಲರ್ ಒಂದು ಓವರ್ ಬೌಲ್‌ ಮಾಡುವುದೇ? ಮುಂಬೈ ನಾಯಕ ಹಾರ್ದಿಕ್ ತಂತ್ರಕ್ಕೆ ಬ್ರೆಟ್ ಲೀ, ಸ್ಟೀವ್ ಸ್ಮಿತ್ ಅಚ್ಚರಿ

Hardik Pandya: ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾಗೆ ತಡವಾಗಿ ಬೌಲಿಂಗ್ ನೀಡಿದ ಮುಂಬೈ ಇಂಡಿಯನ್ಸ್‌ ನಾಯಕ ಹಾರ್ದಿಕ್ ಪಾಂಡ್ಯ ಅವರ ತಂತ್ರವನ್ನು ಆಸೀಸ್‌ ಕ್ರಿಕೆಟಿಗರಾದ ಬ್ರೆಟ್ ಲೀ ಮತ್ತು ಸ್ಟೀವ್ ಸ್ಮಿತ್ ಟೀಕಿಸಿದ್ದಾರೆ.

ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ತಂತ್ರಕ್ಕೆ ಬ್ರೆಟ್ ಲೀ, ಸ್ಟೀವ್ ಸ್ಮಿತ್ ಅಚ್ಚರಿ
ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ತಂತ್ರಕ್ಕೆ ಬ್ರೆಟ್ ಲೀ, ಸ್ಟೀವ್ ಸ್ಮಿತ್ ಅಚ್ಚರಿ

ಪ್ರಸಕ್ತ ಐಪಿಎಲ್‌ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ನೂತನ ನಾಯಕ ಹಾರ್ದಿಕ್‌ ಪಾಂಡ್ಯ ಹೆಚ್ಚು ಚರ್ಚೆಯಲ್ಲಿದ್ದಾರೆ.‌ ಮುಂಬೈ ಫ್ರಾಂಚೈಸಿಯ ನಾಯಕತ್ವ ಬದಲಾವಣೆ ಚರ್ಚೆ ಒಂದೆಡೆಯಾದರೆ, ಪಾಂಡ್ಯ ಅವರ ನಾಯಕತ್ವದ ತಂತ್ರಗಳು ಕೂಡಾ ಚರ್ಚೆಯ ವಿಷಯವಾಗಿದೆ. ಗುಜರಾತ್‌ ಟೈಟಾನ್ಸ್‌ ವಿರುದ್ಧದ ಮೊದಲ ಪಂದ್ಯದಲ್ಲಿ ಮೊದಲ ಓವರ್‌ ಖುದ್ದು ತಾವೇ ಬೌಲಿಂಗ್‌ ಮಾಡಿದ್ದ ಹಾರ್ದಿಕ್‌, ವಿಶ್ವದ ಅಗ್ರ ಬೌಲರ್‌ ಬುಮ್ರಾ ಅವರನ್ನು ತಡವಾಗಿ ಕಣಕ್ಕಿಳಿಸಿದ್ದರು. ಇದೇ ರೀತಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿಯೂ ಭಿನ್ನ ತಂತ್ರ ಅನುಸರಿಸಿದ್ದಾರೆ. ಆದರೆ, ಮುಂಬೈ ತಂಡದ ನೂತನ ನಾಯಕನ ತಂತ್ರವು ಅಭಿಮಾನಿಗಳಿಗೆ ಮಾತ್ರವಲ್ಲದೆ ಹಿರಿಯ ಹಾಗೂ ದಿಗ್ಗಜ ಕ್ರಿಕೆಟಿಗರಿಗೂ ಇಷ್ಟವಾಗಿಲ್ಲ.

ಹಾರ್ದಿಕ್ ಪಾಂಡ್ಯ ಬೌಲಿಂಗ್‌ ತಂತ್ರದ ಕುರಿತು ಆಸ್ಟ್ರೇಲಿಯಾದ ಮಾಜಿ ಹಾಗೂ ಹಾಲಿ ಕ್ರಿಕೆಟಿಗರಾದ ಬ್ರೆಟ್ ಲೀ ಮತ್ತು ಸ್ಟೀವ್ ಸ್ಮಿತ್ ಅಚ್ಚರಿ ವ್ಯಕ್ತಪಡಿದ್ದಾರೆ. ಪಂದ್ಯದಲ್ಲಿ ಮೊದಲು ಬೌಲಿಂಗ್‌ ಆಯ್ಕೆ ಮಾಡಿದ ಪಾಂಡ್ಯ, ಈ ಬಾರಿಯೂ ಜಸ್ಪ್ರೀತ್ ಬುಮ್ರಾಗೆ ಮೊದಲ ಓವರ್‌ ನೀಡಲಿಲ್ಲ. ಅವರ ಬದಲಿಗೆ ಪದಾರ್ಪಣೆ ಮಾಡಿದ ಹೊಸ ಬೌಲರ್‌ ಮಫಾಕಾ ಕೈಗೆ ಚೆಂಡು ನೀಡಿದರು. ಎರಡನೇ ಓವರ್‌ ಖುದ್ದು ಪಾಂಡ್ಯ ಮಾಡಿದರು. ಇನ್ನಿಂಗ್ಸ್‌ನ ನಾಲ್ಕನೇ ಓವರ್‌ ಬೌಲಿಂಗ್‌ ಮಾಡಿದ ಬುಮ್ರಾ ಕೇವಲ 5 ರನ್‌ ಮಾತ್ರ ಬಿಟ್ಟುಕೊಟ್ಟರು. ಎಲ್ಲಾ ಬೌಲರ್‌ಗಳು ರನ್‌ ಸೋರಿಕೆ ಮಾಡುತ್ತಿದ್ದರೆ, ಬುಮ್ರಾ ಖಡಕ್‌ ದಾಳಿ ಮಾಡಿದರು. ಆದರೂ, ಬುಮ್ರಾಗೆ ಓವರ್‌ ಕೊಡಲು ಪಾಂಡ್ಯ ಮುಂದಾಗಲಿಲ್ಲ.

ಪಂದ್ಯದ ಆರಂಭದಿಂದಲೇ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಮುಂಬೈ ಇಂಡಿಯನ್ಸ್ ಬೌಲರ್‌ಗಳ ಬೆವರಿಳಿಸುತ್ತಿದ್ದರು. ಬುಮ್ರಾ ಖಡಕ್‌ ಬೌಲಿಂಗ್‌ ದಾಳಿ ನಡೆಸಿದರೂ, ಪವರ್‌ಪ್ಲೇನಲ್ಲಿ ಮತ್ತೆ ಬೌಲಿಂಗ್‌ ಮಾಡಲೇ ಇಲ್ಲ. ಹೀಗಾಗಿ ಪವರ್‌ಪ್ಲೇನಲ್ಲಿ ಹೈದರಾಬದ್ 81 ರನ್‌ ಗಳಿಸಿತು. ಬುಮ್ರಾ ಅವರ ಎರಡನೇ ಓವರ್‌ಗಾಗಿ 13ನೇ ಓವರ್‌ವರೆಗೆ ಕಾಯಬೇಕಾಯ್ತು. ಆ ಓವರ್‌ನಲ್ಲಿ ಬುಮ್ರಾ ಕೇವಲ 7 ರನ್‌ ಬಿಟುಕೊಟ್ಟರು. ಅಷ್ಟರಲ್ಲಾಗಲೇ ಪಾಂಡ್ಯ 3 ಓವರ್‌ ಎಸೆದು 35 ರನ್‌ ಬಿಟ್ಟಿಕೊಟ್ಟಿದ್ದರು. 14 ಓವರ್‌ ಕೂಡಾ ಮತ್ತೆ ಎಸೆದ ಹಾರ್ದಿಕ್‌ ಒಟ್ಟು 46 ರನ್‌ ಸೋರಿಕೆ ಮಾಡಿದರು.

ಇದನ್ನೂ ಓದಿ | ಟಿವಿ ಮತ್ತು ಡಿಜಿಟಲ್ ವೀಕ್ಷಣೆಯಲ್ಲಿ ಹೊಸ ರೆಕಾರ್ಡ್;‌ ಹಳೆ ದಾಖಲೆ ಮುರಿದ ಸಿಎಸ್‌ಕೆ-ಆರ್‌ಸಿಬಿ ಐಪಿಎಲ್‌ ಉದ್ಘಾಟನಾ ಪಂದ್ಯ

ಎಂಐ ತಂಡವು ತನ್ನ ಬೌಲರ್‌ಗಳನ್ನು ಸಂಪೂರ್ಣ ತಪ್ಪಾಗಿ ಬಳಸಿದೆ ಎಂದು ಬ್ರೆಟ್ ಲೀ ಹೇಳಿದ್ದಾರೆ. “ಮುಂಬೈ ಇಂಡಿಯನ್ಸ್ ತಮ್ಮ ಬೌಲಿಂಗ್ ಅನ್ನು ಸರಿಯಾಗಿ ಬಳಸಿಲ್ಲ ಎಂದು ನಾನು ಭಾವಿಸುತ್ತೇನೆ. ಜಸ್ಪ್ರೀತ್ ಬುಮ್ರಾ ಮೊದಲ ಓವರ್ ಎಸೆಯಬೇಕಿತ್ತು. ಕಳೆದ ಎರಡು ಪಂದ್ಯಗಳಲ್ಲಿ ಜಸ್ಪ್ರೀತ್ ಬುಮ್ರಾ ಮೊದಲ ಓವರ್‌ ಎಸೆಯಲು ಬಂದಾಗ ಎದುರಾಳಿ ತಂಡ 42 ರನ್‌ಗಳಿಗೆ ಯಾವುದೇ ವಿಕೆಟ್‌ ಕಳೆದುಕೊಂಡಿರಲಿಲ್ಲ. ಹೈದರಾಬಾದ್‌ ವಿರುದ್ಧವೂ ಹೀಗೇ ಆಯ್ತು,” ಎಂದು ಬ್ರೆಟ್ ಲೀ ಜಿಯೋ ಸಿನಿಮಾಗೆ ತಿಳಿಸಿದ್ದಾರೆ.

ಮುಂಬೈ ಪರ ಬುಮ್ರಾ ಉತ್ತಮ ಎಕಾನಮಿ

ಪಂದ್ಯದಲ್ಲಿ ಬುಮ್ರಾ ಕಡಿಮೆ ರನ್‌ ಬಿಟ್ಟುಕೊಟ್ಟು ಉತ್ತಮ ಎಕಾನಮಿ ಕಾಯ್ದುಕೊಂಡ ಎರಡನೇ ಬೌಲರ್. ಎದುರಾಳಿ ತಂಡದ ನಾಯಕ ಪ್ಯಾಟ್ ಕಮಿನ್ಸ್ 35 ರನ್‌ ಬಿಟ್ಟುಕೊಟ್ಟು 2 ವಿಕೆಟ್‌ ಪಡೆದರು. ಬುಮ್ರಾ ವಿಕೆಟ್‌ ಪಡೆಯದಿದ್ದರೂ, 36 ರನ್‌ ಮಾತ್ರ ಬಿಟ್ಟುಕೊಟ್ಟರು.

ಹಾರ್ದಿಕ್ ನಾಯಕತ್ವದ ಬಗ್ಗೆ ಸ್ಮಿತ್ ಕೂಡಾ ಗೊಂದಲ ವ್ಯಕ್ತಪಡಿಸಿದ್ದಾರೆ. “ಮೊದಲ ಇನ್ನಿಂಗ್ಸ್‌ನಲ್ಲಿ ಮುಂಬೈ ತಂಡದ ಬೌಲಿಂಗ್ ಬದಲಾವಣೆಗಳಿಂದ ನಾನು ಗೊಂದಲಕ್ಕೊಳಗಾಗಿದ್ದೆ. ನಾಲ್ಕನೇ ಓವರ್‌ ಬುಮ್ರಾ ಬೌಲಿಂಗ್ ಮಾಡಿದರು. ಅವರು 5 ರನ್‌ ಮಾತ್ರ ಬಿಟ್ಟುಕೊಟ್ಟರು. ನಂತರ ಹೈದರಾಬಾದ್ 173 ರನ್ ಗಳಿಸಿದ್ದಾಗ 13ನೇ ಓವರ್‌ವರೆಗೆ ಬುಮ್ರಾ ಬೌಲ್‌ ಮಾಡಲಿಲ್ಲ,” ಎಂದು ಸ್ಮಿತ್ 'ಸ್ಟಾರ್ ಸ್ಪೋರ್ಟ್ಸ್' ವಾಹಿನಿಯಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

“ಹೆಚ್ಚು‌ ರನ್‌ ಸೋರಿಕೆಯಾಗುತ್ತಿದ್ದ ಅವಧಿಯಲ್ಲಿ ವಿಕೆಟ್‌ಗಳನ್ನು ಪಡೆಯಲು ತಂಡದ ಅತ್ಯುತ್ತಮ ಬೌಲರ್ ಅಗತ್ಯವಿತ್ತು. ನಾಯಕ ಕೆಲವು ವಿಷಯಗಳನ್ನು ತಪ್ಪಾಗಿ ಗ್ರಹಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ನನ್ನ ಪ್ರಕಾರ, ತಂಡದಲ್ಲಿ ವಿಶ್ವದ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರಿರುವಾಗ ಅವರಿಂದ ಕೇವಲ ಒಂದು ಓವರ್ ಬೌಲಿಂಗ್ ಮಾಡಿಸಲು ಸಾಧ್ಯವಿಲ್ಲ,” ಎಂದು ಸ್ಮಿತ್ ಹೇಳಿದ್ದಾರೆ.

IPL_Entry_Point