Rishab Shetty: ಪರಭಾಷೆ ಚಿತ್ರಗಳಲ್ಲಿ ನಟಿಸುವ ವಿಚಾರವಾಗಿ ಯೂ ಟರ್ನ್ ತೆಗೆದುಕೊಂಡ ರಿಷಭ್ ಶೆಟ್ಟಿ; ಹಿಂದೆ ಹೇಳಿದ್ದೇನು, ಈಗ ಮಾಡಿದ್ದೇನು?
ಕನ್ನಡದ ಖ್ಯಾತ ನಟ ಮತ್ತು ನಿರ್ದೇಶಕ ರಿಷಭ್ ಶೆಟ್ಟಿ ಈ ಹಿಂದೆ ಆಡಿದ ತಾನು ಕನ್ನಡ ಸಿನಿಮಾಗಳಲ್ಲೇ ಹೆಚ್ಚಾಗಿ ನಟಿಸುತ್ತೇನೆ ಎಂದಿದ್ದರು ಆದರೆ ಮುಂಬರುವ ಎಲ್ಲ ಸಿನಿಮಾಗಳೂ ಸಹ ಪರಭಾಷೆಯ ಸಿನಿಮಾಗಳೇ ಆಗಿದೆ. ರಿಷಬ್ ಭಾಷೆಗೆ ಗಡಿ ಇಲ್ಲ ಎಂದಿದ್ದಾರೆ.
ಕನ್ನಡದ ಖ್ಯಾತ ನಟ ಮತ್ತು ನಿರ್ದೇಶಕ ರಿಷಭ್ ಶೆಟ್ಟಿ, ‘ದಿ ಪ್ರೈಡ್ ಆಫ್ ಭಾರತ್ - ಛತ್ರಪತಿ ಶಿವಾಜಿ ಮಹಾರಾಜ್’ ಎಂಬ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಶಿವಾಜಿ ಮಹಾರಾಜರ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಕುರಿತು ತಮ್ಮ ‘ಎಕ್ಸ್’ ಖಾತೆಯಲ್ಲಿ ರಿಷಭ್, ಮಂಗಳವಾರ ಬೆಳಿಗ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ. ರಿಷಭ್ ಶೆಟ್ಟಿ ಇದಕ್ಕೂ ಮೊದಲು ‘ಜೈ ಹನುಮಾನ್’ ಎಂಬ ಪ್ಯಾನ್ ಇಂಡಿಯಾ ಚಿತ್ರದಲ್ಲೂ ನಟಿಸುವುದಕ್ಕೆ ಒಪ್ಪಿದ್ದಾರೆ. ‘ಹನುಮ್ಯಾನ್’ ಚಿತ್ರದ ಮುಂದುವರೆದ ಭಾಗವಾದ ‘ಜೈ ಹನುಮಾನ್’ ಚಿತ್ರದಲ್ಲಿ ರಿಷಭ್, ಆಂಜನೇಯನ ಪಾತ್ರವನ್ನು ನಿರ್ವಹಿಸುತ್ತಿದ್ದು, ಮುಂದಿನ ವರ್ಷ ಚಿತ್ರೀಕರಣ ಪ್ರಾರಂಭವಾಗಲಿದೆ. ಒಂದು ಕಡೆ ಕನ್ನಡಿಗರೊಬ್ಬರು ಪರಭಾಷೆಯ ಚಿತ್ರಗಳಲ್ಲಿ ಹೆಚ್ಚುಹೆಚ್ಚು ನಟಿಸುತ್ತಿರುವುದು ಖುಷಿಯ ವಿಚಾರವಾದರೂ, ಇನ್ನೊಂದು ಕಡೆ ರಿಷಭ್ ಶೆಟ್ಟಿ, ಕನ್ನಡಕ್ಕಿಂತ ಹೆಚ್ಚಾಗಿ ಪರಭಾಷೆಯ ಚಿತ್ರಗಳಲ್ಲೇ ಹೆಚ್ಚುಹೆಚ್ಚು ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ, ಕಳೆದ ವರ್ಷ ಆಡಿದ ಮಾತುಗಳಿಗೆ ಈಗ ತಾವೇ ಯೂಟರ್ನ್ ತೆಗೆದುಕೊಂಡಿದ್ದಾರೆ.
ನನ್ನ ಮೊದಲ ಆದ್ಯತೆ ಕನ್ನಡ ಚಿತ್ರರಂಗ ಎಂದಿದ್ದರು ರಿಷಬ್
ಕಳೆದ ವರ್ಷ ಗೋವಾದಲ್ಲಿ ನಡೆದ ಅಂತಾರಾಷ್ಟ್ರೀ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿ ಮಾತನಾಡುವ ಸಂದರ್ಭದಲ್ಲಿ ಅವರು ಕನ್ನಡ ಚಿತ್ರಗಳಲ್ಲೇ ನಟಿಸುವುದಾಗಿ ಹೇಳಿದ್ದರು. ಪರಭಾಷೆಯ ಚಿತ್ರಗಳಲ್ಲಿ ಅವಕಾಶಗಳು ಬರುತ್ತಿದ್ದರೂ, ಕನ್ನಡದಲ್ಲೇ ಹೆಚ್ಚು ಚಿತ್ರಗಳನ್ನು ಮಾಡುವುದಾಗಿ ಹೇಳಿದ್ದರು. ಈ ಕುರಿತು ಮಾತನಾಡಿದ್ದ ಅವರು, ‘’ಕಾಂತಾರ’ ಚಿತ್ರದ ನಂತರ ನನಗೆ ಪರಭಾಷೆಯ, ಅದರಲ್ಲೂ ಹಿಂದಿಯ ಹಲವು ಚಿತ್ರಗಳಲ್ಲಿ ನಟಿಸುವುದಕ್ಕೆ ಅವಕಾಶಗಳು ಬರುತ್ತಿವೆ. ನನ್ನ ಮೊದಲ ಆದ್ಯತೆ ಕನ್ನಡ ಚಿತ್ರರಂಗ. ಇವತ್ತು ನಾನು ಏನಾಗಿದ್ದೇನೆ, ಅದೆಲ್ಲಕ್ಕೂ ಕಾರಣವಾಗಿರುವುದು ಕನ್ನಡ ಚಿತ್ರರಂಗ. ಚಿತ್ರರಂಗ ಮತ್ತು ಪ್ರೇಕ್ಷಕರ ಬೆಂಬಲ ಮತ್ತು ಸಹಕಾರವಿಲ್ಲದಿದ್ದರೆ ಇಷ್ಟು ದೂರ ಬರುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ, ನಾನು ಅವರಿಗೆ ಸದಾ ಚಿರಋಣಿ.
ಕನ್ನಡ ಹಲವು ಒಳ್ಳೆಯ ಅವಕಾಶಗಳನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಏಕೆಂದರೆ, ನನಗೆ ಕನ್ನಡ ಚಿತ್ರರಂಗವನ್ನು ಬಿಡುವುದಕ್ಕೆ ಇಷ್ಟವಿಲ್ಲ. ಅದೊಂದು ಸೆಂಟಿಮೆಂಟ್. ನಾಳೆ ಯಾರಾದರೂ ಬಂದು, ಒಂದು ಸಿನಿಮಾ ಹಿಟ್ ಆದ ತಕ್ಷಣ, ಚಿತ್ರರಂಗವನ್ನೇ ಬಿಟ್ಟು ಹೋಗುತ್ತಿದ್ದಾನೆ ಎನ್ನಬಾರದು. ನನಗೆ ಕನ್ನಡ ಚಿತ್ರರಂಗದಲ್ಲೇ ಇರುವುದಕ್ಕೆ ಆಸೆ ಮತ್ತು ಇಲ್ಲೇ ಇನ್ನಷ್ಟು ಚಿತ್ರಗಳನ್ನು ಮಾಡುವಾಸೆ’ ಎಂದು ಹೇಳಿದ್ದರು.
ಭಾಷೆಗೆ ಗಡಿ ಇಲ್ಲ
ಬೇರೆ ಭಾಷೆಗಳಿಗೆ ಹೋಗಬೇಕು ಅಂತೇನೂ ಇಲ್ಲ, ಒಂದು ಚಿತ್ರ ಚೆನ್ನಾಗಿದ್ದರೆ ಅದು ಬೇರೆ ಭಾಷೆಗಳಿಗೂ ಡಬ್ ಆಗುತ್ತದೆ ಎಂದು ಹೇಳಿದ್ದ ರಿಷಭ್, ‘ಭಾಷೆಗೆ ಗಡಿ ಇಲ್ಲ. ಚಿತ್ರ ಚೆನ್ನಾಗಿದ್ದರೆ, ಅದು ಗಡಿ ಮೀರಿ ಬೇರೆ ಕಡೆ ಹೋಗುತ್ತದೆ. ಹಾಗಾಗಿ, ನಾವು ಮೊದಲು ಎಲ್ಲರಿಗೂ ಸಲ್ಲುವಂತಹ ಕಥೆಗಳನ್ನು ಚಿತ್ರ ಮಾಡುವ ಪ್ರಯತ್ನ ಮಾಡಬೇಕು. ನಾನೇನೇ ಮಾಡಿದರೂ ಕನ್ನಡದಲ್ಲಿ ಮಾಡುತ್ತೇನೆ. ಅದನ್ನೇ ಜಾಗತಿಕವಾಗಿ ಮುಟ್ಟಿಸುವ ಪ್ರಯತ್ನ ಮಾಡುತ್ತೇನೆ. ಎಲ್ಲರಿಗೂ ಕನೆಕ್ಟ್ ಆಗುವಂತೆ ಮಾಡುತ್ತೇನೆ’ ಎಂದು ಹೇಳಿದ್ದರು.
ಹೀಗೆ ಹೇಳಿದ ಒಂದೇ ವರ್ಷಕ್ಕೆ ರಿಷಭ್ ಶೆಟ್ಟಿ, ಯೂ ಟರ್ನ್ ತೆಗೆದುಕೊಂಡಿದ್ದಾರೆ. ಎರಡು ಪರಭಾಷೆಯ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಈ ಮಧ್ಯೆ, ಅವರು ಯಾವುದೇ ಹೊಸ ಕನ್ನಡ ಚಿತ್ರವನ್ನೂ ಒಪ್ಪಿಲ್ಲ. ಮುಂದಿನ ವರ್ಷ ಅಕ್ಟೋಬರ್ 02ರಂದು ‘ಕಾಂತಾರ – ಅಧ್ಯಾಯ 1’ ಚಿತ್ರ ಬಿಡುಗಡೆಯಾದ ಮೇಲೆ, ಅವರು ಸಂಪೂರ್ಣವಾಗಿ ‘ಜೈ ಹನುಮಾನ್’ ಮತ್ತು ‘ದಿ ಪ್ರೈಡ್ ಆಫ್ ಭಾರತ್ - ಛತ್ರಪತಿ ಶಿವಾಜಿ ಚಿತ್ರಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಇದೆ. ಇವೆರಡೂ ಚಿತ್ರಗಳು ಕನ್ನಡಕ್‍ಕೂ ಡಬ್ ಆಗುತ್ತವೆ ಎನ್ನುವುದು ಹೌದಾದರೂ, ಎರಡೂ ಚಿತ್ರಗಳು ಪರಭಾಷೆಯ ಚಿತ್ರಗಳು ಎಂಬುದು ಗಮನಾರ್ಹ. ಹಾಗಾದರೆ, ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ಎಂಬ ರಿಷಭ್ ಮಾತು ಏನಾಯ್ತು?
ಕನ್ನಡದಲ್ಲಿ ಒಪ್ಪಿಕೊಂಡ ಚಿತ್ರಗಳು
‘ಕಾಂತಾರ’ ಬಿಡುಗಡೆಗೂ ಮುನ್ನ ರಿಷಭ್ ಒಂದಿಷ್ಟು ಕನ್ನಡ ಚಿತ್ರಗಳಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದರು. ಈ ಪೈಕಿ ‘ನಾಥೂರಾಮ್’ ಮತ್ತು ‘ಬೆಲ್ ಬಾಟಮ್ 2’ ಚಿತ್ರಗಳ ಮುಹೂರ್ತವೂ ಆಗಿತ್ತು. ಆದರೆ, ಚಿತ್ರೀಕರಣ ಶುರುವಾಗಿರಲಿಲ್ಲ. ಇದಲ್ಲದೆ ‘ರುದ್ರಪ್ರಯಾಗ’ ಮತ್ತು ಶಿವರಾಜಕುಮಾರ್ ಅಭಿನಯದಲ್ಲಿ ಒಂದು ಚಿತ್ರವನ್ನು ನಿರ್ದೇಶಿಸುವುದಾಗಿ ಘೋಷಿಸಿದ್ದರು. ರಿಷಭ್ ಈಗ ಪರಭಾಷೆಯ ಚಿತ್ರಗಳಲ್ಲೇ ಹೆಚ್ಚಾಗಿ ತೊಡಗಿಸಿಕೊಂಡಿರುವುದರಿಂದ, ಬಹುಶಃ ಆ ಚಿತ್ರಗಳೆಲ್ಲಾ ನೆನೆಗುದಿಗೆ ಬಿದ್ದಂತೆ ಕಾಣುತ್ತವೆ.
ವರದಿ: ಚೇತನ್ ನಾಡಿಗೇರ್
ಇದನ್ನೂ ಓದಿ: Lakshmi Baramma: ಸತ್ಯ ಹೇಳಲು ತಾನೇ ಬಂದ ಲಕ್ಷ್ಮೀ; ಕಾವೇರಿಗೆ ಕಾದಿದೆ ಬಿಗ್ ಶಾಕ್, ವೈಷ್ಣವ್ಗೆ ಇಂದೇ ತಿಳಿಯಲಿದೆ ಸತ್ಯ