Bigg Boss Kananda: ಅಕ್ಟೋಬರ್‌ 8ರಿಂದ ಬಿಗ್‌ಬಾಸ್‌ ಕನ್ನಡ ಶುರು; 16 ಸ್ಪರ್ಧಿಗಳ ಮೇಲೆ 73 ಕ್ಯಾಮೆರಾಗಳ ಕಣ್ಣು, ಈ ಬಾರಿ ಇದೆ 3 ವಿಶೇಷ
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kananda: ಅಕ್ಟೋಬರ್‌ 8ರಿಂದ ಬಿಗ್‌ಬಾಸ್‌ ಕನ್ನಡ ಶುರು; 16 ಸ್ಪರ್ಧಿಗಳ ಮೇಲೆ 73 ಕ್ಯಾಮೆರಾಗಳ ಕಣ್ಣು, ಈ ಬಾರಿ ಇದೆ 3 ವಿಶೇಷ

Bigg Boss Kananda: ಅಕ್ಟೋಬರ್‌ 8ರಿಂದ ಬಿಗ್‌ಬಾಸ್‌ ಕನ್ನಡ ಶುರು; 16 ಸ್ಪರ್ಧಿಗಳ ಮೇಲೆ 73 ಕ್ಯಾಮೆರಾಗಳ ಕಣ್ಣು, ಈ ಬಾರಿ ಇದೆ 3 ವಿಶೇಷ

Bigg Boss Kannada Season 10: ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಅಕ್ಟೋಬರ್‌ 8ರಿಂದ ಆರಂಭವಾಗಲಿದೆ. ಕಿಚ್ಚ ಸುದೀಪ್‌ ನಡೆಸಿಕೊಡುವ ಈ ಕಾರ್ಯಕ್ರಮದ ಕುರಿತು ಕಲರ್ಸ್‌ ಕನ್ನಡ ವಾಹಿನಿಯು ಇಂದು ಒಂದಿಷ್ಟು ವಿವರ ನೀಡಿದೆ.

Bigg Boss Kananda: ಅಕ್ಟೋಬರ್‌ 8ರಿಂದ ಬಿಗ್‌ಬಾಸ್‌ ಕನ್ನಡ ಶುರು
Bigg Boss Kananda: ಅಕ್ಟೋಬರ್‌ 8ರಿಂದ ಬಿಗ್‌ಬಾಸ್‌ ಕನ್ನಡ ಶುರು

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಕುರಿತು ಕಲರ್ಸ್‌ ಕನ್ನಡ ಅಧಿಕೃತವಾಗಿ ಇಂದು ಅಪ್‌ಡೇಟ್‌ ನೀಡಿದೆ. ಅಕ್ಟೊಬರ್ 8ನೇ ತಾರೀಖಿನ ಸಂಜೆ 6 ಗಂಟೆಗೆ ಸ್ಪರ್ಧಿಗಳನ್ನು ಮನೆಯೊಳಕ್ಕೆ ಕಳಿಸಲಾಗುವುದು. ದೈನಂದಿನ ಸಂಚಿಕೆಗಳು ಮರುದಿನದಿಂದ ಪ್ರತಿ ದಿನ ರಾತ್ರಿ ಒಂಬತ್ತೂವರೆಗೆ ಪ್ರಸಾರವಾಗುತ್ತವೆ ಎಂದು ಕಲರ್ಸ್‌ ಕನ್ನಡ ಪ್ರಕಟಿಸಿದೆ.

16 ಸ್ಪರ್ಧಿಗಳ ಮೇಲೆ 73 ಕ್ಯಾಮೆರಾ ಕಣ್ಣು

ಹತ್ತನೇ ಸೀಸನ್ ಕನ್ನಡ ಬಿಗ್ ಬಾಸ್ ನ ವಿಶೇಷಗಳು ಹಲವು. ಇದೇ ಮೊದಲಬಾರಿಗೆ 'ಹ್ಯಾಪಿ ಬಿಗ್ ಬಾಸ್' ಎಂಬ ಥೀಮ್ ಹೊಂದಿರುವುದು ಮೊದಲನೇ ವಿಶೇಷ. ಪ್ರತಿ ವರ್ಷವೂ ನೋಡುಗರು, ಸ್ಪರ್ಧಿಗಳು, ಜಾಹೀರಾತುದಾರರೆಲ್ಲರಿಗೂ ಹಬ್ಬದಂಥ ಸಂಭ್ರಮ ತರುವ ಕಾರ್ಯಕ್ರಮವಾದ ಬಿಗ್ ಬಾಸ್ ನ ಥೀಮ್ ಹ್ಯಾಪಿ ಆಗಿರುವುದು ಸರಿಯಾಗಿಯೇ ಇದೆ. ಹದಿನಾರು ಸ್ಪರ್ಧಿಗಳು ಭಾಗವಹಿಸಲಿರುವ ಈ ಸೀಸನ್ನಿನ ಮನೆಯನ್ನು ಕಾಯಲು 73 ಕ್ಯಾಮರಾಗಳು ಸಜ್ಜಾಗಿವೆ ಎಂದು ಕಲರ್ಸ್‌ ಕನ್ನಡ ಸುದ್ದಿವಾಹಿನಿಯು ಇಂದು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದೆ.

ಈ ಬಾರಿ ಮೂರು ವಿಶೇಷ

"ಈ ಸೀಸನ್ ವಿಶೇಷವಾಗಲು ಮೂರು ಕಾರಣಗಳಿವೆ. 'ಹತ್ತನೇ ಸೀಸನ್ ಎಂಬುದೇ ಒಂದು ಸಂಭ್ರಮ. ಸೀಸನ್ನಿಗೊಂದು ಥೀಮ್ ಅಳವಡಿಸಿರುವುದು ಆಟದ ರೀತಿಯನ್ನು ಬದಲಿಸಲಿದೆ. ವಿಶಾಲವಾದ ಹೊಸ ಮನೆ ಮೂರನೇ ವಿಶೇಷ. ಮೂರೂ ಸೇರಿ ಹಿಂದೆಂದೂ ಕಾಣದಂತ ಮನರಂಜನೆಗೆ ದಾರಿಮಾಡಿಕೊಡಲಿವೆ' ಎಂದು ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ ಹೇಳಿದ್ದಾರೆ.

ಬಿಗ್‌ಬಾಸ್‌ ನನ್ನ ಹ್ಯಾಪಿ ಹೋಮ್‌ ಎಂದ ಕಿಚ್ಚ ಸುದೀಪ್‌

ಇಷ್ಟು ಬೇಗ ಹತ್ತು ವರ್ಷ ಉರುಳಿಹೋದ ಬಗ್ಗೆ ಆಶ್ಚರ್ಯವಾಗುತ್ತಿದೆ ಎಂದು ಕಾರ್ಯಕ್ರಮದ ಸೂತ್ರಧಾರ ಮತ್ತು ಜೀವಾಳವಾಗಿರುವ ನಟ ಕಿಚ್ಚ ಸುದೀಪ್ ಹೇಳಿದ್ದಾರೆ. 'ನನ್ನ ಪ್ರಕಾರ ಬಿಗ್ ಬಾಸ್ ಒಂದು ಶೋ ಅಲ್ಲ, ಇದು ನನ್ನ ಹ್ಯಾಪಿ ಹೋಂ. ಪ್ರತಿ ಸೀಸನ್ನಲ್ಲೂ ಹೊಸ ಹೊಸ ವ್ಯಕ್ತಿತ್ವಗಳನ್ನು ಪರಿಚಯ ಮಾಡಿಕೊಳ್ಳುವುದು ಒಂದು ವಿಶಿಷ್ಟ ಅನುಭವ. ಹತ್ತನೇ ಸೀಸನ್ನಿಗೆ ಎಲ್ಲರಂತೆ ನಾನೂ ಕಾತರನಾಗಿದ್ದೇನೆ' ಎಂದು ಅವರು ಹೇಳಿದ್ದಾರೆ.

ಬಾನೀಜೆ ಮತ್ತು ಎಂಡಮಾಲ್ ಶೈನ್ ನ ಸಿಇಒ ದೀಪಕ್ ಧರ್ ಪಾಲಿಗೆ ಬಿಗ್ ಬಾಸ್ ಶೋ ಆಯೋಜಿಸುವುದು ಹೆಮ್ಮೆಯ ಸಂಗತಿ. ಆಟ ಮತ್ತು ಭಾವನೆಗಳ ತಾಕಲಾಟದ ಮತ್ತೊಂದು ರೋಮಾಂಚಕ ಸೀಸನ್ನಿಗೆ ತಯಾರಾಗಿದ್ದೇವೆ ಎಂದು ಅವರು ಹೇಳಿದ್ದಾರೆ.

ಪ್ರಾಯೋಜಕರು ಯಾರು?

ಬಿಗ್‌ಬಾಸ್‌ ಕನ್ನಡದ ಪ್ರತಿ ಶೋನ ಆರಂಭದಲ್ಲಿ ಪ್ರಾಯೋಜಕರ ಹೆಸರನ್ನು ಸುದೀಪ್‌ ಬಾಯಲ್ಲಿ ಕೇಳೋದೇ ಚಂದ. ಈ ಬಾರಿ ಬಿಗ್‌ಬಾಸ್‌ ಕನ್ನಡ ಸೀಸನ್‌ ಹತ್ತರಲ್ಲಿ ಹಲವು ಪ್ರಾಯೋಜಕರು ಇದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 10, ಪವರ್ಡ್ ಬೈ ಫ್ರೀಡಂ ರಿಫೈನ್ ಸನ್ ಫ್ಲವರ್ ಆಯಿಲ್ ಮತ್ತು ನಿಪ್ಪಾನ್ ಪೇಂಟ್ಸ್‌; ಸ್ಪೆಷಲ್ ಪಾರ್ಟನರ್ಸ್ ಲೆವಿಸ್ಟಾ ಇನ್ಸ್ ಟಂಟ್ ಕಾಫಿ , ಸೆರಾ, ಸ್ವಸ್ತಿಕ್ಸ್ ಮಸಾಲಾ ಮತ್ತು ಇಂಡಿಯಾ ಗೇಟ್ ಬಾಸಮತಿ ರೈಸ್; ಹೆಲ್ತ್ ಪಾರ್ಟ್ ನರ್ಸ್ ಅಮೃತ್ ನೋನಿ ಮತ್ತು ರೆಸ್ಟುರಾಂಟ್ ಪಾರ್ಟ್ ನರ್ ಹಲ್ದಿರಾಮ್ಸ್; ಪ್ರೈಸ್ ಪಾರ್ಟ್‌ನರ್‍‌ ಕಾನ್ಫಿಡೆಂಟ್ ಗ್ರೂಪ್ ಎಂದು ಕೇಳಲು ಸಜ್ಜಾಗಿರಿ.

Whats_app_banner