ಗಹನ, ಗಂಭೀರ ವಿಚಾರಗಳಿಗೆ ಕೈ ಹಾಕಿದ ಉಪೇಂದ್ರ; ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದ ಯುಐ ಚಿತ್ರದ ವಾರ್ನರ್
UI The Movie: ಬಿಡುಗಡೆ ಆಗಿರುವ ಯುಐ ಚಿತ್ರದ ವಾರ್ನರ್ ಟೀಸರ್ ಝಲಕ್‌ನಲ್ಲಿ 2040ರ ಕಥೆಯನ್ನು ಹೇಳಲು ಹೊರಟಿದ್ದಾರೆ ನಿರ್ದೇಶಕ ಉಪೇಂದ್ರ. ಈ ಹಿಂದಿನ ಪೋಸ್ಟರ್‌ಗಳೆಲ್ಲವನ್ನು ನೋಡಿದ ಬಳಿಕ, ಈ ಸಿನಿಮಾದಲ್ಲಿ ಏನು ಹೇಳಿರಬಹುದು? ಎಂಬ ಕುತೂಹಲ ಎಲ್ಲರಲ್ಲಿಯೂ ಇತ್ತು. ಇದೀಗ ಅದೆಲ್ಲದಕ್ಕೂ ತೆರೆ ಎಳೆದಿದ್ದಾರೆ.
UI The Movie: ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ನಟಿಸಿ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಸಿನಿಮಾ ಯುಐ. ಈಗಾಗಲೇ ಹತ್ತು ಹಲವು ಕಾರಣಕ್ಕೆ ಕುತೂಹಲ ಕೆರಳಿಸಿರುವ ಈ ಸಿನಿಮಾ, ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಸಾಲಿನಲ್ಲಿದೆ. ಇನ್ನೇನು ಡಿಸೆಂಬರ್ 20ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಈ ನಡುವೆಯೇ ಡಿಸೆಂಬರ್ 2ರಂದು ವಾರ್ನರ್ ಜತೆ ಆಗಮಿಸುವುದಾಗಿ ಹೇಳಿದ್ದರು ಉಪೇಂದ್ರ. ಅದರಂತೆ, ಆ ವಾರ್ನರ್ ಕುರಿತ ಕಿರು ಝಲಕ್ ಹೊರಬಿದ್ದಿದೆ.
2040ರ ಕಥೆ
ಸದ್ಯ ಬಿಡುಗಡೆ ಆಗಿರುವ ವಾರ್ನರ್ ಟೀಸರ್ ಝಲಕ್‌ನಲ್ಲಿ 2040ರ ಕಥೆಯನ್ನು ಹೇಳಲು ಹೊರಟಿದ್ದಾರೆ ನಿರ್ದೇಶಕ ಉಪೇಂದ್ರ. ಈ ಹಿಂದಿನ ಪೋಸ್ಟರ್‌ಗಳೆಲ್ಲವನ್ನು ನೋಡಿದ ಬಳಿಕ, ಈ ಸಿನಿಮಾದಲ್ಲಿ ಏನು ಹೇಳಿರಬಹುದು? ಎಂಬ ಕುತೂಹಲ ಎಲ್ಲರಲ್ಲಿಯೂ ಇತ್ತು. ಇದೀಗ ಅದೆಲ್ಲದಕ್ಕೂ ತೆರೆ ಎಳೆದಿದ್ದಾರೆ. UI ಸಿನಿಮಾದಲ್ಲಿ ಏನಿರಲಿದೆ ಎಂಬ ಕೌತುಕಕ್ಕೆ ವಾರ್ನರ್ ಉತ್ತರ ಕೊಟ್ಟಿದ್ದಾರೆ. ಅಂದರೆ, "ವಾರ್ನರ್" ಹೆಸರಿನ ಕಿರು ಟೀಸರ್ ಬಿಡುಗಡೆ ಆಗಿದ್ದು, ಜಾಗತಿಕ ಸಮಸ್ಯೆಗಳ ಬಗ್ಗೆ ಅವರಿಲ್ಲಿ ಮಾತನಾಡಿದ್ದಾರೆ.
ಗಹನ ವಿಚಾರಗಳಿಗೆ ಕೈ ಹಾಕಿದ ಉಪ್ಪಿ
ಉಪೇಂದ್ರ ಸಿನಿಮಾಗಳು ಭಿನ್ನ ವಿಭಿನ್ನ ಎಂಬುದಕ್ಕೆ ಮತ್ತೆ ಸಾಕ್ಷಿಯ ರೂಪದಲ್ಲಿ ಹೊರಬಂದಿದೆ ಯುಐ ಸಿನಿಮಾ. ಈ ಸಿನಿಮಾದಲ್ಲಿ ಜಾಗತಿಕ ತಾಪಮಾನ, ಕೋವಿಡ್ 19, ಹಣದುಬ್ಬರ, ಎಐ ತಂತ್ರಜ್ಞಾನ ಮತ್ತು ಇತ್ತೀಚೆಗೆ ಸದ್ದು ಮಾಡಿದ ಯುದ್ಧಗಳ ಬಗ್ಗೆ ಯುಐ ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ಅದಕ್ಕೆ ತಕ್ಕಂತೆ ಸಂಪೂರ್ಣವಾಗಿ 2040ರಲ್ಲಿ ಈ ಘಟನೆ ನಡೆಯುವಂತೆ ಸೃಷ್ಟಿಸಲಾಗಿದೆ. ಇದೆಲ್ಲದರ ಜತೆಗೆ ರಾಜಕೀಯ, ಜಾತಿ ಸಮಸ್ಯೆಯೂ ದೊಡ್ಡ ಪಿಡುಗಿನಂತೆ ಕಾಣಿಸುತ್ತದೆ.
ಜಾತಿ ರಾಜಕಾರಣ
ಸರ್ವನಾಶವಾದ ನಗರದಲ್ಲಿ, ಆಹಾರಕ್ಕೆ ಪರದಾಡುತ್ತಿದ್ದವರಿಗೆ ಸರ್ಕಾರದಿಂದ ಮೂಲಭೂತ ಸೌಕರ್ಯ ಎಂಬಂತೆ, ರೈಸ್ ಬಾಲ್ ಮತ್ತು ಉಚಿತ ಮೊಬೈಲ್ ಫೋನ್‌ಗಳನ್ನು ನೀಡಲಾಗುತ್ತದೆ. ಅದೇ ಅನ್ನಕ್ಕೆ ಕಿತ್ತಾಡುವ ಗುಂಪೂ ಸಹ ಇಲ್ಲಿ ಕಾಣಿಸುತ್ತದೆ. ಜಾತಿ ಜಾತಿಗಳ ನಡುವಿನ ಜಗಳವೂ ಇಲ್ಲಿದೆ. ಪ್ರತಿಯೊಬ್ಬರಿಗೂ ಜಾತಿ ಮುದ್ರೆ ಒತ್ತಿಸಿಕೊಳ್ಳುವ ಎಂಬ ಸರ್ಕಾರದ ಕಡ್ಡಾಯ ಆದೇಶದ ಪ್ರಕಟನೆಯೂ ಇಲ್ಲಿದೆ. ಇದೆಲ್ಲದರ ನಡುವೆಯೇ ಐಷಾರಾಮಿ ಕಾರಿನಲ್ಲಿ ಆಗಮಿಸುವ ಕಥಾನಾಯಕ (ಉಪೇಂದ್ರ) ವಿರುದ್ಧ ಧಿಕ್ಕಾರವೂ ಮೊಳಗುತ್ತದೆ. "ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ" ಎಂದು ಗನ್ ತೆಗೆದು ಎಲ್ಲರನ್ನು ಶೂಟ್ ಮಾಡುತ್ತಾನೆ.
ಜೀ ಮನೋಹರನ್ ಮತ್ತು ಕೆ. ಪಿ ಶ್ರೀಕಾಂತ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ನವೀನ್ ಮನೋಹರನ್ ಈ ಸಿನಿಮಾದ ಸಹ ನಿರ್ಮಾಪಕ. ಎಚ್ ಸಿ ವೇಣು ಛಾಯಾಗ್ರಹಣ ಇರುವ ಈ ಸಿನಿಮಾಕ್ಕೆ ಬಿ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಜಯ್ ರಾಜ್ ಬಿಜಿ ಈ ಸಿನಿಮಾಕ್ಕೆ ಸಂಕಲನ ಮಾಡಿದ್ದಾರೆ. ಥ್ರಿಲ್ಲರ್ ಮಂಜು, ಚೇತನ್ ಡಿಸೋಜಾ, ರವಿ ವರ್ಮಾ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.