Bhagyalakshmi Serial: ನಿನ್ನ ಕೈಲಾದ್ರೆ ಪೊಲೀಸ್ ಕಂಪ್ಲೇಂಟ್ ಕೊಟ್ಟು ನೋಡು, ಪೂಜಾಗೆ ತಾಂಡವ್ ಸವಾಲು; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial 1st May Episode: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಮೇ 2ರ ಸಂಚಿಕೆಯಲ್ಲಿ ನಿನ್ನ ಕೈಲಾದ್ರೆ ಪೊಲೀಸ್ ಕಂಪ್ಲೇಂಟ್ ಕೊಟ್ಟು ನೋಡು, ಪೂಜಾಗೆ ತಾಂಡವ್ ಸವಾಲು ಹಾಕಿದ್ಧಾನೆ. ಭಾವನಿಗೆ ಬುದ್ಧಿ ಕಲಿಸಲು ಪೂಜಾ ಕೂಡಾ ಹೊಸ ಅಸ್ತ್ರ ಹುಡುಕಿದ್ದಾಳೆ.

Bhagyalakshmi Serial: ಪೆನ್ಶನ್ ವಿಚಾರವಾಗಿ ಕುಸುಮಾ ಬಹಳ ತಲೆ ಕೆಡಿಸಿಕೊಂಡಿದ್ದಾಳೆ. ಧರ್ಮರಾಜ್ ಸ್ನೇಹಿತರಿಗೆ ಕರೆ ಮಾಡಿ ಪೆನ್ಶನ್ ಹಣದ ಬಗ್ಗೆ ವಿಚಾರಿಸುತ್ತಿದ್ದಾಳೆ. ಮಗನ ಬಳಿ ದುಡ್ಡು ಕೇಳಬಹುದಲ್ಲಾ ಎಂಬ ಪ್ರಶ್ನೆಗೆ ಕುಸುಮಾ ಏನು ಉತ್ತರ ಹೇಳುವುದೆಂದು ತಿಳಿಯದೆ, ನನ್ನ ಮಗ ಬಹಳ ಬ್ಯುಸಿ, ಕೇಳೋಕೆ ಸಮಯ ಇಲ್ಲ ಎಂದು ಹೇಳುತ್ತಾ ತಡಬಡಾಯಿಸುತ್ತಿದ್ಧಾಳೆ.
ನಾನು ಏನು ಮಾಡಿದರೂ ಭಾವ ಜಗ್ಗುತ್ತಿಲ್ಲ, ಇವರನ್ನು ಎದುರಿಸಲು ಏನಾದರೂ ಮಾಡಲೇಬೇಕು ಎಂದು ಪೂಜಾ ಬೇಸರಗೊಳ್ಳುತ್ತಾಳೆ. ಇದೆಲ್ಲವನ್ನೂ ಇಲ್ಲೇ ಬಿಟ್ಟುಬಿಡಿ ದಯವಿಟ್ಟು, ಅಕ್ಕನಿಗೆ ನೋವು ಕೊಡಬೇಡಿ. ಇದರಿಂದ ಯಾರಿಗೂ ಒಳ್ಳೆಯದಲ್ಲ ಎಂದು ಪೂಜಾ, ತಾಂಡವ್ ಬಳಿ ಹೇಳುತ್ತಲೇ ಇದ್ದಾಳೆ. ಆದರೆ ತಾಂಡವ್ ಮಾತ್ರ ಯಾವುದಕ್ಕೂ ಹೆದರುತ್ತಲೇ ಇಲ್ಲ, ಪೂಜಾ ಎದುರು ಸವಾಲು ಹಾಕುವಷ್ಟು ಧೈರ್ಯದಿಂದ ಮೆರೆಯುತ್ತಿದ್ದಾನೆ. ಶ್ರೇಷ್ಠಾಗೆ ಡೈಮಂಡ್ ಬ್ರೇಸ್‌ಲೇಟ್ ಕೊಟ್ಟಿದ್ದರ ಬಗ್ಗೆ ಕೂಡಾ ಆತನಿಗೆ ಪಶ್ಚಾತಾಪ ಇಲ್ಲ. ನೀನು ಪೊಲೀಸ್ ಕಂಪ್ಲೇಂಟ್ ಕೊಡಲು ಸಾಧ್ಯವೇ ಇಲ್ಲ, ಏಕಂದ್ರೆ ನಾನಿನ್ನೂ ಎರಡನೇ ಮದುವೆ ಆಗೇ ಇಲ್ಲ. ಒಂದು ವೇಳೆ ನೀನು ಕಂಪ್ಲೇಂಟ್ ಕೊಡಲೇಬೇಕೆಂದಿದ್ದರೆ ಕೊಡು. ಆಗ ನಿನ್ನ ಅಕ್ಕ, ಗಂಡ ಎರಡನೇ ಮದುವೆ ಆದ ಎಂಬ ನೋವಿನಿಂದಲೇ ಏನಾದರೂ ಮಾಡಿಕೊಂಡು ಸಾಯುತ್ತಾಳೆ.
ಪದೇ ಪದೆ ಪೂಜಾಳನ್ನು ಕೆಣಕುತ್ತಿರುವ ತಾಂಡವ್
ಮೊನ್ನೆಯಿಂದ ಭಾರೀ ಹಾರಾಡುತ್ತಿದ್ದೀಯಲ್ಲ, ಹಾಗೆ ಮಾಡ್ತೀನಿ, ಹೀಗೆ ಮಾಡ್ತೀನಿ ಅಂತ, ಏನು ಮಾಡ್ತೀಯ ಅಂತ ಹೇಳು, ಅದ್ಯಾರಿಗೆ ಹೇಳ್ತಿಯೋ ಹೇಳು. ನೀನು ಏನು ಮಾಡಲು ಸಾಧ್ಯವೇ ಇಲ್ಲ, ಏಕೆಂದ್ರೆ ಇದರ ಬಗ್ಗೆ ನಿನಗೆ ಯಾರ ಮುಂದೆಯೂ ಮಾತನಾಡೋಕೆ ಸಾಧ್ಯವೇ ಇಲ್ಲ ಎಂದು ತಾಂಡವ್ ಹೇಳುತ್ತಾನೆ. ಈ ಮಾತನ್ನು ಕೇಳಿಸಿಕೊಳ್ಳುವ ಕುಸುಮಾ ಯಾವುದರ ಬಗ್ಗೆ ಮಾತನಾಡಲು ಸಾಧ್ಯವಿಲ್ಲ ಎಂದು ಪ್ರಶ್ನಿಸುತ್ತಾಳೆ. ಕುಸುಮಾ ಎಲ್ಲವನ್ನೂ ಕೇಳಿಸಿಕೊಂಡಳಾ ಎಂದು ಪೂಜಾ, ತಾಂಡವ್ ಇಬ್ಬರೂ ಶಾಕ್ ಆಗುತ್ತಾರೆ. ಇವನ ಬಳಿ ನೀನು ಏನು ಮಾತನಾಡುತ್ತಿದ್ದೀಯ ಎಂದು ಕುಸುಮಾ, ಪೂಜಾಗೆ ಕೇಳುತ್ತಾಳೆ. ಏನಿಲ್ಲ ಅತ್ತೆ ಅಕ್ಕನ ಜೀವನ ಹಾಳು ಮಾಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದೆ ಎನ್ನುತ್ತಾಳೆ. ಇವನ ಬಳಿ ಏನು ಮಾತನಾಡಿದರೂ ಪ್ರಯೋಜನವಿಲ್ಲ ಸುಮ್ಮನೆ ಹೋಗು ಎಂದು ಹೇಳಿ ಕುಸುಮಾ ಅಲ್ಲಿಂದ ಹೋಗುತ್ತಾಳೆ.
ನಾನು ಈ ವಿಚಾರದಲ್ಲಿ ಏನೂ ಮಾಡಲಾಗುತ್ತಿಲ್ಲವಲ್ಲ ಎಂದು ಪೂಜಾ ಒಬ್ಬಳೇ ಕುಳಿತು ಕಣ್ಣೀರು ಹಾಕುವಾಗ ತಾಂಡವ್, ಅಲ್ಲಿಗೂ ಬಂದು ಪೂಜಾಳನ್ನು ಕೆಣಕುತ್ತಾನೆ. ನನ್ನ ಕೈಲಿ ಏನೂ ಸಾಧ್ಯವಿಲ್ಲ ಎಂದುಕೊಳ್ಳಬೇಡಿ, ನಾನು ಏನು ಮಾಡುತ್ತೇನೆ ನೋಡುತ್ತಿರಿ, ನೀವು ಊಹೆ ಮಾಡಿಕೊಳ್ಳಲು ಕೂಡಾ ಸಾಧ್ಯವೇ ಇಲ್ಲ ಎಂದು ಪೂಜಾ ಚಾಲೆಂಜ್ ಮಾಡುತ್ತಾಳೆ.
ಕೆಲಸಕ್ಕಾಗಿ ಹುಡುಕಾಡುತ್ತಿರುವ ಭಾಗ್ಯಾ
ಇತ್ತ ಮಾರ್ಕೆಟ್‌ಗೆ ಹೋಗುವ ಭಾಗ್ಯಾ ರಸ್ತೆಯುದ್ಧಕ್ಕೂ ಕೆಲಸದ ಬಗ್ಗೆ ಯೋಚನೆ ಮಾಡಿಕೊಂಡೇ ಬರುತ್ತಾಳೆ. ರಸ್ತೆಯಲ್ಲಿ ಮರದ ಮೇಲೆ ಕೆಲಸ ಕೊಡಿಸುತ್ತೇವೆ ಎಂಬ ಜಾಹೀರಾತು ನೋಡಿ ಆ ನಂಬರಿಗೆ ಕರೆ ಮಾಡುತ್ತಾಳೆ. ಆದರೆ ಕಾಲ್ ರಿಸೀವ್ ಮಾಡುವ ವ್ಯಕ್ತಿ, ಮತ್ತೆ ಕರೆ ಮಾಡುವುದಾಗಿ ಹೇಳಿ ಡಿಸ್ಕನೆಕ್ಟ್ ಮಾಡುತ್ತಾನೆ.
ಮನೆಗೆ ಬಂದು ಅಡುಗೆ ಮಾಡುವಾಗ ಭಾಗ್ಯಾಗೆ ಕರೆ ಬರುತ್ತದೆ, ನಾನು ನೋಡುತ್ತೇನೆ ನೀನು ಕೆಲಸ ಮಾಡು ಎಂದು ಕುಸುಮಾ ಭಾಗ್ಯಾಗೆ ಬಂದ ಕರೆ ರಿಸೀವ್ ಮಾಡುತ್ತಾಳೆ. ಆಗಲೇ ಕಾಲ್ ಮಾಡಿದ್ಯಲ್ಲಮ್ಮ, ಕೆಲಸ ಬೇಕು ಅಂತ ಎಂದು ಆ ವ್ಯಕ್ತಿ ಹೇಳಿದಾಗ ಕುಸುಮಾ, ರೇಗುತ್ತಾಳೆ. ಈ ನಂಬರ್ ಯಾರು ಕೊಟ್ಟದ್ದು? ನಮಗೆ ನಿಮ್ಮ ಕೆಲಸ ಬೇಡ ಎನ್ನುತ್ತಾಳೆ. ಯಾರು ಕರೆ ಮಾಡಿರುವುದು ಎಂದು ಭಾಗ್ಯಾಗೆ ಗೊತ್ತಾಗುತ್ತದೆ. ಒಂದು ಕೆಲಸ ಸಿಕ್ಕರೆ ಸಾಕು ಎಂದು ಚಡಪಡಿಸುತ್ತಾಳೆ.
ತಾಂಡವ್‌ಗೆ ಬುದ್ಧಿ ಕಲಿಸಲು ಪೂಜಾ ಏನು ದಾರಿ ಹುಡುಕುತ್ತಾಳೆ? ಭಾಗ್ಯಾಗೆ ಅಂದುಕೊಂಡಂತೆ ಕೆಲಸ ಸಿಗುವುದಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.
