ಸಿನಿಮಾ ಕ್ಷೇತ್ರದಲ್ಲೂ ಭ್ರಷ್ಟಾಚಾರ, ಮಾರ್ಕ್‌ ಆಂಟೋನಿ ಸಿಬಿಎಫ್‌ಸಿ ಸರ್ಟಿಫಿಕೇಟ್‌ಗೆ 6.5 ಲಕ್ಷ ಲಂಚ ಕೇಳಿದ್ರು; ನಟ ವಿಶಾಲ್‌ ಗಂಭೀರ ಆರೋಪ
ಕನ್ನಡ ಸುದ್ದಿ  /  ಮನರಂಜನೆ  /  ಸಿನಿಮಾ ಕ್ಷೇತ್ರದಲ್ಲೂ ಭ್ರಷ್ಟಾಚಾರ, ಮಾರ್ಕ್‌ ಆಂಟೋನಿ ಸಿಬಿಎಫ್‌ಸಿ ಸರ್ಟಿಫಿಕೇಟ್‌ಗೆ 6.5 ಲಕ್ಷ ಲಂಚ ಕೇಳಿದ್ರು; ನಟ ವಿಶಾಲ್‌ ಗಂಭೀರ ಆರೋಪ

ಸಿನಿಮಾ ಕ್ಷೇತ್ರದಲ್ಲೂ ಭ್ರಷ್ಟಾಚಾರ, ಮಾರ್ಕ್‌ ಆಂಟೋನಿ ಸಿಬಿಎಫ್‌ಸಿ ಸರ್ಟಿಫಿಕೇಟ್‌ಗೆ 6.5 ಲಕ್ಷ ಲಂಚ ಕೇಳಿದ್ರು; ನಟ ವಿಶಾಲ್‌ ಗಂಭೀರ ಆರೋಪ

ಸೆಂಟ್ರಲ್‌ ಬೋರ್ಡ್‌ ಆಫ್‌ ಫಿಲ್ಮ್‌ ಸರ್ಟಿಫಿಕೇಷನ್‌ನಿಂದ ಸರ್ಟಿಫಿಕೇಷನ್‌ ಪಡೆಯುವ ಸಲುವಾಗಿ ನಾನು 6.5 ಲಕ್ಷ ರೂಪಾಯಿ ಪಾವತಿಸಬೇಕಾಯಿತು ಎಂದು ಮಾರ್ಕ್‌ ಆಂಟೋನಿ ನಟ ವಿಶಾಲ್‌ ಗಂಭೀರ ಆರೋಪ ಮಾಡಿದ್ದಾರೆ.

ಮಾರ್ಕ್‌ ಆಂಟೋನಿ ಸಿಬಿಎಫ್‌ಸಿ ಸರ್ಟಿಫಿಕೇಟ್‌ಗೆ 6.5 ಲಕ್ಷ ಲಂಚ ಕೇಳಿದ್ರು; ನಟ ವಿಶಾಲ್‌ ಗಂಭೀರ ಆರೋಪ
ಮಾರ್ಕ್‌ ಆಂಟೋನಿ ಸಿಬಿಎಫ್‌ಸಿ ಸರ್ಟಿಫಿಕೇಟ್‌ಗೆ 6.5 ಲಕ್ಷ ಲಂಚ ಕೇಳಿದ್ರು; ನಟ ವಿಶಾಲ್‌ ಗಂಭೀರ ಆರೋಪ

ಎಲ್ಲೆಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಸಿನಿಮಾ ಕ್ಷೇತ್ರವನ್ನೂ ಬಿಟ್ಟಿಲ್ಲ. ಇದೀಗ ಮಾರ್ಕ್‌ ಆಂಟೋನಿ ನಟ ವಿಶಾಲ್‌ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ(ಸಿಬಿಎಫ್‌ಸಿ) ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ತನ್ನ ಸಿನಿಮಾದ ಹಿಂದಿ ಅವತರಣಿಕೆ ಬಿಡುಗಡೆ ಮಾಡಲು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು 6.5 ಲಕ್ಷ ರೂಪಾಯಿ ಲಂಚ ಕೇಳಿದೆ ಎಂದು ಇವರು ಆರೋಪಿಸಿದ್ದಾರೆ. ಮಾರ್ಕ್‌ ಆಂಟೋನಿ ಸಿನಿಮಾವು ಸೆಪ್ಟೆಂಬರ್‌ 15ರಂದು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದೆ. ಇದೀಗ ಈ ಚಿತ್ರದ ಹಿಂದಿ ಅವತರಣಿಕೆ ಬಿಡುಗಡೆಗೆ ಪ್ರಯತ್ನಿಸಿದಾಗ ಲಂಚಾವತರ ಕಂಡ ಕಥೆಯನ್ನು ವಿಶಾಲ್‌ ಬಹಿರಂಗಪಡಿಸಿದ್ದಾರೆ. ಮಾರ್ಕ್‌ ಆಂಟೋನಿ ಸಿನಿಮಾದ ಹಿಂದಿ ಆವೃತ್ತಿಯು ಸೆಪ್ಟೆಂಬರ್‌ 28ರಂದು ಬಿಡುಗಡೆಯಾಗಿತ್ತು.

ಸಿನಿಮಾ ಪ್ರಮಾಣಪತ್ರಕ್ಕೆ ಲಂಚ

ಈ ಕುರಿತು ನಟ ವಿಶಾಲ್‌ ವಿಡಿಯೋ ಬಿಡುಗಡೆ ಮಾಡಿದ್ದಾರೆ. ನಾನು ಈ ವಿಡಿಯೋ ಬಿಡುಗಡೆ ಮಾಡುತ್ತಿರುವುದು ಮಾರ್ಕ್‌ ಆಂಟೋನಿ ಸಿನಿಮಾ ಪ್ರಮೋಷನ್‌ಗಾಗಿ ಅಲ್ಲ. ಸಿನಿಮಾ ಸರ್ಟಿಫಿಕೇಟ್‌ ವಂಚನೆ ಕುರಿತು ಮಾಹಿತಿ ನೀಡುವ ಸಲುವಾಗಿ ಈ ವಿಡಿಯೋ ಮಾಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. "ನಾವು ಆನ್‌ಲೈನ್‌ ಮೂಲಕ ಸಿನಿಮಾದ ಹಿಂದಿ ಅವತರಣಿಕೆಯ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದೆವು. ಕೆಲವೊಂದು ತಾಂತ್ರಿಕ ಕಾರಣಗಳಿಂದ ಕೊನೆಯ ಕ್ಷಣದಲ್ಲಿ ತೊಂದರೆಯಾಯಿತು. ಬಳಿಕ ನಾವು ಮುಂಬೈಯ ಸಿಬಿಎಫ್‌ಸಿ ಕಚೇರಿಯನ್ನು ಸಂಪರ್ಕಿಸಿದೆವು. ನಾವು ಆ ಆಫೀಸ್‌ಗೆ ಭೇಟಿ ನೀಡಿದಾಗ ಅಲ್ಲಿದ್ದ ವ್ಯಕ್ತಿಯು 6.5 ಲಕ್ಷ ರೂಪಾಯಿ ನೀಡಿದರೆ ಇಂದೇ ಸರ್ಟಿಫಿಕೇಟ್‌ ನೀಡುವುದಾಗಿ ತಿಳಿಸಿದರು. ನಮಗೆ ಬೇರೆ ಆಯ್ಕೆಯೇ ಇರಲಿಲ್ಲ" ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.

ಕಂತಿನಲ್ಲಿ ಹಣ ನೀಡಿದೆವು

"ಸಿಬಿಎಫ್‌ಸಿಯಲ್ಲಿ ಸಿನಿಮಾ ಪ್ರದರ್ಶಿಸಲು ನಾವು 3 ಲಕ್ಷ ರೂಪಾಯಿ ನೀಡಬೇಕಾಯಿತು. 3.5 ಲಕ್ಷ ರೂಪಾಯಿ ಸರ್ಟಿಫಿಕೇಟ್‌ಗಾಗಿ ನೀಡಬೇಕಾಯಿತು" ಎಂದು ನಟ ವಿಶಾಲ್‌ ಹೇಳಿದ್ದಾರೆ. ಈ ಹಣಕಾಸು ವಹಿವಾಟು ನಡೆಸಿದ ಮಹಿಳೆಯು "ಈ ರೀತಿ ಹಣ ನೀಡುವುದು ಇಲ್ಲಿ ಮಾಮೂಲು. ಸಿನಿಮಾ ಬಿಡುಗಡೆಗೆ 15 ದಿನ ಮೊದಲು ಅರ್ಜಿ ಸಲ್ಲಿಸಿದರೆ 4 ಲಕ್ಷ ರೂಪಾಯಿ ಪಡೆಯಲಾಗುತ್ತದೆ ಎಂದು ಆ ಮಹಿಳೆ ತಿಳಿಸಿದರು" ಎಂದು ನಟ ವಿಶಾಲ್‌ ಹೇಳಿದ್ದಾರೆ.

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ನರೇಂದ್ರ ಮೋದಿಗೆ ಮನವಿ

"ನನ್ನ ಕರಿಯರ್‌ನಲ್ಲಿ ಇಂತಹ ಪರಿಸ್ಥಿತಿ ಈ ಹಿಂದೆ ಬಂದಿರಲಿಲ್ಲ. ಮಧ್ಯವರ್ತಿಗೆ ಹಣ ನೀಡದೆ ಬೇರೆ ದಾರಿಯೇ ಇರಲಿಲ್ಲ. ಇಲ್ಲವಾದರೆ ನಿಗದಿತಯಂತೆ ಸಿನಿಮಾ ಬಿಡುಗಡೆಯಾಗುತ್ತಿರಲಿಲ್ಲ. ಈ ವಿಷಯವನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಮಾನ್ಯ ಪ್ರಧಾನಿಯವರ ಗಮನಕ್ಕೆ ತರುತ್ತಿದ್ದೇನೆ. ದಯವಿಟ್ಟು ಇಂತಹ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ. ಇಲ್ಲವಾದರೆ, ನಾನು ಕಷ್ಟಪಟ್ಟು ದುಡಿದ ಹಣವನ್ನು ಭ್ರಷ್ಟಾಚಾರಿಗಳಿಗೆ ನೀಡಬೇಕಾಗುತ್ತದೆ. ಇದಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ನೀಡಿದ್ದೇನೆ" ಎಂದು ವಿಶಾಲ್‌ ಮನವಿ ಮಾಡಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಈ ಲಂಚ ಪ್ರಕರಣದ ಕುರಿತು ಪರಿಶೀಲನೆ ನಡೆಸಬೇಕು ಎಂದು ವಿಶಾಲ್‌ ಒತ್ತಾಯಿಸಿದ್ದಾರೆ. "ನಮಗೆ ಬೇರೆ ಆಯ್ಕೆ ಇರಲಿಲ್ಲ. ನಾವು ಎರಡು ಕಂತಿನ ಮೂಲಕ ಹಣ ಪಾವತಿಸಿದೆವು. ಈ ಘಟನೆ ಸರಕಾರಿ ಕಚೇರಿಯಲ್ಲಿ ನಡೆಯುತ್ತಿದ್ದರೆ ಈ ಸಮಸ್ಯೆ ಬಗೆಹರಿಸುವಂತೆ ಉನ್ನತ ಅಧಿಕಾರಿಗಳಿಗೆ ತಿಳಿಸುತ್ತಿದ್ದೆ" ಎಂದು ಅವರು ಹೇಳಿದ್ದಾರೆ. "ಭ್ರಷ್ಟಾಚಾರವನ್ನು ಸಿನಿಮಾದಲ್ಲಿ ತೋರಿಸುವುದು ಸರಿ, ಆದರೆ, ನಿಜವಾದ ಬದುಕಿನಲ್ಲಿ ಇದು ಇರಬಾರದು. ವಿಶೇಷವಾಗಿ ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಇರಬಾರದು. ಇದೀಗ ಸಿಬಿಎಫ್‌ಸಿ ಮುಂಬೈ ಕಚೇರಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ಕೆಟ್ಟ ಸಂಗತಿ. ಮಾರ್ಕ್‌ ಆಂಟೋನಿ ಹಿಂದಿ ಅವತರಣಿಕೆಯ ಸರ್ಟಿಫಿಕೇಟ್‌ ಪಡೆಯಲು ನಾವು 6.5 ಲಕ್ಷ ಪಾವತಿಸಿದೆವು" ಎಂದು ನಟ ವಿಶಾಲ್‌ ಸೋಷಿಯಲ್‌ ಮೀಡಿಯಾಗಳಲ್ಲಿ ಪೋಸ್ಟ್‌ ಮಾಡಿದ್ದಾರೆ.

Whats_app_banner