ಸದ್ದಿಲ್ಲದೆ ಒಟಿಟಿಯಲ್ಲಿ ಸ್ಟ್ರೀಮ್ ಆಗ್ತಿದೆ ಕ್ಲಾಂತ ಕನ್ನಡ ಸಿನಿಮಾ; ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ನೋಡಲು ಅದೊಂದೇ ಅಡ್ಡಿ
ಇದೇ ವರ್ಷ ಜನವರಿ 19 ರಂದು ಥಿಯೇಟರ್‌ನಲ್ಲಿ ಬಿಡುಗಡೆ ಆಗಿದ್ದ ಸಸ್ಪೆನ್ಸ್ ಥ್ರಿಲ್ಲರ್ ಕ್ಲಾಂತ ಸಿನಿಮಾ ಈಗ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗ್ತಿದೆ. ಆದರೆ ಈ ಸಿನಿಮಾ ನೋಡಲು ರೆಂಟ್ ನೀಡಬೇಕಿದ್ದು ಸಿನಿಪ್ರಿಯರಿಗೆ ಬೇಸರ ತರಿಸಿದೆ.
ಒಟಿಟಿಯಲ್ಲಿ ಪ್ರತಿ ದಿನ, ಪ್ರತಿ ವಾರ ಹೊಸ ಹೊಸ ಕಂಟೆಂಟ್‌ಗಳು ಸ್ಟ್ರೀಮಿಂಗ್ ಆಗುತ್ತಿವೆ. ಕೆಲವೊಂದು ಸ್ಟ್ರೀಮಿಂಗ್ ಆರಂಭಕ್ಕೂ ಮುನ್ನವೇ ಅಧಿಕೃತವಾಗಿ ಚಿತ್ರತಂಡದಿಂದ ಅನೌನ್ಸ್ ಆದರೆ, ಇನ್ನೂ ಕೆಲವು ಸದ್ದಿಲ್ಲದೆ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತವೆ. ಇದೀಗ ಕನ್ನಡ ಸಿನಿಮಾವೊಂದು ಸದ್ದಿಲ್ಲದೆ ಒಟಿಟಿಗೆ ಎಂಟ್ರಿ ಆಗಿದೆ.
ಇದೇ ವರ್ಷ ಜನವರಿ 19ರಂದು ತೆರೆ ಕಂಡಿದ್ದ ಸಿನಿಮಾ
ಇದೇ ವರ್ಷ ಜನವರಿಯಲ್ಲಿ ಚಿತ್ರಮಂದಿರಗಳಲ್ಲಿ ತೆರೆ ಕಂಡ ಕ್ಲಾಂತ ಈಗ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಥಿಯೇಟರ್‌ನಲ್ಲಿ ರಿಲೀಸ್ ಆಗಿ ಸುಮಾರು 9 ತಿಂಗಳ ನಂತರ ಈ ಸಿನಿಮಾ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಆದರೆ ಈ ಸಿನಿಮಾ ನೋಡಲು ರೆಂಟ್ ನೀಡಬೇಕು. ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ನೋಡಲು 99 ರೂ ಪಾವತಿಸಬೇಕು. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿದೆ. ಜನವರಿ 19 ರಂದು ಥಿಯೇಟರ್‌ನಲ್ಲಿ ತೆರೆ ಕಂಡ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಚಿತ್ರಮಂದಿರದಲ್ಲಿ ಮಿಸ್ ಮಾಡಿಕೊಂಡವರು ಈಗ ಒಟಿಟಿಯಲ್ಲಿ ನೋಡೋಣ ಎಂದರೆ ಚಂದಾದಾರಿಕೆ ಇದ್ದರೂ ಮತ್ತೆ ಹಣ ಪಾವತಿ ಮಾಡಬೇಕಿರುವುದು ಸಿನಿಪ್ರಿಯರಿಗೆ ಬೇಸರ ಉಂಟಾಗಿದೆ.
ಕ್ಲಾಂತ ಸಿನಿಮಾ ಕಥೆ ಏನು?
ಕ್ಲಾಂತ ಎಂದರೆ ದಣಿಯುವುದು ಎಂದು ಅರ್ಥ. ವೀಕೆಂಡ್‌ನಲ್ಲಿ ಒಂದು ಜೋಡಿ ಮನೆಯಲ್ಲಿ ಹೇಳದೆ, ಒಂದು ದಟ್ಟವಾದ ಅರಣ್ಯಕ್ಕೆ ಟ್ರಕ್ಕಿಂಗ್ ಹೋಗುತ್ತಾರೆ. ಆದರೆ ಅಲ್ಲಿ ಅವರು ಸಮಸ್ಯೆಗೆ ಸಿಲುಕುತ್ತಾರೆ. ಅವರು ಟ್ರೆಕಿಂಗ್‌ನಲ್ಲಿ ಏನು ಸಮಸ್ಯೆ ಅನುಭವಿಸುತ್ತಾರೆ. ಆ ಕಾಡಿನ ರಹಸ್ಯವೇನು? ಕೊನೆಗೆ ಈ ಜೋಡಿ ಹೇಗೆ ಸಮಸ್ಯೆಯಿಂದ ಹೊರ ಬರುತ್ತಾರೆ ಅನ್ನೋದೇ ಈ ಸಿನಿಮಾ ಕಥೆ. ಆರಂಭದಲ್ಲಿ ಕಥೆ ನಿಧಾನವಾಗಿ ಸಾಗುತ್ತಿದೆ ಎನಿಸಿದರೂ ನಂತರ ವೇಗ ಹೆಚ್ಚುತ್ತದೆ. ಚಿತ್ರದ ದ್ವಿತೀಯಾರ್ಧವು ನಿಜಕ್ಕೂ ನೋಡುಗರಿಗೆ ಒಂದೊಳ್ಳೆ ಅನುಭವ ನೀಡುತ್ತದೆ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಇಷ್ಟಪಡುವವರಿಗೆ ಈ ಸಿನಿಮಾ ನಿಜಕ್ಕೂ ಹೇಳಿಮಾಡಿಸಿದಂತೆ ಇದೆ.
ವೈಭವ್ ಪ್ರಶಾಂತ್ ನಿರ್ದೇಶನದ ಸಿನಿಮಾ
ಕ್ಲಾಂತ ಸಿನಿಮಾಗಾಗಿ ಚಿತ್ರತಂಡ ಸುಮಾರು 40 ದಿನಗಳ ಕಾಲ ಕಾಡಿನಲ್ಲಿ ಚಿತ್ರೀಕರಣ ನಡೆಸಿದೆ. ವೈಭವ್ ಪ್ರಶಾಂತ್ ನಿರ್ದೇಶನದ ಕ್ಲಾಂತ ಚಿತ್ರದಲ್ಲಿ ವಿಘ್ನೇಶ್, ಸಂಗೀತಾ ಭಟ್, ಶೋಭರಾಜ್, ವೀಣಾ ಸುಂದರ್ ಹಾಗೂ ಇನ್ನಿತರರು ನಟಿಸಿದ್ದಾರೆ. ಸಿನಿಮಾ ಜನವರಿ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಸಿನಿಮಾ ಮಿಶ್ರ ವಿಮರ್ಶೆ ಪಡೆದಿದೆ. ಇದೀಗ 9 ತಿಂಗಳ ನಂತರ ಚಿತ್ರ ಇದೀಗ ಪ್ರೈಮ್ ವಿಡಿಯೋಗೆ ಎಂಟ್ರಿ ಕೊಟ್ಟಿದೆ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಪ್ರಿಯರು, ರೆಂಟ್ ನೀಡಿ ಸಿನಿಮಾ ವೀಕ್ಷಿಸಬಹುದು.