Jaggesh Tiger Nails: ಅಧಿಕಾರಿಗಳು ಕೇಳಿದ ವಸ್ತು ಒಪ್ಪಿಸಿದ್ದೇನೆ, ಅಮ್ಮ ನೀಡಿದ ಹಳೆಯ ಲಾಕೆಟ್ ಎಂದಿದ್ದೇನೆ, ಪಾಚ್ಕೊಳಿ ಎಂದ ನಟ ಜಗ್ಗೇಶ್
Jaggesh Tiger Nails: ತನ್ನ ಬಳಿ ಇದ್ದ ಹುಲಿ ಉಗುರಿನ ಪೆಂಡೆಂಟ್ ಅನ್ನು ಅಧಿಕಾರಿಗಳಿಗೆ ಒಪ್ಪಿಸಲಾಗಿದೆ ಎಂದು ಸ್ಯಾಂಡಲ್‌ವುಡ್ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಇದು ಅಮ್ಮ ನೀಡಿದ ಉಡುಗೊರೆ ಎಂದು ತಿಳಿಸಿರುವುದಾಗಿ ಅವರು ಹೇಳಿದ್ದಾರೆ.
ಬೆಂಗಳೂರು: ಹುಲಿ ಉಗುರಿನ ಲಾಕೆಟ್ ಕುರಿತು ಸ್ಯಾಂಡಲ್‌ವುಡ್ ನಟ, ರಾಜಕಾರಣಿ ಜಗ್ಗೇಶ್ ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದಾರೆ. "ಕಾನೂನು ದೊಡ್ಡದು. ಅಧಿಕಾರಿಗಳು ಕೇಳಿದ ವಸ್ತು ಒಪ್ಪಿಸಲಾಗಿದೆ. ಅಮ್ಮ ನೀಡಿದ ಬಹಳ ಹಳೆಯ ಲಾಕೆಟ್ ಎಂದು ತಿಳಿಸಿರುವೆ. ಎಷ್ಟೋ ದೋಚುವ ಮನುಷ್ಯರು,
ಕೊಲೆ ಪಾತಕರು, ದೇಶದ್ರೋಹಿಗಳು,ಸಮಾಜ ಘಾತಕರಿಗಿಂತ ನನ್ನತಾಯಿ ಕಾಣಿಕೆ ಬಗ್ಗೆ ನಿನ್ನೆಯಿಂದ ತಲೆಕೆಡಿಸಿಕೊಂಡ ದೇವರುಗಳಿಗೆ ಧನ್ಯವಾದ. ತಲೆತಗ್ಗಿಸುವ ಯಾವ ಕೆಲಸ ಮಾಡಿಲ್ಲಾ ಮಾಡೋದಿಲ್ಲಾ. ಪಾಚ್ಕೊಳಿ" ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಜಗ್ಗೇಶ್ ಮನೆಯಲ್ಲಿ ಹಳೆಯ ಲಾಕೆಟ್ ಪತ್ತೆ
ಜಗ್ಗೇಶ್ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪೆಂಡೆಂಟ್ ದೊರಕಿತ್ತು. ಡೆಹಾಡ್ರೂನ್‌ಗೆ ಈ ಪೆಂಡೆಂಟ್ ಕಳುಹಿಸಲಾಗುತ್ತದೆ. "ಇದು ಯಾವ ಪ್ರಾಣಿಗೆ ಸಂಬಂಧಪಟ್ಟ ಲಾಕೆಟ್ ಎಂದು ಡೆಹಾಡ್ರೂನ್‌ನಲ್ಲಿರುವ ಎಫ್‌ಎಸ್‌ಎಲ್ ಕೇಂದ್ರದ ಪರೀಕ್ಷೆಯಿಂದ ತಿಳಿದುಬರಲಿದೆ. ನಾವೇನು ಜಗ್ಗೇಶ್ ಮನೆಯಲ್ಲಿ ಶೋಧ ನಡೆಸಿಲ್ಲ. ಜಗ್ಗೇಶ್ ಅವರ ಪತ್ನಿ ಪರಿಮಳ ಜಗ್ಗೇಶ್ ಅವರೇ ಖುದ್ದಾಗಿ ಈ ಪೆಂಡೆಂಟ್ ಅನ್ನು ನಮಗೆ ಒಪ್ಪಿಸಿದ್ದಾರೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹುಲಿ ಉಗುರು ಧರಿಸಿದ ಸ್ಯಾಂಡಲ್‌ವುಡ್‌ನ ಕಲಾವಿದರ ಮನೆಗೆ ಅರಣ್ಯಾಧಿಕಾರಿಗಳ ತಂಡ ಭೇಟಿ ನೀಡಿ ಹುಲಿ ಉಗುರಿಗೆ ಶೋಧ ಕಾರ್ಯ ನಡೆಸಿತ್ತು. ರಾಜರಾಜೇಶ್ವರಿ ನಗರದಲ್ಲಿನ ದರ್ಶನ್ ಮನೆ, ಮಲ್ಲೇಶ್ವರಂದಲ್ಲಿನ ಜಗ್ಗೇಶ್ ನಿವಾಸ ಸೇರಿ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮನೆಗೂ ಅರಣ್ಯಾಧಿಕಾರಿಗಳು ಭೇಟಿ ನೀಡಿ ಶೋಧ ಕಾರ್ಯ ನಡೆಸಿತ್ತು. ಈ ಸಮಯದಲ್ಲಿ ಜಗ್ಗೇಶ್ ಅವರು ಅಧಿಕಾರಿಗಳಿಗೆ ಹುಲಿ ಉಗುರಿನ ಲಾಕೆಟ್ ನೀಡಿದ್ದಾರೆ. ಇದು ನನ್ನ ತಾಯಿ ನನಗೆ ನೀಡಿರುವ ಬಹಳ ಹಳೆಯ ಲಾಕೆಟ್ ಎಂದು ತಿಳಿಸಿದ್ದಾರೆ.
ರಾಕ್‌ಲೈನ್ ವೆಂಕಟೇಶ್ ಮನೆಯಲ್ಲಿ ಪತ್ತೆಯಾಗದ ಹುಲಿ ಉಗುರು
ಇದೇ ಸಂದರ್ಭದಲ್ಲಿ ರಾಕ್‌ಲೈನ್ ವೆಂಕಟೇಶ್ ಮನೆಯ ಮೇಲೂ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅವರ ಮನೆಯಲ್ಲಿ ಯಾವುದೇ ಹುಲಿ ಉಗುರು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಅವರು ವಿದೇಶ ಪ್ರವಾಸದಲ್ಲಿದ್ದಾರೆ. ವಿದೇಶದಿಂದ ಬಂದ ಬಳಿಕ ಅವರ ವಿಚಾರಣೆ ನಡೆಸುತ್ತೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಟ ಜಗ್ಗೇಶ್, ದರ್ಶನ್, ರಾಕ್‌ಲೈನ್ ವೆಂಕಟೇಶ್, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ವಿವಿಧ ಪ್ರಮುಖರ ಮನೆ ಮೇಲೆ ದಾಳಿ ನಡೆಸಲಾಗಿತ್ತು.
ನಿಖಿಲ್ ಕುಮಾರಸ್ವಾಮಿ ಪೆಂಡೆಂಟ್ ಹುಲಿ ಉಗುರಿನದ್ದಲ್ಲ
ಹುಲಿ ಉಗುರು ರೀತಿಯಲ್ಲಿರುವ ಪೆಂಡೆಂಟ್ ನೈಜವಲ್ಲ. ಅದನ್ನು ಅರಣ್ಯಾಧಿಕಾರಿಗಳು ಪರಿಶೀಲನೆ ಮಾಡಲು ತೆಗೆದುಕೊಂಡು ಹೋಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು, ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ಜೆಪಿ ನಗರದಲ್ಲಿರುವ ತಮ್ಮ ನಿವಾಸಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪೆಂಡೆಂಟ್ ಅನ್ನು ಪರಿಶೀಲನೆ ನಡೆಸಿದ ಅವರು ಮಾತನಾಡಿದರು. ನಮ್ಮ ಬಳಿ ಇರುವ ಹುಲಿ ಉಗುರು ರೀತಿಯ ಪೆಂಡೆಂಟ್ ಸಿಂಥೆಟಿಕ್ʼನದು. ಸಾಕಷ್ಟು ಜನರ ಬಳಿ ಇಂಥ ಪೆಂಡೆಂಟ್ ಇರುತ್ತದೆ ಎಂದು ಅವರು ತಿಳಿಸಿದರು.
ಇವತ್ತು ಬೆಳಗ್ಗಿನಿಂದ ಚಿತ್ರನಟರು, ಜ್ಯೋತಿಷಿಗಳು ಇಟ್ಟಿರುವ ಹುಲಿ ಉಗುರುಗಳ ಪೆಂಡೆಂಟುಗಳ ಬಗ್ಗೆ ಡೊದ್ದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ನನ್ನ ಪುತ್ರ ನಿಖಿಲ್ ಕುಮಾರಸ್ವಾಮಿ ಹೆಸರು ಈ ವಿಷಯದಲ್ಲಿ ಕೇಳಿ ಬಂದಿದೆ. ನಿಖಿಲ್ ಮದುವೆ ಸಂದರ್ಭದಲ್ಲಿ ಕೊರಳಿಗೆ ಹಾಕಿದ್ದ ಪೆಂಡೆಂಟ್ ಅದು. ನಿಖಿಲ್ ಹೆಸರು ಬಂದ ಬಳಕ ಸ್ವತಃ ನಾನೇ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ಬಂದು ಪರಿಶೀಲನೆ ಮಾಡಿಕೊಳ್ಳಿ, ನಿಮಗೆ ಮುಜುಗರ ಆಗಬಾರದು. ಈ ರಾಜ್ಯದಲ್ಲಿ ನ್ಯಾಯ ಎನ್ನುವುದು ಎಲ್ಲರಿಗೂ ಒಂದೇ ಎಂದು ತಿಳಿಸಿದ್ದೆ. ಅದರಂತೆ ಬಂದು ಪರಿಶೀಲನೆ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ.