Bhagyalakshmi Serial: ಕುಡಿದ ಅಮಲಿನಲ್ಲಿ ಶ್ರೇಷ್ಠಾಗೆ ತಾಳಿ ಕಟ್ಟಿದ ತಾಂಡವ್‌; ದೇವರೇ ಇದು ನಿಜವಾಗದಿರಲಿ ಎಂದ ವೀಕ್ಷಕರು
ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: ಕುಡಿದ ಅಮಲಿನಲ್ಲಿ ಶ್ರೇಷ್ಠಾಗೆ ತಾಳಿ ಕಟ್ಟಿದ ತಾಂಡವ್‌; ದೇವರೇ ಇದು ನಿಜವಾಗದಿರಲಿ ಎಂದ ವೀಕ್ಷಕರು

Bhagyalakshmi Serial: ಕುಡಿದ ಅಮಲಿನಲ್ಲಿ ಶ್ರೇಷ್ಠಾಗೆ ತಾಳಿ ಕಟ್ಟಿದ ತಾಂಡವ್‌; ದೇವರೇ ಇದು ನಿಜವಾಗದಿರಲಿ ಎಂದ ವೀಕ್ಷಕರು

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ 'ಭಾಗ್ಯಲಕ್ಷ್ಮಿ' ಧಾರಾವಾಹಿ ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತಿದೆ. ನವೆಂಬರ್‌ 27 ರ ಸಂಚಿಕೆಯಲ್ಲಿ ಏನೆಲ್ಲಾ ಆಯಿತು ಎಂಬ ವಿವರ ಇಲ್ಲಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್‌ 27 ರ ಸಂಚಿಕೆ
ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್‌ 27 ರ ಸಂಚಿಕೆ (PC: Colors Kannada)

Bhagyalakshmi Kannada Serial: ಹೆಂಡತಿ ಭಾಗ್ಯಾ ಮೇಲೆ ಕೈ ಮಾಡಿದ ಕಾರಣಕ್ಕೆ ಕುಸುಮಾ, ಮಗ ತಾಂಡವ್‌ ಕೈಗೆ ಬರೆ ಹಾಕುತ್ತಾಳೆ. ಅಮ್ಮನ ವರ್ತನೆಯಿಂದ ಕೋಪಗೊಳ್ಳುವ ತಾಂಡವ್‌ ಮನೆ ಬಿಟ್ಟು ಹೊರ ಬರುತ್ತಾನೆ. ಆತ ಮನೆಯಿಂದ ಹೊರ ಹೋಗುವಾಗ ಕುಸುಮಾ ತಡೆಯುವುದಿಲ್ಲ. ಅವನೇ ಮನೆ ಬಿಟ್ಟು ಹೋಗಿದ್ದಾನೆ, ಅವನೇ ವಾಪಸ್‌ ಬರುತ್ತಾನೆ ಎಂದು ಸುಮ್ಮನಾಗುತ್ತಾಳೆ.

ಸುನಂದಾಗೆ ಅಳಿಯನ ಬಗ್ಗೆ ಭಯ

ಮಗನ ಮೇಲೆ ಕುಸುಮಾಗೆ ಮೇಲೆ ಕೋಪವಿದ್ದರೂ ತಾಂಡವ್‌ ಮನೆ ಬಿಟ್ಟು ಹೋಗಿದ್ದಕ್ಕೆ ಮನಸ್ಸಿನಲ್ಲೇ ದುಃಖ ವ್ಯಕ್ತಪಡಿಸುತ್ತಾಳೆ. ಅರ್ಧರಾತ್ರಿಯಲ್ಲಿ ಗಂಡನನ್ನು ಹುಡುಕಿ ಬರಲು ಹೋಗುವ ಸೊಸೆಯನ್ನು ಕುಸುಮಾ ತಡೆಯುತ್ತಾಳೆ. ಅಳಿಯ ಮನೆ ಬಿಟ್ಟು ಹೋಗಿದ್ದಕ್ಕೆ ಸುನಂದಾ ಕೂಡಾ ಚಡಪಡಿಸುತ್ತಾಳೆ. ಅಮ್ಮನನ್ನು ಸಮಾಧಾನ ಮಾಡುವ ಪೂಜಾ, ಭಾವ ಒಂದೆರಡು ದಿನಗಳ ಕಾಲ ಮನೆಯಿಂದ ಹೊರ ಇದ್ದರೆ ಬುದ್ಧಿ ಕಲಿಯುತ್ತಾರೆ ಸುಮ್ಮನಿರು ನೀನು ಅವರ ಬಗ್ಗೆ ಏಕೆ ಯೋಚನೆ ಮಾಡುತ್ತೀಯ ಎಂದು ಕೇಳುತ್ತಾಳೆ. ಅದಕ್ಕೆ ಪ್ರತಿಕ್ರಿಯಿಸುವ ಸುನಂದಾ, ಮಗಳ ಗಂಡ ಹೀಗೆ ಮಾಡಿದರೆ ಯಾವ ತಾಯಿ ಸುಮ್ಮನಿರುತ್ತಾಳೆ? ಒಂದು ವೇಳೆ ಇಲ್ಲಿ ನನಗೆ ಬೆಲೆ ಇಲ್ಲ ಎಂದು ಅನ್ನಿಸಿ ಆ ಹುಡುಗಿಯ ಬಳಿ ಹೋದರೆ ಏನು ಮಾಡುವುದು ಎಂದು ಪ್ರಶ್ನಿಸುತ್ತಾಳೆ. ತಾಯಿ ಮಾತು ಪೂಜಾಗೆ ಕೂಡಾ ಸರಿ ಎನಿಸುತ್ತದೆ.

ಬಾರ್‌ನಲ್ಲಿ ಮನಸೋ ಇಚ್ಛೆ ಡ್ರಿಂಕ್ಸ್‌ ಮಾಡುವ ತಾಂಡವ್

ಇತ್ತ ತಾಂಡವ್‌ ಬಾರ್‌ನಲ್ಲಿ ಕುಳಿತು ಮನಸೋ ಇಚ್ಛೆ ಕುಡಿಯುತ್ತಾನೆ. ಕುಡಿದ ಮತ್ತಿನಲ್ಲಿ ಮನೆಯಲ್ಲಿ ನಡೆದ ಘಟನೆಯನ್ನು ನೆನೆಯುತ್ತಾನೆ. ತಪ್ಪು ತನ್ನದಾದರೂ ತಾಂಡವ್‌ಗೆ ಒಪ್ಪಿಕೊಳ್ಳುವ ಬುದ್ಧಿ ಇನ್ನೂ ಬಂದಿಲ್ಲ. ನಾನು 42 ವರ್ಷದ ಗಂಡಸು. ನನಗೆ ಮನೆಯಲ್ಲಿ ಯಾರೂ ಗೌರವ ಕೊಡುತ್ತಿಲ್ಲ. ಈ ಹೆಂಡತಿ ಮಕ್ಕಳೆಲ್ಲಾ ಯಾರು? ನಾನು ಬಂದ ನಂತರ ತಾನೇ ಇವರೆಲ್ಲಾ ಬಂದಿದ್ದು. ಅವರನೆಲ್ಲಾ ಇಂಟರ್‌ನೆಟ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಲು ಆಗುತ್ತಾ? ಹೊರಗೆ ದುಡಿಯುವ ಗಂಡಸರಿಗೆ ನೂರಾರು ಜನರು ಪರಿಚಯವಾಗುತ್ತಾರೆ. ನಾನು ಯಾರ ಜೊತೆಗೆ ಬೇಕಾದರೂ ಇರುತ್ತೇನೆ, ಇವರಿಗೆ ಏನು? ತಂದು ಹಾಕಿದ್ದನ್ನು ತಿಂದುಕೊಂಡಿರುವುದನ್ನು ಬಿಟ್ಟು ನನ್ನನ್ನು ಪ್ರಶ್ನೆ ಮಾಡುತ್ತಾರೆ ಎಂದು ತಾಂಡವ್‌ ಜೋರಾಗೇ ಮಾತನಾಡಿಕೊಳ್ಳುತ್ತಾನೆ. ತಾಂಡವ್‌ ಪರಿಸ್ಥಿತಿ ನೋಡಿ ಅಲ್ಲಿ ಕೂತಿದ್ದವರು ಅವನನ್ನೇ ನೋಡುತ್ತಾರೆ.‌

ತಾಂಡವ್‌ಗೆ ಬ್ರೈನ್‌ ವಾಶ್‌ ಮಾಡುವ ಮಹೇಶ

ಅಷ್ಟರಲ್ಲಿ ಅಲ್ಲಿಗೆ ಮಹೇಶ ಬರುತ್ತಾನೆ. ಶ್ರೇಷ್ಠಾ ಬಳಿ ಹಣ ಪಡೆದ ಕಾರಣಕ್ಕೆ ಅವಳ ಬಗ್ಗೆ ತಾಂಡವ್‌ ಬಳಿ ಮಾತನಾಡುತ್ತಾನೆ. ನೀನು ಎರಡು ದೋಣಿ ಮೇಲೆ ಕಾಲು ಇಟ್ಟಿದ್ದೀಯ. ಎರಡನ್ನೂ ಬ್ಯಾಲೆನ್ಸ್‌ ಮಾಡಬೇಕು. ಈಗ ಶ್ರೇಷ್ಠಾ ಹೇಳಿದಂತೆ ನೀನು ಕೇಳಬೇಕು ಎನ್ನುತ್ತಾನೆ. ಮಹೇಶ ಹೇಳಿಕೆ ಮಾತನ್ನು ಕೇಳಿ ತಾಂಡವ್‌ ನೇರವಾಗಿ ಶ್ರೇಷ್ಠಾ ಮನೆಗೆ ಹೋಗಿ, ನಾನು ಇನ್ಮುಂದೆ ಇಲ್ಲೇ ಇರುತ್ತೇನೆ ಎನ್ನುತ್ತಾನೆ. ಆಗ ಶ್ರೇಷ್ಠಾ, ನಾನು ಒಂಟಿ ಹುಡುಗಿ ನೀನು ನನ್ನ ಮನೆಯಲ್ಲೇ ಇರಬೇಕೆಂದರೆ ನೀನು ನನಗೆ ತಾಳಿ ಕಟ್ಟಬೇಕು ಎನ್ನುತ್ತಾಳೆ. ಶ್ರೇಷ್ಠಾ ಹೇಳುವುದಕ್ಕೆ ಮುನ್ನವೇ ಜೇಬಿನಲ್ಲಿ ತಾಳಿ ಹಿಡಿದು ತಂದ ತಾಂಡವ್‌, ನಾನು ಬಂದಿದ್ದು ನಿನಗೆ ತಾಳಿ ಕಟ್ಟೋಕೆ ಅಂತ ಹೇಳಿ ಆಕೆ ಕುತ್ತಿಗೆಗೆ 3 ಗಂಟುಗಳನ್ನು ಹಾಕೇಬಿಡುತ್ತಾನೆ.

ತಾಂಡವ್‌ ನಿಜಕ್ಕೂ ಶ್ರೇಷ್ಠಾ ತಾಳಿ ಕಟ್ಟುತ್ತಾನಾ? ಅಥವಾ ಇದು ಯಾರಾದರೂ ಕಾಣುವ ಕನಸಾ ಎಂದು ತಿಳಿಯಲು ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.

Whats_app_banner