Kannada Rajyotsava: ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ; ಕನ್ನಡ ರಾಜ್ಯೋತ್ಸವದ ಸಂಭ್ರಮ ಹೆಚ್ಚಿಸುವ 10 ಕನ್ನಡ ಚಿತ್ರಗೀತೆಗಳಿವು
Top 10 Kannada Songs for Rajyotsava: ನವೆಂಬರ್ 1 ಕನ್ನಡ ರಾಜ್ಯೋತ್ಸವ. ಎಲ್ಲೆಡೆ ಕನ್ನಡದ ಕಂಪು ಸಾರುವ ಹಾಡುಗಳು ಕೇಳುತ್ತವೆ. ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಆಲಿಸಲು 10 ಅತ್ಯುತ್ತಮ ಕನ್ನಡ ಚಿತ್ರಗೀತೆಗಳನ್ನು ನೀವು ಹುಡುಕುತ್ತಿರಬಹುದು. ಕೇಳಿಸದೇ ಕಲ್ಲು ಕಲ್ಲಿನಲ್ಲಿ ಕನ್ನಡ ನುಡಿ ಇತ್ಯಾದಿ ಹಲವು ಹಾಡುಗಳು ಎಂದೆಂದಿಗೂ ಕೇಳಲು ಸೂಕ್ತವಾಗಿದೆ.
ನವೆಂಬರ್ 1 ಬಂತೆಂದರೆ ಎಲ್ಲೆಡೆ ಕನ್ನಡ ರಾಜ್ಯೋತ್ಸವದ ಸಂಭ್ರಮ. ಕನ್ನಡಿಗರ ಮೈಮನದಲ್ಲಿ ಏನೋ ಪುಳಕ. ಬೆಂಗಳೂರಿನಂತಹ ನಗರಗಳಲ್ಲಿ ಎಲ್ಲೆಲ್ಲೂ ಕನ್ನಡದ ಚಿತ್ರಗೀತೆಗಳು ಕೇಳುತ್ತ ಇರುತ್ತವೆ. ನವೆಂಬರ್ ಪೂರ್ತಿ ಈ ಹಬ್ಬದ ವಾತಾವರಣ ಇರುತ್ತದೆ. ಈ ಕನ್ನಡ ಹಬ್ಬದ ಶುಭ ಸಂದರ್ಭದಲ್ಲಿ ಅತ್ಯುತ್ತಮ ಕನ್ನಡ ಹಾಡುಗಳನ್ನು ನೀವು ಹುಡುಕುತ್ತಿರಬಹುದು. ಕನ್ನಡದ ಬಹುತೇಕ ಸಿನಿಮಾಗಳಲ್ಲಿ ಕನ್ನಡ ಪ್ರೇಮ ಗಾಢವಾಗಿದೆ. ಡಾ. ರಾಜ್ ಕುಮಾರ್ ಸಿನಿಮಾಗಳಲ್ಲಿಯಂತೂ ಕನ್ನಡ ಭಾಷೆಯ ಸೊಬಗು ಬೇರೆಯದ್ದೇ ರೀತಿಯಾಗಿರುತ್ತದೆ. ಕನ್ನಡ ಸಿನಿಮಾ ಸಾಹಿತ್ಯದಲ್ಲಿ ಹಲವು ಗೀತೆಗಳು ಕನ್ನಡದ ಇಂಪನ್ನು ಸಾರಿವೆ. ಹಳೆಯ ಚಲನಚಿತ್ರಗೀತೆಗಳು ಇರಲಿ, ಹೊಸ ಸಿನಿಮಾ ಆಗಿರಲಿ, ಎಲ್ಲೆಲ್ಲೂ ಕನ್ನಡದ ಸೊಬಗು ಇರುತ್ತದೆ. ಕನ್ನಡ ಭಾಷೆಯ ಮೇಲಿನ ಪ್ರೀತಿಯ ನೂರಾರು ಹಾಡುಗಳು ಇವೆ. ಅವುಗಳಲ್ಲಿ ಹತ್ತು ಪ್ರಮುಖ ಹಾಡುಗಳ ವಿವರ ಇಲ್ಲಿ ನೀಡಲಾಗಿದೆ.
ಜೇನಿನ ಹೊಳೆಯೋ ಹಾಲಿನ ಮಳೆಯೋ
ಚಲಿಸುವ ಮೋಡಗಳು ಸಿನಿಮಾದ ಜೇನಿನ ಹೊಳೆಯೋ ಹಾಲಿನ ಮಳೆಯೋ ಸುಧೆಯೋ ಕನ್ನಡ ಸವಿ ನುಡಿಯೋ ಎಂಬ ಹಾಡನ್ನು ಮರೆಯುವುದುಂಟೆ. ಡಾ. ರಾಜ್ ಕುಮಾರ್ ಮಧುರ ಧ್ವನಿಯಲ್ಲಿ, ರಾಜನ್ ನಾಗೇಂದ್ರ ಸಂಗೀತ ಸಂಯೋಜನೆಯಲ್ಲಿ ಈ ಹಾಡು ಮೂಡಿ ಬಂದಿದೆ. ಇದು 1982ರಲ್ಲಿ ತೆರೆಕಂಡ ಚಿತ್ರ.
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು
ಡಾ. ರಾಜ್‌ಕುಮಾರ್ ಹಾಡಿರುವ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡು ಕೇಳದೆ ಇದ್ದರೆ ಕನ್ನಡ ರಾಜ್ಯೋತ್ಸವ ಅಪೂರ್ಣ. ಹಂಸಲೇಖ ಸಾಹಿತ್ಯ ಮತ್ತು ಸಂಗೀತವಿರುವ ಈ ಹಾಡನ್ನು ಮಾಧುರ್ಯ, ಸಾಹಿತ್ಯ ಅದ್ಭುತವಾಗಿದೆ. ಇದು 1993ರಲ್ಲಿ ತೆರೆಕಂಡ ಚಲನಚಿತ್ರ.
ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ
ಅಂಬರೀಶ್ ನಟಿಸಿದ ಸೋಲಿಲ್ಲದ ಸರದಾರ ಚಿತ್ರದ ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ ಹಾಡಿನಲ್ಲಿ ಕನ್ನಡ ನಾಡಿನ ಸೊಬಗನ್ನು ವರ್ಣಿಸಲಾಗಿದೆ. ಎಸ್ ಪಿ ಬಾಲಸುಬ್ರಮಣ್ಯಂ ಈ ಹಾಡು ಹಾಡಿದ್ದು, ಹಂಸಲೇಖ ಸಾಹಿತ್ಯ ಮತ್ತು ಸಂಗೀತದ ಈ ಹಾಡು ಎಷ್ಟು ಬಾರಿ ಕೇಳಿದರೂ ಸಾಕಾಗದು. ಕನ್ನಡ ರೋಮಾಂಚನ ಈ ಕನ್ನಡ ಕಸ್ತೂರಿ ನುಡಿ ಇದು ಕರುನಾಡು ಮಣ್ಣಿದು ಚಿಂತಿಸು ವಂದಿಸು ಪೂಜಿಸು.. ಪೂಜಿಸು.. ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ ಓ ಅಭಿಮಾನಿ ಈ ಮಣ್ಣಿನ ಹೆಣ್ಣನು ಜರಿಬೇಡ ಓ ಅಭಿಮಾನಿ ಓ ಅಭಿಮಾನಿ ಸುಸಂಸ್ಕೃತ ಚರಿತೆಯ ತಾಯ್ನಾಡು ಮಹೋನ್ನತ ಕಲೆಗಳ ನೆಲೆ ಬಿಡು ಕೆಡಿಸದಿರು ಈ ಹೆಸರ.. ಈ ಹೆಸರ.. ಹಾಡನ್ನು ಈ ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ಮತ್ತೆ ಕೇಳಿರಿ.
ಕನ್ನಡ ನಾಡಿನ ವೀರರ ಮಣಿಯ
ಇದು ನಾಗರ ಹಾವು ಸಿನಿಮಾದ ಹಾಡು. 1972ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ಚಿತ್ರದಲ್ಲಿ ಕನ್ನಡ ನಾಡಿನ ವೀರರ ಮಣಿಯ ಗಂಡು ಭೂಮಿಯ ವೀರನಾರಿಯ ಚರಿತೆಯ ನಾನು ಹಾಡುವೆ ಎಂಬ ಹಾಡು ಕೇಳಿದಾಗ ಕರುನಾಡಿನ ಕುರಿತು ಪ್ರೀತಿ ಇನ್ನಷ್ಟು ಹೆಚ್ಚುತ್ತದೆ.
ಕೇಳಿಸದೇ ಕಲ್ಲು ಕಲ್ಲಿನಲ್ಲಿ
ವಿಷ್ಣುವರ್ಧನ್ ನಟಿಸಿದ ಬೆಳ್ಳಿ ಕಾಲುಂಗುರ ಚಿತ್ರದ ಮಧುರ ಗೀತೆಯಿದು. ಹಂಸಲೇಖ ಸಂಗೀತವಿರುವ ಈ ಹಾಡಿಗೆ ಎಸ್‌ಪಿ ಬಾಲಸುಬ್ರಹ್ಮಣ್ಯಂ ಮತ್ತು ಚಿತ್ರ ಧ್ವನಿಯಾಗಿದ್ದಾರೆ. ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ ಎಂಬ ಹಾಡನ್ನು ಈ ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ಕೇಳದೆ ಇರಬೇಡಿ.
ಕರುನಾಡೆ ಕೈ ಚಾಚಿದೆ ನೋಡೇ
ರವಿಚಂದ್ರನ್ ಅಭಿನಯದ ಮಲ್ಲ ಚಿತ್ರದ ಕರುನಾಡೆ ಕೈ ಚಾಚಿದೆ ನೋಡೆ ಎಂಬ ಹಾಡು ಕೂಡ ಮಧುರವಾಗಿದೆ. ಈ ಹಾಡನ್ನು ಸ್ವತಃ ರವಿಚಂದ್ರನ್ ರಚಿಸಿ ಸಂಗೀತ ನೀಡಿರುವುದು ವಿಶೇಷ. ಕರುನಾಡೇ ಕೈ ಚಾಚಿದೆ ನೋಡೆ ಹಸಿರುಗಳೇ ಆ ತೋರಣಗಳೇ ಬೀಸೋ ಗಾಳಿ ಚಾಮರ ಬೀಸಿದೆ ಹಾಡೋ ಹಕ್ಕಿ ಸ್ವಾಗತ ಕೋರಿದೇ ಈ ಮಣ್ಣಿನಾ ಕೂಸು ನಾ ಕರುನಾಡೇ ಎದೆ ಹಾಸಿದೆ ನೋಡೆ ಹೂವುಗಳೇ ಶುಭ ಕೋರಿವೆ ನೋಡೆ ಎಂಬ ಹಾಡನ್ನು ಮತ್ತೊಮ್ಮೆ ಕೇಳಲು ಮರೆಯಬೇಡಿ.
ಕರುನಾಡ ತಾಯಿ ಸದಾ ಚಿನ್ಮಯಿ
ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ಕನ್ನಡಿಗರು ಕೇಳಲು ಬಯಸುವ ಇನ್ನೊಂದು ಹಾಡಿದು. ರವಿಚಂದ್ರನ್ ನಟನೆಯ ನಾನು ನನ್ನ ಹೆಂಡ್ತಿ ಚಿತ್ರದ ಮಧುರ ಗೀತೆಯಿದು. ಹಂಸಲೇಖ ಸಾಹಿತ್ಯದ ಈ ಹಾಡಿಗೆ ಎಸ್‌ಪಿ ಬಾಲಸುಬ್ರಹ್ಮಣ್ಯಂ ಧ್ವನಿಯಾಗಿದ್ದಾರೆ. "ಕರುನಾಡ ತಾಯಿ ಸದಾ ಚಿನ್ಮಯಿ, ಕರುನಾಡ ತಾಯಿ ಸದಾ ಚಿನ್ಮಯಿ, ಈ ಪುಣ್ಯ ಭೂಮಿ ನಮ್ಮ ದೇವಾಲಯ ಪ್ರೇಮಲಯಾ ಈ ದೇವಾಲಯ, ಕರುನಾಡ ತಾಯಿ ಸದಾ ಚಿನ್ಮಯಿ ಕರುನಾಡ ತಾಯಿ ಸದಾ ಚಿನ್ಮಯಿ ವೀರ ಧೀರರಾಳಿದ ನಾಡು ನಿನ್ನದು ಶಾಂತಿ ಮಂತ್ರ ಪಾಡಿದ ಬೀಡು ನಿನ್ನದು ವರ ಸಾಧು ಸಂತರ ನೆಲೆ ನಿನ್ನದು ಮಹಾಶಿಲ್ಪಕಾರರ ಕಲೆ ನಿನ್ನದು ಸಂಗೀತ ಸಾಹಿತ್ಯ ಸೆಲೆ ನಿನ್ನದು" ಎಂಬ ಹಾಡನ್ನು ಈ ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ಆಲಿಸಿರಿ.
ನಾನು ಕನ್ನಡದ ಕಂದ
ಹಂಸಲೇಖ ಸಾಹಿತ್ಯದ ನಾನು ಕನ್ನಡದ ಕಂದ ಹಾಡು ಕೂಡ ಮಧುರವಾಗಿದೆ. ಎಕೆ 47 ಚಿತ್ರದ ಈ ಹಾಡನ್ನು ಕೆಜೆ ಯೇಸುದಾಸ್ ಹಾಡಿದ್ದರು. ಅಮ್ಮಾ… ನಾನು ಕನ್ನಡದ ಕಂದ ಬಂದೆ ಶಾಂತಿಯ ಮಣ್ಣಿಂದ ನಾನು ಕನ್ನಡದ ಕಂದ ಬಂದೆ ಶಾಂತಿಯ ಮಣ್ಣಿಂದ ನಮ್ಮಮ್ಮ ಕನ್ನಡತಿ ಅವಳಮ್ಮ ಜಯ ಭಾರತಿ ಏಕತೆಯೆ ನಮ್ಮುಸಿರು ಸಹಬಾಳ್ವೆ ನಮ್ಮ ಒಡಲು ನಿನ್ನ ಎದೆ ಆಳದ ಈ ಪಲ್ಲವಿ ಬಿಡೆನು ಭಾವದ ಎದೆ ತಾಳ ಶ್ರುತಿ ತಪ್ಪಲು ಬಿಡೆನು ಎಂಬ ಹಾಡನ್ನು ಆಲಿಸಲು ಮರೆಯದಿರಿ.
ಜೀವ ಕನ್ನಡ ದೇಹ ಕನ್ನಡ
ದಿವಂಗತ ಪುನೀತ್ ರಾಜ್ ಕುಮಾರ್ ನಟಿಸಿದ ಹಲವು ಸಿನಿಮಾಗಳಲ್ಲಿ ಕನ್ನಡ ಭಾಷೆ, ಕನ್ನಡ ನಾಡಿನ ಸೊಗಸನ್ನು ವರ್ಣಿಸಲಾಗಿದೆ. ವೀರ ಕನ್ನಡಿಗ ಚಿತ್ರ ಜೀವ ಕನ್ನಡ ದೇಹ ಕನ್ನಡ ಕೇಳಲು ಮರೆಯಬೇಡಿ.
ಕರ್ನಾಟಕದ ಇತಿಹಾಸದಲ್ಲಿ
ಕೃಷ್ಣ ರುಕ್ಮಿಣಿ ಚಿತ್ರದ ಕರ್ನಾಟಕದ ಇತಿಹಾಸದಲ್ಲಿ ಎಂಬ ಹಾಡು ಕರ್ನಾಟಕದ ಇತಿಹಾಸವನ್ನು ಕೊಂಡಾಡುತ್ತದೆ. ಕರ್ನಾಟಕದ ಇತಿಹಾಸದಲಿ ಬಂಗಾರದ ಯುಗದ ಕಥೆಯನ್ನು ಹಾಡುವೆ ಕೇಳಿ ನಾ ಹಾಡುವೆ ಕೇಳಿ ಹಾಡುವೆ ಕೇಳಿ ನಾ ಹಾಡುವೆ ಕೇಳಿ ಕರ್ನಾಟಕದ ಇತಿಹಾಸದಲಿ ಜ್ಞಾನದ ಜ್ಯೋತಿಯು ವಿದ್ಯಾರಣ್ಯರು ಆನುಗ್ರಹಗೈದ ಭೂಮಿ ಇದು ಜ್ಞಾನದ ಜ್ಯೋತಿಯು ವಿದ್ಯಾರಣ್ಯರು ಆನುಗ್ರಹಗೈದ ಭೂಮಿ ಇದು ಹಕ್ಕ ಬುಕ್ಕರು ಆಳಿದರಿಲ್ಲಿ ಹರುಷದ ಮಳೆಯನ್ನು ಎಲ್ಲು ಚೆಲ್ಲಿ ವಿಜಯದ ಕಹಳೆಯ ಊದಿದರು ವಿಜಯನಗರ ಸ್ಥಾಪನೆ ಮಾಡಿದರು ಎಂಬ ಹಾಡನ್ನು ಕೇಳಲು ಮರೆಯಬೇಡಿ.
ಇವು ಉದಾಹರಣೆಯಾಗಿ ನೀಡಿರುವ ಹತ್ತು ಕನ್ನಡ ಹಾಡುಗಳು. ಇವೆಲ್ಲದೇ ಇನ್ನೂ ಹತ್ತು ಹಲವು ಕನ್ನಡ ಭಾಷಾ ಪ್ರೇಮ, ಕರ್ನಾಟಕ ನಾಡು ನುಡಿಯ ಮಹತ್ವ ಸಾರುವ ಹಾಡುಗಳು ಇವೆ. ಇಂತಹ ಹಾಡುಗಳು ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸುತ್ತವೆ.