Bhoomi Shetty: ಬೆಂಗಳೂರಿನಲ್ಲಿ ಮಹಿಳಾ ಬೈಕರ್ಸ್ ಬಳಿ ದುವರ್ತನೆ... ವಿರೋಧ ವ್ಯಕ್ತಪಡಿಸಿದ ಬಿಗ್ ಬಾಸ್ ಖ್ಯಾತಿಯ ಭೂಮಿ ಶೆಟ್ಟಿ.. ವಿಡಿಯೋ
ನಿಜಕ್ಕೂ ದುರಂತ, ಮಹಿಳೆಯರ ಬಳಿ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಬೆಂಗಳೂರಿನಲ್ಲೇ ಹಗಲಿನ ವೇಳೆಯಲ್ಲೇ ಈ ರೀತಿ ಘಟನೆ ನಡೆಯುತ್ತಿದೆ. ಈ ರೀತಿ ವರ್ತಿಸಿದರೆ ಮಹಿಳೆಯರು ಎಷ್ಟು ಸುರಕ್ಷಿತರಾಗಿರುತ್ತಾರೆ? ಈ ಪ್ರಪಂಚ ವಿದ್ಯಾವಂತ ಮೂರ್ಖರಿಂದ ತುಂಬಿದೆ ಎಂದು ಬರೆದುಕೊಂಡಿದ್ದಾರೆ.
ಮಹಿಳಾ ಬೈಕ್ ರೈಡರ್ಸ್ ಬಳಿ ವ್ಯಕ್ತಿಯೊಬ್ಬರು ಅಸಭ್ಯವಾಗಿ ನಡೆದುಕೊಂಡ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆ ವ್ಯಕ್ತಿಯ ವರ್ತನೆಗೆ ಎಲ್ಲರಿಂದ ವಿರೋಧ ವ್ಯಕ್ತವಾಗುತ್ತಿದೆ. ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಭೂಮಿ ಶೆಟ್ಟಿ ಕೂಡಾ ಈ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾ ಸ್ಟೇಟಸ್‌ನಲ್ಲಿ ಹಂಚಿಕೊಂಡು ವಿರೋಧ ವ್ಯಕ್ತಪಡಿಸಿದ್ದಾರೆ.
ಏನಿದು ಘಟನೆ?
ಇತ್ತೀಚೆಗೆ ಮೂವರು ಮಹಿಳಾ ಬೈಕರ್‌ಗಳು ಬೆಂಗಳೂರಿನ ಕೋಣನಕುಂಟೆ ಬಳಿ ಜಾಲಿ ರೈಡ್ ತೆರಳಿದ್ದಾರೆ. ಬಿಸಿಲು ಹೆಚ್ಚಾಗಿದ್ದ ಕಾರಣಕ್ಕೆ ನೀರು ಕುಡಿಯಲು ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿದ್ಧಾರೆ. ಆಗ ದೂರದಿಂದ ಒಬ್ಬ ವೃದ್ಧ ಈ ಯುವತಿಯರನ್ನು ಅಸಭ್ಯವಾಗಿ ಬೈದು ಅಲ್ಲಿಂದ ತೆರಳುವಂತೆ ಹೇಳಿದ್ದಾರೆ. ಆದರೆ ಯುವತಿಯರಿಗೆ ಆತನ ಮಾತುಗಳಿಂದ ಕೋಪ ಬಂದಿದೆ. ನಂತರ ಮತ್ತೊಬ್ಬ ವ್ಯಕ್ತಿ, ಅತ್ತ ರಸ್ತೆ ಬದಿಯಿಂದ ಯುವತಿಯರು ನಿಂತಿದ್ದ ಜಾಗಕ್ಕೆ ಬಂದು ಇದು ನನ್ನ ಜಾಗ ಇಲ್ಲಿಂದ ಮುಂದೆ ಹೋಗಿ ಎಂದಿದ್ದಾರೆ. ನಾವು ಹೋಗುವುದಿಲ್ಲ, ನಾವು ಏನು ತಪ್ಪು ಮಾಡಿದ್ದೇವೆ? ನೀರು ಕುಡಿಯಲು ಇಲ್ಲಿ ನಿಂತಿದ್ದೇವೆ, ನಿಮ್ಮ ಮನೆ ಇರುವುದು ರಸ್ತೆಯ ಮತ್ತೊಂದು ಬದಿಯಲ್ಲಿ, ಎಂದಿದ್ದಾರೆ. ಆದರೆ ಆ ವ್ಯಕ್ತಿ ಯುವತಿಯ ಬೈಕ್ ಕೀ ಕಸಿದುಕೊಂಡು ಅಲ್ಲಿಂದ ಹೊರಟಿದ್ಧಾರೆ.
ಈ ಎಲ್ಲಾ ಘಟನೆಯನ್ನು ಯುವತಿಯರು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಕೂಡಲೇ ಯುವತಿಯರು ಪೊಲೀಸರಿಗೆ ದೂರು ನೀಡಿದ್ದಾರೆ. ಯುವತಿಯರ ಬೈಕ್ ಕೀ ಕಿತ್ತುಕೊಂಡ ವ್ಯಕ್ತಿ ಮಂಜುನಾಥ್ ಲಾಯರ್ ಆಗಿದ್ದು, ಆತ ಕೂಡಾ ಯುವತಿಯರ ವಿರುದ್ಧ ಪ್ರತಿ ದೂರು ದಾಖಲಿಸಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಆತನ ನಡೆಗೆ ವಿರೋಧ ವ್ಯಕ್ತವಾಗುತ್ತಿದೆ. ಲಾಯರ್ ಆದ ಮಾತ್ರಕ್ಕೆ ಇಷ್ಟು ಅಸಭ್ಯವಾಗಿ ನಡೆದುಕೊಳ್ಳುವುದು ಸರೀನಾ ಎಂದು ಪ್ರಶ್ನಿಸುತ್ತಿದ್ದಾರೆ.
ಭೂಮಿ ಶೆಟ್ಟಿ ಹೇಳಿದ್ದೇನು?
ಮಂಜುನಾಥ್ ನಡೆಗೆ ಭೂಮಿ ಶೆಟ್ಟಿ ವಿರೋಧ ವ್ಯಕ್ತಪಡಿಸಿದ್ದಾರೆ. ನಿಜಕ್ಕೂ ದುರಂತ, ಮಹಿಳೆಯರ ಬಳಿ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಬೆಂಗಳೂರಿನಲ್ಲೇ ಹಗಲಿನ ವೇಳೆಯಲ್ಲೇ ಈ ರೀತಿ ಘಟನೆ ನಡೆಯುತ್ತಿದೆ. ಈ ರೀತಿ ವರ್ತಿಸಿದರೆ ಮಹಿಳೆಯರು ಎಷ್ಟು ಸುರಕ್ಷಿತರಾಗಿರುತ್ತಾರೆ? ಈ ಪ್ರಪಂಚ ವಿದ್ಯಾವಂತ ಮೂರ್ಖರಿಂದ ತುಂಬಿದೆ ಎಂದು ಬರೆದುಕೊಂಡಿದ್ದಾರೆ. ಭೂಮಿ ಶೆಟ್ಟಿ ಬೈಕ್ ರೈಡರ್ ಆಗಿದ್ದು ಬೆಂಗಳೂರಿನಿಂದ ಮಂಗಳೂರಿನವರೆಗೆ ಬೈಕ್ ರೈಡ್ ಮಾಡಿರುವ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಭೂಮಿ ಶೆಟ್ಟಿ 'ಕಿನ್ನರಿ' ಧಾರಾವಾಹಿ ಮೂಲಕ ವೀಕ್ಷಕರಿಗೆ ಪರಿಚಯವಾದರು. ಈ ಧಾರಾವಾಹಿಯಲ್ಲಿ ಅವರು ಮಣಿ ಎಂಬ ಪಾತ್ರದಲ್ಲಿ ನಟಿಸಿದ್ದರು. ತೆಲುಗಿನ 'ನಿನ್ನೇ ಪೆಳ್ಳಾಡತಾ' ಧಾರಾವಾಹಿಯಲ್ಲಿ ಮೃದುಲಾ ಎಂಬ ಪಾತ್ರದಲ್ಲಿ ನಟಿಸಿದ್ದರು. 'ಇಕ್ಕಟ್' ಸಿನಿಮಾ ಮೂಲಕ ಬೆಳ್ಳಿತೆರೆ ಎಂಟ್ರಿ ಕೊಟ್ಟ ಭೂಮಿ ಶೆಟ್ಟಿ, ಈಗ 'ಕೆಂಡದ ಸೆರಗು' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.