ಚೊಚ್ಚಲ ಅಂಡರ್-19 ವನಿತೆಯರ ಏಷ್ಯಾಕಪ್ ಮುಡಿಗೇರಿಸಿಕೊಂಡ ಭಾರತ; ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಗೆಲುವು
ಕನ್ನಡ ಸುದ್ದಿ  /  ಕ್ರಿಕೆಟ್  /  ಚೊಚ್ಚಲ ಅಂಡರ್-19 ವನಿತೆಯರ ಏಷ್ಯಾಕಪ್ ಮುಡಿಗೇರಿಸಿಕೊಂಡ ಭಾರತ; ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಗೆಲುವು

ಚೊಚ್ಚಲ ಅಂಡರ್-19 ವನಿತೆಯರ ಏಷ್ಯಾಕಪ್ ಮುಡಿಗೇರಿಸಿಕೊಂಡ ಭಾರತ; ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಗೆಲುವು

ಬಾಂಗ್ಲಾದೇಶ ವನಿತೆಯರ ವಿರುದ್ಧ ಗೆದ್ದ ಭಾರತ ಕಿರಿಯರ ತಂಡವು ಚೊಚ್ಚಲ ಅಂಡರ್‌ 19 ಏಷ್ಯಾಕಪ್ ಟ್ರೋಫಿ ಮುಡಿಗೇರಿಸಿಕೊಂಡಿದೆ. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ತಂಡವು, ಫೈನಲ್‌ ಪಂದ್ಯದಲ್ಲಿಯೂ ಮಿಂಚಿತು.

ಬಾಂಗ್ಲಾದೇಶ ವಿರುದ್ಧ ಗೆದ್ದು ಚೊಚ್ಚಲ ಅಂಡರ್-19 ವನಿತೆಯರ ಏಷ್ಯಾಕಪ್ ಮುಡಿಗೇರಿಸಿಕೊಂಡ ಭಾರತ
ಬಾಂಗ್ಲಾದೇಶ ವಿರುದ್ಧ ಗೆದ್ದು ಚೊಚ್ಚಲ ಅಂಡರ್-19 ವನಿತೆಯರ ಏಷ್ಯಾಕಪ್ ಮುಡಿಗೇರಿಸಿಕೊಂಡ ಭಾರತ (X)

ಭಾರತ ಅಂಡರ್‌ 19 ವನಿತೆಯರ ತಂಡವು ಉದ್ಘಾಟನಾ ಆವೃತ್ತಿಯ ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬಾಂಗ್ಲಾದೇಶ ವಿರುದ್ಧದ ಫೈನಲ್‌ ಪಂದ್ಯದಲ್ಲಿ 41 ರನ್‌ಗಳಿಂದ ರೋಚಕ ಜಯ ಸಾಧಿಸಿತು. ಕೌಲಾಲಂಪುರದ ಬೇಯುಮಾಸ್ ಓವಲ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಅಬ್ಬರದಾಟವಾಡಿದ ಭಾರತೀಯ ನಾರಿಯರು, ಗೆಲುವಿನ ಟ್ರೋಫಿ ಎತ್ತಿಹಿಡಿದರು. ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ನಡೆಸಿತು. ನಿರೀಕ್ಷೆಯಂತೆ ಬ್ಯಾಟ್‌ ಬೀಸಲು ವಿಫಲವಾಗಿ, ಕೊನೆಗೆ ಏಳು ವಿಕೆಟ್‌ ನಷ್ಟಕ್ಕೆ 117 ರನ್ ಗಳಿಸಿದರು. ಇದಕ್ಕೆ ಪ್ರತಿಯಾಗಿ ಚೇಸಿಂಗ್‌ ನಡೆಸಿದ ಬಾಂಗ್ಲಾದೇಶ, 76 ರನ್‌ ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್‌ ಕಳೆದುಕೊಂಡು ಸೋಲೊಪ್ಪಿತು.

ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡದ್ದ ಗೊಂಗಡಿ ತ್ರಿಶಾ, ಆಕರ್ಷಕ ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ತ್ರಿಶಾ ಹೊರತುಪಡಿಸಿ ತಂಡದ ಯಾರೂ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ತ್ರಿಶಾ 47 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 52 ರನ್ ಸಿಡಿಸಿದರು. ಉಳಿದಂತೆ ಮಿಥಿಲಾ ವಿನೋದ್ ನಿರ್ಣಾಯಕ 12 ಎಸೆತಗಳಲ್ಲಿ 17 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಬಾಂಗ್ಲಾದೇಶದ ವೇಗದ ಬೌಲರ್ ಫರ್ಜಾನಾ ಈಸ್ಮಿನ್ 4 ವಿಕೆಟ್‌ ಪಡೆದರು.

ಭಾರತ ನೀಡಿದ ಸಾಧಾರಣ ಗುರಿ ಬೆನ್ನಟ್ಟಿದ ಬಾಂಗ್ಲಾದೇಶಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಾದ ಫಹೋಮಿದಾ ಚೋಯಾ ಮತ್ತು ಜುವೈರಿಯಾ ಫೆರ್ದೌಸ್ ಕ್ರಮವಾಗಿ 18 ಮತ್ತು 22 ರನ್ ಗಳಿಸಿದರು. ನಾಯಕಿ ಸುಮೈಯಾ ಅಕ್ತರ್ 4 ರನ್‌ ಗಳಿಸಿದ್ದಾಗ ಸೋನಮ್ ಯಾದವ್‌ಗೆ ಬಿದ್ದರು. ಭಾರತದ ಪರ ಹೆಚ್ಚು ವಿಕೆಟ್ ಟೇಕರ್ ಆಗಿ ಪಂದ್ಯಾವಳಿಯನ್ನು ಪೂರ್ಣಗೊಳಿಸಿದ ಆಯುಷಿ ಶುಕ್ಲಾ 3 ವಿಕೆಟ್‌ ಪಡೆದರು.

ಒಂದು ಹಂತದಲ್ಲಿ ಬಾಂಗ್ಲಾದೇಶ ಚೇಸಿಂಗ್‌ ಮಾಡುವ ಎಲ್ಲಾ ಲಕ್ಷಣಗಳಿದ್ದವು. 40 ಎಸೆತಗಳಲ್ಲಿ 21 ರನ್‌ ಗಳಿಸುವಷ್ಟರಲ್ಲಿ ಬಾಂಗ್ಲಾ ಕೊನೆಯ ಏಳು ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರಿಂದ ತಂಡದ ಇನ್ನಿಂಗ್ಸ್ ದಿಢೀರ್ ಕುಸಿಯಿತು.

ಪುರುಷರ ತಂಡಕ್ಕೆ ಸೋಲು

ಇದು ವನಿತೆಯರ ಚೊಚ್ಚಲ ಅಂಡರ್‌ 19 ಏಷ್ಯಾಕಪ್‌ ಟೂರ್ನಿಯಾಗಿದ್ದು, ಭಾರತ ಚೊಚ್ಚಲ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಇತ್ತೀಚೆಗೆ ನಡೆದ ಪುರುಷರ ಅಂಡರ್‌ 19 ಏಷ್ಯಾಕಪ್‌ನಲ್ಲಿಯೂ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಆದರೆ, ಭಾರತ ತಂಡ ಸೋಲು ಕಂಡು ನಿರಾಶೆ ಮೂಡಿಸಿತ್ತು. ಇದೀಗ ವನಿತೆಯರ ಕಿರಿಯರ ತಂಡ ಕಪ್‌ ಗೆದ್ದು ಸಾಧನೆ ಮಾಡಿದೆ.

Whats_app_banner