ಬೆಂಗಳೂರು ಅವಳಿ ಸುರಂಗ ಮಾರ್ಗ ಯೋಜನೆ; ಸಾರ್ವಜನಿಕ ಸಾರಿಗೆಗೆ ತೊಂದರೆಯಾದೀತು ಎಂದ ಐಐಎಸ್‌ಸಿ ಅಧ್ಯಯನ, ಸುಧಾರಿತ ಸಂಚಾರ ವ್ಯವಸ್ಥೆಗೆ ಆಗ್ರಹ
Bengaluru Tunnel Road: ಬೆಂಗಳೂರು ಅವಳಿ ಸುರಂಗ ಮಾರ್ಗ ಯೋಜನೆ ಈಗ ಸಾರ್ವಜನಿಕವಾಗಿ ವ್ಯಾಪಕ ಚರ್ಚೆಗೆ ಒಳಗಾಗಿದೆ. ಬೆಂಗಳೂರಿನಲ್ಲಿ ಸದ್ಯ ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಾಗಬೇಕು. ಖಾಸಗಿ ವಾಹನ ಬಳಕೆ ಕಡಿಮೆಯಾದರೆ ಸಮಸ್ಯೆ ಬಹುಪಾಲು ಕಡಿಮೆಯಾದೀತು ಎಂಬ ಅಭಿಯಾನ ಶುರುವಾಗಿದೆ. ಇಲ್ಲಿದೆ ಪ್ರಸಕ್ತ ವಿದ್ಯಮಾನದ ವಿವರ.
Bengaluru Tunnel Road: ಬೆಂಗಳೂರು ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಬಿಬಿಎಂಪಿ ಜಾರಿಗೊಳಿಸಲು ಹೊರಟಿರುವ ಅವಳಿ ಸುರಂಗ ಮಾರ್ಗದ ಬಗ್ಗೆ ಆಕ್ಷೇಪಗಳು ವ್ಯಕ್ತವಾಗತೊಡಗಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸಸ್ (ಐಐಎಸ್‌ಸಿ)ಯ ಬೆಂಗಳೂರು ಸಸ್ಟೈನಬಲ್ ಟ್ರಾನ್ಸ್‌ಪೋರ್ಟೇಶನ್ ಲ್ಯಾಬ್‌ನ ಇತ್ತೀಚಿನ ಅಧ್ಯಯನವು ಮೆಟ್ರೋ ಮತ್ತು ಉಪನಗರ ರೈಲು ಜಾಲಗಳು ಸೇರಿದಂತೆ ಬೆಂಗಳೂರಿನ ಮಾಸ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ಸ್ (ಎಂಆರ್‌ಟಿಎಸ್) ಮೇಲೆ ಉದ್ದೇಶಿತ ಸುರಂಗ ರಸ್ತೆಗಳನ್ನು ಜಾರಿಗೊಳಿಸುವುದರಿಂದ ಉಂಟಾಗಬಹುದಾದ ಪ್ರತಿಕೂಲ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಬೆಂಗಳೂರಿನಲ್ಲಿ ಶುಕ್ರವಾರ (ಡಿಸೆಂಬರ್ 20) ನಡೆದ ಕಾರ್ಯಕ್ರಮದಲ್ಲಿ ಸಂಶೋಧನೆ, ಸುಸ್ಥಿರ ನಗರ ಚಲನಶೀಲ ಸಮಗ್ರ ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡುವ ಅಗತ್ಯವನ್ನು, ಪ್ರಾಮುಖ್ಯವನ್ನು ಒತ್ತಿಹೇಳಿದೆ.
ಮೂಲಸೌಕರ್ಯ ಯೋಜನೆ ವಿಚಾರದಲ್ಲಿ ಆದ್ಯತೆ ಕಡೆಗಣಿಸಿದೆ ಬಿಬಿಎಂಪಿ; ತಜ್ಞರ ಅಭಿಪ್ರಾಯ
ಸಿವಿಐಸಿ-ಬೆಂಗಳೂರು ಗಾಂಧಿ ಭವನದಲ್ಲಿ ಆಯೋಜಿಸಿದ್ದ “ಬಿಬಿಎಂಪಿಯ ಮೂಲಸೌಕರ್ಯ ಯೋಜನೆಗಳ (ಸುರಂಗ ಮಾರ್ಗ, ಸ್ಕೈ-ಡೆಕ್ ಮತ್ತು ಇತರೆ) ತಪ್ಪಾದ ಆದ್ಯತೆಗಳು ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಪ್ರೊಫೆಸರ್ ಆಶಿಶ್ ವರ್ಮಾ ಬೆಂಗಳೂರಿನ ಪ್ರಸ್ತಾವಿತ ಸಾರಿಗೆ ಯೋಜನೆಗಳ ಪರಿಣಾಮಗಳ ಕುರಿತಾದ ವಿಸ್ತೃತ ಅಧ್ಯಯನವನ್ನು ಮಂಡಿಸಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ಪ್ರಸ್ತಾಪಿತ ಉಪನಗರ ರೈಲು ನೆಟ್‌ವರ್ಕ್ ಮತ್ತು ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶಕ್ಕೆ ಮೆಟ್ರೋ ರೈಲು ನೆಟ್‌ವರ್ಕ್‌ಗೆ ಸನ್ನಿವೇಶ ಮೌಲ್ಯಮಾಪನ” ಎಂಬ ಅಧ್ಯಯನವು ಬೆಂಗಳೂರು ನಗರದಲ್ಲಿ ತೀವ್ರ ಸಂಚಾರ ದಟ್ಟಣೆ ಮತ್ತು ಮಾಲಿನ್ಯವನ್ನು ನಿಭಾಯಿಸಲು ಉಪನಗರ ಮತ್ತು ಮೆಟ್ರೋ ರೈಲು ವ್ಯವಸ್ಥೆಗಳ ಏಕೀಕರಣವನ್ನು ಮೌಲ್ಯಮಾಪನ ಮಾಡಿದೆ. ಡಬಲ್ ಡೆಕ್ಕರ್ ರಸ್ತೆಗಳು ಮತ್ತು ಸುರಂಗ ಕಾರಿಡಾರ್‌ಗಳನ್ನು ಪರಿಚಯಿಸುವುದರಿಂದ ಸಾರ್ವಜನಿಕರು ಖಾಸಗಿ ವಾಹನ ಬಳಕೆ ಮಾಡುವುದು ಗಮನಾರ್ಹ ಹೆಚ್ಚಳಕ್ಕೆ ಕಾರಣವಾಗಬಹುದು. ಸುರಂಗ ಮಾರ್ಗ ಪೂರ್ಣಗೊಂಡರೆ ಅದರಲ್ಲಿ ನಿತ್ಯವೂ 86 ಲಕ್ಷಕ್ಕೂ ಹೆಚ್ಚು ಜನ ಸಂಚರಿಸಬಹುದು ಎಂದು ಅಧ್ಯಯನವು ಅಂದಾಜಿಸಿದೆ.
ಸುರಂಗ ಮಾರ್ಗದ ಪರಿಣಾಮ ಏನಾಗಬಹುದು
ಇಂತಹ ಪರಿಸ್ಥಿತಿಯಲ್ಲಿ 2041ರ ವೇಳೆಗೆ ಸಾರ್ವಜನಿಕ ಸಾರಿಗೆ ಬಳಕೆ ಪಾಲು ಶೇಕಡ 43.5 ರಿಂದ ಶೇಕಡ 42.2ಕ್ಕೆ ಇಳಿಕೆಯಾಗಬಹುದು. ಅದೇ ರೀತಿ ಸಾರ್ವಜನಿಕ ಸಾರಿಗೆ ಮತ್ತು ಮೋಟಾರು ರಹಿತ ಸಾರಿಗೆ ಬಳಕೆ ಶೇಕಡ 81.9 ರಿಂದ ಶೇಕಡ 75.6ಕ್ಕೆ ಇಳಿಕೆಯಾಗಬಹುದು ಎಂದು ಅವರು ವಿವರಿಸಿದರು.
ಸುರಂಗ ರಸ್ತೆಯೊಂದಿಗೆ, ಮೆಟ್ರೋ ವ್ಯವಸ್ಥೆಯ ಕಾರಣ ಪ್ರಮುಖ ಮಾರ್ಗಗಳಲ್ಲಿ 6.48 ಪ್ರತಿಶತದಷ್ಟು ಪ್ರಯಾಣಿಕರ ಕಡಿತವನ್ನು ಅನುಭವಿಸಬಹುದು ಎಂದು ಅಧ್ಯಯನವು ತೋರಿಸುತ್ತದೆ. ಅದೇ ರೀತಿ, ಹೆಚ್ಚಿನ ಪ್ರಯಾಣಿಕರಿಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾದ ಉಪನಗರ ರೈಲು ಕಾರಿಡಾರ್‌ಗಳು ಕಡಿಮೆ ದಕ್ಷತೆಯನ್ನು ಸಹ ಕಾಣಬಹುದು. ಉದಾಹರಣೆಗೆ, ಕಾರಿಡಾರ್ 3 (ಕೆಂಗೇರಿ-ವೈಟ್‌ಫೀಲ್ಡ್) ಪ್ರತಿ ದಿಕ್ಕಿಗೆ ಪ್ರತಿ ಗಂಟೆಗೆ ಪೀಕ್ ಅವರ್ ಪ್ರಯಾಣಿಕ ದಟ್ಟಣೆ ಶೇಕಡಾ 9.21 ರಷ್ಟು ಕುಸಿತವನ್ನು ಅನುಭವಿಸಬಹುದು ಎಂದು ಅಧ್ಯಯನ ವಿವರಿಸಿದೆ.
ಸುರಂಗ ಮಾರ್ಗ ಅಲ್ಲ, ಸಾರ್ವಜನಿಕ ಸಾರಿಗೆ ಬಳಕೆ ಉತ್ತೇಜಿಸಿ ಎಂಬ ಸಾರ್ವಜನಿಕ ಅಭಿಯಾನ
ಸದ್ಯ ಬೆಂಗಳೂರಿಗೆ ಬೇಕಾಗಿರುವುದು ಸುರಂಗ ಮಾರ್ಗ ಅನುಷ್ಠಾನ ಅಲ್ಲ. ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಾಗಬೇಕು. ಈ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ನಾಗರಿಕ ಕಾರ್ಯಕರ್ತೆ ಕಾತ್ಯಾಯಿನಿ ಚಾಮರಾಜ್ ನೇತೃತ್ವದಲ್ಲಿ ಆನ್‌ಲೈನ್ ಅಭಿಯಾನ ಶುರುವಾಗಿದೆ. ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ಅವರು ಪ್ರತಿಪಾದಿಸುತ್ತಿರುವ ಉದ್ದೇಶಿತ ಸುರಂಗ ರಸ್ತೆ ಯೋಜನೆ ವಿರುದ್ಧ ಬೆಂಗಳೂರಿನಲ್ಲಿ ನಾಗರಿಕ ನೇತೃತ್ವದ ಗುಂಪುಗಳು ಅಭಿಯಾನ ಆರಂಭಿಸಿವೆ.
ಆಲ್ಟಿನೋಕ್ ಕನ್ಸಲ್ಟಿಂಗ್ ಇಂಜಿನಿಯರಿಂಗ್ ಸಿದ್ಧಪಡಿಸಿದ ಸಮಗ್ರ ಬೆಂಗಳೂರು ನಗರ ಸಂಚಾರ ನಿರ್ವಹಣಾ ಮೂಲಸೌಕರ್ಯ ಯೋಜನೆಯ ಅಂತಿಮ ಕಾರ್ಯಸಾಧ್ಯತಾ ವರದಿಯನ್ನು ಕಾಕತಾಳೀಯ ಎಂಬಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಶುಕ್ರವಾರವೇ ಪ್ರಕಟಿಸಿದೆ. ಬೆಂಗಳೂರಿನಲ್ಲಿ ಪ್ರಸ್ತಾವಿತ 170-ಕಿಮೀ ಸುರಂಗ ಮಾರ್ಗಗಳು, ಡಬಲ್ ಡೆಕ್ಕರ್ ಮಾರ್ಗಗಳು, ಎಲಿವೇಟೆಡ್ ಕಾರಿಡಾರ್‌ಗಳು ಮತ್ತು ಅಂಡರ್‌ಪಾಸ್‌ಗಳ ಚಲನಶೀಲತೆಯನ್ನು ಸುಗಮಗೊಳಿಸಲು ಮತ್ತು ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ವಿವರವಾದ ಕಾರ್ಯಸಾಧ್ಯತೆಯ ಅಧ್ಯಯನವನ್ನು ಈ ವರದಿ ಒಳಗೊಂಡಿದೆ ಎಂದು ವರದಿ ಹೇಳಿದೆ.