Kichcha Sudeep: ಮ್ಯಾಕ್ಸ್‌ ಅನ್ನೋ ಮಹಾ ಅವತಾರ ಸೃಷ್ಟಿಯಾಗಿದ್ದು ಹೇಗೆ? ಕಿಚ್ಚ ಸುದೀಪ್‌ ಹೇಳಿದ ಆ 10 ಸಂಗತಿಗಳು
ಕನ್ನಡ ಸುದ್ದಿ  /  ಮನರಂಜನೆ  /  Kichcha Sudeep: ಮ್ಯಾಕ್ಸ್‌ ಅನ್ನೋ ಮಹಾ ಅವತಾರ ಸೃಷ್ಟಿಯಾಗಿದ್ದು ಹೇಗೆ? ಕಿಚ್ಚ ಸುದೀಪ್‌ ಹೇಳಿದ ಆ 10 ಸಂಗತಿಗಳು

Kichcha Sudeep: ಮ್ಯಾಕ್ಸ್‌ ಅನ್ನೋ ಮಹಾ ಅವತಾರ ಸೃಷ್ಟಿಯಾಗಿದ್ದು ಹೇಗೆ? ಕಿಚ್ಚ ಸುದೀಪ್‌ ಹೇಳಿದ ಆ 10 ಸಂಗತಿಗಳು

Kichcha Sudeep: ಕಿಚ್ಚ ಸುದೀಪ್‌ ಪಾಲಿಗೆ ಮ್ಯಾಕ್ಸ್‌ ಸಿನಿಮಾ ಬಹು ಮುಖ್ಯವಾದುದ್ದು. ಈ ವರೆಗೂ ಮಾಡದ ಒಂದಷ್ಟು ಹೊಸ ಪ್ರಯೋಗಗಳು ಈ ಸಿನಿಮಾದಲ್ಲಾಗಿವೆ. ಇನ್ನೇನು ಇದೇ ಡಿಸೆಂಬರ್‌ 25ರಂದು ಈ ಚಿತ್ರ ರಿಲೀಸ್‌ ಆಗುತ್ತಿದೆ. ಈ ಸಿನಿಮಾ ಸೇರಿ ಈ ಹಿಂದಿನ ಚಿತ್ರಗಳ ಬಗ್ಗೆ ಕಿಚ್ಚ ಹೇಳಿದ 10 ಸಂಗತಿಗಳು ಇಲ್ಲಿವೆ.

ಮ್ಯಾಕ್ಸ್‌ ಅನ್ನೋ ಮಹಾ ಅವತಾರ ಸೃಷ್ಟಿಯಾಗಿದ್ದು ಹೇಗೆ?
ಮ್ಯಾಕ್ಸ್‌ ಅನ್ನೋ ಮಹಾ ಅವತಾರ ಸೃಷ್ಟಿಯಾಗಿದ್ದು ಹೇಗೆ?

Kichcha Sudeep about Max Movie: ವಿಜಯ್‍ ಕಾರ್ತಿಕೇಯ ಎಂಬ ಹೆಸರೇ ಯಾರಿಗೂ ಗೊತ್ತಿರಲಿಲ್ಲ. ಅವರು ಯಾವ ಸಿನಿಮಾ ಮಾಡಿದ್ದರು? ಅವರ ಸಾಮರ್ಥ್ಯ ಏನು? ಮುಂತಾದ ಯಾವ ವಿಷಯಗಳೂ ಗೊತ್ತಿರಲಿಲ್ಲ. ಹಾಗಿರುವಾಗ, ಸುದೀಪ್‍ ಅವರನ್ನು ಕರೆದು ಕಾಲ್‌ಶೀಟ್‌‍ ಕೊಟ್ಟರು. ಅದು ‘ಮ್ಯಾಕ್ಸ್’ ಚಿತ್ರವಾಗಿ ಡಿ. 25ರಂದು ಬಿಡುಗಡೆಯಾಗುತ್ತಿದೆ. ಇಷ್ಟಕ್ಕೂ ಸುದೀಪ್‍ ಯಾವ ಧೈರ್ಯದ ಮೇಲೆ ವಿಜಯ್‍ ಕಾರ್ತಿಕೇಯಗೆ ಕಾಲ್‍ಶೀಟ್‍ ಕೊಟ್ಟರು ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಈ ಕುರಿತು ಭಾನುವಾರ ರಾತ್ರಿ ನಡೆದ ಚಿತ್ರದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುದೀಪ್‍, ಹುಡುಗಿ ಇಷ್ಟವಾಗಿದ್ದರಿಂದಲೇ ತಾಳಿ ಕಟ್ಟಿದೆ ಎಂದು ತಮಾಷೆಯಾಗಿ ಹೇಳಿದರು.

ಮ್ಯಾಕ್ಸ್‌ ಮತ್ತು ಈ ಹಿಂದಿನ ಸಿನಿಮಾಗಳ ಬಗ್ಗೆ ಸುದೀಪ್‌ ಹೇಳಿದ್ದೇನು?

  1.  ಈ ಕುರಿತು ಮಾತನಾಡಿದ ಸುದೀಪ್, ‘ಇದು ಒಂದು ರಾತ್ರಿಯ ಕಥೆ. ಇದೊಂದು ಹೈ ವೋಲ್ಟೇಜ್‍ ಡ್ರಾಮ. ಇಲ್ಲಿ ಚಿತ್ರಕಥೆಯೇ ಹೀರೋ. ಅವರು ಮನೆಗೆ ಬಂದು ಕಥೆ ಹೇಳಿದರು. ಹುಡುಗಿ ನೋಡಿದೆ. ಇಷ್ಟ ಆಯ್ತು. ಬೇರೆ ಏನೂ ಯೋಚಿಸಲಿಲ್ಲ. ತಾಳಿ ಕಟ್ಟುವುದಕ್ಕೆ ಒಪ್ಪಿಕೊಂಡೆ’.
  2. ‘ಇಲ್ಲಿ ಪ್ರಮುಖವಾಗಿ ಇರುವುದು ಒಂದೇ ವಿಷಯ. ಮೂಡ್‍ ಹೇಗಿದೆ ಎಂಬುದರ ಮೇಲೆ ಎಲ್ಲವೂ ನಿಂತಿರುತ್ತದೆ. ಮೂಡ್‍ ಚೆನ್ನಾಗಿದ್ದರೆ ಕಥೆ ಕೇಳುತ್ತೇನೆ. ಇಲ್ಲವಾದರೆ ಇಲ್ಲ. ಅವರು ಬಂದು ಕಥೆ ಹೇಳಿದ ದಿನ ಮೂಡ್‍ ಚೆನ್ನಾಗಿತ್ತು. ಅವರ ಕಥೆ ಸಹ ಬಹಳ ಪ್ರಾಮಾಣಿಕವಾಗಿತ್ತು. ನನ್ನ ಮೆಚ್ಚಿಸೋಕೆ ಏನೋ ಮಾಡಿರಲಿಲ್ಲ. ಇಷ್ಟವಾದ್ದರಿಂದ ಒಪ್ಪಿದೆ’.
  3. ‘ಇಲ್ಲಿ ದೊಡ್ಡ ನಿರ್ದೇಶಕರು, ಚಿಕ್ಕವರು ಎಂದೇನಿಲ್ಲ. ನಾನು ಇಬ್ಬರ ಜೊತೆಗೂ ಕೆಲಸ ಮಾಡಿದ್ದೇನೆ. ವಿಷಯ ಚೆನ್ನಾಗಿದ್ದರೆ ನಾನು ಯಾರೊಟ್ಟಿಗಾದರೂ ಕೆಲಸ ಮಾಡುತ್ತೇನೆ. ಹಳಬರ ಜೊತೆಗೂ ಚರ್ಚೆಗಳು ಇದ್ದೇ ಇರುತ್ತದೆ. ಹಾಗಾಗಿ, ಎರಡನೆಯ ಯೋಚನೆ ಇಲ್ಲದೆ ಒಪ್ಪಿದೆ’ ಎಂದರು.
  4.  ಚಿತ್ರದ ಪೋಸ್ಟರ್ ಮತ್ತು ಟೀಸರ್‌ಗಳನ್ನು ನೋಡಿದರೆ ರಕ್ತಪಾತ ಹೆಚ್ಚಿರುವ ಹಾಗೆ ಕಾಣುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸುದೀಪ್‍, ‘ನಾನು ‘ಸ್ವಾತಿಮುತ್ತು’, ‘ಮೈ ಆಟೋಗ್ರಾಫ್‍’ನಂತಹ ಚಿತ್ರಗಳನ್ನು ಮಾಡಿ ಮೆಸೇಜ್ ಕೊಟ್ಟೆ. ಆದರೆ, ಜನ ಮನೆಗೆ ಕಳಿಸಿದರು.
  5. ಕತ್ತಿ ಹಿಡಿದವರು ನಂಬರ್ ಒನ್‍ ಆದರು. ಮನೆಯಲ್ಲಿ ಹಾಕುವ ಬಟ್ಟೆ ಮನೆಯಲ್ಲಿರಲಿ, ಹೊರಗೆ ಹಾಕುವ ಬಟ್ಟೆ ಹೊರಗೆ ಇರಲಿ ಎಂದು ಹಿರಿಯರು ಹೇಳಿದರು. ಹೊರಗೆ ನಿನ್ನಿಂದ ಏನು ನಿರೀಕ್ಷಿಸುತ್ತಾರೋ ಹಾಗಿರು ಎಂದರು. ಅದರಂತೆ ಚಿತ್ರಗಳನ್ನು ಮಾಡುತ್ತಿದ್ದೇನೆ.
  6. ಇಲ್ಲಿ ರಕ್ತವಿದೆ ಎಂದು ಯಾಮಾರಬೇಡಿ. ಚಿತ್ರ ನೋಡಿ ತೀರ್ಮಾನ ಮಾಡಿ. ಇವತ್ತು ಜನ ವಿದ್ಯಾವಂತರಾಗಿದ್ದಾರೆ. ತಮಗೆ ಏನು ಬೇಕು ಎಂದು ಅವರಿಗೆ ಗೊತ್ತಿದೆ. ಅದಕ್ಕೆ ಪೂರಕವಾಗಿ ಚಿತ್ರ ಕೊಡುವ ಪ್ರಯತ್ನ ಮಾಡುತ್ತೇವೆ. ಇಲ್ಲಿ ರಕ್ತ ಕಾಣಬಹುದು. ಹಾಗಂತ ಅದೇ ಸಂಪೂರ್ಣವಲ್ಲ. ಅದೊಂದು ಭಾಗವಷ್ಟೇ.
  7. ಇಲ್ಲಿಯವರೆಗೂ ನಾನು ಲಾಂಗ್‍- ಮಚ್ಚು ಹಿಡಿದು ಸಿನಿಮಾ ಮಾಡಲಿಲ್ಲ. ‘ಹುಚ್ಚ’ ಚಿತ್ರದಲ್ಲಿ ಎಲ್ಲರಿಂದ ಹೊಡೆತ ತಿಂದೆ. ವಾಪಸ್ಸು ಹೊಡೆಯೋಕೆ ಹೋಗಲಿಲ್ಲ. ಅಷ್ಟು ಒಳ್ಳೆಯವನು ನಾನು. 
  8. ‘ಏನಾಗಲಿ ಮುಂದೆ ಸಾಗು ನೀ …’ ಎಂದು ಹೇಳಿದವನು ನಾನು. ನನ್ನ ‘ಮಾಣಿಕ್ಯ’ ಚಿತ್ರ ನೋಡಿರಬಹುದು. ಅದು ‘ನಂ 73# ಶಾಂತಿ ನಿವಾಸ’ ಚಿತ್ರದ ಇನ್ನೊಂದು ರೂಪ ಅಷ್ಟೇ. ಅದು ಸಾಫ್ಟ್‌ ಆಗಿದ್ದರಿಂದ ಓಡಲಿಲ್ಲ
  9. ‘ಮಾಣಿಕ್ಯ’ದಲ್ಲಿ ಚೇಸ್‍, ಫೈಟ್‍, ಗ್ಲಾಮರ್ ಎಲ್ಲವೂ ಇತ್ತು. ಹೇಳುವ ರೀತಿ ಹೇಳಿದ್ದರಿಂದ ಅದರಲ್ಲಿ ನಾನು ಗೆದ್ದೆ. ಒಮ್ಮೊಮ್ಮೆ ಯಾವ ರೀತಿಯ ಸಿನಿಮಾ ಮಾಡಬೇಕು, ಮಾಡಬಾರದು ಎಂಬ ಗೊಂದಲ ನನಗೆ ಕಾಡುತ್ತದೆ.
  10. ಮನರಂಜನೆ ಅನ್ನೋದು ದೇವಸ್ಥಾನದಲ್ಲಿ ಪೂಜೆ ಮಾಡಿದಂತೆ. ನಾವು ಪೂಜೆ ಮಾಡೋಕಷ್ಟೇ ಸಾಧ್ಯ. ದೇವರಿಗೆ ಇಷ್ಟವಾದರೆ ವರ ಕೊಡುತ್ತಾರೆ. ಇಲ್ಲವಾದರೆ ಇಲ್ಲ ಎಂದರು’ ಸುದೀಪ್‍.

ಇದನ್ನೂ ಓದಿ: ಪುಷ್ಪ 2 ದ ರೂಲ್ ಸಿನಿಮಾ ರಿಲೀಸ್‌ಗೂ ಮೊದಲೇ ನಟ ಅಲ್ಲು ಅರ್ಜುನ್ ವಿರುದ್ಧ ಪೊಲೀಸ್‌ ದೂರು, ಕಾರಣ ಅದೊಂದು ಪದ ಬಳಕೆ

ಈ ಕಥೆ ನಾಯಕಿಯನ್ನು ಬೇಡಿಲ್ಲ..

ಇನ್ನು, ಈ ಚಿತ್ರದಲ್ಲಿ ಸುದೀಪ್‍ ಅವರಿಗೆ ನಾಯಕಿ ಇಲ್ಲ. ಈ ಕುರಿತು ಮಾತನಾಡುವ ಸುದೀಪ್‍, ‘ಇಲ್ಲಿ ಅವಕಾಶ ಮಾತ್ರ ಮುಖ್ಯ. ಸುಮ್ಮನೆ ತುರುಕಬಾರದು. ‘ವಿಕ್ರಾಂತ್ ರೋಣ’ ಚಿತ್ರದ ಫ್ಲಾಶ್‍ಬ್ಯಾಕ್‍ನಲ್ಲಿ ನಾಯಕಿ ಪಾತ್ರವಿತ್ತು. ಇದರಲ್ಲಿ ಅವಕಾಶವಿರಲಿಲ್ಲ. ಯಾವುದೇ ಪಾತ್ರ ಅಥವಾ ವಿಷಯವನ್ನು ಸುಮ್ಮನೆ ತುರುಕಬಾರದು. ಇದೊಂದು ಥ್ರಿಲ್ಲರ್. ಕಥೆ ವೇಗವಾಗಿ ಸಾಗುತ್ತಿರಬೇಕು. ಇಲ್ಲಿ ನಾಯಕಿ ಪಾತ್ರಕ್ಕೆ ಅವಕಾಶವಿಲ್ಲದಿದ್ದರಿಂದ ಸುಮ್ಮನೆ ಸೇರಿಸಿಲ್ಲ’ ಎಂದರು.

ವಿಜಯ್‌ ಕಾರ್ತಿಯೇಯ ನಿರ್ದೇಶನ

‘ಮ್ಯಾಕ್ಸ್’ ಚಿತ್ರದಲ್ಲಿ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ವಿ ಕ್ರಿಯೇಷನ್ಸ್ ಬ್ಯಾನರ್‌ನಡಿ ಕಲೈಪುಲಿ ಎಸ್ ಧನು ಮತ್ತು ಕಿಚ್ಚ ಕ್ರಿಯೇಷನ್ಸ್ ಸಂಸ್ಥೆಯಡಿ ಸುದೀಪ್‍ ನಿರ್ಮಿಸಿರುವ ಈ ಚಿತ್ರಕ್ಕೆ ವಿಜಯ್‍ ಕಾರ್ತಿಕೇಯ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ವರದಿ: ಚೇತನ್‌ ನಾಡಿಗೇರ್

Whats_app_banner