ಒಂದು ಲಕ್ಷ ಪುಸ್ತಕ ಮಾರಾಟ, ಎರಡು ಕೋಟಿ ಲಾಭ, ಅದೇ ದುಡ್ಡಲ್ಲಿ ಸಿನಿಮಾ ನಿರ್ಮಾಣ! ಹೊಸ ಚಿತ್ರತಂಡದಿಂದ ಅಪರೂಪದ ಸಾಹಸ
ಕನ್ನಡ ಸುದ್ದಿ  /  ಮನರಂಜನೆ  /  ಒಂದು ಲಕ್ಷ ಪುಸ್ತಕ ಮಾರಾಟ, ಎರಡು ಕೋಟಿ ಲಾಭ, ಅದೇ ದುಡ್ಡಲ್ಲಿ ಸಿನಿಮಾ ನಿರ್ಮಾಣ! ಹೊಸ ಚಿತ್ರತಂಡದಿಂದ ಅಪರೂಪದ ಸಾಹಸ

ಒಂದು ಲಕ್ಷ ಪುಸ್ತಕ ಮಾರಾಟ, ಎರಡು ಕೋಟಿ ಲಾಭ, ಅದೇ ದುಡ್ಡಲ್ಲಿ ಸಿನಿಮಾ ನಿರ್ಮಾಣ! ಹೊಸ ಚಿತ್ರತಂಡದಿಂದ ಅಪರೂಪದ ಸಾಹಸ

ಸಿನಿಮಾಕ್ಕೆ ನಿರ್ಮಾಪಕರು ಸಿಗದೇ ಹೋದರೆ, ಕಟ್ಟಿದ ಕನಸಿನ ಮಹಲು ನೆಲಕ್ಕಪ್ಪಳಿಸುತ್ತದೆ. ಆದರೆ, ನಾವೇ ನಿರ್ಮಾಪಕರಾದರೆ ಹೇಗೆ? ಇಂಥದ್ದೊಂದು ಸಾಹಸ ಮತ್ತು ಸಾಧನೆಗೆ ಮುಂದಾಗಿದೆ ಹೊಸಬರ ಸಿನಿಮಾ ತಂಡ. ಅಷ್ಟಕ್ಕೂ ಅವರು ಮಾಡಹೊರಟ ಕೆಲಸ ಏನಿರಬಹುದು? ಇಲ್ಲಿದೆ ಓದಿ.

ಒಂದು ಲಕ್ಷ ಪುಸ್ತಕ ಮಾರಾಟ, ಎರಡು ಕೋಟಿ ಲಾಭ, ಅದೇ ದುಡ್ಡಲ್ಲಿ ಸಿನಿಮಾ ನಿರ್ಮಾಣ!
ಒಂದು ಲಕ್ಷ ಪುಸ್ತಕ ಮಾರಾಟ, ಎರಡು ಕೋಟಿ ಲಾಭ, ಅದೇ ದುಡ್ಡಲ್ಲಿ ಸಿನಿಮಾ ನಿರ್ಮಾಣ!

Sandalwood News: ಸಿನಿಮಾ ನಿರ್ಮಾಣಕ್ಕೆ ನಿರ್ಮಾಪಕರು ಬೇಕು. ನಿರ್ಮಾಪಕರು ಸಿಗದೇ ಹೋದರೆ, ಕಟ್ಟಿದ ಕನಸಿನ ಮಹಲು ನೆಲಕ್ಕಪ್ಪಳಿಸುತ್ತದೆ. ಆದರೆ, ನಾವೇ ನಿರ್ಮಾಪಕರಾದರೆ ಹೇಗೆ? ಇಂಥದ್ದೊಂದು ಸಾಹಸ ಮತ್ತು ಸಾಧನೆಗೆ ಮುಂದಾಗಿದೆ ಹೊಸಬರ ಸಿನಿಮಾ ತಂಡ. ಗಟ್ಟಿ ಕಥೆ ಮಾಡಿಕೊಂಡ ಹೊಸ ತರುಣರ ತಂಡವೊಂದು, ಎಷ್ಟೇ ಅಲೆದಾಡಿದೂ ನಿರ್ಮಾಪಕರು ಸಿಗದಿದ್ದಾಗ, ಹೊಸ ಆಲೋಚನೆಯತ್ತ ಸಾಗಿದೆ. ಅದೇನೆಂದರೆ, ಒಂದು ಲಕ್ಷ ಪುಸ್ತಕ ಮಾರಾಟ ಮಾಡಿ, ಅದರಿಂದ ಬಂದ ಎರಡು ಕೋಟಿ ಲಾಭವನ್ನಿಟ್ಟುಕೊಂಡು ಸಿನಿಮಾ ನಿರ್ಮಾಣಕ್ಕೆ ಇಳಿಯುತ್ತಿದೆ. ಈ ವಿಶೇಷ ತಂಡದ ಬಗ್ಗೆ ವೀರಕ ಪುತ್ರ ಶ್ರೀನಿವಾಸ್‌ ಬರೆದ ಬರಹ ಇಲ್ಲಿದೆ.

ಪುಸ್ತಕದಿಂದ ಎರಡು ಕೋಟಿ ರೂಪಾಯಿ...

ಬಿಸಿನೆಸ್ ಮಾಡಬೇಕು ಎಂದುಕೊಳ್ಳುವವರನ್ನು ಅಥವಾ ಬಿಸಿನೆಸ್ ಮಾಡುತ್ತಿರುವವರನ್ನು 'ಏನ್ ಬಿಸಿನೆಸ್ಸು'? ಅಂತ ಕೇಳಿ ನೋಡಿ; ಅವರೆಲ್ಲರೂ ಹೋಟೆಲ್, ಹಾಸ್ಪಿಟಲ್, ಸಾಫ್ಟವೇರ್, ಗಾರ್ಮೆಂಟ್ಸ್, ಸರ್ವೀಸ್ ಇಂಡಸ್ಟ್ರಿ, ರಿಯಲ್ ಎಸ್ಟೇಟ್ ಹೀಗೆ ನೂರೆಂಟು ತರಹದ ಬಿಸಿನೆಸ್ ಹೆಸರು ಹೇಳ್ತಾರೆ. ಆದರೆ ಒಬ್ಬರೂ ಸಹ ಪುಸ್ತಕಗಳ ಬಿಸಿನೆಸ್ ಅನ್ನೋದೇ ಇಲ್ಲ. ಪುಸ್ತಕಗಳಿಂದ ಕಾಸು ಹುಟ್ಟಲ್ಲ ಅಂತ ಜನ ತೀರ್ಮಾನಿಸಿಬಿಟ್ಟಿದ್ದಾರೆ ಅಥವಾ ತೀರ್ಮಾನಿಸುವಂತೆ ಮಾಡಲಾಗಿದೆ. ಆದ್ದರಿಂದಲೇ ಪುಸ್ತಕಗಳು ಬಿಸಿನೆಸ್ಸಿಗರ ಆಯ್ಕೆಯಾಗಲಿಲ್ಲ. ಯಾವಾಗ ಆಯ್ಕೆಯಾಗಲಿಲ್ಲವೋ ಆಗ ಹರಿವು ಎಂಬುದನ್ನು ಪುಸ್ತಕಲೋಕ ಕಾಣಲಿಲ್ಲ. ನಿಂತ ನೀರಾಗಿ ಹೋಯ್ತು! ಇದು ಪತನದೆಡೆಗಿನ ಹೆಜ್ಜೆ ಅನ್ನೋದನ್ನು ನಾವ್ಯಾರೂ ಗ್ರಹಿಸಲೇ ಇಲ್ಲ. ವೀರಲೋಕ ಹುಟ್ಟಿದ್ದು ಅಂತಹ ಸಂದರ್ಭದಲ್ಲಿಯೇ. ಅದಾಗಿ ಎರಡು ವರ್ಷಗಳ ನಂತರ ಮತ್ತೊಂದು ಉತ್ಸಾಹಿ ತಂಡ ನಾವು ಪುಸ್ತಕದಿಂದ ಎರಡು ಕೋಟಿ ದುಡ್ಡು ಮಾಡ್ತೀವಿ ಅಂತ ಮುಂದೆ ಬಂದಿದ್ದಾರೆ.

ವಾಹ್ ಅಲ್ವಾ...!

ವಿಷಯ ಏನೆಂದರೆ, ಇದೊಂದು ಸಿನಿಮಾಸಕ್ತರ ತಂಡ. ಅವರೆಲ್ಲರೂ ಸೇರಿ "ಇಲ್ಲೀಗಲ್" ಎಂಬ ಸಿನಿಮಾ ಮಾಡುವ ಯೋಚನೆ ಮಾಡಿದ್ರು. ಆದರೆ ಕಳೆದ ಒಂದು ವರ್ಷದಿಂದಲೂ ಅವರಿಗೆ ಒಬ್ಬ ನಿರ್ಮಾಪಕ ಸಿಕ್ಕಿಲ್ಲ. ಹಾಗಂತ ಆ ಯೋಜನೆಯನ್ನು ಅಲ್ಲಿಗೇ ಕೈಬಿಡುವ ಬದಲು ಇವರೊಂದು ನಿರ್ಧಾರಕ್ಕೆ ಬಂದಿದ್ದಾರೆ. ಅದೇನೆಂದರೆ, ನಿಧಿ ಎಂಬ ಕಥಾಪುಸ್ತಕವನ್ನು ಪ್ರಕಟಿಸುವುದು. ಆ ಪುಸ್ತಕದ ಒಂದು ಲಕ್ಷ ಪ್ರತಿಗಳನ್ನು ಮಾರಾಟ ಮಾಡುವುದು! ಒಂದು ಲಕ್ಷ ಪ್ರತಿ ಮಾರಾಟವಾದರೆ, ಎರಡು ಕೋಟಿ ಹಣ ಸಿಗುತ್ತೆ. ಆ ಹಣದಿಂದ ಸಿನಿಮಾ ನಿರ್ಮಿಸೋದು ಅವರ ಆಸೆ. ಇದನ್ನು ಕೇಳಿ ನಿಮಗೆ ನಗು ಬರಬಹುದು. ಆದ್ರೆ ನಗಬೇಡಿ!

ಇದು ಪುಸ್ತಕಲೋಕದ ಬಹುದೊಡ್ಡ ವಿದ್ಯಮಾನ. ಪುಸ್ತಕದಿಂದ ಕೋಟಿ ದುಡಿಯಬಹುದು ಎಂಬ ಯೋಚನೆ ಮಾಡ್ತಿದೆ ಈ ತಂಡ. ತಿಂಗಳಿಗೆ ಒಂದು ಪುಸ್ತಕ ಬರೆದು, ಪ್ರಕಟಿಸಬಹುದಾದ ಕಾಲದಲ್ಲಿ ಅವರು ಈ ಪುಸ್ತಕಕ್ಕಾಗಿ ಎಂಟು ತಿಂಗಳು ಕಷ್ಟಪಟ್ಟಿದ್ದಾರೆ. ಬಿಡುಗಡೆಪೂರ್ವದಲ್ಲಿಯೇ ಕಥೆಗಳನ್ನು ಸಿನಿಮಾ ಸ್ಕ್ರಿಪ್ಟಿನ ಹಾಗೆ ನೂರು ಸಲ ತಿದ್ದಿದ್ದಾರೆ. ಹತ್ತಾರು ಜನರಿಗೆ ಕೊಟ್ಟು ಓದಿಸಿದ್ದಾರೆ. ನೂರಕ್ಕೂ ಹೆಚ್ಚು ಗಣ್ಯರನ್ನು ಖುದ್ದಾಗಿ ಭೇಟಿಮಾಡಿ ತಮ್ಮ ಪ್ರಾಜೆಕ್ಟ್ ಬಗ್ಗೆ ತಿಳಿಸಿದ್ದಾರೆ. ಇದೆಲ್ಲಾ ಆದ ಮೇಲೆ, ಅವರು ಪುಸ್ತಕ ಬಿಡುಗಡೆ ಸಮಾರಂಭ ಇಟ್ಟುಕೊಂಡಿದ್ದರು. ನನ್ನ ಪ್ರಕಾರ ಆ ಬಿಡುಗಡೆ ಸಮಾರಂಭಕ್ಕೆ ಐನೂರಕ್ಕೂ ಹೆಚ್ಚು ಜನ ಬಂದಿದ್ದರು. ಹೊಸಬರ ಪುಸ್ತಕ ಬಿಡುಗಡೆಗೆ ಅಷ್ಟು ಜನ ಬಂದಿದ್ದು ಇದೇ ಮೊದಲು. ಇದೊಂದು ದಾಖಲೆ! ಮತ್ತೊಂದು ಖುಷಿಯ ಸಂಗತಿ ಏನೆಂದರೆ, ಇದುವರೆಗೆ ಅವರು ಐದು ಸಾವಿರಕ್ಕೂ ಹೆಚ್ಚು ಪುಸ್ತಕ ಮಾರಾಟಮಾಡಿದ್ದಾರೆ. ಅವರಿನ್ನು ಮಾರಬೇಕಿರೋದು ಜಸ್ಟ್ ತೊಂಬತ್ತೈದು ಸಾವಿರ ಪ್ರತಿಗಳಷ್ಟೇ! ಕನ್ನಡಿಗರು ಇಂತಹದ್ದೊಂದು ಪ್ರಯತ್ನಕ್ಕೆ ಕೈ ಜೋಡಿಸಿದರೆ, ಅದು ಅಸಾಧ್ಯವೇನಲ್ಲ.

ಆ ತಂಡಕ್ಕಾಗಿ ಅಲ್ಲ, ಅವರು ಮಾಡುವ ಸಿನಿಮಾಗಾಗಿ ಅಲ್ಲ ಆದರೆ ಸಾಹಿತ್ಯಕ್ಷೇತ್ರದ ವಿಸ್ತಾರಕ್ಕಾಗಿ ಈ ಯೋಜನೆ ಗೆಲ್ಲಬೇಕು. ಇವರನ್ನು ಪ್ರೇರಣೆಯಾಗಿ ಪಡೆದು ಓದುಗ ವರ್ಗವನ್ನು ಹಿಗ್ಗಿಸುವ ಹೊಸಬರು ಈ ಕ್ಷೇತ್ರಕ್ಕೆ ಬರಬೇಕು. ಅದಕ್ಕಾಗಿ ನೀವು ಈ ಪುಸ್ತಕ ಖರೀದಿಸಿ ಅವರ ಜೊತೆ ನಿಲ್ಲಬೇಕು. ವೀರಲೋಕಬುಕ್ಸ.ಕಾಮ್ ನಲ್ಲಿ ಅವರ ನಿಧಿ ಪುಸ್ತಕವಿದೆ ಎಂಬುದು ನಿಮ್ಮ ಮಾಹಿತಿಗಾಗಿ.

ಫೋಟೋ: ನಿಧಿ ಪುಸ್ತಕ ಬಿಡಗಡೆ ದಿನ, ಆ ತಂಡ ಮತ್ತು ನನ್ನ ಗ್ರೂಫ್ ಫೋಟೋ

Whats_app_banner