Film city in Mysore: ಮೈಸೂರಿನಲ್ಲಿ ಫಿಲ್ಮ್ ಸಿಟಿ ಆಗಬೇಕೆಂಬುದು ಎಲ್ಲರ ಕನಸು..ಸಿಎಂಗೆ ಮನವಿ ಸಲ್ಲಿಸಿದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು
ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿ ಪತ್ರಕ್ಕೆ ಶಿವರಾಜ್‌ಕುಮಾರ್, ರಾಕ್ ಲೈನ್ ವೆಂಕಟೇಶ್, ನಾಗತಿಹಳ್ಳಿ ಚಂದ್ರಶೇಖರ್, ಪಿ. ಶೇಷಾದ್ರಿ ಸೇರಿದಂತೆ 20 ಅಧಿಕ ಗಣ್ಯರು ಸಹಿ ಮಾಡಿದ್ದಾರೆ. ಬಾಲಿವುಡ್ ಖ್ಯಾತ ನಟರಾದ ಧರ್ಮೇಂದ್ರ, ಹೇಮಮಾಲಿನಿ ಕೂಡಾ ಸಹಿ ಮಾಡಿ, ಒಂದು ಪತ್ರ ಕಳಿಹಿಸಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಒಂದು ಫಿಲ್ಮ್ ಸಿಟಿ ಬೇಕು ಎಂಬ ಬೇಡಿಕೆ ಬಹಳ ವರ್ಷಗಳಿಂದ ಕೇಳಿಬರುತ್ತಿದೆ. ಮೈಸೂರು ಅಥವಾ ಬೆಂಗಳೂರು, ಎಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡಬೇಕು ಎನ್ನುವ ಗೊಂದಲ ಇಂದಿಗೂ ಪರಿಹಾರವಾಗಿಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗ ಬೆಂಗಳೂರಿನ ಹೆಸರಘಟ್ಟದಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ ನಿರ್ಧರಿಸಿ ಬಜೆಟ್‌ನಲ್ಲಿ ಒಂದಿಷ್ಟು ಅನುದಾನವನ್ನು ಕೂಡಾ ಘೋಷಿಸಿದ್ದರು. ಆದರೆ ಇದೀಗ ಮತ್ತೆ ಮೈಸೂರು ಹೆಸರು ಕೇಳಿಬರುತ್ತಿದೆ.
ಪಶುಸಂಗೋಪನೆ ಇಲಾಖೆಗೆ ಸೇರಿದ ಜಾಗದಲ್ಲಿ 150 ಎಕರೆ ಜಾಗವನ್ನು ಫಿಲ್ಮ್ ಸಿಟಿ ನಿರ್ಮಾಣಕ್ಕೆ ನೀಡುತ್ತಿರುವುದಾಗಿ ಘೋಷಣೆಯಾಗಿ 3 ವರ್ಷಗಳೇ ಕಳೆದಿವೆ. ಆದರೆ ಫಿಲ್ಮ್ ಸಿಟಿ ನಿರ್ಮಾಣದ ಕೆಲಸ ಆರಂಭವಾಗುವ ಯಾವುದೇ ಮುನ್ಸೂಚನೆ ಇಲ್ಲ. ಸಾಂಸ್ಕೃತಿಕ ನಗರಿ ಮೈಸೂರು ಚಿತ್ರರಂಗದ ಗಣ್ಯರು ಬಹಳ ಇಷ್ಟಪಡುವ ಸ್ಥಳ. ಮೈಸೂರಿನ ಸುತ್ತಮುತ್ತ 200ಕ್ಕೂ ಹೆಚ್ಚು ಪ್ರೇಕ್ಷಣೀಯ ಸ್ಥಳಗಳಿದೆ. ಇಂತಹ ಭವ್ಯ ಪರಂಪರೆಯುಳ್ಳ ಐತಿಹಾಸಿಕ ನಗರಿಯಲ್ಲಿ ಫಿಲ್ಮ್ ಸಿಟಿ ಸ್ಥಾಪಿಸಬೇಕೆಂಬುದು ಕನ್ನಡ ಚಿತ್ರರಂಗ ಮಾತ್ರವಲ್ಲದೆ ಹಲವು ಚಿತ್ರರಂಗದ ಗಣ್ಯರ ಅಭಿಪ್ರಾಯವಾಗಿದೆ. ಕೆಲವು ದಿನಗಳ ಹಿಂದೆ ಹಿರಿಯ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ರಾಜೇಂದ್ರಸಿಂಗ್ ಬಾಬು, ನಾಗತಿಹಳ್ಳಿ ಚಂದ್ರಶೇಖರ್, ಪಿ. ಶೇಷಾದ್ರಿ, ಕೃಷ್ಣೇಗೌಡ ಅವರನ್ನು ಒಳಗೊಂಡ ಸಮಿತಿ ಸದಸ್ಯರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಫಿಲ್ಮ್ ಸಿಟಿ ವಿಚಾರವನ್ನು ಚರ್ಚಿಸಿದ್ದರು. ಆಗ ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡುವ ವಿಷಯ ಕೂಡಾ ಪ್ರಸ್ತಾಪವಾಗಿತ್ತು. ಈ ಕುರಿತು ರಿಪೋರ್ಟ್ ಸಿದ್ದ ಮಾಡಿಕೊಡುವಂತೆ ಸಿಎಂ ಬೊಮ್ಮಾಯಿ ಕೂಡಾ ಸೂಚಿಸಿದ್ದರು.
ಗುರುವಾರ, ಕೃಷ್ಣೇಗೌಡ ಅವರ ನೇತೃತ್ವದಲ್ಲಿ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡಿಕೊಡುವಂತೆ ಮನವಿ ಸಲ್ಲಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ''ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಿಸುವುದು ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್, ಡಾ. ಅಂಬರೀಶ್ ಹಾಗೂ ಎಲ್ಲರ ಕನಸ್ಸಾಗಿತ್ತು. ತೆಲುಗು, ತಮಿಳು, ಹಿಂದಿ ಸಿನಿಮಾ ತಂತ್ರಜ್ಞರಿಗೂ ಮೈಸೂರು ಮೆಚ್ಚಿನ ತಾಣ. ಇಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿ ಪತ್ರಕ್ಕೆ ಶಿವರಾಜ್‌ಕುಮಾರ್, ರಾಕ್ ಲೈನ್ ವೆಂಕಟೇಶ್, ನಾಗತಿಹಳ್ಳಿ ಚಂದ್ರಶೇಖರ್, ಪಿ. ಶೇಷಾದ್ರಿ ಸೇರಿದಂತೆ 20 ಅಧಿಕ ಗಣ್ಯರು ಸಹಿ ಮಾಡಿದ್ದಾರೆ. ಬಾಲಿವುಡ್ ಖ್ಯಾತ ನಟರಾದ ಧರ್ಮೇಂದ್ರ, ಹೇಮಮಾಲಿನಿ ಕೂಡಾ ಸಹಿ ಮಾಡಿ, ಒಂದು ಪತ್ರ ಕಳಿಹಿಸಿದ್ದಾರೆ. ಧರ್ಮೇಂದ್ರ ಅವರ ಸಿನಿ ಕರಿಯರ್ ಆರಂಭವಾಗಿದ್ದು ಮೈಸೂರಿನಲ್ಲೇ ಆದ್ದರಿಂದ ಅವರಿಗೂ ಈ ಸ್ಥಳ ಬಹಳ ಅಚ್ಚುಮೆಚ್ಚು'' ಎಂದು ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸ್ವಂತ ಖರ್ಚಿನಲ್ಲಿ ಫಿಲ್ಮ್ ಸಿಟಿ ನಿರ್ಮಿಸುತ್ತಿರುವ ನಿರ್ಮಾಪಕ ಉಮಾಪತಿ
ಸರ್ಕಾರದಿಂದ ಘೋಷಣೆಯಾಗಿರುವ ಫಿಲ್ಮ್ ಸಿಟಿ ಯಾವಾಗ ಆರಂಭವಾಗುತ್ತದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಆದರೆ ನಿರ್ಮಾಪಕ ಉಮಾಪತಿ ಮಾತ್ರ ತಮ್ಮ ಕನಸಿನ ಫಿಲ್ಮ್ ಸಿಟಿ ನಿರ್ಮಾಣದ ಆಸೆಯನ್ನು ನನಸು ಮಾಡಿಕೊಳ್ಳಲು ಹೊರಟಿದ್ದಾರೆ. ಸಿನಿಮಾ ನಿರ್ಮಾಣದ ಜೊತೆಗೆ ಉಮಾಪತಿ ಬೆಂಗಳೂರಿನ ಕನಕಪುರ ರಸ್ತೆಯ ಸುಮಾರು 25 ಎಕರೆ ಪ್ರದೇಶದಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡುತ್ತಿದ್ದಾರೆ. 2021 ಆಗಸ್ಟ್ನಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದಾರೆ. 175 ಕೋಟಿ ರೂಪಾಯಿ ಸ್ವಂತ ಖರ್ಚಿನಲ್ಲಿ ಉಮಾಪತಿ ಈ ಫಿಲ್ಮ್ ಸಿಟಿ ನಿರ್ಮಾಣ ಮಾಡುತ್ತಿದ್ದಾರೆ ಎನ್ನಲಾಗಿದೆ.