ಬಘೀರ ಹಾಗೂ ಲಕ್ಕಿ ಭಾಸ್ಕರ್ ಸಿನಿಮಾಗಳ ಸೋಲು, ಗೆಲುವು; ರಂಗಸ್ವಾಮಿ ಮೂಕನಹಳ್ಳಿ ಬರಹ
'ಬಘೀರ' ಹಾಗೂ 'ಲಕ್ಕಿ ಭಾಸ್ಕರ್' ಈ ಹಿಂದೆ ಕೂಡ ಇದೇ ರೀತಿ ಕಥಾ ಹಂದರವಿರುವ ಸಿನಿಮಾಗಳು ಬಂದಿವೆ ಹೀಗಾಗಿ ಕತೆಯಲ್ಲಿ ಹೊಸತನವಿರಲಿಲ್ಲ. ಆದರೆ ಬಘೀರ ನೋಡಿದ ಕನ್ನಡಿಗರೆ ಅನಾಸಿನ್ ಮಾತ್ರೆ ಬೇಕಾಗಿತ್ತು ಎನ್ನುವ ಮಾತನ್ನು ಆಡುತ್ತಿದ್ದಾರೆ. ನಿಜ ಹೇಳಬೇಕೆಂದರೆ ಅನಾಸಿನ್ ಮಾತ್ರೆ ಬೇಕಾಗಿದ್ದದು ಕೆಜಿಎಫ್ ಚಿತ್ರಕ್ಕೆ ಎಂದಿದ್ದಾರೆ ರಂಗಸ್ವಾಮಿ ಮೂಕನಹಳ್ಳಿ.
ವರ್ತಮಾನದಲ್ಲಿ ಸುದ್ದಿಯಾಗುತ್ತಿರುವ ಎರಡು ಸಿನಿಮಾ 'ಬಘೀರ' ಹಾಗೂ ‘ಲಕ್ಕಿ ಭಾಸ್ಕರ್’ ಸಿನಿಮಾ ಕುರಿತು ಕೆಲವು ವಿಚಾರಗಳನ್ನು ರಂಗಸ್ವಾಮಿ ಮೂಕನಹಳ್ಳಿಯವರು ಹಂಚಿಕೊಂಡಿದ್ದಾರೆ. ಅವರು ತಮ್ಮ ಫೇಸ್ಬುಕ್‌ನಲ್ಲಿ ಹಂಚಿಕೊಂಡ ಬರಹವನ್ನು ನಾವು ಇಲ್ಲಿ ಯಥಾವತ್ತಾಗಿ ನೀಡಿದ್ದೇವೆ.
ಇತ್ತೀಚಿಗೆ ನಾನು ಎರಡು ಸಿನಿಮಾ ನೋಡಿದೆ. ಎರಡು ಸಿನಿಮಾ ನೋಡಲು ಕೂಡ ಒಂದೇ ಕಾರಣ. ಅವುಗಳು ಒಂದಷ್ಟು ಸದ್ದು ಮಾಡಿದ್ದವು. ಸಹಜ ಕುತೂಹಲದಿಂದ ಚಿತ್ರವನ್ನು ನೋಡಿದೆ. ಬಘೀರ ಇನ್ನೊಂದು ಲಕ್ಕಿ ಭಾಸ್ಕರ್. ಎರಡೂ ಚಿತ್ರಗಳ ಕಥೆ ಹಳಸಲು. ಅಂದರೆ ಈ ಹಿಂದೆ ಆಲ್ಮೋಸ್ಟ್ ಇದೆ ಕಥಾ ಹಂದರ ಇರುವ ಚಿತ್ರಗಳು ಬಂದಿವೆ. ಹೀಗಾಗಿ ಕತೆಯಲ್ಲಿ ಹೊಸತನವಿರಲಿಲ್ಲ. ಆದರೆ ಬಘೀರ ನೋಡಿದ ಕನ್ನಡಿಗರೆ ಅನಾಸಿನ್ ಮಾತ್ರೆ ಬೇಕಾಗಿತ್ತು ಎನ್ನುವ ಮಾತನ್ನು ಆಡುತ್ತಿದ್ದಾರೆ. ನಿಜ ಹೇಳಬೇಕೆಂದರೆ ಅನಾಸಿನ್ ಮಾತ್ರೆ ಬೇಕಾಗಿದ್ದದು ಕೆಜಿಎಫ್ ಚಿತ್ರಕ್ಕೆ , ಈ ಚಿತ್ರದ ಮೇಕಿಂಗ್ ಚನ್ನಾಗಿದೆ. ಅಂದರೆ ಪ್ರತಿ ಸೀನ್ನಲ್ಲೂ ರಿಚ್ನೆಸ್ ಎದ್ದು ಕಾಣುತ್ತದೆ. ಕಥೆ ಹೇಳುವ ರೀತಿಯಲ್ಲಿ ಬದಲಾವಣೆ ಬೇಕಿತ್ತು. ಕೆಜಿಎಫ್ ಗೆದ್ದ ನಂತರ ಅದೇ ಮಾದರಿಯ ಚಿತ್ರಗಳನ್ನು ತೆಗೆಯಲು, ಹೀರೋ ಬಿಟ್ಟು ಬೇರೆಯಾರಿಗೂ ಅಷ್ಟೊಂದು ಮಹತ್ವವಿರದ ಕಥೆಗಳನ್ನು ಹೆಣೆಯುವುದು ಮಾಡುತ್ತಿದ್ದಾರೆ. ಅದರಲ್ಲೂ ಕನ್ನಡದವರಿಗೆ ಕೆಜಿಎಫ್ ಗುಂಗಿನಿಂದ ಹೊರಬರಲಾಗಿಲ್ಲ. ಪ್ರಶಾಂತ್ ನೀಲ್ ಎಲ್ಲವನ್ನೂ ಕೆಜಿಎಫ್ ಮಾದರಿಯಲ್ಲಿ ಕಥೆಯನ್ನು ಬರೆಯುವುದು ನಿಲ್ಲಿಸುವುದು ಒಳ್ಳೆಯದು.
ಹೊಸದಾಗಿ ಕಾಣಲು ಕಾರಣ ಏನು?
ಲಕ್ಕಿ ಭಾಸ್ಕರ್ ಗೆದ್ದಿರುವುದು ಕಥೆಯಿಂದ ನಿರೂಪಿಸುವ ಶೈಲಿಯಿಂದ , ಕೆಜಿಎಫ್ ನಂತರ ಎಲ್ಲರೂ ಹೀರೋ ಎಂದರೆ ಲಾರ್ಜರ್ ದಾನ್ ಲೈಫ್ ಎನ್ನುವ ಮಟ್ಟದಲ್ಲೇ ತೋರಿಸಬೇಕು ಎನ್ನುವ ಫಾರ್ಮುಲಾದಿಂದ ಹೊರಬಂದು ಕಥೆಯೇ ನಿಜವಾದ ನಾಯಕ ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ನಿಜ ಹೇಳಬೇಕೆಂದರೆ ಈ ರೀತಿಯ ಕಥೆಗಳು ಕೂಡ ಬಹಳಷ್ಟು ಬಂದು ಹೋಗಿವೆ. ಆದರೆ ಇದು ಬಂದ ಟೈಮಿಂಗ್ ಅದಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಅವವೇ ಚರ್ವಿತಚರ್ವಣ ಸಿನೆಮಾಗಳ ಮಧ್ಯೆ ಪ್ರೇಕ್ಷಕನಿಗೆ ಇದು ಹೊಸದಾಗಿ ಕಂಡಿದೆ.
ಹಣದ ಉಲ್ಲೇಖ
ಅದೇನೆ ಇರಲಿ ಲಕ್ಕಿ ಭಾಸ್ಕರ್ ಚಿತ್ರದ ಬಗ್ಗೆ ನಾಲ್ಕು ಸಾಲು ಬರೆಯದೆ ಹೋದರೆ ಆಗುವುದಿಲ್ಲ. ಹೀಗಾಗಿ ಹಣ ಎನ್ನುವುದು ಇಂದಲ್ಲ ಮನುಷ್ಯನ ಉಗಮದಿಂದ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ. ಹಣಕ್ಕೆ ಈಗ ಸಿಗುತ್ತಿರುವ ಮರ್ಯಾದೆ ಹೊಸತಲ್ಲ , ಅದಕ್ಕೆ ಬಹಳ ಹಿಂದಿನಿಂದಲೂ ಇದೆ ಮರ್ಯಾದೆ , ಗೌರವ ಸಿಗುತ್ತಿದೆ. ಅದು ತನ್ನ ಹುಟ್ಟಿನ ದಿನದಿಂದ ಅದೇ ಗತ್ತನ್ನ ಕಾಯ್ದು ಕೊಂಡಿದೆ. ಅದಕ್ಕೆ ನಮ್ಮ ವೇದಗಳಲ್ಲಿ , ನೀತಿಶತಕದಲ್ಲಿ , ಭಗವದ್ಗೀತೆಯಲ್ಲಿ , ರಾಮಾಯಣದಲ್ಲಿ , ಮಹಾಭಾರತದಲ್ಲಿ , ಹಲನಾ ಸಪ್ತಶತಿ ಯಲ್ಲಿ , ಪಂಚತಂತ್ರದಲ್ಲಿ , ಭಾಗವತದಲ್ಲಿ ಮತ್ತು ಚಾಣಕ್ಯನ ಅರ್ಥಶಾಸ್ತ್ರದಲ್ಲಿ ಅನೇಕ ಉಲ್ಲೇಕಗಳನ್ನ ಕಾಣಬಹುದು.
ರಾಮಾಯಣದ ಯುದ್ಧಕಾಂಡ 83-33 ರಲ್ಲಿನ ಒಂದು ಶ್ಲೋಕ:
ಅರ್ಥೇನ ಹಿ ವಿಯುಕ್ತಸ್ಯ ಪುರುಷಸ್ಯಾಲ್ಪತೇಜಸಂ! ವ್ಯುಚ್ಛಿದ್ಯೇನೇ ಕ್ರಿಯಾಂ ಸರ್ವಾ ಗ್ರೀಷ್ಮೇ ಕುಸುರಿತೋ ಯಥಾ!!
ಇದರರ್ಥ ಧನಹೀನನಾಗಿರುವ ಮನುಷ್ಯ ನಿಸ್ತೇಜನಾಗಿ ಕಾಣುತ್ತಾನೆ , ಆತನ ಎಲ್ಲಾ ಕಾರ್ಯಗಳೂ ಬೇಸಿಗೆಯಲ್ಲಿ ನೀರಿನ ಹೊಂಡಗಳು ಇಂಗಿ ಹೋಗುವಂತೆ ತಾವಾಗೇ ನಶಿಸಿ ಹೋಗುತ್ತವೆ. ಹೀಗಾಗಿ ಹಣವಂತರಾಗಬೇಕು. ಹಣವಂತರಾಗುವುದು , ಸ್ಥಿತಿವಂತರಾಗುವುದು ತಪ್ಪಲ್ಲ.
ಆದರೆ ಹಣವಂತರಾಗುವ ದಾರಿ ಕೂಡ ಸರಿಯಿರಬೇಕು. ಚಿತ್ರದಲ್ಲಿ ಹೇಗಾದರೂ ಸರಿ ಹಣ ಮಾಡಿದರೆ ಸಾಕು, ಕೊನೆಯಲ್ಲಿ ಒಂದಷ್ಟು ಪಶ್ಚಾತಾಪ ಪಟ್ಟು ನಾಲ್ಕು ಜನರಿಗೆ ನಾಲ್ಕು ಕಾಸು ದಾನ ಮಾಡಿದರೆ ಸಾಕು ಎನ್ನುವ ತಪ್ಪು ಸಂದೇಶವನ್ನು ಕೊಡುತ್ತದೆ. ಇವತ್ತಿನ ಕಾಲಘಟ್ಟದಲ್ಲಿ ತಪ್ಪು ಸರಿಗಳ ಪರಿಭಾಷೆ ಬದಲಾಗಿರುವ ಕಾರಣ ಅದು ಓಕೆಯಾಗಿದೆ. ಜನ ಮೆಚ್ಚಿದ್ದಾರೆ ಸಿನಿಮಾ ಗೆದ್ದಿದೆ ಅಷ್ಟೇ.
ಸಿನಿಮಾ ನನಗೂ ಇಷ್ಟವಾಯ್ತು ಅದಕ್ಕೆ ಕಾರಣ :
ಚಾಣಕ್ಯನ ನೀತಿ ಶ್ಲೋಕದಲ್ಲಿ ಒಂದು ಶ್ಲೋಕದಲ್ಲಿನ ಉಲ್ಲೇಖ:
ಆಯು: ಕರ್ಮ ಚ ವಿತ್ತಂ ಚ ವಿದ್ಯಾ ನಿಧನಮೇವ ಚ I
ಪಂಚೈತಾನಿ ಹಿ ಸೃಜ್ಯ೦ತೆ ಗರ್ಭಸ್ಥಸೆಯ್ಯವ ದೇಹಿನ:
ಅಂದರೆ ಮನುಷ್ಯನ ಅಥವಾ ಜೀವಿಯ ಆಯುಷ್ಯ , ಕೆಲಸ , ಹಣ , ವಿದ್ಯೆ ಮತ್ತು ಮರಣ - ಈ ಐದೂ ಜೀವಿ ಗರ್ಭವಾಸ್ಥೆಯಲ್ಲಿರುವಾಗಲೇ ತೀರ್ಮಾನವಾಗಿ ಬಿಟ್ಟಿರುತ್ತದೆ ಎನ್ನುತ್ತದೆ. ಹೀಗಿದ್ದ ಮೇಲೆ ನಾವು ಪ್ರಯತ್ನವನ್ನ ಮಾಡುವುದರಿಂದ ಏನು ಪ್ರಯೋಜನ ಎನ್ನುವ ಪ್ರಶ್ನೆ ಏಳುತ್ತದೆ. ಹಣೆಬರಹವನ್ನ ಕೂಡ ಪ್ರಯತ್ನದಿಂದ ಬದಲಿಸಲು ಸಾಧ್ಯ ಎನ್ನುವುದನ್ನ ಕೂಡ ಮನುಷ್ಯ ರುಜುವಾತು ಮಾಡಿ ತೋರಿಸಿದ್ದಾನೆ. ಎಲ್ಲವೂ ವಿಧಿಬರಹ , ಹಣೆಬರಹ ಎಂದು ಮನುಷ್ಯ ಕುಳಿತ್ತಿದ್ದರೆ ಇಂದಿಗೆ ನಾವು ಕಾಣುತ್ತಿರುವ ಟೆಕ್ನಾಲಜಿ, ಸಂಪತ್ತು , ವಿಕಾಸ ಇದ್ಯಾವುದನ್ನೂ ನಾವು ಕಾಣಲು ಸಾಧ್ಯವಿರುತ್ತಿರಲಿಲ್ಲ . ಮನುಷ್ಯ ಕಟ್ಟಿಕೊಂಡ ಕನಸುಗಳು ಅವನನ್ನ ಇಲ್ಲಿಗೆ ತಂದು ನಿಲ್ಲಿಸಿವೆ.
ಸಿನಿಮಾದಲ್ಲಿ ಹೀರೋ ತನ್ನ ಪ್ರಯತ್ನದಿಂದ ಬದುಕಿನ ಹಾದಿಯನ್ನು ಬದಲಿಸಿಕೊಳ್ಳುತ್ತಾನೆ. ಆಟದಲ್ಲಿ ತೊಡಗುವುದು ಮುಖ್ಯ , ಗೆಲ್ಲುವುದು ಮುಖ್ಯ , ಹಾಗೆ ಸರಿಯಾದ ಸಮಯದಲ್ಲಿ ನಿರ್ಗಮಿಸುವುದು ಕೂಡ ಮುಖ್ಯ ಎನ್ನುವ ಅಂಶ ಬಹಳ ಸತ್ಯ.
ಕನ್ನಡಿಗ ನಿರ್ಮಾಪಕರು ಕಥೆಯನ್ನು ಕೇಳಿ ಅದು ತೆರೆಯ ಮೇಲೆ ಹೇಗೆ ಬರಬಹುದು ಎನ್ನುವ ಕಲ್ಪನೆ ಮಾಡಿಕೊಳ್ಳುವ ಮಟ್ಟಕ್ಕೆ ಬೆಳೆದರೆ ಕನ್ನಡ ಸಿನಿಮಾ ಕೂಡ ಬೆಳೆಯುತ್ತದೆ ಎನ್ನುವುದು ನನ್ನ ಭಾವನೆ.
ಕೊನೆಗೆ: ಬಘೀರ ತೀರಾ ಕಳಪೆ , ತಲೆನೋವು ಬಂತು ಎನ್ನುವ ಚಿತ್ರ ಖಂಡಿತ ಅಲ್ಲ. ಒಂದು ಬಾರಿ ನೋಡಬಹುದು. ಲಕ್ಕಿ ಭಾಸ್ಕರ್ ಲವಲವಿಕೆಯ ಸ್ಕ್ರೀನ್ ಪ್ಲೇ , ಮತ್ತು ಸಿನಿಮಾಟೋಗ್ರಫಿಯಿಂದ, ಕಥೆಯ ನಿರೂಪಣಾ ಶೈಲಿಯಿಂದ ಗೆದ್ದಿದೆ. ಒಂದು ಕ್ಷಣ ಕೂಡ ಪ್ರೇಕ್ಷಕ ತನ್ನ ಮೊಬೈಲ್ ನೋಡದಂತೆ ಮಾಡಿದರೆ ಆ ಚಿತ್ರ ಸೂಪರ್ ಹಿಟ್ ಎನ್ನಬಹುದು. ಈ ನಿಟ್ಟಿನಲ್ಲಿ ಲಕ್ಕಿ ಭಾಸ್ಕರ್ ಚಿತ್ರ ಮುಂದೇನು ಎನ್ನುವ ಕುತೂಹಲ ಉಳಿಸಿಕೊಂಡು ನೋಡುಗನನ್ನು ಹಿಡಿಡುತ್ತದೆ. ಚಿತ್ರ ಗೆಲ್ಲುವುದು ಎಂದರೆ ಕೇವಲ ಹಣ ಮಾಡುವುದು ಮಾತ್ರವಲ್ಲ . ಹಣ ಬೈ ಪ್ರಾಡಕ್ಟ್ , ಮೇನ್ ಪ್ರಾಡಕ್ಟ್ ಚೆನ್ನಾಗಿದ್ದಾಗ ಹಣ ಹಿಂದೆ ಬಂದೆ ಬರುತ್ತದೆ. ಅದಕ್ಕೆ ಬೇರೆ ದಾರಿಯಿಲ್ಲ ಕಣ್ರೀ.
- ರಂಗಸ್ವಾಮಿ ಮೂಕನಹಳ್ಳಿ (ಫೇಸ್ಬುಕ್ ಬರಹ)
ಇದನ್ನೂ ಓದಿ: Dhruva Sarja: ಮಾರ್ಟಿನ್ ಸೋಲು, ನಿರ್ಮಾಪಕ ಉದಯ್ ಕೆ ಮೆಹ್ತಾ ಜತೆಗೆ ಧ್ರುವ ಸರ್ಜಾ ಇನ್ನೊಂದು ಸಿನಿಮಾ!