‘ಜಗದೀಶ್ ವಕೀಲರಲ್ಲ, ಅವರನ್ನು ಲಾಯರ್ ಎಂದು ಬಿಂಬಿಸಬೇಡಿ!’ ಕಲರ್ಸ್ ಕನ್ನಡಕ್ಕೆ ಪತ್ರ ಬರೆದ ವಕೀಲರ ಸಂಘ
Bigg boss Kannada 11: ದೆಹಲಿ ಬಾರ್ ಕೌನ್ಸಿಲ್ರವರು ಬಿಗ್ ಬಾಸ್ ಕನ್ನಡ ಸ್ಪರ್ಧಿ ಕೆ.ಎನ್. ಜಗದೀಶ್ರವರ ದೆಹಲಿ ಬಾರ್ ಕೌನ್ಸಿಲ್ನಲ್ಲಿ ವಕೀಲರಾಗಿ ನೋಂದಣಿಯಾಗಿರುವ ದಾಖಲಾತಿಗಳನ್ನು ಪರಿಶೀಲಿಸಿ, ದಾಖಲೆಗಳು ನಕಲಿ ಎಂದು ದೃಢಪಟ್ಟ ನಂತರ ಅವರ ನೋಂದಣಿಯನ್ನು ರದ್ದುಗೊಳಿಸಿ ಎಲ್ಲಾ ಪ್ರಮಾಣ ಪತ್ರಗಳನ್ನು ಹಿಂತಿರುಗಿಸುವಂತೆ ಆದೇಶ ಹೊರಡಿಸಿದೆ.
Bigg boss Kannada 11: ಸೋಷಿಯಲ್ ಮೀಡಿಯಾದಲ್ಲಿ ಬ್ಲಾಕ್ ಕೋಟ್ ಧರಿಸಿ, ವಕೀಲರೆಂದೇ ಬಿಂಬಿಸಿಕೊಂಡಿದ್ದಾರೆ ಕೆ. ಎನ್ ಜಗದೀಶ್ ಮಹಾದೇವ್. ಆದರೆ, ಈಗ ಇದೇ ಜಗದೀಶ್ ಅವರ ಅಸಲಿ ಸತ್ಯವನ್ನು ಒಂದೊಂದಾಗಿಯೇ ಬಯಲಿಗೆಳೆಯುತ್ತಿದೆ ಬೆಂಗಳೂರಿನ ವಕೀಲರ ಸಂಘ. ಅಂದರೆ, ಸದ್ಯ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ತೆರಳಿರುವ ಲಾಯರ್ ಕೆ. ಎನ್ ಜಗದೀಶ್, ಅಲ್ಲಿಯೂ ನಾನ್ನೊಬ್ಬ ನ್ಯಾಯವಾದಿ ಎಂದೇ ಬಿಂಬಿಸಿಕೊಳ್ಳುತ್ತಿದ್ದಾರೆ. ಹೊರಗಡೆ ಬಂದ ಮೇಲೆ ಬಿಗ್ಬಾಸ್ ಮೇಲೆಯೇ ಕೇಸ್ ಹಾಕುವೆ ಎಂದೂ ಆವಾಜ್ ಹಾಕುತ್ತಿದ್ದಾರೆ. ಇದೆಲ್ಲವನ್ನು ಗಮನಿಸಿದ ಬೆಂಗಳೂರು ವಕೀಲರ ಸಂಘ, ಜಗದೀಶ್ ವಕೀಲರೇ ಅಲ್ಲ ಎಂದು ಕಲರ್ಸ್ ಕನ್ನಡ ವಾಹಿನಿಗೆ ಪತ್ರ ಬರೆದಿದೆ.
ಬೆಂಗಳೂರು ವಕೀಲರ ಸಂಘ ಬರೆದ ಪತ್ರದಲ್ಲಿ ಏನಿದೆ?
ರವರಿಗೆ,
ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ರವರು,
ಕಲರ್ಸ್ ಕನ್ನಡ ಟಿವಿ ಚಾನಲ್,
ಬೆಂಗಳೂರು
ಮಾನ್ಯರೇ,
ವಿಷಯ: ನಿಮ್ಮ ಚಾನೆಲ್ನಲ್ಲಿ ಪ್ರಸಾರವಾಗುತ್ತಿರುವ ಬಿಗ್ಬಾಸ್-11 ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿರುವ ವಕೀಲರಲ್ಲದ ಕೆ.ಎನ್.ಜಗದೀಶ್ ಮಹದೇವ್ ರವರನ್ನು ವಕೀಲರೆಂದು ನೀವು ಬಿಂಬಿಸುತ್ತಿರುವ ಕುರಿತು ದೂರು.
****
ಬೆಂಗಳೂರು ವಕೀಲರ ಸಂಘವು ಏಷ್ಯಾದಲ್ಲಿಯೇ ಅತಿ ದೊಡ್ಡ ಸಂಘವಾಗಿದ್ದು, ಅದರ ಘನತೆ ಮತ್ತು ಗೌರವವನ್ನು ಸಮಾಜದಲ್ಲಿ ಕಾಪಾಡಿಕೊಂಡು ಬಂದಿದೆ. ನಮ್ಮ ಸಂಘವು ಸುಮಾರು 25 ಸಾವಿರಕ್ಕೂ ಹೆಚ್ಚು ವಕೀಲ ಸದಸ್ಯರನ್ನು ಹೊಂದಿದೆ. ವಕೀಲರ ಸಮುದಾಯವು ದಿನನಿತ್ಯದ ನ್ಯಾಯಾಲಯ ಕಲಾಪಗಳಲ್ಲಿ ಭಾಗವಹಿಸಿ ಸಮಾಜದಲ್ಲಿ ಅತ್ಯಂತ ಗೌರವಪೂರ್ವಕವಾಗಿ ವೃತ್ತಿಯನ್ನು ನಡೆಸಿಕೊಂಡು ಬರುತ್ತಿದ್ದು, ಸಮಾಜಕ್ಕೆ ಮಾದರಿಯಾಗಿದೆ. ಇಂತಹ ಸಂಸ್ಥೆಗೆ ಯಾವುದೇ ವ್ಯಕ್ತಿಗಳು ಮಸಿ ಬಳಿಯಲು ಪ್ರಯತ್ನಪಟ್ಟರೆ ಅದನ್ನು ಸಹಿಸಲು ಆಗುವುದಿಲ್ಲ.
ತಮ್ಮ ಚಾನಲ್ನಲ್ಲಿ ಇತ್ತೀಚಿಗೆ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 11ರಲ್ಲಿ ಭಾಗವಹಿಸಿರುವ ಕೆ.ಎನ್. ಜಗದೀಶ್ರವರು ವಕೀಲರಲ್ಲದಿದ್ದರೂ ಸಹ ಬಿಗ್ ಬಾಸ್-11ರ ಕಾರ್ಯಕ್ರಮದಲ್ಲಿ ಅವರನ್ನು ವಕೀಲರು ಮತ್ತು ವಕೀಲ್ ಸಾಹೇಬ್ ಎಂದು ಬಿಂಬಿಸುತ್ತಿರುವುದು ನಮ್ಮ ವಕೀಲರ ಸಂಘದ ಸದಸ್ಯರಿಗೆ ನೋವುಂಟು ಮಾಡಿರುತ್ತದೆ ಮತ್ತು ಅನೇಕ ವಕೀಲರು ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.
ನಿಮ್ಮ ಚಾನಲ್ ಬಿಗ್ ಬಾಸ್-11ರ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಕೆ.ಎನ್.ಜಗದೀಶ್ರವರಿಗೆ ಸುಮಾರು ದಿನಗಳ ಹಿಂದೆ ಕರ್ನಾಟಕ ರಾಜ್ಯದ ವಕೀಲರ ಪರಿಷತ್ತು ಕರ್ನಾಟಕ ರಾಜ್ಯದಲ್ಲಿ ಕಾನೂನು ವೃತ್ತಿ ನಡೆಸದಂತೆ ಆದೇಶ ಹೊರಡಿಸಿರುತ್ತದೆ. ದೆಹಲಿ ಬಾರ್ ಕೌನ್ಸಿಲ್ರವರು ಕೆ.ಎನ್.ಜಗದೀಶ್ರವರು ದೆಹಲಿ ಬಾರ್ ಕೌನ್ಸಿಲ್ನಲ್ಲಿ ವಕೀಲರಾಗಿ ನೋಂದಣಿಯಾಗಿರುವ ದಾಖಲಾತಿಗಳನ್ನು ಪರಿಶೀಲಿಸಿ, ದಾಖಲೆಗಳು ನಕಲಿ ಎಂದು ದೃಢಪಟ್ಟ ನಂತರ ಅವರ ನೋಂದಣಿಯನ್ನು ರದ್ದುಗೊಳಿಸಿ ಎಲ್ಲಾ ಪ್ರಮಾಣ ಪತ್ರಗಳನ್ನು ಹಿಂತಿರುಗಿಸುವಂತೆ ಆದೇಶ ಹೊರಡಿಸಿದೆ.
ಇಂಥ ಸಂದರ್ಭದಲ್ಲಿ ತಾವು ವಕೀಲರಲ್ಲದ ವ್ಯಕ್ತಿಯ ಹಿನ್ನೆಲೆಯನ್ನು ಪರಿಶೀಲಿಸದೆ ತಮ್ಮ ಟಿವಿ ಚಾನಲ್ನಲ್ಲಿ ಅವರನ್ನು ವಕೀಲರೆಂದು ಬಿಂಬಿಸುತ್ತಿರುವುದು ನಮ್ಮ ವಕೀಲ ವೃಂದಕ್ಕೆ ಬಹಳ ನೋವುಂಟು ಮಾಡಿರುತ್ತದೆ ಹಾಗೂ ಇದು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುತ್ತದೆ, ಆದ ಕಾರಣ ನೀವು ಇನ್ನು ಮುಂದೆ ಕೆ.ಎನ್.ಜಗದೀಶ್ ಅವರನ್ನು ತಮ್ಮ ಚಾನಲ್ನಲ್ಲಿ ಪ್ರಸಾರವಾಗುವ ಬಿಗ್ಬಾಸ್-11 ರ ಕಾರ್ಯಕ್ರಮದಲ್ಲಿ ವಕೀಲರೆಂದು ಬಿಂಬಿಸಬಾರದಾಗಿ ಮನವಿ ಮಾಡುತ್ತೇವೆ ಹಾಗೂ ಈ ವಿಷಯ ಕುರಿತಂತೆ ತಮ್ಮ ವಾಹಿನಿಯಲ್ಲಿ ಬಿಗ್ ಬಾಸ್ ಸೀಸನ್ 11ರಲ್ಲಿ ಅವರೊಂದಿಗೆ ಭಾಗವಹಿಸಿರುವವರಿಗೂ ಸೂಕ್ತ ರೀತಿಯ ತಿಳುವಳಿಕೆ ನೀಡಬೇಕೆಂದು ಹಾಗೂ ಇದನ್ನು ಸರಿಪಡಿಸದೆ ಇದ್ದ ಪಕ್ಷದಲ್ಲಿ ನೊಂದ ವಕೀಲರ ಪರವಾಗಿ, ಬೆಂಗಳೂರು ವಕೀಲರ ಸಂಘವು ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಲು ಮುಂದಾಗುತ್ತದೆ ಎಂದು ಈ ಮೂಲಕ ತಿಳಿಯಪಡಿಸಿದೆ.
ವಂದನೆಗಳೊಂದಿಗೆ,
ವಿವೇಕ್ ಸುಬ್ಬಾರೆಡ್ಡಿ
ಅಧ್ಯಕ್ಷರು
ಕಲರ್ಸ್ ಕನ್ನಡ ವಾಹಿನಿಗೆ ವಕೀಲರ ಸಂಘದ ಪತ್ರ
ವಿಭಾಗ