Poonam Pandey: ಸಾವಿನ ನಾಟಕದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ್ರು ಪೂನಂ ಪಾಂಡೆ; ಭೂತ ಬಂತು ನೋಡ್ರೋ ಅಂದ್ರು ನೆಟ್ಟಿಗರು
ಬಾಲಿವುಡ್ ನಟಿ ಪೂನಂ ಪಾಂಡೇ ಇತ್ತೀಚೆಗೆ ಗರ್ಭಕಂಠದ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸಾವಿನ ನಾಟಕವಾಡಿದ್ದರು. ಇಷ್ಟು ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಇದ್ದ ಪೂನಂ ಪಾಂಡೇ ಇದೀಗ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ.
ಬಾಲಿವುಡ್ ನಟಿ ಪೂನಂ ಪಾಂಡೆ ಅವರು ಮುಂಬೈನಲ್ಲಿ ಪೇಪರಾಜಿಗಳಿಗೆ ಕಾಣಿಸಿಕೊಂಡಿದ್ದಾರೆ. ಸಾವಿನ ನಾಟಕವಾಡಿದ ಬಳಿಕ ಮೊದಲ ಬಾರಿಗೆ ಈ ರೀತಿ ಕಾಣಿಸಿಕೊಂಡಿದ್ದಾರೆ. ಪೂನಂ ಪಾಂಡೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಕುರಿತು ವಿಡಿಯೋ ವೈರಲ್ ಆಗಿದೆ. ಮುಂಬೈನಲ್ಲಿ ದೇಗುಲವೊಂದಕ್ಕೆ ಭೇಟಿ ನೀಡಿ ವಾಪಸ್ ಬರುತ್ತಿರುವಾಗ ಮಾಧ್ಯಮದವರ ಕಣ್ಣಿಗೆ ಪೂನಂ ಪಾಂಡೆ ಬಿದ್ದಿದ್ದಾರೆ.
ಪೇಪರಾಝಿಗಳಲ್ಲಿ ಪೂನಂ ಪಾಂಡೆ ಹೆಚ್ಚೇನೂ ಮಾತನಾಡಿಲ್ಲ. ನಗು ಮುಖ ತೋರಿ ಫೋಟೋಗೆ ಪೋಸ್ ನೀಡಿದ್ದರು. ಈ ವಿಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ಥರೇವಾರಿ ಕಾಮೆಂಟ್‌ಗಳು ಬಂದಿವೆ. "ಅಂಡರ್‌ಟೇಕರ್ ಕಿ ಬೆಹಾನ್" "ಡೆಡ್‌ಮ್ಯಾನ್ ವಾಕಿಂಗ್ ಮಾಡೋ ಸ್ಥಳದಲ್ಲಿ ಡೆಡ್ ವುಮೆನ್ ವಾಕಿಂಗ್" ಎಂದೆಲ್ಲ ಜನರು ಕಾಮೆಂಟ್ ಮಾಡಿದ್ದಾರೆ. "ನೋಡ್ರೋ ಆಕೆ ಜೀವಂತವಾಗಿದ್ದಾಳೆ" "ಭೂತ ಬಂತು ಭೂತ" "ಪೂನಂ ದೆವ್ವ ನೋಡ್ರೋ" ಎಂದೆಲ್ಲ ಕಾಮೆಂಟ್ ಮಾಡಲು ನೆಟ್ಟಿಗರು ಹಿಂಜರಿಯಲಿಲ್ಲ.
ನಾಟಕವಾಡಿದ್ದ ಪೂನಂ ಪಾಂಡೆ
ನಟಿ ಪೂನಂ ಪಾಂಡೆ ಫೆಬ್ರವರಿ ತಿಂಗಳ ಆರಂಭದಲ್ಲಿ ಮೃತಪಟ್ಟ ಸುದ್ದಿ ಸುದ್ದಿಯಾಗಿತ್ತು. ಪೂನಂ ಪಾಂಡೆ ಮ್ಯಾನೇಜರ್ ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ದೃಢೀಕರಿಸಿದ್ದರು. ವ ಎಲ್ಲಾ ಕಡೆ ಪೂನಂ ಪಾಂಡೆ ಮೃತಪಟ್ಟಿದ್ದಾರೆ ಎಂದು ವರದಿಗಳು ಬಂದಿದ್ದವು. ಯುವ ನಟಿಯ ಅಕಾಲಿಕ ಸಾವಿನ ಸುದ್ದಿ ಸಾಕಷ್ಟು ಜನರಿಗೆ ಆಘಾತ ಉಂಟು ಮಾಡಿತ್ತು. ಆದರೆ, ಮರುದಿನ ಇದು ಸುಳ್ಳು ಸುದ್ದಿಯೆಂದು ಗೊತ್ತಾಗಿತ್ತು. ಸ್ವತಃ ಪೂನಂ ಪಾಂಡೆ ಈ ರೀತಿ ನಾಟಕವಾಡಿದ್ದರು.
ಫೆಬ್ರವರಿ 3 ರಂದು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಪೂನಂ ಪಾಂಡೆ ವಿಡಿಯೋ ಪೋಸ್ಟ್ ಮಾಡಿ ಜನರ ಕ್ಷಮೆ ಯಾಚಿಸಿ ತಾನು ಯಾಕೆ ಹೀಗೆ ಮಾಡಿದೆ ಎಂದು ವಿವರಿಸಿದ್ದರು. "ನಿಮ್ಮ ಬಳಿ ಪ್ರಮುಖ ವಿಚಾರವೊಂದನ್ನು ಹಂಚಿಕೊಳ್ಳಲು ಬಯಸುತ್ತೇನೆ. ನಾನು ಜೀವಂತವಾಗಿದ್ದೇನೆ. ಆದರೆ, ದುಃಖದ ಸಂಗತಿಯೆಂದರೆ ಗರ್ಭಕಂಠದ ಕ್ಯಾನ್ಸರ್ ರೋಗವನ್ನು ಹೇಗೆ ಎದುರಿಸಬೇಕೆಂಬುದರ ಬಗ್ಗೆ ಜ್ಞಾನದ ಕೊರತೆ ಎಲ್ಲರಲ್ಲೂ ಇದೆ. ಇದರಿಂದಾಗಿ ಸಾವಿರಾರು ಮಹಿಳೆಯರು ಪ್ರಾಣ ಕಳೆದುಕೊಂಡಿದ್ದಾರೆ. ಇತರ ಕ್ಯಾನ್ಸರ್‌ಗಿಂತಲೂ ಇದು ವಿಭಿನ್ನ. ಗರ್ಭಕಂಠದ ಕ್ಯಾನ್ಸರ್ ಸಂಪೂರ್ಣವಾಗಿ ತಡೆಗಟ್ಟಬಲ್ಲದು. ಅದರ ಜಾಗೃತಿ ಮೂಡಿಸುವ ಸಲುವಾಗಿಯೇ ನಾನು ಈ ರೀತಿ ಮಾಡಿದೆ" ಎಂದು ಪೂನಂ ಪಾಂಡೆ ವಿಡಿಯೋ ಮೂಲಕ ಮಾಹಿತಿ ನೀಡಿದ್ದರು.
ಪೂನಂ ಅವರ ನಕಲಿ ಡೆತ್ ಸ್ಟೆಂಟ್‌ನಲ್ಲಿ ಭಾಗಿಯಾಗಿರುವ ಮಾಧ್ಯಮ ಕಂಪನಿ ಸ್ಟಬಾಂಗ್ ನಂತರ ಕ್ಷಮೆ ಯಾಚಿಸಿತ್ತು. "ಪೂನಂ ಪಾಂಡೆ ಅವರ ಸಾವಿನ ಸುದ್ದಿ ವಿಚಾರಕ್ಕೆ ಕ್ಷಮೆ ಯಾಚಿಸುತ್ತಿದ್ದೇವೆ. ಆದರೆ, ಈ ಅಭಿಯಾನವು ಸಾಕಷ್ಟು ಜನರಿಗೆ ರೋಗದ ಬಗ್ಗೆ ಜಾಗೃತಿ ಮೂಡಿಸಲು ನೆರವಾಗಿದೆ" ಎಂದು ಸ್ಟಬಾಂಗ್ ತಿಳಿಸಿತ್ತು. ಈ ರೀತಿ ಸಾವಿನ ನಾಟಕವಾಡಿದ ಪೂನಂ ಪಾಂಡೆಗೆ ವ್ಯಾಪಕ ಟೀಕೆಗಳು ಎದುರಾಗಿದ್ದವು. ಕೆಲವರು ಈಕೆಯ ನಡೆಯನ್ನು ಶ್ಲಾಘಿಸಿದ್ದರು. ಗರ್ಭಕಂಠದ ಕ್ಯಾನ್ಸರ್ ಮತ್ತು ಲಸಿಕೆ ಕುರಿತು ಹೆಚ್ಚಿನ ಜನರಿಗೆ ಮಾಹಿತಿ ತಿಳಿಯಲು ಈಕೆಯ ಉಪಕ್ರಮ ನೆರವಾಗಿದೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿದ್ದವು.