Narasimharaju Birthday:ಹಾಸ್ಯಚಕ್ರವರ್ತಿ ನರಸಿಂಹರಾಜು 100ನೇ ಬರ್ತ್‌ಡೇ;ಕನ್ನಡ ಚಿತ್ರರಂಗದ ಚಾರ್ಲಿ ಚಾಪ್ಲಿನ್ ಬಗ್ಗೆ ನಿಮಗೆಷ್ಟು ಗೊತ್ತು?
ಮನೆಯಲ್ಲಿ ಬಡತನ ಕಾಡುತ್ತಿದ್ದರಿಂದ ನರಸಿಂಹರಾಜು ವಿದ್ಯಾಭ್ಯಾಸದಿಂದ ವಂಚಿತರಾದರು. ಇದೇ ಕಾರಣಕ್ಕೆ ಚಿಕ್ಕಪ್ಪ ಲಕ್ಷ್ಮಿಪತಿರಾಜು, ನರಸಿಂಹರಾಜು ಅವರನ್ನು ಸಿಬಿ ಮಲ್ಲಪ್ಪ ಒಡೆತನದ ಚಂದ್ರಮೌಳೇಶ್ವರ ನಾಟಕ ಕಂಪನಿಗೆ ಸೇರಿಸಿಕೊಂಡರು.
ನರಸಿಂಹರಾಜು, ಹೆಸರು ಕೇಳಿದೊಡನೆ ಮುಖದಲ್ಲಿ ಒಂದು ನಗು ಹಾದು ಹೋಗದೆ ಇರದು. ಆ ಕಾರಣದಿಂದಲೇ ಏನೂ ಅವರನ್ನು ಹಾಸ್ಯ ಚಕ್ರವರ್ತಿ ಎಂದು ಎಲ್ಲರೂ ಕರೆಯುವುದು. ಇಂದು ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ 100ನೇ ಹುಟ್ಟುಹಬ್ಬ. ಇದು ಕನ್ನಡ ಚಿತ್ರರಂಗದ ಪಾಲಿಗೆ, ಅಭಿಮಾನಿಗಳ ಪಾಲಿಗೆ ನಿಜಕ್ಕೂ ವಿಶೇಷ ದಿನ.
25 ವರ್ಷಗಳ ವೃತ್ತಿ ಜೀವನದಲ್ಲಿ ನರಸಿಂಹರಾಜು ಅವರು ಸುಮಾರು 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗದ ಚಾರ್ಲಿ ಚಾಪ್ಲಿನ್ ಎಂದು ಕೂಡಾ ನರಸಿಂಹರಾಜು ಹೆಸರಾಗಿದ್ದರು. ಇಂತಹ ಅದ್ಭುತ ವ್ಯಕ್ತಿತ್ವದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ಜನನ
ನರಸಿಂಹರಾಜು ಮೂಲತ: ತಿಪಟೂರಿನವರು. 24 ಜುಲೈ 1926 ರಂದು ನರಸಿಂಹರಾಜು ಜನಿಸಿದರು. ಇವರ ತಂದೆ ರಾಮರಾಜು ತಿಪಟೂರಿನ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ತಾಯಿ ವೆಂಕಟಲಕ್ಷ್ಮಮ್ಮ ಗೃಹಿಣಿ.
ವಿದ್ಯಾಭ್ಯಾಸ, ನಾಟಕ ಪ್ರವೇಶ
ನರಸಿಂಹರಾಜು ಅವರ ಮನೆಯಲ್ಲಿ ಬಡತನ ಕಾಡುತ್ತಿದ್ದರಿಂದ ನರಸಿಂಹರಾಜು ವಿದ್ಯಾಭ್ಯಾಸದಿಂದ ವಂಚಿತರಾದರು. ಇದೇ ಕಾರಣಕ್ಕೆ ನರಸಿಂಹರಾಜು ಅವರ ಚಿಕ್ಕಪ್ಪ ಲಕ್ಷ್ಮಿಪತಿರಾಜು, ಅವರನ್ನು ಸಿಬಿ ಮಲ್ಲಪ್ಪ ಎಂಬುವವರು ನಡೆಸುತ್ತಿದ್ದ ಚಂದ್ರಮೌಳೇಶ್ವರ ನಾಟಕ ಕಂಪನಿಗೆ ಸೇರಿಸಿಕೊಂಡರು. ಆಗ ನರಸಿಂಹರಾಜು ಅವರಿಗೆ ಕೇವಲ 4 ವರ್ಷ ವಯಸ್ಸು. ಭಕ್ತ ಪ್ರಹ್ಲಾದ, ಲೋಹಿತಾಶ್ವ, ಕೃಷ್ಣ, ಮಾರ್ಕಂಡೇಯ ಸೇರಿ ನರಸಿಂಹರಾಜು ಅನೇಕ ಪಾತ್ರಗಳನ್ನು ಬಾಲ್ಯದಲ್ಲಿ ನಿರ್ವಹಿಸಿದ್ದಾರೆ. ಕೆಲವು ವರ್ಷಗಳ ನಂತರ ನರಸಿಂಹರಾಜು ಆ ನಾಟಕ ಕಂಪನಿ ಬಿಟ್ಟು ತಮ್ಮದೇ ಹೊಸ ನಾಟಕ ಕಂಪನಿ ಆರಂಭಿಸಿದರು. ಆದರೆ ಅಲ್ಲಿ ನಷ್ಟ ಅನುಭವಿಸಿದ್ದರಿಂದ ಮತ್ತೆ ಎಡತೊರೆ ಎಂಬ ನಾಟಕ ಕಂಪನಿ ಸೇರಿದರು. ಸುಮಾರು 27 ವರ್ಷಗಳ ಕಾಲ ಅವರು ಶ್ರೀ ಚಾಮುಂಡೇಶ್ವರಿ ನಾಟಕ ಸಭಾ, ಹಿರಣ್ಣಯ್ಯ ಮಿತ್ರ ಮಂಡಳಿ, ಭಾರತ ಲಲಿತಾ ಕಲಾ ಸಂಘ, ಗುಂಡ ಜೋಯಿಷ ಕಂಪನಿ, ಚನ್ನಬಸವೇಶ್ವರ ನಾಟಕ ಕಂಒನಿ ಸೇರಿ ಅನೇಕ ಕಂಪನಿಗಳಲ್ಲಿ ಕಲಾಸೇವೆ ಸಲ್ಲಿಸಿದರು.
ಸಿನಿಮಾ ಎಂಟ್ರಿ
ಹಾಸ್ಯ ಪಾತ್ರಕ್ಕೆ ಹೇಳಿ ಮಾಡಿಸಿದಂತಹ ಮುಖ, ಶರೀರವನ್ನು ಹೊಂದಿದ್ದ ನರಸಿಂಹರಾಜು ನಾಟಕಗಳಲ್ಲಿ ಕೂಡಾ ಹಾಸ್ಯ ಪಾತ್ರಕ್ಕೆ ಹೇಳಿ ಮಾಡಿಸಿದಂತೆ ಇದ್ದರು. ಆದ್ದರಿಂದ ಜನರು ನರಸಿಂಹರಾಜು ವೇದಿಕೆ ಮೇಲೆ ಬರುತ್ತಿದ್ದಂತೆ ಜನರು ಚಪ್ಪಾಳೆ ತಟ್ಟಲು ಆರಂಭಿಸುತ್ತಿದ್ದರು. ಹೆಚ್‌ಎಲ್‌ಎನ್ ಸಿಂಹ ನಿರ್ದೇಶನದ 'ಬೇಡರ ಕಣ್ಣಪ್ಪ' ಸಿನಿಮಾ ಮೂಲಕ ನರಸಿಂಹರಾಜು ಸಿನಿಮಾಲೋಕಕ್ಕೆ ಎಂಟ್ರಿ ಕೊಟ್ಟರು. ಈ ಚಿತ್ರದಲ್ಲಿ ಅವರು ದೇವಸ್ಥಾನದ ಅರ್ಚಕರ ಪುತ್ರ ಕಾಶಿನಾಥ ಶಾಸ್ತ್ರಿ ಪಾತ್ರದಲ್ಲಿ ನಟಿಸಿದ್ದರು. ಇದು ಡಾ. ರಾಜ್‌ಕುಮಾರ್ ಅವರಿಗೂ ಮೊದಲ ಸಿನಿಮಾವಾಗಿತ್ತು. 1954 ರಲ್ಲಿ ಸಿನಿಮಾ ತೆರೆ ಕಂಡಿತ್ತು.
ನಾಟಕಗಳಲ್ಲಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದ್ದ ನರಸಿಂಹರಾಜು ಅವರ ಸಿನಿಮಾರಂಗದಲ್ಲಿ ಕೂಡಾ ಹೆಸರು ಮಾಡಿದರು. ಅಂದಿನ ನಿರ್ಮಾಪಕರು ಹಾಗೂ ನಿರ್ದೇಶಕರು ಹಾಸ್ಯಪಾತ್ರಕ್ಕೆ ನರಸಿಂಹರಾಜು ಅವರನ್ನು ಸಂಪರ್ಕಿಸಿ ಡೇಟ್ ಸಿಗದಿದ್ದರೆ ಮಾತ್ರ ಅನಿವಾರ್ಯವಾಗಿ ಬೇರೆ ನಟರನ್ನು ತಮ್ಮ ಚಿತ್ರಕ್ಕೆ ಕರೆತರುತ್ತಿದ್ದರಂತೆ. ಅಷ್ಟೇ ಅಲ್ಲ ಡಾ. ರಾಜ್ ಕುಮಾರ್ ಕೂಡಾ ನರಸಿಂಹರಾಜು ಅವರ ಡೇಟ್ಸ್‌ಗೆ ತಮ್ಮ ಡೇಟ್ಸ್ ಹೊಂದಿಸಿಕೊಳ್ಳುತ್ತಿದ್ದರು ಎಂದು ಅಣ್ಣಾವ್ರು ಸಂದರ್ಶನಗಳಲ್ಲಿ ಹೇಳಿದ್ಧಾರೆ. ಅಷ್ಟರ ಮಟ್ಟಿಗೆ ನರಸಿಂಹರಾಜು ಅವರಿಗೆ ಸಿನಿಮಾರಂಗದಲ್ಲಿ ಬೇಡಿಕೆ ಇತ್ತು.
ನರಸಿಂಹರಾಜು ಅಭಿನಯದ ಸಿನಿಮಾಗಳು
ಶಿವಭಕ್ತ ಮಾರ್ಕಂಡೇಯ, ಸ್ಕೂಲ್ ಮಾಸ್ಟರ್, ದಶಾವತಾರ, ರಣಧೀರ ಕಂಠೀರವ, ಕೈವಾರ ಮಹಾತ್ಮೆ, ಕಿತ್ತೂರು ಚೆನ್ನಮ್ಮ, ವಿಧಿ ವಿಲಾಸ, ಸ್ವರ್ಣ ಗೌರಿ, ಜೇನುಗೂಡು, ವಾಲ್ಮೀಕಿ, ಚಂದ್ರಹಾಸ, ಲವ್ ಇನ್ ಬೆಂಗಳೂರು, ಇಮ್ಮಡಿ ಪುಲಿಕೇಶಿ, ಗಂಗೆ ಗೌರಿ, ಲಗ್ನಪತ್ರಿಕೆ, ಭಲೇ ಬಸವ ಸೇರಿ ಅನೇ ಸಿನಿಮಾಗಳಲ್ಲಿ ನರಸಿಂಹರಾಜು ನಟಿಸಿದ್ದಾರೆ. ಈ ಸಿನಿಮಾಗಳಲ್ಲಿ 'ಪ್ರೊಫೆಸರ್ ಹುಚ್ಚುರಾಯ' ಚಿತ್ರವನ್ನು ನರಸಿಂಹರಾಜು ಅವರೇ ನಿರ್ಮಿಸಿದ್ದರು.
ನರಸಿಂಹರಾಜು ಕುಟುಂಬ
ಶಾರದಮ್ಮ ಅವರ ಕೈ ಹಿಡಿದ ನರಸಿಂಹರಾಜು ಅವರಿಗೆ ಮೂವರು ಮಕ್ಕಳು. ಸುಧಾ ನರಸಿಂಹರಾಜು, ನರಹರಿ ರಾಜು, ಧರ್ಮಾವತಿ ನರಸಿಂಹರಾಜು. ಅದರಲ್ಲಿ ಸುಧಾ ನರಸಿಂಹರಾಜು ಸಿನಿಮಾ ಹಾಗೂ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಮೊಮ್ಮಗ ಅವಿನಾಶ್ ದಿವಾಕರ್ ಕೂಡಾ ನಟ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ನರಸಿಂಹರಾಜು ಸಿನಿಮಾಗಳಲ್ಲಿ ಪಡೆಯುತ್ತಿದ್ದ ಸಂಭಾವನೆಯಲ್ಲಿ ಬೆಂಗಳೂರು ಹಾಗೂ ಅಂದಿನ ಮದ್ರಾಸ್‌ನಲ್ಲಿ ಆಸ್ತಿ ಖರೀದಿಸಿದ್ದರು. ಮದ್ರಾಸ್‌ನಲ್ಲಿ ಮನೆ ಹೊಂದಿದ್ದ ಕನ್ನಡದ ಮೊದಲ ನಟ ನರಸಿಂಹರಾಜು.
ಕೊನೆಯ ದಿನಗಳು
ನರಸಿಂಹರಾಜು ಹಾಸ್ಯನಟನಾಗಿದ್ದರೂ ತಮ್ಮ ಬದುಕಿನ ಕೊನೆಯ ದಿನಗಳನ್ನು ನೋವಿನಲ್ಲಿ ಕಳೆದರು ಎನ್ನಲಾಗಿದೆ. ಇದಕ್ಕೆ ಕಾರಣ ಅವರ ಪುತ್ರ ಅಪಘಾತದಲ್ಲಿ ನಿಧನರಾಗಿದ್ದು. ಮಗ ಅಗಲಿಕೆಯ ನೋವಿನಲ್ಲೇ ಕೊನೆಯ ದಿನಗಳನ್ನು ಕಳೆದ ನರಸಿಂಹರಾಜು 11 ಜುಲೈ 1979ರಲ್ಲಿ ನಿಧನರಾದರು. ಎಂದಿನಂತೆ ರಾತ್ರಿ ಊಟ ಮಾಡಿ ಮಲಗಿದ್ದ ನರಸಿಂಹರಾಜು ಅವರು ಬೆಳಗಿನ ಜಾವ 4.30 ಸಮಯದಲ್ಲಿ ಹೃದಯಾಘಾತದಿಂದ ನಿಧನರಾದರು. ಆಗ ಅವರಿಗೆ 56 ವರ್ಷ ವಯಸ್ಸು.
ಪ್ರಶಸ್ತಿ
ನರಸಿಂಹರಾಜು ನಿಧನದ ನಂತರ ಅವರ ನೆನಪಿಗಾಗಿ ಚಿತ್ರರಂಗ ನರಸಿಂಹರಾಜು ವಾರ್ಷಿಕ ಸಿನಿ ಪ್ರಶಸ್ತಿಯನ್ನು ಸ್ಥಾಪಿಸಿತು. ಕನ್ನಡ ಚಿತ್ರಂಗದಲ್ಲಿ ಡಾ. ರಾಜ್‌ಕುಮಾರ್ ಅವರಷ್ಟೇ ದೊಡ್ಡ ನಟರಾಗಿ ಖ್ಯಾತಿ ಪಡೆದಿದ್ದ ನರಸಿಂಹರಾಜು ಅವರಿಗೆ ರಾಜ್ಯ ಸರ್ಕಾರ ಪ್ರಶಸ್ತಿ ನೀಡದೆ ಇರುವುದು ಇಂದಿಗೂ ಅವರ ಅಭಿಮಾನಿ ವಲಯದಲ್ಲಿ ಬೇಸರ ಇದೆ.