ಇಂದು ಶಿಕ್ಷಕರ ದಿನಾಚಣೆ; ಗುರುಗಳು-ವಿದ್ಯಾರ್ಥಿಗಳ ಬಾಂಧವ್ಯದ ಕಥೆ ಹೇಳುವ ಸಿನಿಮಾಗಳಿವು
ಕನ್ನಡ ಸುದ್ದಿ  /  ಮನರಂಜನೆ  /  ಇಂದು ಶಿಕ್ಷಕರ ದಿನಾಚಣೆ; ಗುರುಗಳು-ವಿದ್ಯಾರ್ಥಿಗಳ ಬಾಂಧವ್ಯದ ಕಥೆ ಹೇಳುವ ಸಿನಿಮಾಗಳಿವು

ಇಂದು ಶಿಕ್ಷಕರ ದಿನಾಚಣೆ; ಗುರುಗಳು-ವಿದ್ಯಾರ್ಥಿಗಳ ಬಾಂಧವ್ಯದ ಕಥೆ ಹೇಳುವ ಸಿನಿಮಾಗಳಿವು

ಮುಂದೆ ಗುರಿ ಇರಬೇಕು. ಹಿಂದೆ ಗುರು ಇರಬೇಕು ಎಂಬ ಮಾತಿದೆ. ಜೀವನದಲ್ಲಿ ತಂದೆ ತಾಯಿ ಮಾತ್ರವಲ್ಲದೆ, ಶಾಲೆಯಲ್ಲಿ ನಮ್ಮನ್ನು ತಿದ್ದಿ ಬುದ್ಧಿ ಹೇಳಿ, ನಮ್ಮನ್ನು ಸತ್ಪ್ರಜೆಯನ್ನಾಗಿ ಮಾಡುವ ಗುರುಗಳು ಪ್ರತಿಯೊಬ್ಬರ ಜೀವನದಲ್ಲೂ ಬಹಳ ಅವಶ್ಯಕ. ಸೆಪ್ಟೆಂಬರ್‌ 5, ಶಿಕ್ಷಕರ ದಿನಾಚರಣೆ. ಗುರುಗಳಿಗೇ ಮೀಸಲಾದ ದಿನ ಇದು.

ಶಿಕ್ಷಕರ ದಿನಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್‌, ಕಾಲಿವುಡ್‌, ಮಾಲಿವುಡ್‌, ಬಾಲಿವುಡ್‌, ಟಾಲಿವುಡ್‌ ಸಿನಿಮಾಗಳು
ಶಿಕ್ಷಕರ ದಿನಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್‌, ಕಾಲಿವುಡ್‌, ಮಾಲಿವುಡ್‌, ಬಾಲಿವುಡ್‌, ಟಾಲಿವುಡ್‌ ಸಿನಿಮಾಗಳು

ಗುರುಗಳಿಗೆ ಇರುವ ಮಹತ್ವವನ್ನು ಸಾರುವ ಎಷ್ಟೋ ಸಿನಿಮಾಗಳು ತಯಾರಾಗಿವೆ. ಆ ಸಿನಿಮಾಗಳು ಸೂಪರ್‌ ಹಿಟ್‌ ಕೂಡಾ ಆಗಿವೆ. ಕನ್ನಡ ಮಾತ್ರವಲ್ಲದೆ ಇತರ ಭಾಷೆಗಳಲ್ಲಿ ಕೂಡಾ ಗುರು-ಶಿಷ್ಯರ ಬಾಂಧವ್ಯದ ಅನೇಕ ಸಿನಿಮಾಗಳು ತಯಾರಾಗಿವೆ. ಅಂತಹ ಪ್ರಮುಖ ಸಿನಿಮಾಗಳ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ.

ಕನ್ನಡ ಚಿತ್ರರಂಗ

ಸ್ಕೂಲ್‌ ಮಾಸ್ಟರ್‌

ಬಿಆರ್‌ ಪಂತುಲು ಅವರೇ ನಿರ್ಮಿಸಿ, ನಿರ್ದೇಶಿಸಿ ನಟಿಸಿದ್ದ ಸಿನಿಮಾ 'ಸ್ಕೂಲ್‌ ಮಾಸ್ಟರ್‌'. ಈ ಚಿತ್ರ ಇಂದಿಗೂ ಸಿನಿಪ್ರಿಯರ ಮನಸ್ಸಿನಲ್ಲಿ ಕನ್ನಡದ ಅತ್ಯುತ್ತಮ ಚಿತ್ರವಾಗಿ ಉಳಿದಿದೆ. 1958ರಲ್ಲಿ ಈ ಸಿನಿಮಾ ಬಿಡುಗಡೆ ಆಗಿತ್ತು. ಸರ್ಕಾರಿ ಶಾಲೆಗೆ ಮುಖ್ಯೋಪಾಧ್ಯಾಯರಾಗಿ ಬರುವ ರಂಗಣ್ಣ, ಆ ಊರಿನ ಭ್ರಷ್ಟ ರಾಜಕಾರಣಿಗಳಿಂದ ಏನೆಲ್ಲಾ ಸಮಸ್ಯೆ ಅನುಭವಿಸುತ್ತಾರೆ. ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಯಾವ ರೀತಿ ಸಹಾಯ ಮಾಡುತ್ತಾರೆ ಎನ್ನುವುದು ಚಿತ್ರದ ತಿರುಳು. ಭ್ರಷ್ಟ ರಾಜಕಾರಣಿ ನಾಗಪ್ಪ ಪರ ಪ್ರಚಾರ ಮಾಡಲು ನಿರಾಕರಿಸುವ ರಂಗಣ್ಣ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚುತ್ತಾರೆ. ಆಗ ವಿದ್ಯಾರ್ಥಿಗಳೆಲ್ಲಾ ಸೇರಿ ಮನೆ ನಿರ್ಮಿಸಿಕೊಡುತ್ತಾರೆ. ರಂಗಣ್ಣನ ಅಚ್ಚು ಮೆಚ್ಚಿನ ವಿದ್ಯಾರ್ಥಿ ವಾಸು, ಇದರ ನೇತೃತ್ವ ವಹಿಸಿಕೊಳ್ಳುತ್ತಾನೆ.

ಹಾಗೇ ರಂಗಣ್ಣ ನಿವೃತ್ತರಾದ ನಂತರ ಮಕ್ಕಳು ಅವರನ್ನು ನೋಡಿಕೊಳ್ಳಲು ಹಿಂದೇಟು ಹಾಕುತ್ತಾರೆ. ಹಿಂದೆ ವಿದ್ಯಾರ್ಥಿಗಳು ಕಟ್ಟಿಕೊಟ್ಟ ಅವರ ಮನೆ ಹರಾಜಿಗೆ ಬರುತ್ತದೆ. ಆಗ ಗುರುಗಳಿಗೆ ಮನೆ ನಿರ್ಮಿಸಿಕೊಟ್ಟ ವಾಸು, ಒಳ್ಳೆ ವಿದ್ಯಾಭ್ಯಾಸ ಪಡೆದು ಎಸ್‌ಪಿ ಕೆಲಸ ಪಡೆಯುತ್ತಾನೆ. ತಮ್ಮ ಮೆಚ್ಚಿನ ರಂಗಣ್ಣ ಮೇಷ್ಟ್ರ ಮನೆಯನ್ನು ಅವನೇ ಖರೀದಿಸಿ ಗುರುಗಳಿಗೆ ವಾಸವಿರಲು ಅನುವು ಮಾಡಿಕೊಡುತ್ತಾನೆ. ಗುರು ಶಿಷ್ಯರ ಬಾಂಧವ್ಯ ಇರುವ ಈ ಸಿನಿಮಾ ಸಿನಿಪ್ರಿಯರ ಆಲ್‌ ಟೈಮ್‌ ಫೇವರೆಟ್.‌

ನಾಗರಹಾವು

ಡಾ ವಿಷ್ಣುವರ್ಧನ್‌ ತಮ್ಮ ವೃತ್ತಿ ಬದುಕನ್ನು ಆರಂಭಿಸಿದ ಸಿನಿಮಾ ಇದು. ಈ ಸಿನಿಮಾದಲ್ಲಿ ವಿಷ್ಣು ರಾಮಾಚಾರಿ ಪಾತ್ರದಲ್ಲಿ, ನಟ ಸಿಎಸ್‌ ಅಶ್ವತ್ಥ್‌, ಚಾಮಯ್ಯ ಮೇಷ್ಟ್ರು ಪಾತ್ರದಲ್ಲಿ ನಟಿಸಿದ್ದರು. 1972 ರಲ್ಲಿ ತೆರೆ ಕಂಡ ಸಿನಿಮಾವನ್ನು ಎನ್‌ ವೀರಾಸಾಮಿ ನಿರ್ಮಿಸಿ, ಪುಟ್ಟಣ್ಣ ಕಣಗಾರ್‌ ನಿರ್ದೇಶಿಸಿದ್ದರು. ಸಿನಿಮಾ ತೆರೆ ಕಂಡು 51 ವರ್ಷಗಳಾದರೂ ರಾಮಾಚಾರಿ, ಚಾಮಯ್ಯ ಮೇಷ್ಟ್ರು ಹೆಸರುಗಳು ಅಜರಾಮರವಾಗಿ ಉಳಿದಿದೆ. ಚಿತ್ರದಲ್ಲಿ ಆರತಿ, ಶುಭ, ಅಂಬರೀಶ್‌, ಲೀಲಾವತಿ, ಶಿವರಾಂ ಹಾಗೂ ಇನ್ನಿತರರು ನಟಿಸಿದ್ದಾರೆ.

ಇದನ್ನು ಹೊರತು ಪಡಿಸಿ ವಿಷ್ಣುವರ್ಧನ್‌ ಅಭಿನಯದ ವಿಷ್ಣುಸೇನಾ, ಕೇರ್‌ ಆಫ್‌ ಫುಟ್‌ಪಾತ್‌, ಸುಂದರಕಾಂಡ, ದ್ರೋಣ, ಗುರುಶಿಷ್ಯರು ಸಿನಿಮಾಗಳಲ್ಲಿ ಟೀಚರ್ಸ್‌-ಸ್ಟೂಡೆಂಟ್ಸ್‌ ಕಥೆ ಇದೆ.

ಬಾಲಿವುಡ್‌

ತಾರೇ ಜಮೀನ್‌ ಪರ್

ಆಮೀರ್‌ ಖಾನ್‌ ಹಾಗೂ ದರ್ಶಿಲ್‌ ನಟಿಸಿರುವ ಈ ಸಿನಿಮಾ ಇಂದಿಗೂ ಹಿಂದಿ ಸಿನಿಪ್ರಿಯರ ಅಚ್ಚುಮೆಚ್ಚಿನ ಸಿನಿಮಾ. ಓದಲು ಬರೆಯಲು ಆಗದ ಆರೋಗ್ಯ ಸಮಸ್ಯೆಯಿಂದ ಬಳಲುವ ಮಗು ಇಶಾನ್‌ ಬೇರೆ ಚಟುವಟಿಕೆಗಳಲ್ಲಿ ಅತ್ಯುತ್ತಮ ಪ್ರತಿಭೆ. ಆದರೆ ಶಾಲೆಯಲ್ಲಿ ಅವನ ಬಗ್ಗೆ ಬಹಳ ಕಂಪ್ಲೇಂಟ್‌ ಇರುತ್ತದೆ. ದರ್ಶಿಲ್‌ ಆರೋಗ್ಯ ಸಮಸ್ಯೆಯಿಂದ ಹೊರಬರಲು ರಾಮ್‌ ಶಂಕರ್‌ ಮಾಸ್ಟರ್‌ (ಆಮೀರ್‌ ಖಾನ್) ಹೇಗೆ ಸಹಾಯ ಮಾಡುತ್ತಾರೆ ಎನ್ನುವುದು ಚಿತ್ರದ ಕಥೆ.

ಇದನ್ನು ಹೊರತುಪಡಿಸಿ ಹಿಂದಿಯಲ್ಲಿ ಹೃತಿಕ್‌ ರೋಷನ್‌ ಅಭಿನಯದ ಸೂಪರ್‌ 30, ಅಮಿತಾಬ್‌ ಬಚ್ಚನ್‌ ಅವರ ಆರಕ್ಷಣ್‌, ಶಾಹಿದ್‌ ಕಪೂರ್‌ ಅವರ ಪಾಠಶಾಲಾ, ಪ್ರಶಸ್ತಿ ವಿಜೇತ ಸಿನಿಮಾ ಐ ಆಮ್‌ ಕಲಾಂ, ಇಮಾನ್‌ ಹಶ್ಮಿ ನಟನೆಯ ವೈ ಚೀಟ್‌ ಇಂಡಿಯಾ ಸಿನಿಮಾಗಳಲ್ಲಿ ಶಿಕ್ಷಣ, ಟೀಚರ್‌ಗಳು, ವಿದ್ಯಾರ್ಥಿಗಳ ನಡುವಿನ ಕಥೆ ಇದೆ.

ಟಾಲಿವುಡ್‌

ಬಡಿ ಪಂತುಲು

ಕನ್ನಡದ 'ಸ್ಕೂಲ್‌ ಮಾಸ್ಟರ್‌' ಸಿನಿಮಾ ತೆಲುಗಿನಲ್ಲಿ 'ಬಡಿ ಪಂತುಲು' ಎಂಬ ಹೆಸರಿನಲ್ಲಿ 1972ರಲ್ಲಿ ತೆರೆ ಕಂಡಿತ್ತು. ಕನ್ನಡದಲ್ಲಿ ಬಿಆರ್‌ ಪಂತುಲು ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ಎನ್‌ಟಿಆರ್‌ ನಟಿಸಿದ್ದರು. ತ್ರಿವೇಣಿ ಪ್ರೊಡಕ್ಷನ್ಸ್‌ ಬ್ಯಾನರ್‌ ಅಡಿಯಲ್ಲಿ ತಯಾರಾದ ಸಿನಿಮಾವನ್ನು ಪಿ ಚಂದ್ರಶೇಖರ ರೆಡ್ಡಿ ನಿರ್ದೇಶಿಸಿದ್ದರು.

ಇದರ ಜೊತೆಗೆ ವೆಂಕಟೇಶ್‌ ಅಭಿನಯದ ಸುಂದರ ಕಾಂಡ, ಚಿರಂಜೀವಿ ಅಭಿನಯದ ಮಾಸ್ಟರ್‌, ಸ್ವಾತಿ ಅಭಿನಯದ ಗೋಲ್ಕೊಂಡ ಹೈ ಸ್ಕೂಲ್‌, ರಾಜೇಂದ್ರ ಪ್ರಸಾದ್‌ ಅಭಿನಯದ ಓನಮಾಲು ಸಿನಿಮಾಗಳಲ್ಲಿ ಕೂಡಾ ಗುರುಗಳು ವಿದ್ಯಾರ್ಥಿಗಳು ಬಾಂಧವ್ಯದ ಕಥೆ ಇದೆ.

ಕಾಲಿವುಡ್‌

ತಮಿಳಿನಲ್ಲಿ ಕಮಲ್‌ ಹಾಸನ್‌ ಅಭಿನಯದ ನಮ್ಮವರ್‌, ಸಮುದ್ರಕನಿ ನಟನೆಯ ಸಟ್ಟೈ, ವಾಗೈ ಸೋದಾವ, ವಿಜಯ್‌ ಅಭಿನಯದ ಮಾಸ್ಟರ್‌, ಅಮಲಾ ಪೌಲ್‌ ಅಭಿನಯದ ಪಸಂಗ 2, ಜ್ಯೋತಿಕಾ ಅಭಿನಯದ ರಾಚಸಿ, ಜಯಂ ರವಿ ನಟನೆಯ ಪೇರಣಮೈ ಸಿನಿಮಾಗಳಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಬಗ್ಗೆ ಕಥೆ ಇದೆ.

ಮಾಲಿವುಡ್‌

ಮಲಯಾಳಂನಲ್ಲಿ ಸ್ಪಟಿಕಂ ಪೃಥ್ವಿರಾಜ್‌ ಸುಕುಮಾರನ್‌ ನಟನೆಯ ಮಾಣಿಕ್ಯಕ್ಕಲ್ಲು, ಮುಮ್ಮುಟಿ ಅಭಿನಯದ ಮಜಯೆತುಂ ಮುಂಪೆ, ಮೋಹನ್‌ ಲಾಲ್‌ ಅಭಿನಯದ ಬ್ಯೂಟಿಫುಲ್‌ ಸಿನಿಮಾ, ಇಂದ್ರಜಿತ್‌ ಸುಕುಮಾರನ್‌ ನಟಿಸಿರುವ 101 ಚೋದ್ಯಂಗಲ್ ಸಿನಿಮಾಗಳು ಶಿಕ್ಷಕರು ವಿದ್ಯಾರ್ಥಿಗಳಿಗೆ ಸಂಬಂಧಿಸಿದ್ದಾಗಿವೆ.

Whats_app_banner