Khushbu Sundar: ಮದುವೆ ಆಗಲೆಂದೇ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೀರ ಎಂದವರಿಗೆ ಕಾನೂನು ಪಾಠ ಮಾಡಿದ ಖುಷ್ಬೂ ಸುಂದರ್
ಖುಷ್ಬೂ ಮೂಲ ಇಸ್ಲಾಂ ಧರ್ಮ ಆದ್ದರಿಂದ ಕೆಲವರು ಆಕೆಯನ್ನು ಟೀಕಿಸಿರುವುದೂ ಉಂಟು. ಇದೀಗ ಮತ್ತೊಮ್ಮೆ ಖುಷ್ಬೂ ಇದೇ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ತಮ್ಮ ಕಾಲೆಳೆಯಲು ಪ್ರಯತ್ನಿಸಿದವರಿಗೆ ಕಾನೂನು ಪಾಠ ಮಾಡಿದ್ದಾರೆ.
ಒಂದು ಕಾಲದಲ್ಲಿ ತಮಿಳು ಚಿತ್ರರಂಗದ ಟಾಪ್ ಹೀರೋಯಿನ್ ಆಗಿ ಹೆಸರು ಮಾಡಿದ್ದ ಖುಷ್ಬೂ ಈಗ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಜೊತೆಗೆ ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ. ಇವೆಲ್ಲದರ ಜೊತೆಗೆ ಖುಷ್ಬೂ ಕೆಲವೊಂದು ಹೇಳಿಕೆಗಳಿಂದ, ವಿವಾದಾತ್ಮಕ ಮಾತುಗಳಿಂದ ಹಾಗೂ ತಮ್ಮ ವಿರುದ್ಧದ ಟೀಕೆಗಳಿಗೆ ಖಡಕ್ ಉತ್ತರ ನೀಡುವುದರ ಮೂಲಕ ಸುದ್ದಿಯಲ್ಲಿರುತ್ತಾರೆ.
ಖುಷ್ಬೂ ಮೂಲತ: ಮುಸ್ಲಿಂ ಧರ್ಮಕ್ಕೆ ಸೇರಿದವರು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಖುಷ್ಬೂ ಮೂಲ ಹೆಸರು ನಖತ್ ಖಾನ್. ಬಾಲ್ಯದಲ್ಲೇ ಚಿತ್ರರಂಗಕ್ಕೆ ಅಡಿ ಇಟ್ಟ ಖುಷ್ಬೂ, ನಂತರ ನಾಯಕಿಯಾಗಿಯೂ ಹೆಸರು ಮಾಡಿದವರು. ಖುಷ್ಬೂ ಮೂಲ ಇಸ್ಲಾಂ ಧರ್ಮ ಆದ್ದರಿಂದ ಕೆಲವರು ಆಕೆಯನ್ನು ಟೀಕಿಸಿರುವುದೂ ಉಂಟು. ಇದೀಗ ಮತ್ತೊಮ್ಮೆ ಖುಷ್ಬೂ ಇದೇ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ತಮ್ಮ ಕಾಲೆಳೆಯಲು ಪ್ರಯತ್ನಿಸಿದವರಿಗೆ ಕಾನೂನು ಪಾಠ ಮಾಡಿದ್ದಾರೆ.
ವಿವಾದಾತ್ಮಕ ಸಿನಿಮಾ 'ದಿ ಕೇರಳ ಸ್ಟೋರಿ' ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿದೆ. ಲವ್ ಜಿಹಾದ್, ಭಯೋತ್ಪಾದನೆ ಸೇರಿದಂತೆ ಇನ್ನಿತರ ನೈಜ ಘಟನೆ ಆಧಾರಿತ ಸ್ಟೋರಿ ಈ ಚಿತ್ರದಲ್ಲಿ ಇದೆ. ಇದು ಖುಷ್ಬೂ ವಿಚಾರದಲ್ಲೂ ಚರ್ಚೆಯಾಗುತ್ತಿದೆ. ಖುಷ್ಬೂ, ಸುಂದರ್ ಅವರನ್ನು ಮದುವೆಯಾಗಲು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಕೆಲವರು ಆಕೆಯನ್ನು ಟೀಕಿಸಿದ್ದರು. ಇದಕ್ಕೆ ಖುಷ್ಬೂ ತಮ್ಮ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
''ನನ್ನ ಮದುವೆ ಬಗ್ಗೆ ಪ್ರಶ್ನಿಸುವವರು, ನಾನು ಮದುವೆ ಆಗಲೆಂದೇ ಮತಾಂತರಗೊಂಡಿದ್ದೇನೆ ಎಂದು ಹೇಳುವವರು ಒಂದು ವಿಚಾರದ ಬಗ್ಗೆ ಜ್ಞಾನ ಬೆಳೆಸಿಕೊಳ್ಳುವುದು ಬಹಳ ಅವಶ್ಯಕವಾಗಿದೆ. ನಮ್ಮ ದೇಶದಲ್ಲಿ ಅಸ್ತಿತ್ವದಲ್ಲಿರುವ ವಿಶೇಷ ವಿವಾಹ ಕಾಯ್ದೆ ಬಗ್ಗೆ ನೀವೆಲ್ಲಾ ಕೇಳಿಲ್ಲದಿರುವುದು ನಿಜಕ್ಕೂ ದು:ಖದ ವಿಚಾರ. ನಾನು ಮತಾಂತರಗೊಂಡಿಲ್ಲ. ಅಥವಾ ಮತಾಂತರವಾಗುವಂತೆ ಯಾರೂ ನನ್ನ ಮೇಲೆ ಒತ್ತಡ ಹೇರಿಲ್ಲ. ನನ್ನ 23 ವರ್ಷಗಳ ವೈವಾಹಿಕ ಜೀವನ ಬಹಳ ಸುಂದರವಾಗಿದೆ, ನಂಬಿಕೆಯಿಂದ ಕೂಡಿದೆ. ಗೌರವ ಪ್ರೀತಿ ಹಾಗೂ ಸಮಾನತೆಯಿಂದ ಕೂಡಿದೆ. ಯಾರಿಗಾದರೂ ಅನುಮಾನ ಇದ್ದಲ್ಲಿ ಇದರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿ'' ಎಂದು ಕಾನೂನು ಪಾಠ ಮಾಡಿದ್ದಾರೆ.
ಖುಷ್ಬೂ ಮತ್ತೆ ಕನ್ನಡದಲ್ಲಿ ನಟಿಸುವ ಸಾಧ್ಯತೆ
ಖುಷ್ಬೂ ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಮತ್ತೆ ಅವರು ರವಿಚಂದ್ರನ್ ಜೊತೆ ನಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಸುಮಾರು 34 ವರ್ಷಗಳ ನಂತರ ಕ್ರೇಜಿಸ್ಟಾರ್ ಹಾಗೂ ಖುಷ್ಬೂ ಜೋಡಿಯಾಗಿ ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಸ್ಯಾಂಡಲ್‌ವುಡ್ ಮೂಲಗಳು ತಿಳಿಸಿವೆ. ಗುರುರಾಜ್ ಕುಲಕರ್ಣಿ ನಿರ್ದೇಶನದಲ್ಲಿ ರವಿಚಂದ್ರನ್ ಹೊಸ ಸಿನಿಮಾಗೆ ಸಜ್ಜಾಗುತ್ತಿದ್ದಾರೆ. ಈ ಸಿನಿಮಾಗೆ ಈಗಾಗಲೇ ಚಾಲನೆ ದೊರೆತಿದೆ. ಚಿತ್ರದಲ್ಲಿ ರವಿಚಂದ್ರನ್ ಜೋಡಿ ಆಗಿ ಮತ್ತೆ ಖುಷ್ಬೂ ನಟಿಸುವ ಸಾಧ್ಯತೆ ಇದೆಯಂತೆ. ಈಗಾಗಲೇ ಖುಷ್ಬೂ ಜೊತೆ ಮಾತುಕತೆ ನಡೆದಿದೆ. ಖುಷ್ಬೂ ಈಗ ಸಿನಿಮಾ ನಟಿ ಮಾತ್ರವಲ್ಲದೆ, ರಾಜಕಾರಣಿ ಆಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಈ ಬ್ಯುಸಿ ಕೆಲಸಗಳ ನಡುವೆ ಡೇಟ್ಸ್ ಹೊಂದಾಣಿಕೆ ಆದಲ್ಲಿ ಖುಷ್ಬೂ ಮತ್ತೆ ರವಿಚಂದ್ರನ್ ಜೊತೆ ನಟಿಸುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಸಿನಿಪ್ರಿಯರು ಕೂಡಾ ಬಹಳ ಎಕ್ಸೈಟ್ ಆಗಿದ್ಧಾರೆ. ಇನ್ನು ಕೆಲವೇ ದಿನಗಳಲ್ಲಿ ಒಂದು ಕ್ಲಾರಿಟಿ ಸಿಗಲಿದೆ.