Actor Karthi: 104 ಕೆಜಿ ತೂಕವಿದ್ದೆ, ಟೆಡ್ಡಿ ಬೇರ್ ಅನ್ತಾ ಇದ್ರು, ಖಿನ್ನತೆಯಿಂದ ಕುಗ್ಗಿ ಹೋಗಿದ್ದೆ; ದುಃಖ ಬಿಚ್ಚಿಟ್ಟ ನಟ ಕಾರ್ತಿ
Actor karthi interview: ತಮಿಳು ನಟ ಕಾರ್ತಿಕ್ ಶಿವಕುಮಾರ್ (ಕಾರ್ತಿ) ಇತ್ತೀಚೆಗೆ ಗೌತಮ್ ಮೆನನ್ ಯೂಟ್ಯೂಬ್ ಸಂದರ್ಶನದಲ್ಲಿ ತನ್ನ ಬದುಕಿನ ಕೆಲವು ಘೋರ ಕ್ಷಣಗಳ ಕುರಿತು ಮಾತನಾಡಿದ್ದಾರೆ. ಕಾರ್ತಿ ಹಿಂದೊಮ್ಮೆ 104 ಕೆಜಿ ತೂಕವಿದ್ದರು, ಕಾಲೇಜಿನಲ್ಲಿ ಟೆಡ್ಡಿಬೇರ್ ಅನ್ತಾ ಇದ್ರು ಇತ್ಯಾದಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ತಮಿಳು ಸಿನಿಮಾ ನೋಡುವವರಿಗೆ ಕಾರ್ತಿಕ್ ಯಾರೆಂದು ತಿಳಿದಿರಬಹುದು. ಕಾರ್ತಿಕ್ ಶಿವಕುಮಾರ್ ಅವರು ಕಾರ್ತಿ ಎಂದೇ ಫೇಮಸ್. ಭಾರತದ ಜನಪ್ರಿಯ ನಟ. ವಿಶೇಷವಾಗಿ ತಮಿಳು ಚಿತ್ರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೌತ್ ಫಿಲ್ಮ್‌ಫೇರ್ ಅವಾರ್ಡ್, ಎಡಿಸನ್ ಅವಾರ್ಡ್, ಒಂದು ಸೈಮಾ ಅವಾರ್ಡ್ ಮತ್ತು ಒಂದು ತಮಿಳುನಾಡು ರಾಜ್ಯ ಪ್ರಶಸ್ತಿಯನ್ನು ಇವರು ಪಡೆದಿದ್ದಾರೆ. ಇವರು ನಟ ಶಿವಕುಮಾರ್ ಪುತ್ರ ಮತ್ತು ನಟ ಸೂರ್ಯನ ಸಹೋದರ. ಮಣಿರತ್ನಂ ಅವರ ಜತೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಆರಂಭಿಸಿದರು. ಇವರು ಪರುಥಿವೀರನ್ ಎಂಬ ಚಿತ್ರದ ಮೂಲಕ ಸಿನಿಮಾರಂಗಕ್ಕೆ ನಾಯಕನಾಗಿ ಪ್ರವೇಶಿಸಿದರು. ಪಯ್ಯ, ನಾನ್ ಮಹಾನ್ ಅಲ್ಲ, ಸಿರುಥೈ, ಮದ್ರಾಸ್, ತೋಝಾ, ತೀರನ್ ಅಧಿಗರಮ್ ಒಂದ್ರು, ಕಾಡೈಕುಟ್ಟಿ ಸಿಂಗಮ್, ಕೈಥಿ, ತಂಬಿ, ಪೊನ್ನಿಯನ್ ಸೆಲ್ವನ್, ಸರ್ದಾರ್ ಮುಂತಾದ ಹಲವು ಸೂಪರ್‌ಹಿಟ್ ಸಿನಿಮಾಗಳನ್ನು ನೀಡಿದ ನಟ ಇವರಾಗಿದ್ದಾರೆ.
ಸಿನಿಮಾಕ್ಷೇತ್ರದಲ್ಲಿ ಇಷ್ಟೊಂದು ಜನಪ್ರಿಯತೆ ಪಡೆದಿರುವ ನಟ ಕಾರ್ತಿಯು ಇತ್ತೀಚೆಗೆ ಗೌತಮ್ ಮೆನನ್ ಅವರ ಯೂಟ್ಯೂಬ್ ಸಂದರ್ಶನದಲ್ಲಿ ತನ್ನ ಅಂದಿನ ಬದುಕಿನ ಕುರಿತು ಮಾತನಾಡಿದ್ದಾರೆ. "ನಾನು 104 ಕೆಜಿ ತೂಕವಿದ್ದೆ. ಎಲ್ಲರೂ ನನ್ನನ್ನು ಟೆಡ್ಡಿಬೇರ್ ರೀತಿ ನೋಡುತ್ತಿದ್ದರು. ಹುಡುಗರ ಶಾಲೆಯಲ್ಲಿ ಓದಿದ್ದೇನೆ. ಹೆಣ್ಮಕ್ಕಳ ಜತೆ ಮಾತಾಡಾಲು ಸಂಕೋಚ ಪಡುತ್ತಿದ್ದೆ" ಇತ್ಯಾದಿ ಹಲವು ವಿಚಾರಗಳನ್ನು ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
"ತಂದೆಯ ಒಳ್ಳೆಯ ಹೆಸರು ನಮ್ಮನ್ನು ಹಿಂಬಾಲಿಸುತ್ತ ಇರುತ್ತದೆ. ಎಲ್ಲಿ ನಾನು ಹೋಗಲಿ ಅಲ್ಲಿ ನನ್ನ ತಂದೆಯ ಹೆಸರು ಇರುತ್ತಿತ್ತು. ಅದರಿಂದ ಓಡಿ ಹೋಗಲು ಸಾಧ್ಯವಿಲ್ಲ. ನಮ್ಮ ಐಡೆಂಟೆಟಿ ಇರೋದಿಲ್ಲ. ಈ ವಿಚಾರದಲ್ಲಿ ನಾವೇನೂ ಮಾಡಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.
ಹುಡುಗಿಯರೆಂದರೆ ಸಂಕೋಚ
"ನಾನು ತುಂಬಾ ಸಂಕೋಚ ಸ್ವಭಾವ ಹೊಂದಿದ್ದೆ. ಹುಡುಗಿಯರ ಹತ್ತಿರ ಹೋಗಿ ನಿಮ್ಮನ್ನು ನಾನು ಪ್ರೀತಿಸುತ್ತೇನೆ ಎಂದು ಹೇಳುವ ಧೈರ್ಯ ಇರಲಿಲ್ಲ. ಕಾಲೇಜಿಗೆ ಹೋಗುವಾಗ ಎಲ್ಲರೂ ನನಗಿಂತ ಸುಂದರವಾಗಿದ್ದಾರೆ ಅಂದುಕೊಳ್ಳುತ್ತಿದ್ದೆ. ಇದೊಂದು ರೀತಿಯ ಖಿನ್ನತೆ ಉಂಟುಮಾಡಿತ್ತು. ಈ ಬೇಸರದಿಂದ ಹೇಗೆ ಹೊರಬಂದೆ ಎಂದು ನನಗಿನ್ನೂ ತಿಳಿದಿಲ್ಲ" ಎಂದು ಅವರು ಹೇಳಿದ್ದಾರೆ. "ಈಗ ಸಾಕಷ್ಟು ಹುಡುಗಿಯರು ನನ್ನ ಬಳಿಗೆ ಬಂದು, ನಮಗೆ ನಿಮ್ಮ ಕೆಲಸ ಇಷ್ಟ, ನಾವು ನಿಮ್ಮನ್ನು ಇಷ್ಟಪಡುತ್ತೇವೆ ಎಂದು ಹೇಳುತ್ತಾರೆ. ನನ್ನನ್ನು ಹೆಣ್ಮಕ್ಕಳು ಇಷ್ಟಪಡುತ್ತಾರೆ ಎನ್ನುವುದನ್ನು ತಿಳಿದುಕೊಂಡೆ" ಎಂದು ಅವರು ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.
104 ಕೆಜಿ ತೂಕ ಹೊಂದಿದ್ದೆ
"ನಾನು ದಡೂತಿಯಾಗಿದ್ದೆ. ಕಾಲೇಜು ದಿನಗಳಲ್ಲಿ 104 ಕೆ.ಜಿ. ತೂಕ ಹೊಂದಿದ್ದೆ. ಟೆಡ್ಡಿ ಬೇರ್ ರೀತಿ ಇದ್ದೆ. ಇದರಿಂದ ಸಾಕಷ್ಟು ಸಂಕೋಚ, ಮಾನಸಿಕ ತೊಂದರೆಗಳನ್ನು ಅನುಭವಿಸಿದೆ. ನನ್ನ ಜೀವನದಲ್ಲಿ ನಾನು ಏನಾಗಬೇಕು ಎಂದು ತಿಳಿದುಕೊಂಡೆ. ತೂಕ ಕಡಿಮೆಮಾಡಲು ಓಟ ಆರಂಭಿಸಿದೆ. ದೇಹದ ತೂಕ ಕಳೆದುಕೊಳ್ಳುವುದು ಸುಲಭವಲ್ಲ. ದೇಹ ಅಷ್ಟು ಬೇಗ ತೂಕ ಕಳೆದುಕೊಳ್ಳುವುದಿಲ್ಲ. ತಕ್ಷಣ ಫಲಿತಾಂಶ ದೊರಕುವುದಿಲ್ಲ. ಸತತ ಪರಿಶ್ರಮ ಬೇಕು" ಎಂದು ಅವರು ಹೇಳಿದ್ದಾರೆ.
"ಆ ಸಮಯದಲ್ಲಿ ಸಾಕಷ್ಟು ಒತ್ತಡ ಅನುಭವಿಸಿದೆ. ನಾನು ಗಟ್ಟಿಮುಟ್ಟಾದ ವ್ಯಕ್ತಿಯಾಗಬೇಕು ಎಂದುಕೊಂಡೆ. ನನ್ನ ಆಹಾರ ಪದ್ಧತಿಯತ್ತ ಗಮನಹರಿಸಿದೆ. ನಮ್ಮ ದೇಹ ಹೇಗೆ ಆಗಬೇಕು ಎನ್ನುವ ಶೇಕಡ 70 ಅಂಶವನ್ನು ನಾವು ಸೇವಿಸುವ ಆಹಾರ ಅವಲಂಬಿಸಿದೆ. ಶೇಕಡ 30 ವರ್ಕೌಟ್ ಅವಲಂಬಿಸಿದೆ. ಇದನ್ನು ಸ್ವಲ್ಪಮಟ್ಟಿಗೆ ಅರಿತು ಅದರಂತೆ ನನ್ನ ಬದುಕನ್ನು ಬದಲಾವಣೆ ಮಾಡಿಕೊಂಡೆ" ಎಂದು ಕಾರ್ತಿ ಹೇಳಿದ್ದಾರೆ.