ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಬಂಧನಕ್ಕೆ ವಾರೆಂಟ್ ಜಾರಿ; 23 ಲಕ್ಷ ವಂಚಿಸಿದ ಕನ್ನಡಿಗ
ಕನ್ನಡ ಸುದ್ದಿ  /  ಕ್ರಿಕೆಟ್  /  ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಬಂಧನಕ್ಕೆ ವಾರೆಂಟ್ ಜಾರಿ; 23 ಲಕ್ಷ ವಂಚಿಸಿದ ಕನ್ನಡಿಗ

ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಬಂಧನಕ್ಕೆ ವಾರೆಂಟ್ ಜಾರಿ; 23 ಲಕ್ಷ ವಂಚಿಸಿದ ಕನ್ನಡಿಗ

Robin Uthappa: ಉದ್ಯೋಗಿಗಳ ಖಾತೆಗೆ 23 ಲಕ್ಷ ರೂಪಾಯಿ ಪಿಎಫ್ ಹಣವನ್ನು ಜಮಾ ಮಾಡಲು ವಿಫಲವಾದ ಆರೋಪದ ಮೇಲೆ ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದೆ.

ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಬಂಧನಕ್ಕೆ ವಾರೆಂಟ್ ಜಾರಿ
ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಬಂಧನಕ್ಕೆ ವಾರೆಂಟ್ ಜಾರಿ

ಭವಿಷ್ಯ ನಿಧಿ (ಪಿಎಫ್) ವಂಚನೆ ಆರೋಪದ ಹಿನ್ನೆಲೆಯಲ್ಲಿ ಭಾರತ ತಂಡದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರ ಬಂಧನಕ್ಕೆ ವಾರಂಟ್ ಜಾರಿಯಾಗಿದೆ. ಉದ್ಯೋಗಿಗಳಿಗೆ ಮತ್ತು ಸರ್ಕಾರಕ್ಕೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ವಾರೆಂಟ್ ಜಾರಿ ಮಾಡಲಾಗಿದೆ. ಸೆಂಚುರೀಸ್ ಲೈಫ್ ಸ್ಟೈಲ್ ಬ್ರಾಂಡ್ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿ ನಡೆಸುತ್ತಿರುವ ಉತ್ತಪ್ಪ, ಕಂಪನಿಯ ಕಾರ್ಮಿಕರಿಗೆ 23 ಲಕ್ಷ ರೂಪಾಯಿ ಪಿಎಫ್ ಹಣ ಪಾವತಿಸದೆ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪಿಎಫ್ ಪ್ರಾದೇಶಿಕ ಆಯುಕ್ತ ಷಡಕ್ಷರಿ ಗೋಪಾಲ್ ರೆಡ್ಡಿ ಅವರು ವಾರೆಂಟ್ ಹೊರಡಿಸಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಪುಲಕೇಶಿನಗರ ಪೊಲೀಸರಿಗೆ ಸೂಚಿಸಿದ್ದಾರೆ.

ಕಮಿಷನರ್ ರೆಡ್ಡಿ ಅವರು ಡಿಸೆಂಬರ್ 4 ರಂದು ಪತ್ರದ ಮೂಲಕ ಬಂಧನ ವಾರಂಟ್ ಅನ್ನು ಕಾರ್ಯಗತಗೊಳಿಸುವಂತೆ ಪೊಲೀಸರಿಗೆ ಸೂಚಿಸಿದ್ದರು. ಆದರೆ, ಉತ್ತಪ್ಪ ನಿವಾಸ ಬದಲಿಸಿದ್ದರ ಪರಿಣಾಮ ವಾರಂಟ್ ಅನ್ನು ಪಿಎಫ್ ಕಚೇರಿಗೆ ಹಿಂತಿರುಗಿಸಲಾಗಿತ್ತು. ಇದೀಗ ಪರಾರಿಯಾದ ಉತ್ತಪ್ಪ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ವರದಿಗಳ ಪ್ರಕಾರ ಉತ್ತಪ್ಪ ಅವರು ಭಾರತ ತೊರೆದು ದುಬೈನಲ್ಲಿ ನೆಲೆಸಿದ್ದಾರೆ. ಇದೀಗ ತಮ್ಮ ವಿರುದ್ಧ ಪ್ರಕರಣ ದಾಖಲಾದ ಕಾರಣ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ. ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಕ್ರಿಕೆಟಿಗ, ತಮ್ಮ ಕಾರ್ಮಿಕರಿಗೆ ವಂಚಿಸುವುದು ಎಷ್ಟು ಸರಿ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಉತ್ತಪ್ಪ ವಿರುದ್ಧ ಆಕ್ರೋಶ ಹೆಚ್ಚಾಗಿದ್ದು, ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ.

ರಾಬಿನ್ ಉತ್ತಮ ವೃತ್ತಿಜೀವನ

ರಾಬಿನ್ ಉತ್ತಪ್ಪ 2006 ರಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದರು. 2006ರ ಏಪ್ರಿಲ್ 19ರಂದು ಇಂಗ್ಲೆಂಡ್ ವಿರುದ್ಧ ಕೋಲ್ಕತ್ತಾದಲ್ಲಿ ಅವರು ತಮ್ಮ ಮೊದಲ ಏಕದಿನ ಅಂತಾರಾಷ್ಟ್ರೀಯ (ODI) ಪಂದ್ಯವನ್ನಾಡಿದರು. ನಂತರ 2007ರ ಸೆಪ್ಟೆಂಬರ್ 1ರಂದು ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ್ದರು. ಅದು ಕೂಡ ಐಸಿಸಿ ಟಿ20 ವಿಶ್ವಕಪ್​ನಲ್ಲಿ ಸ್ಕಾಟ್ಲೆಂಡ್ ವಿರುದ್ಧ. ರಾಬಿನ್ ಉತ್ತಪ್ಪ 2006 ರಿಂದ 2015 ತನಕ 46 ಏಕದಿನ ಪಂದ್ಯಗಳಲ್ಲಿ 25.94 ಸರಾಸರಿಯಲ್ಲಿ 934 ರನ್ ಗಳಿಸಿದ್ದಾರೆ. ಗರಿಷ್ಠ 86 ರನ್. ತಮ್ಮ ವೃತ್ತಿಜೀವನದುದ್ದಕ್ಕೂ ಉತ್ತಪ್ಪ 107 ಬೌಂಡರಿ, 19 ಸಿಕ್ಸರ್‌ ಬಾರಿಸಿದ್ದಾರೆ. ಅವರು ವಿಶ್ವಕಪ್ ಮತ್ತು ಏಷ್ಯಾ ಕಪ್ ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ಕಣಕ್ಕಿಳಿದಿದ್ದಾರೆ. ಐಪಿಎಲ್​ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ ಕರ್ನಾಟಕದ ಮಾಜಿ ಕ್ರಿಕೆಟಿಗ.

ರಾಬಿನ್ ಉತ್ತಪ್ಪ ಐಪಿಎಲ್ ಪಯಣ

ರಾಬಿನ್ ಉತ್ತಪ್ಪ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್‌ನಿಂದ ಅಧಿಕೃತವಾಗಿ ನಿವೃತ್ತಿಯಾಗಿದ್ದಾರೆ. ಉತ್ತಪ್ಪ ಅವರು ಕೋಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳ ಪರ ಐಪಿಎಲ್​​ನಲ್ಲಿ ಕಣಕ್ಕಿಳಿದಿದ್ದರು. 130.41ರ ಸ್ಟ್ರೈಕ್ ರೇಟ್‌ನೊಂದಿಗೆ ಸುಮಾರು 5000ಕ್ಕೂ ಅಧಿಕ ಐಪಿಎಲ್​ ರನ್‌ ಗಳಿಸಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳು ಕ್ರಮವಾಗಿ 2012 ಮತ್ತು 2022 ರಲ್ಲಿ IPL ಪ್ರಶಸ್ತಿಯನ್ನು ಗೆಲ್ಲಲು ನೆರವಾಗಿದ್ದರು.

Whats_app_banner