ಕನ್ನಡ ಸುದ್ದಿ  /  ಚುನಾವಣೆಗಳು  /  Kerala News: ವಯನಾಡಿನಲ್ಲಿ ಬಿಜೆಪಿ ಸೇರಿದ ರಾಹುಲ್‌ ಗಾಂಧಿ ಬೆಂಬಲಿಗ,ಚುನಾವಣೆ 5 ದಿನ ಇರುವಾಗ ಕಾಂಗ್ರೆಸ್‌ಗೆ ಹಿನ್ನಡೆ

Kerala News: ವಯನಾಡಿನಲ್ಲಿ ಬಿಜೆಪಿ ಸೇರಿದ ರಾಹುಲ್‌ ಗಾಂಧಿ ಬೆಂಬಲಿಗ,ಚುನಾವಣೆ 5 ದಿನ ಇರುವಾಗ ಕಾಂಗ್ರೆಸ್‌ಗೆ ಹಿನ್ನಡೆ

ಕೇರಳದ ವಯನಾಡಿನಲ್ಲಿ ಕಾಂಗ್ರೆಸ್‌ ನಾಯಕ ಸುಧಾಕರನ್‌ ಬಿಜೆಪಿ ಸೇರಿದ್ದು ರಾಹುಲ್‌ ಗಾಂಧಿಗೆ ಹಿನ್ನಡೆಯಾಗಿದೆ.

ವಯನಾಡಿನಲ್ಲಿ ಬಿಜೆಪಿ ಸೇರಿದ ಕಾಂಗ್ರೆಸ್‌ ನಾಯಕ. ರಾಹುಲ್‌ ಗಾಂಧಿಗೆ ಹಿನ್ನಡೆ.
ವಯನಾಡಿನಲ್ಲಿ ಬಿಜೆಪಿ ಸೇರಿದ ಕಾಂಗ್ರೆಸ್‌ ನಾಯಕ. ರಾಹುಲ್‌ ಗಾಂಧಿಗೆ ಹಿನ್ನಡೆ.

ವಯನಾಡು: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಎರಡನೇ ಬಾರಿ ಕಣಕ್ಕೆ ಇಳಿದಿರುವ ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಮುನ್ನವೇ ಭಾರೀ ಹಿನ್ನಡೆಯಾಗಿದೆ. ರಾಹುಲ್‌ ಗಾಂಧಿ ಅವರೊಂದಿಗೆ ಇದ್ದ ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ಬಿಜೆಪಿ ಸೇರಿದ್ದಾರೆ. ಚುನಾವಣೆಗೆ ಕೆಲವೇ ದಿನ ಇರುವಾಗ ಈ ಬೆಳವಣಿಗೆಯಿಂದ ರಾಹುಲ್‌ ಗಾಂಧಿ ಪಾಳೆಯದಲ್ಲಿ ರಾಜಕೀಯ ಬಿಸಿ ಜೋರಾಗಿಯೇ ಇದೆ. ವಯನಾಡು ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸುಧಾಕರನ್‌ ಅವರು ಭಾನುವಾರ ಬಿಜೆಪಿ ಸೇರಿದ್ದು, ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಶ್ರಮಿಸುವೆ ಎಂದು ಘೋಷಣೆ ಮಾಡಿದ್ದಾರೆ.

ನಾನು ಐದು ವರ್ಷದಿಂದ ರಾಹುಲ್‌ ಗಾಂಧಿ ಅವರ ಜತೆಗೆ ಇದ್ದೆ. ಅವರ ಸಂಪರ್ಕವೇ ಇತ್ತೀಚಿನ ದಿನಗಳಲ್ಲಿ ಕಷ್ಟ ಆಗತೊಡಗಿದೆ.ಕ್ಷೇತ್ರದ ಬಗ್ಗೆ ತಿಳಿಸಲು ಅವರನ್ನು ಭೇಟಿಯಾಗುವುದು ಹೇಗೆ ಎಂದು ತಿಳಿಯದಾಗಿತ್ತು. ಹಿರಿಯ ನಾಯಕರ ಗಮನಕ್ಕೆ ತಂದರೆ ಅದಕ್ಕೂ ಯಾರೂ ಸ್ಪಂದಿಸಲಿಲ್ಲ. ರಾಹುಲ್‌ ಗಾಂಧಿ ಅವರೂ ಐದು ವರ್ಷದ ಅವಧಿಯಲ್ಲಿ ವಯನಾಡು ಕ್ಷೇತ್ರಕ್ಕೆ 8-9 ಬಾರಿ ಮಾತ್ರ ಬಂದಿರಬಹುದು. ಹೀಗಾದರೇ ಕ್ಷೇತ್ರ ಅಭಿವೃದ್ದಿ ಸಾಧ್ಯವೇ ಎಂದು ಸುಧಾಕರನ್‌ ಬಿಜೆಪಿ ಸೇರ್ಪಡೆ ಬಳಿಕ ತಿಳಿಸಿದರು.

ನಾನು ನರೇಂದ್ರ ಮೋದಿ ಅವರ ಅಭಿಮಾನಿಯಾಗಿ ಇತ್ತೀಚಿನ ದಿನಗಳಲ್ಲಿ ಬದಲಾಇದ್ದೇನೆ. ಮೋದಿ ರಾಜಕೀಯವನ್ನು ದೇಶದ ಪ್ರಗತಿಗೋಸ್ಕರವೇ ಮಾಡುತ್ತಿದ್ದಾರೆ ಅನ್ನಿಸುತಿದೆ. ಈಗಿನ ಸಮಾಜಕ್ಕೆ ಬಿಜೆಪಿಗೆ ಹೆಚ್ಚು ಬೇಕಾಗಿರುವ ಪಕ್ಷ ಎನ್ನುವುದು ನನ್ನ ಅಭಿಪ್ರಾಯ. ಹತ್ತು ವರ್ಷದಲ್ಲಿ ಮೋದಿ ಅವರು ಹಲವಾರು ಅಭಿವೃದ್ದಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಮೋದಿ ಅವರ ಅಭಿವೃದ್ದಿಯನ್ನು ನೋಡಿಯೇ ಬಿಜೆಪಿ ಸೇರುವ ತೀರ್ಮಾನ ಮಾಡಿದೆ ಎಂಬುದು ಸುಧಾಕರನ್‌ ಅಭಿಪ್ರಾಯ.

ಕೇರಳ ಬಿಜೆಪಿ ಅಧ್ಯಕ್ಷರಾಗಿರುವ ಕೆ.ಸುರೇಂದ್ರನ್‌ ಅವರು ಈ ಬಾರಿ ವಯನಾಡು ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಸುರೇಂದ್ರನ್‌ ಅವರು ಈ ಬಾರಿ ಆಯ್ಕೆಯಾದರೆ ಖಂಡಿತವಾಗಿಯೂ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ನನ್ನೊಂದಿಗೆ ನಿವೃತ್ತ ಅರಣ್ಯ ಅಧಿಕಾರಿ ಶಶಿಕುಮಾರ್‌ ಹಾಗೂ ಸಿವಿಲ್‌ ಎಂಜಿನಿಯರ್‌ ಪ್ರಜೀಶ್‌ ಕೂಡ ಬಿಜೆಪಿ ಸೇರಿದ್ದಾರೆ ಎಂದು ಹೇಳಿದರು.

ಕೇರಳದಲ್ಲಿ ಮೊದಲಿನಿಂದಲೂ ಎಡಪಕ್ಷಗಳು ಹಾಗೂ ಕಾಂಗ್ರೆಸ್‌ ನಡುವಿನ ಸ್ಪರ್ಧೆಯ ಕಣ. ಆದರೆ ಮೊದಲ ಬಾರಿಗೆ ಕೇರಳದಲ್ಲಿ ಬಿಜೆಪಿ ಮೂರನೇ ಶಕ್ತಿಯಾಗಿ ತೀವ್ರ ಸ್ಪರ್ಧೆಯನ್ನು ಒಡ್ಡುತ್ತಿದೆ. ಹೆಚ್ಚು ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿ ಸ್ಪರ್ಧಿಸಿದೆ. ಹಲವಾರು ನಾಯಕರು ಬಿಜೆಪಿ ಸೇರುತ್ತಿದ್ದು, ಇದರಲ್ಲಿ ಕಾಂಗ್ರೆಸ್‌ ನಾಯಕರೇ ಹೆಚ್ಚಿದ್ದಾರೆ. ರಾಹುಲ್‌ ಗಾಂಧಿ ಅವರು ಕಳೆದ ಬಾರಿ ಅಮೇಥಿ ಹಾಗೂ ವಯನಾಡು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಅಮೇಥಿಯಲ್ಲಿ ಸೋತರೆ ವಯನಾಡಿನಲ್ಲಿ ಗೆದ್ದಿದ್ದರು.

ಈ ಬಾರಿ ಎರಡನೇ ಬಾರಿಗೆ ರಾಹುಲ್‌ ಗಾಂಧಿ ವಯನಾಡು ಕ್ಷೇತ್ರದಲ್ಲಿ ಕಣಕ್ಕೆ ಇಳಿದಿದ್ದಾರೆ. ಕಳೆದ ವಾರ ಕ್ಷೇತ್ರದಲ್ಲಿ ಭಾರೀ ಪ್ರಚಾರವನ್ನೂ ಕೈಗೊಂಡಿದ್ದರು. ಇಲ್ಲಿ ಎಡಪಕ್ಷಗಳ ಹಿರಿಯ ನಾಯಕ ಡಿ.ರಾಜಾ ಅವರ ಪತ್ನಿ ಅನ್ನಿ ರಾಜಾ ಎಲ್‌ಡಿಎಫ್‌ ಅಭ್ಯರ್ಥಿಯಾಗಿದ್ದಾರೆ. ಇಲ್ಲಿಯೂ ಏಪ್ರಿಲ್‌ 26ರಂದು ಮತದಾನವಿದೆ. ಕೇರಳದಲ್ಲಿ ಎಲ್ಲಾ 20 ಲೋಕಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ.

ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)