Bhagyalakshmi Serial: ಕಾಲು ಹಿಡಿದು ಬೇಡಿಕೊಂಡ್ರೂ ಭಾಗ್ಯಾಗೆ ಒದ್ದು ದುರಹಂಕಾರ ತೋರಿದ ತಾಂಡವ್; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ 'ಭಾಗ್ಯಲಕ್ಷ್ಮಿ' ಧಾರಾವಾಹಿ ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತಿದೆ. ಡಿಸೆಂಬರ್ 2ರ ಸಂಚಿಕೆಯಲ್ಲಿ ಏನೆಲ್ಲಾ ಆಯಿತು ಎಂಬ ವಿವರ ಇಲ್ಲಿದೆ.
Bhagyalakshmi Kannada Serial: ದುಡ್ಡಿನ ಆಸೆ ಮರೆತು ಅಕ್ಕನ ಜೀವನ ಸರಿ ಮಾಡಬೇಕು ಎಂದುಕೊಳ್ಳುವ ಪೂಜಾ , ತಾಂಡವ್ ವಿರುದ್ಧ ಇದ್ದ ಒಂದೇ ಒಂದು ಸಾಕ್ಷಿಯನ್ನು ಕಳೆದುಕೊಂಡಿದ್ದಾಳೆ. ಬೆಟ್ಟದ ಮೇಲೆ ತಾಂಡವ್ ಹಾಗೂ ಶ್ರೇಷ್ಠಾ ಇಬ್ಬರೂ ಒಟ್ಟಿಗೆ ಇರುವ ವಿಡಿಯೋ ರೆಕಾರ್ಡ್ ಮಾಡಿದ್ದ ಪೂಜಾ, ಅದನ್ನು ಭಾವನಿಗೆ ತೋರಿಸಿ ಮನೆಗೆ ಬರುವಂತೆ ಬ್ಲಾಕ್‌ಮೇಲ್ ಮಾಡುತ್ತಾಳೆ.
ಪೂಜಾಗೆ ತಾಂಡವ್ ಬ್ಲಾಕ್‌ಮೇಲ್
ಪೂಜಾ ಬಗ್ಗೆ ಮೊದಲೇ ತಿಳಿದಿದ್ದ ತಾಂಡವ್ ಹಾಗೂ ಶ್ರೇಷ್ಠಾ, ವ್ಯಕ್ತಿಯೊಬ್ಬನನ್ನು ನೇಮಿಸಿ ಆ ಮೊಬೈಲ್ ಕಳ್ಳತನವಾಗುವಂತೆ ಮಾಡುತ್ತಾರೆ. ಈಗಂತೂ ತಾಂಡವ್ ರಾಜಾರೋಷವಾಗಿ ಮನೆಗೆ ಬರುವುದಿಲ್ಲ ಎಂದು ಪೂಜಾ ಬಳಿ ಹೇಳುತ್ತಾನೆ. ಒಂದು ವೇಳೆ ಎಲ್ಲಾ ವಿಚಾರವನ್ನೂ ಮನೆಗೆ ಹೇಳಿದರೂ ಹೋಗುವುದು ನನ್ನ ಮಾನವಲ್ಲ, ಅದರ ಬದಲಿಗೆ ನಿನ್ನ ಅಕ್ಕನ ಜೀವನ ಹಾಳಾಗುತ್ತದೆ. ವಿಚಾರ ಮನೆಗೆ ಗೊತ್ತಾದರೆ ನನ್ನ ಅಮ್ಮ ರಂಪ ಮಾಡಿ ನನ್ನನ್ನು ಮತ್ತೆ ಮನೆಯಿಂದ ಹೊರ ತಳ್ಳಬಹುದು. ಅಮ್ಮ ನನ್ನ ಸಂಬಂಧ ಕಳೆದುಕೊಂಡ ನಂತರ ನಿನ್ನ ಅಕ್ಕನನ್ನು ನಾನು ಸಂಪೂರ್ಣ ಬಿಡುತ್ತೇನೆ. ಅವಳು ನಿಮ್ಮ ಮನೆಗೆ ವಾಪಸ್ ಬರುತ್ತಾಳೆ. ನನ್ನ ಮಕ್ಕಳನಂತೂ ಅವಳ ಜೊತೆಗೆ ಕಳಿಸುವುದಿಲ್ಲ, ಆಗ ಅದೇ ಕೊರಗಿನಲ್ಲಿ ನಿನ್ನ ಅಕ್ಕ ಕೆರೆಗೂ ಬಾವಿಗೋ ಬೀಳುತ್ತಾಳೆ ಎನ್ನುತ್ತಾನೆ. ತಾಂಡವ್ ಮಾತು ಕೇಳಿ ಪೂಜಾ ಕಣ್ಣೀರಿಡುತ್ತಾಳೆ.
ಇತ್ತ ಗಂಡನಿಗಾಗಿ ಆಫೀಸ್ ಬಳಿ ಕಾದು ನಿಲ್ಲುವ ಭಾಗ್ಯಾ ತಾಂಡವ್ ಬರುವುದನ್ನು ನೋಡಿ ಖುಷಿಯಾಗುತ್ತಾಳೆ. ಕಾರಿನ ಬಳಿ ಹೋಗಿ ಮಾತನಾಡುತ್ತಿದ್ದಂತೆ ತಾಂಡವ್, ಜೇಬಿನಿಂದ ದುಡ್ಡು ತೆಗೆದು ಭಾಗ್ಯಾಗೆ ಕೊಡುತ್ತಾನೆ. ನೀನು ಬಂದಿದ್ದು ಇದಕ್ಕೆ ತಾನೇ? ತೆಗೆದುಕೊಂಡು ಹೋಗು, ಇನ್ಮುಂದೆ ದುಡ್ಡು ಕೇಳಲು ಇಲ್ಲಿಗೆ ಬರಬೇಡ. ತಿಂಗಳು ತಿಂಗಳು ಇಂತಿಷ್ಟು ಕಳಿಸುತ್ತೇನೆ. ಆ ಮನೆ ನನ್ನದು ಅದನ್ನು ನಿಮ್ಮ ಅತ್ತೆಗೆ ದಾನ ಮಾಡಿದ್ದೇನೆ. ಅತ್ತೆ ಸೊಸೆ ಇಬ್ಬರೂ ರಾಜ್ಯಭಾರ ಮಾಡಿ ಎನ್ನುತ್ತಾನೆ. ತಾಂಡವ್ ದುರಹಂಕಾರದ ವರ್ತನೆ ಭಾಗ್ಯಾಳಿಗೆ ನೋವುಂಟು ಮಾಡುತ್ತದೆ. ದಯವಿಟ್ಟು ದುಡ್ಡಿನ ವಿಚಾರ ಮಾತನಾಡಬೇಡಿ. ನಾನು ದುಡ್ಡಿಗಾಗಿ ಇಲ್ಲಿಗೆ ಬರಲಿಲ್ಲ ದಯವಿಟ್ಟು ಮನೆಗೆ ಬನ್ನಿ ಎಂದು ಮನವಿ ಮಾಡುತ್ತಾಳೆ.
ಕಾಲು ಹಿಡಿದರೂ ಭಾಗ್ಯಾ ಮೇಲೆ ಕರುಣೆ ಇಲ್ಲ
ಭಾಗ್ಯಾ ಎಷ್ಟೇ ಮನವಿ ಮಾಡಿದರೂ ತಾಂಡವ್, ಅದನ್ನು ಕೇರ್ ಮಾಡದ ಕಟುಕ. ಆ ಮನೆಗೂ ನನಗೂ ಸಂಬಂಧವಿಲ್ಲ, ನಾನು ಬರುವುದಿಲ್ಲ ಎನ್ನುತ್ತಾನೆ. ನೀವು ಮನೆಗೆ ಬರಬೇಕೆಂದರೆ ನಾನು ಏನು ಮಾಡಬೇಕು ಹೇಳಿ ಎಂದು ಭಾಗ್ಯಾ ಕೇಳುತ್ತಾಳೆ. ಹೌದಾ ಹಾಗಿದ್ರೆ ನನ್ನ ಕಾಲು ಹಿಡಿದು ಕ್ಷಮೆ ಕೇಳು ಎನ್ನುತ್ತಾನೆ. ಭಾಗ್ಯಾ ತಕ್ಷಣವೇ ಕಾಲು ಹಿಡಿದು, ನನ್ನನ್ನು ಕ್ಷಮಿಸಿ, ದಯವಿಟ್ಟು ಮನೆಗೆ ಬನ್ನಿ ಎನ್ನುತ್ತಾಳೆ. ಆದರೆ ದುರಂಹಕಾರಿ ತಾಂಡವ್ ಭಾಗ್ಯಾಳನ್ನು ಒದ್ದು ಬರುವುದಿಲ್ಲ ಹೋಗು ಎನ್ನುತ್ತಾನೆ. ತಾಂಡವ್ ಅತಿರೇಖದ ವರ್ತನೆ ಭಾಗ್ಯಾ ಮನಸ್ಸಿಗೆ ಬಹಳ ನಾಟುತ್ತದೆ.
ನಿಮ್ಮ ಮೇಲಿನ ಪ್ರೀತಿಯನ್ನು ನಾನು ಪದೇ ಪದೇ ಸಾಬೀತು ಮಾಡಲು ಸಾಧ್ಯವಿಲ್ಲ. ನಿಜಕ್ಕೂ ನನಗೆ, ಅತ್ತೆಗೆ ನಿಮ್ಮ ಮೇಲೆ ಪ್ರೀತಿ ಇರುವುದು ನಿಜವಾದರೆ ನೀವೇ ಮನೆಗೆ ವಾಪಸ್ ಬರುತ್ತೀರಿ, ಹಾಗೇ ಇನ್ಮುಂದೆ ನಾನು ನಿನ್ನನ್ನು ಹುಡುಕಿ ಬರುವುದಿಲ್ಲ. ನಿಮ್ಮ ಬಳಿ ದುಡ್ಡನ್ನೂ ಕೇಳುವುದಿಲ್ಲ. ಅತ್ತೆ, ಮನೆಯನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಭಾಗ್ಯಾ ತಾಂಡವ್ ಮುಂದೆ ಶಪಥ ಮಾಡುತ್ತಾಳೆ. ಆದರೆ ಮದವೇರಿದ ತಾಂಡವ್‌ಗೆ ಭಾಗ್ಯಾ ಹೇಳುವ ಯಾವ ಮಾತೂ ಕೇಳುವುದಿಲ್ಲ.
ತಾಂಡವ್ ವಿಚಾರವನ್ನು ಪೂಜಾ ಮನೆಗೆ ಹೇಳುತ್ತಾಳಾ? ಸ್ಕೂಲ್‌ಗೆ ಹೋಗುತ್ತೇನೆಂದು ಹೇಳಿ ತಾಂಡವ್‌ನನ್ನು ಹುಡುಕಿ ಹೋದ ಸೊಸೆಗೆ ಕುಸುಮಾ ಏನು ಶಿಕ್ಷೆ ನೀಡುತ್ತಾಳೆ? ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.