Bhagyalakshmi Serial: ತಪ್ಪಿನ ಮೇಲೆ ತಪ್ಪು ಮಾಡ್ತಿದ್ರೂ ತಾಂಡವ್‌ ದೂರುವುದು ಹೆಂಡತಿ ಭಾಗ್ಯಾಳನ್ನು ಮಾತ್ರ; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: ತಪ್ಪಿನ ಮೇಲೆ ತಪ್ಪು ಮಾಡ್ತಿದ್ರೂ ತಾಂಡವ್‌ ದೂರುವುದು ಹೆಂಡತಿ ಭಾಗ್ಯಾಳನ್ನು ಮಾತ್ರ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ತಪ್ಪಿನ ಮೇಲೆ ತಪ್ಪು ಮಾಡ್ತಿದ್ರೂ ತಾಂಡವ್‌ ದೂರುವುದು ಹೆಂಡತಿ ಭಾಗ್ಯಾಳನ್ನು ಮಾತ್ರ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial Today Episode: ಕಲರ್ಸ್‌ ಕನ್ನಡದ ಭಾಗ್ಯಲಕ್ಷ್ಮೀ ಧಾರಾವಾಹಿಯ ಜ 16ರ ಎಪಿಸೋಡ್‌ ಬಹಳ ಕುತೂಹಲಭರಿತವಾಗಿತ್ತು. ಮಗಳನ್ನು ನೋಡಲು ಅಡ್ಡಿ ಪಡಿಸಿದ ಭಾಗ್ಯಾ, ಅಮ್ಮನ ಮೇಲೆ ತಾಂಡವ್‌ ಕೋಪಗೊಳ್ಳುತ್ತಾನೆ. ತನ್ನದೇ ರಾಶಿ ರಾಶಿ ತಪ್ಪಿದ್ದರೂ ತಾಂಡವ್‌ ಹೆಂಡತಿಯನ್ನು ದೂರುತ್ತಾನೆ.

ಭಾಗ್ಯಲಕ್ಷ್ಮೀ ಧಾರಾವಾಹಿಯ ಜ 16ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿಯ ಜ 16ರ ಎಪಿಸೋಡ್‌ (PC: Colors Kannada)

Bhagyalakshmi Kannada Serial: ಮಗಳು ತನ್ವಿಗೆ ಆಕ್ಸಿಡೆಂಟ್‌ ಆಗಿರುವ ವಿಚಾರ ತಿಳಿದ ತಾಂಡವ್‌, ಮಗಳನ್ನು ನೋಡಲು ಓಡೋಡಿ ಬರುತ್ತಾನೆ. ಕಿಟಕಿ ಮೂಲಕ ಅಪ್ಪನನ್ನು ನೋಡುವ ತನ್ವಿ ಆತನ ಮೇಲೆ ಕೋಪ ವ್ಯಕ್ತಪಡಿಸುತ್ತಾಳೆ. ಅಪ್ಪನನ್ನು ಕಂಡು ಮಗಳು ಈ ರೀತಿ ವರ್ತಿಸುತ್ತಿರುವುದನ್ನು ನೋಡಿದ ಭಾಗ್ಯಾ ಮಗಳನ್ನು ರೂಮ್‌ನಲ್ಲೇ ಬಿಟ್ಟು ಕೆಳಗಿಳಿದು ಬರುತ್ತಾಳೆ.

ಅಡ್ಡ ಹಾಕಿದ ಭಾಗ್ಯಾ ಮೇಲೆ ತಾಂಡವ್‌ ಆವಾಜ್

ಮನೆ ಒಳಗೆ ಬರಲು ಅಡ್ಡಿಪಡಿಸಿದ ಅಮ್ಮನನ್ನು ತಳ್ಳಿ ತಾಂಡವ್‌ ಒಳಗೆ ಬರುತ್ತಾನೆ. ಆದರೆ ನಂತರ ಭಾಗ್ಯಾ ಗಂಡನನ್ನು ತಡೆಯುತ್ತಾಳೆ. ಮಗಳನ್ನು ನೋಡಲು ಬಿಡದ ಹೆಂಡತಿ ಮೇಲೆ ತಾಂಡವ್‌ ಕೋಪಗೊಳ್ಳುತ್ತಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ವಾದ ವಿವಾದ ನಡೆಯುತ್ತದೆ. ನನ್ನ ಮಗಳನ್ನು ನೋಡಲು ನನ್ನನ್ನು ತಡೆಯುತ್ತೀಯ ಎಷ್ಟು ಧೈರ್ಯ ಎಂದು ತಾಂಡವ್‌ ಭಾಗ್ಯಾ ಜೊತೆ ಏರುದನಿಯಲ್ಲಿ ಮಾತನಾಡುತ್ತಾನೆ. ಆದರೆ ಪದೇ ಪದೆ ನೋವು ತಿಂದಿರುವ ಭಾಗ್ಯಾ ಇನ್ನು ಗಂಡನಿಗೆ ಹೆದರುವ ಮಾತೇ ಇಲ್ಲ. ಮಗಳಿಗೆ ಅಪಘಾತವಾದಾಗ ಬರದವರು ಈಗ ಏಕೆ ಬಂದ್ರಿ? ನಿಮಗೆ ವಿಚಾರ ತಿಳಿಸಲು ಎಷ್ಟು ಬಾರಿ ಕಾಲ್‌ ಮಾಡಿದ್ದೆ, ಎಷ್ಟು ಮೆಸೇಜ್‌ ಮಾಡಿದ್ದೆ ಅದ್ಯಾವುದನ್ನು ನೋಡಲು ನಿಮಗೆ ಸಮಯವೇ ಇರಲಿಲ್ಲವಾ? ಎಂದು ಕೇಳುತ್ತಾಳೆ.

ನೀವು ಮನೆ ಬಿಟ್ಟು ಹೋದಾಗಿನಿಂದ ಎಂದೂ ನಿಮಗೆ ಕರೆ ಮಾಡದ ನಿಮ್ಮ ಅಮ್ಮ, ಇದ್ದಕ್ಕಿದ್ದಂತೆ ನಿಮಗೆ ಕರೆ ಮಾಡಿದ್ದಾರೆ ಎಂದರೆ ಏನೋ ವಿಷಯ ಇರಬೇಕು ಅಂತ ನಿಮಗೆ ಅನ್ನಿಸಲಿಲ್ವಾ? ಮಗಳಿಗೆ ರಕ್ತ ಬೇಕಿತ್ತು, ಅವಳದ್ದೂ ನಿಮ್ಮದೂ ಒಂದೇ ರಕ್ತದ ಗುಂಪು. ಒಂದು ವೇಳೆ ಅವಳಿಗೆ ರಕ್ತ ಸಿಗದಿದ್ದರೆ ಅವಳು ಇಂದು ಬದುಕಿ ಬರುತ್ತಿರಲಿಲ್ಲ. ಇದೆಲ್ಲಾ ವಿಷಯ ತಿಳಿಸೋಕೆ ನಿಮಗೆ ಕರೆ ಮಾಡಿದರೆ ನೀವು ಏಕೆ ಸ್ಪಂದಿಸಲಿಲ್ಲ. ಅಂಥ ದೊಡ್ಡ ಕೆಲಸ ಏನಿತ್ತು. ಅಪ್ಪ ದೊಡ್ಡ ಕೆಲಸದಲ್ಲಿದ್ದಾರೆ. ದಿನದ 24 ಗಂಟೆಯೂ ದುಡಿಯುತ್ತಿದ್ದಾರೆ. ಆದರೆ ಮಗಳ ಆಸ್ಪತ್ರೆ ಬಿಲ್‌ ಕಟ್ಟಲು ಆ ಅಪ್ಪನೇ ಇರಲಿಲ್ಲ. ಇಷ್ಟಕ್ಕೆಲ್ಲಾ ಆ ಕೆಲಸ ನಿಮಗೇಗೆ ಬೇಕು ಎಂದು ಭಾಗ್ಯಾ ಪ್ರಶ್ನಿಸುತ್ತಾಳೆ.‌

ಪತಿಯನ್ನು ತರಾಟೆಗೆ ತೆಗೆದುಕೊಂಡ ಭಾಗ್ಯಾ

ಭಾಗ್ಯಾ ಮಾತಿಗೆ ಕೋಪಗೊಳ್ಳುವ ತಾಂಡವ್‌, ನಿಮಗೆಲ್ಲಾ ಉತ್ತರ ಹೇಳುವ ಅಗತ್ಯ ಇಲ್ಲ, ಇಂದು ತನ್ವಿಗೆ ಈ ಪರಿಸ್ಥಿತಿ ಬಂದಿದೆ ಎಂದರೆ ಅದಕ್ಕೆ ಕಾರಣ ನೀನೇ. ನೀನೊಬ್ಬಳು ಸರಿ ಇದ್ದಿದ್ದರೆ, ಎಲ್ಲಾ ಸರಿ ಇರ್ತಿತ್ತು ಎನ್ನುತ್ತಾನೆ. ತಾಂಡವ್‌ ಮಾತು ಕೇಳಿ ಭಾಗ್ಯಾ ಗಂಡನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾಳೆ. ಸಾಕು ನಿಲ್ಲಿಸಿ, ಇನ್ನೊಂದು ಮಾತು ನಿಮ್ಮ ಬಾಯಿಂದ ಬಂದರೂ ನಾನು ಸುಮ್ಮನಿರುವುದಿಲ್ಲ. ಎಲ್ಲಾ ತಪ್ಪಿಗೂ ನಾನೇ ಹೇಗೆ ಕಾರಣ ಆಗುತ್ತೀನಿ? ಈ ರೀತಿ ಮಾತನಾಡಲು ನಿಮಗೆ ನಾಚಿಕೆ ಆಗುವುದಿಲ್ಲವಾ ಎಂದು ಏರು ದನಿಯಲ್ಲಿ ಕೇಳುತ್ತಾಳೆ.

ಇತ್ತ ಎಂಗೇಜ್‌ಮೆಂಟ್‌ ಮುಗಿಸಿಕೊಂಡು ಬೆಂಗಳೂರಿಗೆ ವಾಪಸಾಗುವ ಶ್ರೇಷ್ಠಾ, ಅಡುಗೆ ಮನೆ ಸಿಂಕ್‌ನಲ್ಲಿ ಪಾತ್ರೆಗಳ ರಾಶಿ ನೋಡಿ ಕೋಪಗೊಳ್ಳುತ್ತಾಳೆ. ಅದನ್ನು ತೊಳೆಯುವಂತೆ ಸುಂದರಿಗೆ ಹೇಳುತ್ತಿದ್ದಂತೆ ಮನೆ ಒಡತಿ ಅಲ್ಲಿಗೆ ಬರುತ್ತಾರೆ. ಸುಂದರಿ ಅಂತೂ ಸಿಕ್ಕಿದ್ದೇ ಚಾನ್ಸ್‌ ಎಂದುಕೊಂಡು ನನ್ನ ಸೊಸೆ ನನಗೆ ಕೆಲಸ ಮಾಡಲು ಹೇಳುತ್ತಾಳೆ ಎಂದು ಗೋಳು ಹೇಳಿಕೊಳ್ಳುತ್ತಾಳೆ. ಮನೆ ಓನರ್‌, ಅಲ್ಲೇ ಕುಳಿತು ಶ್ರೇಷ್ಠಾ ಕೈಯಲ್ಲೇ ಪಾತ್ರೆ ತೊಳಿಸುತ್ತಾರೆ.

ಮುಂದಿನ ಎಪಿಸೋಡ್‌; ಅಮ್ಮ, ಹೆಂಡತಿ ಅಡ್ಡಿಪಡಿಸಿದರೂ ಮಗಳ ಬಳಿ ಬರುವ ತಾಂಡವ್‌, ಅವಳ ಯೋಗಕ್ಷೇಮ ವಿಚಾರಿಸುತ್ತಾಳೆ. ಆದರೆ ತನ್ವಿ ತಾಂಡವ್‌ನನ್ನು ದೂರ ತಳ್ಳುತ್ತಾಳೆ. ನಿಮಗೆ ನಮಗಿಂಥ ಶ್ರೇಷ್ಠಾ ಆಂಟಿಯೇ ಹೆಚ್ಚು ಎನ್ನುತ್ತಾಳೆ, ಈ ಮಾತು ಕೇಳಿ ಮನೆಯವರೆಲ್ಲಾ ಗಾಬರಿ ಆಗುತ್ತಾರೆ. ಬುಧವಾರದ ಎಪಿಸೋಡ್‌ ನೋಡಲು ಧಾರಾವಾಹಿ ಪ್ರಿಯರು ಕಾಯುತ್ತಿದ್ದಾರೆ.

Whats_app_banner