Seetha Rama Serial: ನಾನು ನಂಬಿರೋ ಶ್ರೀರಾಮ ಯಾವತ್ತೂ ನನ್ನ ಕೈ ಬಿಡಲ್ಲ; ಸೀತಾ ಮಾತಿಗೆ ರಾಮನ ಮೊಗದಲ್ಲಿ ಮೂಡಿತು ಮಂದಹಾಸ
ಸೀತಾ ರಾಮ ಧಾರಾವಾಹಿಯಲ್ಲಿ ಹೀರೋ ಮತ್ತು ವಿಲನ್ ಮುಖಾಮುಖಿಯಾಗಿದ್ದಾರೆ. ಮತ್ತೊಂದೆಡೆ ಸೀತಾಳ ಬಗ್ಗೆ ಮನೆಯ ಅಕ್ಕಪಕ್ಕದವರೇ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಇದ್ಯಾವುದೂ ಗೊತ್ತಿಲ್ಲದ ಸೀತಾ, ಮನೆ ಉಳಿವಿಗಾಗಿ ಹೋರಾಟ ನಡೆಸುತ್ತಿದ್ದಾಳೆ.
Seetha Rama Serial: 22ನೇ ಸಂಚಿಕೆಯಲ್ಲಿ ಹಲವು ಕುತೂಹಲಗಳನ್ನು ಪ್ರೇಕ್ಷಕರ ಮಡಿಲಿಗೆ ಹಾಕಿದೆ ಸೀತಾ ರಾಮ ಧಾರಾವಾಹಿ. ನೋಡುಗರಿಂದ ಮೆಚ್ಚುಗೆಯನ್ನು ಪಡೆದುಕೊಂಡಿರುವ ಈ ಸೀರಿಯಲ್ಯಲ್ಲಿ ಇದೀಗ ಹೀರೋ ವಿಲನ್ ಮುಖಾಮುಖಿಯಾಗಿದ್ದಾರೆ. ಮತ್ತೊಂದು ಕಡೆ ಸಿಹಿಯ ಕ್ಯೂಟ್ ಮಾತುಗಳು, ಅಜ್ಜಿ ತಾತನ ಪ್ರೀತಿ, ಒಂಟಿ ಹುಡುಗಿ ಅನ್ನೋ ಕಾರಣಕ್ಕೆ ಪಕ್ಕದ ಮನೆಯವರ ಕೆಟ್ಟ ಮಾತುಗಳೂ ಅಜ್ಜಿ ಕಿವಿಗೆ ಬಿದ್ದಿದೆ.
ಹೋಟೆಲ್ನಲ್ಲಿನ ಸೀತಾಳನ್ನು ನೋಡಿದ ರಾಮ್, ತನಗೇನು ಗೊತ್ತಿಲ್ಲ ಎಂಬಂತೆ ಅವರ ಬಿಲ್ಲನ್ನೂ ತಮ್ಮ ಬಿಲ್ಗೆ ಸೇರಿಸಿಕೊಳ್ಳಿ ಎಂದು ಹೊರಬಂದಿದ್ದಾನೆ. ಇತ್ತ ಬ್ಯಾಂಕ್ನವರು ಬಾರದ ಕಾರಣಕ್ಕೆ ಆಫೀಸ್ಗೆ ಹೋಗುವುದಾಗಿ ಸೀತಾ ಹೊರಟಿದ್ದಾಳೆ. ಹೋಟೆಲ್ ಆಚೆ ಸೀತಾ ರಾಮ ಇಬ್ಬರ ಭೇಟಿಯಾಗಿದೆ. ಅರೇ ರಾಮ್ ನೀವೇನು ಇಲ್ಲಿ ಎಂದು ಪ್ರಶ್ನಿಸಿದ್ದಾಳೆ ಸೀತಾ. ಅದಕ್ಕೆ ಸಹಿ ಮಾಡಿಸಿಕೊಳ್ಳುವ ನೆಪ ಹೇಳಿ ಜಾರಿಕೊಂಡಿದ್ದಾನೆ ರಾಮ. ಬಳಿಕ ತಾನು ಬಂದ ವಿಚಾರವನ್ನೂ ಹೇಳಿಕೊಂಡಿದ್ದಾಳೆ.
ಹೀಗೆ ಇವರಿಬ್ಬರ ಮಾತುಕತೆ ವೇಳೆ ರುದ್ರಪ್ರತಾಪ್ ಎಂಟ್ರಿಕೊಟ್ಟಿದ್ದಾನೆ. ಈ ಮೂಲಕ ಮೊದಲ ಸಲ ಹೀರೋ ಮತ್ತು ವಿಲನ್ ಮುಖಾಮುಖಿಯಾಗಿದೆ. ವಿಸಿಟಿಂಗ್ ಕಾರ್ಡ್ ಕೊಟ್ಟು ರಾಮನನ್ನು ಪರಿಚಯಿಸಿಕೊಂಡಿದ್ದಾನೆ. ಬಳಿಕ ಡ್ರಾಪ್ ಕೊಡುವುದಾಗಿ ಕೇಳುತ್ತಾನೆ ರುದ್ರಪ್ರತಾಪ್, ಇಲ್ಲ ನಾವಿಬ್ಬರೂ ಆಟೋದಲ್ಲಿಯೇ ಹೊರಡುತ್ತೇವೆ ಎಂದು ಅಲ್ಲಿಂದ ಕಾಲ್ಕಿಳ್ಳುತ್ತಾರೆ. ಮನಸಲ್ಲೇ ರುದ್ರಪ್ರತಾಪನೊಳಗೆ ಸಿಟ್ಟು ಬರುತ್ತದೆಯಾದರೂ ಅದು ಹೊರಗೆ ಬಾರದು.
ಈ ಗ್ಯಾಪ್ನಲ್ಲಿಯೇ ಸಿಹಿಯಿಂದ ಸೀತಮ್ಮನಿಗೆ ವಿಡಿಯೋ ಕಾಲ್ ಬರುತ್ತದೆ. ಸ್ವಿಮ್ಮಿಂಗ್ ಫೂಲ್ ಬಳಿ ಇದ್ದಿದ್ದನ್ನು ಕಂಡು, ಮತ್ತೆ ನನ್ನ ಬಿಟ್ಟು ಹೋದೆಯಾ ಎಂದು ಬೇಸರ ಮಾಡಿಕೊಳ್ಳುತ್ತಾಳೆ ಸೀತಾ. ಪಕ್ಕದಲ್ಲಿ ಯಾರಿದ್ದಾರೆ ತೋರಿಸು ಎಂದಾಗ ರಾಮ ಕಾಣಿಸುತ್ತಾನೆ. ಹಾಯ್ ಫ್ರೆಂಡ್ ಎನ್ನುತ್ತಿದ್ದಂತೆ ಸಿಹಿಯ ಮೊಗದಲ್ಲಿ ನಗು ಉಕ್ಕುತ್ತದೆ. ಬಳಿಕ ಹೆಲಿಕಾಪ್ಟರ್ ಮೇಲೆ ಕರೆದುಕೊಂಡು ಹೋಗುವ ಪ್ರಾಮಿಸ್ ಸಿಹಿಗೆ ರಾಮನಿಂದ ಸಿಗುತ್ತದೆ.
ಮತ್ತೊಂದು ಬದಿಯಲ್ಲಿ ಭಾರ್ಗವಿಯ ಎರಡನೇ ಪ್ಲಾನ್ ಸಹ ಪ್ಲಾಪ್ ಆಗಿದೆ. ರಾಮನಿಗೆ ಹೇಗಾದರೂ ಮಾಡಿ ಮದುವೆ ಮಾಡಿಸಬೇಕು ಎನ್ನುವ ಭಾರ್ಗವಿಯ ಸೋಲನ್ನು ಗಂಡ ವಿಶ್ವಜಿತ್ ಅಣಕಿಸಿದ್ದಾನೆ. ಭಾರ್ಗವಿ ಇಷ್ಟು ಸುಲಭವಾಗಿ ಸೋಲು ಒಪ್ಪಿಕೊಳ್ಳುವವಳಲ್ಲ, ಈಗೇನು ಮಾಡ್ತಿಯಾ ಎಂದು ಹೇಳುತ್ತಾನೆ. ಅದಕ್ಕೆ ಉತ್ತರಿಸುವ ಭಾರ್ಗವಿ, ರಾಮನಿಗೆ ಮತ್ತೆ ಪ್ರೀತಿಯಲ್ಲಿ ಬೀಳುವಂತೆ ಮಾಡೇ ಮಾಡುತ್ತೇನೆ ಎನ್ನುತ್ತಾಳೆ. ಭಾರ್ಗವಿ ಮತ್ತೆ ಮತ್ತೆ ಎಂಬ ಮಾತು ಕೇಳಿ, ಹಾಗಾದರೆ ಈ ಹಿಂದಿನ ರಾಮನ ಜತೆಗಿನ ಹುಡುಗಿಯ ಪ್ರೀತಿಯ ನಾಟಕದಲ್ಲಿ ಇವಳದ್ದೇ ಕೈವಾಡ ಇದೆ ಎಂಬುದು ವಿಶ್ವಜಿತ್ಗೆ ಗೊತ್ತಾಗುತ್ತದೆ.
ಇತ್ತ ಆಟೋ ಏರಿದ ಸೀತಾ ಮತ್ತು ರಾಮ್, ಮನೆಯ ಸಮಸ್ಯೆ ಬಗ್ಗೆ ಮಾತನಾಡುತ್ತಾರೆ. ಏನಾಯ್ತು ಎಂದು ಕೇಳುವ ರಾಮನಿಗೆ, "ಲೋನ್ ಜಾಸ್ತಿ ಇದೆ. ನಾನು ನಂಬಿರೋ ರಾಮ ಯಾವತ್ತೂ ಕೈ ಬಿಡಲ್ಲ" ಎನ್ನುತ್ತಾಳೆ. ಆಗ ಪಕ್ಕದಲ್ಲಿದ್ದ ರಾಮನ ಮುಖದಲ್ಲಿ ಮಂದಹಾಸ ಮೂಡುತ್ತದೆ. ನಾನು ಹೇಳಿದ್ದು ದೇವರು, ರಾಮಪ್ಪನ ಬಗ್ಗೆ ಎನ್ನುತ್ತಾಳೆ. ಓಹ್.. ಹಾಗಾ ಎನ್ನುತ್ತಾನೆ ರಾಮ.
ಈ ನಡುವೆ ಒಂಟಿ ಹುಡುಗಿ ಸೀತಾಳ ಬಗ್ಗೆ ವಠಾರದ ಹೆಂಗಸರು ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಪುಟಾಣಿ ಸಿಹಿ ಬಾಯಿಂದ ಎಲ್ಲವನ್ನೂ ತಿಳಿದುಕೊಂಡು, ಆಕೆಯನ್ನು ಕೆಟ್ಟ ದೃಷ್ಟಿಯಲ್ಲಿ ನೋಡುತ್ತಿದ್ದಾರೆ. ಇವರ ಕೊಂಕು ಮಾತು ಕೇಳಿದ ಅಜ್ಜಿ, ಸಿಹಿಯನ್ನು ಅಲ್ಲಿಂದ ಕರೆದುಕೊಂಡು ಹೋಗುತ್ತಾಳೆ.
ಮನರಂಜನೆ ಕುರಿತ ಮತ್ತಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ