Puneeth Rajkumar: ಹಿಮಾಲಯದಲ್ಲಿ ಯುವನಟ ಸುಮುಖನಿಗೆ ಎದುರಾದ ನಗುವಿನ ಒಡೆಯ ಪುನೀತ್ ರಾಜ್‌ಕುಮಾರ್
Puneeth Rajkumar: ಹಿಮಾಲಯದಲ್ಲಿ ಹಿಮದ ರಾಶಿಯ ನಡುವೆ ಹಳದಿ ಬಟ್ಟೆ ಸುತ್ತಿದ್ದ ಒಂದು ವಸ್ತು ದೊರೆಯಿತು. ಆ ಹಳದಿ ಬಟ್ಟೆಯಲ್ಲಿ ಸುತ್ತಿದ ವಸ್ತು ಏನೆಂದು ನೋಡಿದಾಗ ಮೊದಲು ನನಗೆ ಆಶ್ಚರ್ಯ ಆಯ್ತು ಎಂದು ಸುಮುಖ ಸಂತೋಷ ವ್ಯಕ್ತಪಡಿಸಿದ್ದಾರೆ.
Puneeth Rajkumar: ಸ್ಯಾಂಡಲ್‌ವುಡ್ ರಾಜಕುಮಾರ, ನಗುವಿನ ಒಡೆಯ ಪುನೀತ್ ರಾಜ್‌ಕುಮಾರ್ ಅಗಲಿ ಈ ಅಕ್ಟೋಬರ್ 29ಕ್ಕೆ ಎರಡು ವರ್ಷಗಳಾಗುತ್ತಾ ಬರುತ್ತಿದೆ. 2 ವರ್ಷಗಳಲ್ಲ 20 ವರ್ಷಗಳಾದರೂ 200 ವರ್ಷಗಳಾದರೂ ಅಪ್ಪುವಿನ ನಗುಮುಖ, ಅವರ ನೆನಪು ಅಭಿಮಾನಿಗಳ ಮನಸಲ್ಲಿ ಎಂದಿಗೂ ಮಾಸುವುದಿಲ್ಲ. ಈ ನಡುವೆ ಸ್ಯಾಂಡಲ್‌ವುಡ್ ಯುವನಟ ಸುಮುಖ ಅವರಿಗೆ ಹಿಮಾಲಯದಲ್ಲಿ ಅಪ್ಪು ದರ್ಶನವಾಗಿದೆ.
ಹಳದಿ ಬಟ್ಟೆಯಲ್ಲಿ ಸುತ್ತಿಟ್ಟಿದ್ದ ಪುನೀತ್ ರಾಜ್‌ಕುಮಾರ್ ಫೋಟೋ
ನಟ ಸುಮುಖ, ಎವರೆಸ್ಟ್ ಬೇಸ್ ಕ್ಯಾಂಪ್‌ನಲ್ಲಿ, ಸಮುದ್ರ ಮಟ್ಟದಿಂದ 5364 ಮೀಟರ್ ಎತ್ತರದಲ್ಲಿ ಮಂಜು ಮುಸುಕಿದ ಎತ್ತರದ ಶಿಖರಗಳ ನಡುವೆ ಸಂಚರಿಸುವಾಗ ಹಳದಿ ಬಟ್ಟೆಯೊಂದರಲ್ಲಿ ಸುತ್ತಿದ್ದ ಪುನೀತ್ ರಾಜ್‌ಕುಮಾರ್ ಅವರ ಫೋಟೋ ದೊರಕಿದೆ. ಈ ವಿಚಾರದ ಬಗ್ಗೆ ಸುಮುಖ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಸುಮುಖ, ಕನ್ನಡ ಹಾಗೂ ಮರಾಠಿಯಲ್ಲಿ ತಯಾರಾಗಿರುವ ರಾಜಸ್ಥಾನ್ ಡೈರೀಸ್ ಸಿನಿಮಾದ ನಾಯಕ. ಕಾಗದದ ದೋಣಿಯಲಿ ಚಿತ್ರದ 2ನೇ ಶೆಡ್ಯೂಲ್ ಆರಂಭವಾಗುವ ಮುನ್ನ ನಾನು ಸ್ವಲ್ಪ ಸಮಯ ಪ್ರಕೃತಿಯ ನಡುವೆ ಸಮಯ ಕಳೆಯಲು ನಿರ್ಧರಿಸಿದ್ದೆ. ನೇಪಾಳದ ಲುಕ್ಲಾದಿಂದ ಎವರೆಸ್ಟ್ ಬೇಸ್ ಕ್ಯಾಂಪ್‌ಗೆ ಹತ್ತು ದಿನದ ಚಾರಣದ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಂಡಿದ್ದೆ. ಕರ್ನಾಟಕದಿಂದ ನಾನು ಒಬ್ಬನೇ ಹೋಗಿದ್ದು.
ಅಪ್ಪು ಫೋಟೋ ನೋಡಿ ಭಾವುಕರಾದ ಸುಮುಖ
ಹಿಮಾಲಯದಲ್ಲಿ ಹಿಮದ ರಾಶಿಯ ನಡುವೆ ಹಳದಿ ಬಟ್ಟೆ ಸುತ್ತಿದ್ದ ಒಂದು ವಸ್ತು ದೊರೆಯಿತು. ಆ ಹಳದಿ ಬಟ್ಟೆಯಲ್ಲಿ ಸುತ್ತಿದ ವಸ್ತು ಏನೆಂದು ನೋಡಿದಾಗ ಮೊದಲು ನನಗೆ ಆಶ್ಚರ್ಯ ಆಯ್ತು. ಖುಷಿಯೂ ಆಯ್ತು. ಅವರ ಜನಪ್ರಿಯತೆ, ಅವರ ಮೇಲಿನ ಗೌರವ. ಕನ್ನಡದ ನೆಲೆಯಿಂದ ದೂರ ಇರುವಾಗ, ನನ್ನನ್ನು ನಾನು ಆ ಅಗಾಧ ಪ್ರಕೃತಿಯ ನಡುವೆ ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿರುವಾಗ ಎಲ್ಲರಿಗೂ ಪ್ರೇರಣೆಯಾಗಿರುವ ಪುನೀತ್ ರಾಜ್‌ಕುಮಾರ್ ಅವರ ನಗು ನನ್ನ ಮನಸ್ಸನ್ನು ನಿರಾಳಗೊಳಿಸಿತು. ಬಹಳ ವರ್ಷಗಳಿಂದ ನಮಗೆ ಪರಿಚಯವಿರುವವರು ದೂರದ ಸ್ಥಳದಲ್ಲಿ ಎದುರಾದಾಗ ಆಗುವ ಖುಷಿಯನ್ನು ನಾನು ಅನುಭವಿಸಿದ್ದೇನೆ. ಎಂದು ಸುಮುಖ ತಮಗೆ ಆದ ಅನುಭವವನ್ನು ಹಂಚಿಕೊಂಡರು. ಪ್ರಕೃತಿ ನಮಗೆ ಅನೇಕ ಬಗೆಯ ಸಂದೇಶಗಳನ್ನು ರವಾನಿಸುತ್ತಾ ಇರುತ್ತದೆ. ಅಂದು ನಮ್ಮ ಚಾರಣದ 9ನೇ ದಿನ. ಅದಾಗಲೇ ನಾಲ್ಕು ಗಂಟೆಯ ನಡಿಗೆ ಪೂರೈಸಿದ್ದೆವು. ಸಹಜವಾಗಿಯೇ ದಣಿದಿದ್ದೆವು. ಆಗ ಎವರೆಸ್ಟ್ ಬೇಸ್ ಕ್ಯಾಂಪಿನಲ್ಲಿ ಅಪ್ಪುವಿನ ಫೋಟೋ ದೊರೆತಿದ್ದು ನನಗೆ ನಿಜಕ್ಕೂ ಒಂದು ಬಗೆಯಲ್ಲಿ ಪ್ರೇರಣೆಯಾಗಿದೆ.
ಈ ಫೋಟೋ ಇಲ್ಲಿಯವರೆಗೂ ಯಾರು ತಂದಿರಬಹುದು ಎಂದು ಮಾಹಿತಿಗಾಗಿ ಹುಡುಕಿದೆ. ಫೋಟೋ ಸುತ್ತ ಮುತ್ತ ಯಾವ ಹೆಸರು ಅಥವಾ ಫೋನ್ ನಂಬರ್ ಇರಲಿಲ್ಲ. ಬಹುಶಃ ಎವರೆಸ್ಟ್ ಏರುವ ಪುನೀತ್ ರಾಜ್‌ಕುಮಾರ್ ಅಭಿಮಾನಿಯೊಬ್ಬರು ಕರ್ನಾಟಕದಿಂದ ಇಲ್ಲಿಯವರೆಗೂ ಈ ಫೋಟೋವನ್ನು ತಂದು ಹಿಮದಲ್ಲಿ ಹುದುಗಿಸಿ ಇಟ್ಟಿರಬಹುದು ಎಂದು ಸುಮುಖ ಸಂತೋಷ ವ್ಯಕ್ತಪಡಿಸಿದ್ದಾರೆ.