ಟಿ20 ವಿಶ್ವಕಪ್‌ಗೆ ಕೊಹ್ಲಿ ಮೊದಲ ಆಯ್ಕೆ ಅಲ್ಲ, 3ನೇ ಸ್ಥಾನಕ್ಕೆ ಕಿಶನ್ ಫಿಕ್ಸ್; ಶೀಘ್ರದಲ್ಲೇ ವಿರಾಟ್ ಜೊತೆ ಬಿಸಿಸಿಐ ಸಭೆ
Virat Kohli: ವಿರಾಟ್ ಕೊಹ್ಲಿ ಜೊತೆಗೆ ಶೀಘ್ರದಲ್ಲೇ ಬಿಸಿಸಿಐ ಅಧಿಕಾರಿಗಳು ಚರ್ಚಿಸಲಿದ್ದಾರೆ. ಮುಂದೆ ನಡೆಯಲಿರುವ ಟಿ20 ವಿಶ್ವಕಪ್ ತಂಡಕ್ಕೆ ವಿರಾಟ್ ಆಯ್ಕೆ ಮಾಡುವ ಸಾಧ್ಯತೆ ಇಲ್ಲ ಎಂದು ವರದಿಯಾಗಿದೆ.
ಭಾರತೀಯ ಕ್ರಿಕೆಟ್ ವ್ಯಾಪಕ ಬದಲಾವಣೆಗಳತ್ತ ಒಗ್ಗಿಕೊಳ್ಳುತ್ತಿದೆ. ಹಿಂದೆೆಲ್ಲಾ ಮೂರು ಸ್ವರೂಪಗಳಿಗೂ ಒಂದೇ ನಾಯಕನನ್ನು ನೆಚ್ಚಿಕೊಂಡಿದ್ದ ಟೀಮ್ ಇಂಡಿಯಾ, ಇತ್ತೀಚೆಗೆ ಸ್ವರೂಪಕ್ಕೊಂದು ನಾಯಕನನ್ನು ಆಯ್ಕೆ ಮಾಡುತ್ತಿದೆ. ಈ ನಡುವೆ ಅನುಭವಿ ಕ್ರಿಕೆಟಿಗರನ್ನು ಟೆಸ್ಟ್ ಕ್ರಿಕೆಟ್‌ಗೆ ಮಾತ್ರ ಆಯ್ಕೆ ಮಾಡುವ ನಿರ್ಧಾರ ಕೂಡಾ ಮುನ್ನೆಲೆಗೆ ಬಂದಿದೆ.
ಏಕದಿನ ವಿಶ್ವಕಪ್ ಬಳಿಕ, ಸದ್ಯ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ನತ್ತ ಬಿಸಿಸಿಐ ಗಮನ ಹರಿಸಿದೆ. ಚುಟುಕು ಸಮರಕ್ಕಾಗಿ ಈಗಿನಿಂದಲೇ ತಯಾರಿ ಆರಂಭವಾಗಿದೆ. ಈ ನಡುವೆ ಅಚ್ಚರಿಯ ಅಂಶವೊಂದು ಬಹಿರಗವಾಗಿದೆ. ಇತ್ತೀಚೆಗೆ ಮುಗಿದ ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ವಿರಾಟ್ ಕೊಹ್ಲಿ, ಮುಂದಿನ ದಿನಗಳಲ್ಲಿ ಭಾರತ ಟಿ20 ತಂಡದ ಮೊದಲ ಪ್ರಾಶಸ್ತ್ಯದ ಆಯ್ಕೆಯ ಆಟಗಾರ ಅಲ್ಲ ಎಂದು ವರದಿಯಾಗಿದೆ.
ಸಭೆಯಲ್ಲಿ ಮಾರ್ಗಸೂಚಿ ಸಿದ್ಧ
2024ರ ಜೂನ್ ತಿಂಗಳಿಂದ ಟಿ20 ವಿಶ್ವಕಪ್ ನಡೆಯಲಿದ್ದು, ಏಕದಿನ ವಿಶ್ವಕಪ್ ಮುಗಿಯುತ್ತಿದ್ದಂತೆಯೇ ಬಿಸಿಸಿಐ ಗಮನವು ಏಕದಿನ ಕ್ರಿಕೆಟ್‌ನಿಂದ ಟಿ20 ಮಾದರಿಯತ್ತ ವರ್ಗಾವಣೆಯಾಗಿದೆ. ವಾರದ ಹಿಂದೆ ನವದೆಹಲಿಯಲ್ಲಿ ನಡೆದ ಸಭೆಯಲ್ಲಿಯೂ ಈ ಕುರಿತು ಚರ್ಚೆ ನಡೆದಿದೆ. ಬಿಸಿಸಿಐ ನಡೆಸಿದ ಸಭೆಯಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಸೇರಿದಂತೆ ಅಧಿಕಾರಿಗಳು ಸೇರಿ ಐದು ಗಂಟೆಗೂ ಹೆಚ್ಚು ಕಾಲ ಮಾತನಾಡಿದ್ದರು. ಈ ವೇಳೆ ಬಿಸಿಸಿಐ ಉನ್ನತ ಅಧಿಕಾರಿಗಳು ಟಿ20 ವಿಶ್ವಕಪ್ ಸಂಬಂಧ ಮಹತ್ವದ ಮಾರ್ಗಸೂಚಿಯನ್ನು ಸಿದ್ಧಪಡಿಸಿದ್ದಾರೆ.
ಇದನ್ನೂ ಓದಿ | ಪಾದದ ನೋವಿಂದ ಬಳಲುತ್ತಿದ್ದರೂ ವಿಶ್ವಕಪ್‌ನಲ್ಲಿ ಅಬ್ಬರಿಸಿದ್ದ ಶಮಿ; ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಗೆ ಅನುಮಾನ
ವಿಶ್ವಕಪ್‌ಗೂ ಮುನ್ನ ಸದ್ಯ ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತವು ಮೂರು ಟಿ20 ಪಂದ್ಯಗಳಲ್ಲಿ ಆಡಲಿದೆ. ಆ ಬಳಿಕ ಅಫ್ಘಾನಿಸ್ತಾನ ವಿರುದ್ಧ ತವರಿನಲ್ಲಿ ಮೂರು ಟಿ20 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಆ ಬಳಿಕ ನೇರವಾಗಿ ವಿಶ್ವಕಪ್‌ನಲ್ಲಿ ಕಣಕ್ಕಿಳಿಯಲಿದೆ.
ವಿರಾಟ್ ಮೊದಲ ಆಯ್ಕೆ ಅಲ್ಲ
ಅತ್ತ ದಕ್ಷಿಣ ಆಫ್ರಿಕಾ ಪ್ರವಾಸದ ವೈಟ್ ಬಾಲ್ ಸರಣಿಗಳಿಂದ ಕೊಹ್ಲಿ ಮತ್ತು ರೋಹಿತ್ ವಿಶ್ರಾಂತಿ ಪಡೆದಿದ್ದಾರೆ. ಆ ಬಳಿಕ ಸಂಪೂರ್ಣ ಸಾಮರ್ಥ್ಯದ ಭಾರತ ತಂಡವನ್ನು ಪರಿಶೀಲಿಸಲು ಆಯ್ಕೆದಾರರಿಗೆ ಅಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟಿ20 ಸರಣಿ ಮಾತ್ರ ಉಳಿಯುತ್ತದೆ. ಆದರೆ ಈ ಸರಣಿಗೂ, ವಿರಾಟ್ ಕೊಹ್ಲಿ ಮೊದಲ ಆಯ್ಕೆ ಅಲ್ಲ ಎಂಬುದು ಬಹುತೇಕ ಖಚಿತವಾಗಿದೆ.
ದೈನಿಕ್ ಜಾಗರಣ್ ವರದಿಯ ಪ್ರಕಾರ, ರೋಹಿತ್ ಮತ್ತು ಬುಮ್ರಾ ಮುಂಬರುವ ಟಿ20 ಸರಣಿಗೆ ಮೊದಲ ಪ್ರಾಶಸ್ತ್ಯದ ಆಯ್ಕೆಯಾಗಿದ್ದರೆ, ಟಿ20 ವಿಶ್ವಕಪ್ ತಂಡದಲ್ಲಿ ಕೊಹ್ಲಿ ಸ್ಥಾನ ಇನ್ನು ಖಚಿತವಾಗಿಲ್ಲ.
ಕೊಹ್ಲಿ ಜೊತೆಗೆ ಮಾತುಕತೆ ಬಳಿಕ ಅಂತಿಮ ನಿರ್ಧಾರ
ಅತ್ತ ಇದೇ ವಿಚಾರವಾಗಿ ಆಯ್ಕೆಗಾರರು ಮತ್ತು ಮಂಡಳಿಯ ಇತರ ಹಿರಿಯ ಸದಸ್ಯರು ಶೀಘ್ರದಲ್ಲೇ ಕೊಹ್ಲಿಯೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ. ಚುಟುಕು ಮಾದರಿಯಲ್ಲಿ ಆಡಲು ಆಸಕ್ತಿಯಿಲ್ಲ ಎಂದು ಖುದ್ದು ಕೊಹ್ಲಿಯೇ ತಿಳಿಸಿದರೆ, ಮುಂದೆ ಬಿಸಿಸಿಐಗೆ ಯಾವುದೇ ಗೊಂದಲ ಇರುವುದಿಲ್ಲ. ಅಲ್ಲಿಗೆ ಕೊಹ್ಲಿಯ ಟಿ20 ಭವಿಷ್ಯ ಅಂತ್ಯವಾದಂತೆ.
ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ ಅವರೇ ಮುನ್ನಡೆಸಬೇಕೆಂದು ಬಿಸಿಸಿಐ ಅಧಿಕಾರಿಗಳು ಸೇರಿದ್ದ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ಹೊರಬಂದಿದೆ. ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ20 ವಿಶ್ವಕಪ್ ಸೆಮಿಫೈನಲ್ ಬಳಿಕ ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಚುಟುಕು ಸ್ವರೂಪದಲ್ಲಿ ಆಡಿಲ್ಲ. ಹೀಗಾಗಿ ಮುಂದೆ ಅವರ ಆಟವನ್ನು ನೋಡಲು ಅಫ್ಘಾನಿಸ್ತಾನ ವಿರುದ್ಧದ ಸರಣಿ ಒಂದೇ ಅವಕಾಶ.
ಇಶಾನ್ ಕಿಶನ್ ಆಯ್ಕೆಗೆ ಆದ್ಯತೆ, ಕೊಹ್ಲಿ ಸ್ಥಾನ ಇಶಾನ್‌ಗೆ ಬಹುತೇಕ ಫಿಕ್ಸ್
ಸದ್ಯ ಕೊಹ್ಲಿಯನ್ನು ಟಿ20 ತಂಡಕ್ಕೆ ಆಯ್ಕೆ ಮಾಡದಿದ್ದರೆ, ಆ ಸ್ಥಾನ ತುಂಬಬಲ್ಲ ಇಶಾನ್ ಕಿಶನ್‌ಗೆ ಮಣೆ ಹಾಕಲು ನಿರ್ಧರಿಸಲಾಗಿದೆ. 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಕಿಶನ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಸರಣಿಯಲ್ಲಿ ಎಡಗೈ ಬ್ಯಾಟರ್ ಸತತ ಎರಡು ಅರ್ಧಶತಕ ಸಿಡಿಸಿದ್ದರು.
ಟಿ20 ಕ್ರಿಕೆಟ್‌ನಲ್ಲಿ ವಿಶ್ವದ ಅಗ್ರ ರನ್ ಸ್ಕೋರರ್ ಆಗಿರುವ ಕೊಹ್ಲಿ, 50ಕ್ಕಿಂತ ಹೆಚ್ಚು ಸರಾಸರಿಯಲ್ಲಿ 4000ಕ್ಕೂ ಅಂತಾರಾಷ್ಟ್ರೀಯ ರನ್‌ಗಳನ್ನು ಹೊಂದಿರುವ ವಿಶ್ವದ ಏಕೈಕ ಆಟಗಾರ. ಇವರ ಅನುಪಸ್ಥಿತಿಯಲ್ಲಿ ಇಶಾನ್ ಮೂರನೇ ಸ್ಥಾನ ಪಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ | ವಿಜಯ್ ಹಜಾರೆ ಟ್ರೋಫಿ ನಾಕೌಟ್ ಪಂದ್ಯಗಳ ವೇಳಾಪಟ್ಟಿ; ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕಕ್ಕೆ ವಿದರ್ಭ ಎದುರಾಳಿ
ರೋಹಿತ್ ಶರ್ಮಾ ಜೊತೆಗೆ ಯಶಸ್ವಿ ಜೈಸ್ವಾಲ್ ಅಥವಾ ಶುಭ್ಮನ್ ಗಿಲ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಕಿಶನ್ 3ನೇ ಸ್ಥಾನದಲ್ಲಿದ್ದರೆ, ಸೂರ್ಯಕುಮಾರ್ ಯಾದವ್, ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಬ್ಯಾಟಿಂಗ್ ಕ್ರಮಾಂಕದಲ್ಲಿ ಮುಂದಿನ ಸ್ಥಾನಗಳನ್ನು ತುಂಬಲಿದ್ದಾರೆ.