BBK 10: ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ; ರಕ್ಕಸರಾದ ವಿನಯ್ ತಂಡದ ಕಾಟಕ್ಕೆ ಕಕ್ಕಾಬಿಕ್ಕಿಯಾದ ಕಾರ್ತಿಕ್ ಟೀಮ್
ಗಂಧರ್ವರಾಗಿ ರಕ್ಕಸರಿಂದ ನೋವು ತಿಂದಿದ್ದ ವಿನಯ್ ಮತ್ತವರ ತಂಡ ಇದೀಗ ರಕ್ಕಸರಾಗಿ ಬದಲಾಗಿದೆ. ಈ ಮೂಲಕ ಸೇಡಿಗೆ ಸೇಡು ತೀರಿಸಿಕೊಳ್ಳಲು ಚಿತ್ರವಿಚಿತ್ರವಾಗಿ ಗಂಧರ್ವರಿಗೆ ಹಿಂಸೆ ನೀಡುತ್ತಿದ್ದಾರೆ.
BBK 10: ಬಿಗ್ಬಾಸ್ ಮನೆಯಲ್ಲೀಗ ಬಿಗ್ ಬಾಸ್ ಲೋಕ ತಲೆ ಎತ್ತಿದೆ. ರಾಕ್ಷಸರು, ಗಂಧರ್ವರು ಎಂಬ ಎರಡು ಗುಂಪುಗಳನ್ನು ಮಾಡಿ, ವಿಚಿತ್ರವಾದ ಟಾಸ್ಕ್ ನೀಡಿದ್ದಾರೆ ಬಿಗ್ಬಾಸ್. ಇದರ ಪರಿಣಾಮ ರಕ್ಕಸ- ಗಂಧರ್ವರ ಜಿದ್ದಾಜಿದ್ದು ಕ್ಷಣಕ್ಷಣಕ್ಕೂ ಏರುತ್ತಲೇ ಇದೆ. ಕಳೆದ ಎರಡು ದಿನಗಳಿಂದ ಗಳಿಗೆಗೊಂದು ತಿರುವು ಪಡೆದುಕೊಂಡು ಬೆಳೆಯುತ್ತಲೇ ಇದೆ. ಆದರೆ ಆ ಟಾಸ್ಕ್ ಈಗ ಒಂದು ಹಂತಕ್ಕೆ ಬಂದು ನಿಂತಿರುವ ಸೂಚನೆ ಸಿಕ್ಕಿದೆ.
ಮೊದಲ ದಿನ ರಕ್ಕಸರಾಗಿದ್ದ ಸಂಗೀತ ತಂಡ, ಗಂಧರ್ವರಾಗಿದ್ದ ವರ್ತೂರು ಸಂತೋಷ್ ಅವರಿದ್ದ ತಂಡದ ಮೇಲೆ ಹೀನವಾಗಿಯೇ ರಕ್ಕಸ ಬುದ್ಧಿ ತೋರಿತ್ತು. ಇದರಿಂದ ಗಂಧರ್ವರಾಗಿದ್ದ ತಂಡವೂ ಅಷ್ಟೇ ನೋವು ಅನುಭವಿಸಿತ್ತು. ಇದೀಗ ಆರಂಭದಲ್ಲಿ ರಕ್ಕಸರಾಗಿದ್ದ ಸಂಗೀತಾ ತಂಡ, ಈಗ ಗಂಧರ್ವರಾಗಿದ್ದಾರೆ. ಮೊದಲ ದಿನ ರಕ್ಕಸರಿಂದ ಕಿರುಕುಳ ಅಪಮಾನ ಅನುಭವಿಸಿದ್ದ ವರ್ತೂರು ಸಂತೋಷ್ ತಂಡ, ದುಪ್ಪಟ್ಟು ರೋಷದೊಂದಿಗೆ ರಕ್ಕಸರಾಗಿ ಗಂಧರ್ವರ ಮೇಲೆ ದಾಳಿ ಮಾಡುತ್ತಿದ್ದಾರೆ.
ಈ ನಡುವೆ ಸದ್ಯ ಗಂಧರ್ವರಾಗಿರುವ ಸಂಗೀತಾ ತಂಡ ದಣಿದಂತೆ ಕಾಣಿಸುತ್ತಿದೆ. ನಿರಂತರವಾದ ರಕ್ಕಸರ ಕಿರುಕುಳವನ್ನು ತಾಳಿಕೊಳ್ಳಲಾಗದೆ ಕಾರ್ತಿಕ್, ‘ನನ್ನ ಕೈಲಿ ಸಾಧ್ಯವಾಗುತ್ತಿಲ್ಲ’ ಎಂದು ನೆಲಕ್ಕೊರಗಿದ್ದಾರೆ. ಗಂಧರ್ವರ ನಾಯಕಿ ಸಂಗೀತಾ, ಸಿರಿ ಅವರೊಂದಿಗೆ, ‘ಪನಿಷ್ಮೆಂಟ್ ತೆಗೆದುಕೊಳ್ಳಬೇಕು ಎಂದು ಎಲ್ಲೂ ಹೇಳಿಲ್ಲ. ನಾವು ತಗೊಳ್ಳಲ್ಲ ಎಂದು ಹೇಳೋಣ’ ಎನ್ನುತ್ತಿದ್ದಾರೆ.
ಇತ್ತ ರಕ್ಕಸರ ಗುಂಪಿನ ನಮ್ರತಾ, ‘ಅವಳು ಯಾವ ಸೀಮೆ ರಾಣಿ ಗುರೂ.. ಇಂಡಿವಿಷುವಲ್ ಗೇಮ್ ಆಡೋಕೆ ಬಂದಿಲ್ವಾ ನೀವು?’ ಎಂದು ಕಿರುಚಾಡಿದ್ದಾರೆ. ‘ಅವ್ರು ವರ್ಸ್ಟ್ ಆಗಿ ಮಾಡ್ತಿರೋದಕ್ಕೆ ಅವ್ರು ಹೊಣೆ ಮ್ಯಾಮ್… ನಾನದಕ್ಕೆ ಕಾರಣ ಅಲ್ಲ’ ಎಂದು ಸಂಗೀತಾ ತನ್ನದೇ ಗುಂಪಿನ ಸದಸ್ಯರ ಎದುರಿಗೆ ಕೈ ಮುಗಿದು ಕಣ್ಣೀರು ಹಾಕುತ್ತಿದ್ದಾರೆ.
ಇಡೀ ಮನೆ ರಣರಂಗವಾಗಿದೆ. ಯಾವುದು ಸರಿ, ಯಾವುದು ತಪ್ಪು ಎಂಬುದು ತಿಳಿಯದಷ್ಟು ಗೊಂದಲದ ಗೂಡಾಗಿದೆ. ಇದರ ಪರಿಣಾಮ ಏನಾಗುತ್ತದೆ? ಯಾವ ತಂಡ ಗೆಲುವಿನ ದಡ ಸೇರುತ್ತದೆ? ಯಾವ ತಂಡ ಸೋಲಿನಲ್ಲಿ ಕೊಚ್ಚಿಕೊಂಡು ಹೋಗುತ್ತದೆ? ಈ ಪ್ರಶ್ನೆಗಳಿಗೆ ಉತ್ತರಕ್ಕಾಗಿ ವೀಕೆಂಡ್ವರೆಗೂ ಕಾಯಲೇಬೇಕು. ಬಿಗ್ಬಾಸ್ ಕನ್ನಡವನ್ನು ಜಿಯೋ ಸಿನಿಮಾದಲ್ಲಿ ದಿನದ 24 ಗಂಟೆ ಉಚಿತವಾಗಿ ನೋಡಬಹುದು.