ಎರಡು ರಾಜ್ಯಗಳ ಕೆಂಗಣ್ಣಿಗೆ ಗುರಿಯಾದ ‘ಜಾಣ’ ಚಿತ್ರದ ನಟಿ; ಬಂಧನ ಭೀತಿಯಲ್ಲಿರೋ ಕಸ್ತೂರಿ ಶಂಕರ್‌ ನೀಡಿದ ವಿವಾದಾತ್ಮಕ ಹೇಳಿಕೆ ಏನು?
ಕನ್ನಡ ಸುದ್ದಿ  /  ಮನರಂಜನೆ  /  ಎರಡು ರಾಜ್ಯಗಳ ಕೆಂಗಣ್ಣಿಗೆ ಗುರಿಯಾದ ‘ಜಾಣ’ ಚಿತ್ರದ ನಟಿ; ಬಂಧನ ಭೀತಿಯಲ್ಲಿರೋ ಕಸ್ತೂರಿ ಶಂಕರ್‌ ನೀಡಿದ ವಿವಾದಾತ್ಮಕ ಹೇಳಿಕೆ ಏನು?

ಎರಡು ರಾಜ್ಯಗಳ ಕೆಂಗಣ್ಣಿಗೆ ಗುರಿಯಾದ ‘ಜಾಣ’ ಚಿತ್ರದ ನಟಿ; ಬಂಧನ ಭೀತಿಯಲ್ಲಿರೋ ಕಸ್ತೂರಿ ಶಂಕರ್‌ ನೀಡಿದ ವಿವಾದಾತ್ಮಕ ಹೇಳಿಕೆ ಏನು?

Kasthuri Shankar: ಬಹುಭಾಷಾ ನಟಿ ಕಸ್ತೂರಿ ಶಂಕರ್‌ ಇದೀಗ ಮಾತಿನ ಭರದಲ್ಲಿ ಎರಡು ರಾಜ್ಯಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬ್ರಾಹ್ಮಣರ ರಕ್ಷಣೆಗಾಗಿ ವಿಶೇಷ ಕಾನೂನಿಗೆ ಒತ್ತಾಯಿಸಿ ಆಡಿದ ಮಾತು ಇದೀಗ ವಿವಾದಕ್ಕೆ ಕಾರಣವಾಗಿದ್ದು, ನಟಿಯ ವಿರುದ್ಧ ದೂರೂ ದಾಖಲಾಗಿದೆ.

ಬಂಧನ ಭೀತಿಯಲ್ಲಿರೋ ಕಸ್ತೂರಿ ಶಂಕರ್‌ ನೀಡಿದ ವಿವಾದಾತ್ಮಕ ಹೇಳಿಕೆ ಏನು?
ಬಂಧನ ಭೀತಿಯಲ್ಲಿರೋ ಕಸ್ತೂರಿ ಶಂಕರ್‌ ನೀಡಿದ ವಿವಾದಾತ್ಮಕ ಹೇಳಿಕೆ ಏನು?

Kasthuri Shankar Controversial Comments: ಕ್ರೇಜಿಸ್ಟಾರ್‌ ರವಿಚಂದ್ರನ್‌ ಜತೆಗೆ ಜಾಣ, ಸೇರಿ ಹಲವು ಕನ್ನಡದ ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಕಸ್ತೂರಿ ಶಂಕರ್‌, ಸೋಷಿಯಲ್‌ ಮೀಡಿಯಾದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಕಾಂಟ್ರವರ್ಸಿ ಹೇಳಿಕೆಗಳಿಂದಲೇ ಸದ್ದು ಮಾಡುತ್ತಿರುತ್ತಾರೆ. ಇತ್ತೀಚೆಗಷ್ಟೇ ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ದರ್ಶನ್‌ ಪರವಾಗಿ ಬ್ಯಾಟ್‌ ಬೀಸಿದ್ದರು ಕಸ್ತೂರಿ. ದರ್ಶನ್‌ ಮಾಡಿದ್ದು ತಪ್ಪಾಗಿದ್ದರೆ, ರೇಣುಕಾಸ್ವಾಮಿ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿ ದರ್ಶನ್‌ ಬೆನ್ನಿಗೆ ನಿಂತಿದ್ದರು. ಈಗ ಇದೇ ನಟಿ ಭಾಷೆಯ ವಿಚಾರವಾಗಿ ಆಡಿದ ಒಂದು ಮಾತು ಎರಡು ರಾಜ್ಯದ ಜನ ಈ ನಟಿಯನ್ನು ಹಿಗ್ಗಾಮುಗ್ಗಾ ಝಾಡಿಸುತ್ತಿದ್ದಾರೆ.

ನವೆಂಬರ್‌ 4ರಂದು ಬ್ರಾಹ್ಮಣರ ರಕ್ಷಣೆಗಾಗಿ ವಿಶೇಷ ಕಾನೂನಿಗೆ ಒತ್ತಾಯಿಸಿ ಚೆನ್ನೈನಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು. ಆ ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ನಟಿ ಕಸ್ತೂರಿ ಶಂಕರ್‌ ಸಹ ಭಾಗವಹಿಸಿ, ನೆರೆದಿದ್ದ ಸಭಿಕರ ಎದುರಿಗೆ ತೆಲುಗು ಭಾಷೆ ಮತ್ತು ತೆಲುಗು ಜನರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹಾಗೆ ಆಡಿದ ಆ ಮಾತುಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ, ಆಂಧ್ರ ಮತ್ತು ತೆಲಂಗಾಣದಲ್ಲಿ ನಟಿಯ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು. ಆರಂಭದಲ್ಲಿ ತಾವಾಡಿದ ಮಾತುಗಳನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಟೀಕೆಗಳ ಸುರಿಮಳೆ ಹರಿದುಬಂದಿತು. ಈಗ ಅದು ಮೀತಿ ಮೀರಿದ್ದರಿಂದ ಆ ಹೇಳಿಕೆಯನ್ನು ಹಿಂಪಡೆಯುವುದಾಗಿ ಹೇಳಿದ್ದಾರೆ ಕಸ್ತೂರಿ.

ಅಷ್ಟಕ್ಕೂ ಕಸ್ತೂರಿ ತೆಲುಗು ಭಾಷಿಕರ ಬಗ್ಗೆ ಹೇಳಿದ್ದೇನು?

ಬ್ರಾಹ್ಮಣರ ರಕ್ಷಣೆಗಾಗಿ ವಿಶೇಷ ಕಾನೂನಿಗೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಕಸ್ತೂರಿ, ಮಾತಿನ ಭರದಲ್ಲಿ, "300 ವರ್ಷಗಳ ಹಿಂದೆ ರಾಜನ ಸಂಗಾತಿಯ ಸಹಾಯಕರಾಗಿ ತೆಲುಗು ಮಂದಿ ತಮಿಳುನಾಡಿಗೆ ಬಂದಿದ್ದರು. ಅದಾದ ಬಳಿಕ ತಮಿಳಿಗರು ಎಂದು ತಮ್ಮ ಐಡೆಂಟಿಟಿಯನ್ನು ಬಲಪಡಿಸಿಕೊಂಡರು" ಎಂದು ಕಸ್ತೂರಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ತೆಲುಗು ಮಂದಿಯ ಅಸ್ಮಿತೆಗೆ ಕಿಚ್ಚು ಹಚ್ಚಿತು. ವ್ಯಾಪಕ ಟೀಕೆಗಳು ಕೇಳಿಬಂದವು. ಹೀಗೆ ನಟಿಯ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ, ಇದೇ ಘಟನೆಗೆ ರಾಜಕೀಯ ಅಂಟಿಕೊಂಡಿತು. "ಇಲ್ಲ ನಾನು ಹಾಗೇ ಹೇಳಿಲ್ಲ. ನನ್ನ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಿರುಚಲಾಗಿದೆ" ಎಂದೂ ಸಮಜಾಯಿಷಿ ಕೊಟ್ಟಿದ್ದಾರೆ ಕಸ್ತೂರಿ.

ನಟಿಯ ವಿರುದ್ಧ ದೂರು ದಾಖಲು

ತೆಲುಗು ಮಾತನಾಡುವ ದ್ರಾವಿಡವಾದಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ಅಖಿಲ ಭಾರತ ತೆಲುಗು ಒಕ್ಕೂಟ ನಟಿ ಕಸ್ತೂರಿ ಶಂಕರ್‌ ವಿರುದ್ಧ ಚೆನೈನ ಎಗ್ಮೋರ್‌ ಪೊಲೀಸ್‌ ಠಾಣೆ ಸೇರಿ ಮಧುರೈನಲ್ಲಿಯೂ ದೂರು ದಾಖಲಾಗಿವೆ. ಈ ದೂರಿನ ಹಿನ್ನೆಯಲ್ಲಿ ಕಸ್ತೂರಿ ಶಂಕರ್‌ ವಿರುದ್ಧ ಕೇಸ್‌ ಸಹ ದಾಖಲಾಗಿವೆ. ವಿಚಾರಣೆಗೆ ನೋಟೀಸ್‌ ಸಹ ನೀಡಲಾಗಿದೆ.

ಕ್ಷಮೆ ಕೇಳಿದ ಕಸ್ತೂರಿ ಶಂಕರ್

ಹೀಗೆ ವಿರೋಧದ ಕಿಡಿ ಹೊತ್ತಿಕೊಳ್ಳುತ್ತಿದ್ದಂತೆ, ತೆಲುಗು ಸಮುದಾಯಕ್ಕೆ ಕ್ಷಮೆ ಕೋರಿದ್ದಾರೆ. "ನಾನು ತೆಲುಗು ಭಾಷೆಯೊಂದಿಗೆ ವಿಶೇಷ ಬಾಂಧವ್ಯ ಹೊಂದಿರುವುದು ನನ್ನ ಸೌಭಾಗ್ಯ. ತೆಲುಗು ಜನ ನನಗೆ ಹೆಸರು, ಪ್ರತಿಷ್ಠೆ, ಕುಟುಂಬವನ್ನು ಕೊಟ್ಟಿದ್ದಾರೆ. ವಿಶೇಷವಾಗಿ ನಾನು ಕೆಲವರ ಬಗ್ಗೆ ಮಾತನಾಡಿದ್ದೇನೆಯೇ ಹೊರತು. ಎಲ್ಲ ತೆಲುಗಿನವರ ಬಗ್ಗೆ ಅಲ್ಲ. ನನ್ನ ಮಾತಿನ ಮೂಲಕ ತೆಲುಗು ಕುಟುಂಬಗಳನ್ನು ನೋಯಿಸುವುದು ನನ್ನ ಉದ್ದೇಶವಲ್ಲ" ಎಂದು ಆಡಿದ ಮಾತುಗಳಿಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡು ವಿಷಾದ ವ್ಯಕ್ತಪಡಿಸಿದ್ದಾರೆ.‌

ಈ ಹಿಂದೆ ಶಿವಸೇನೆ ಕೂಡ ಮಹಾರಾಷ್ಟ್ರದಲ್ಲಿ ಹಿಂದುತ್ವದ ಹೆಸರಿನಲ್ಲಿ ಮರಾಠಿಯೇತರರನ್ನು, ಅದರಲ್ಲೂ ತೆಲುಗು ಜನರನ್ನು ನಿಂದಿಸಿ ಗಲಾಟೆ ಮಾಡಿತ್ತು. ಇದೀಗ ಕಸ್ತೂರಿ ಶಂಕರ್‌ ಅಂತಹ ದುಷ್ಕೃತ್ಯ ಎಸಗಿದ್ದಾರೆ. ಆಕೆಯ ವಿರುದ್ಧ ಬಿಜೆಪಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ತಮಿಳು ಸಮುದಾಯದಲ್ಲಿ ತೆಲುಗು ಜನರ ಬಗ್ಗೆ ಅಪಪ್ರಚಾರ ಮಾಡುವ ಅಪಾಯವಿದೆ" ಎಂದೂ ನಟಿಯ ವಿರುದ್ಧ ಕೆಲವರು ಒತ್ತಾಯಿಸುತ್ತಿದ್ದಾರೆ.

Whats_app_banner