ಸೂತಕದ ಮನೆಯಂತಾದ ಧಾರಾವಾಹಿಗಳು! ಶೀಘ್ರದಲ್ಲಿ ಪುಟ್ಟಕ್ಕನ ಮಕ್ಕಳು ಸೀರಿಯಲ್ ಅಂತ್ಯ? ಸಿಕ್ತು ಬಹುದೊಡ್ಡ ಸುಳಿವು
ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ಸ್ನೇಹಾ ಸಾವಿನ ಬೆನ್ನಲ್ಲೇ, ಹೊಸ ಸುಳಿವೊಂದು ಸಿಕ್ಕಿದೆ. ಇನ್ನೇನು ಹೊಸ ಸೀರಿಯಲ್ವೊಂದಕ್ಕೆ ಈ ಧಾರಾವಾಹಿ ದಾರಿ ಮಾಡಿಕೊಡಲಿದೆ ಎನ್ನಲಾಗುತ್ತಿದೆ. ಅಂದರೆ, ಅಂತ್ಯದತ್ತ ಪುಟ್ಟಕ್ಕನ ಮಕ್ಕಳು ಸೀರಿಯಲ್ ಸಾಗುತ್ತಿದೆ.
Puttakkana Makkalu Serial: ಕಿರುತೆರೆಯ ವೀಕ್ಷಕರಲ್ಲೀಗ ನಿರಾಸೆಯ ಕಾರ್ಮೋಡ ಆವರಿಸಿದೆ. ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ಸ್ನೇಹಾಳ ಸಾವಾಗಿದೆ. ಅದೇ ರೀತಿ ಸೀತಾ ರಾಮ ಸೀರಿಯಲ್ನಲ್ಲೂ ಪುಟಾಣಿ ಸಿಹಿ ಅಪಘಾತದಲ್ಲಿ ಕಣ್ಮುಚ್ಚಲಿದ್ದಾಳೆ ಎಂಬ ಪ್ರೋಮೋ ವೀಕ್ಷಕರನ್ನು ಅಕ್ಷರಶಃ ಛಿದ್ರಗೊಳಿಸಿತ್ತು. ಆ ಎರಡರ ಪೈಕಿ ಇದೀಗ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಡಿಸಿ ಸ್ನೇಹಾ ಸಾವಿನ ಸುದ್ದಿ ಖಚಿತವಾಗಿದೆ. ಆ ರೋದನೆಯ ಪ್ರೋಮೋವನ್ನು ಜೀ ಕನ್ನಡ ಬಿಡುಗಡೆ ಮಾಡಿದೆ. ಜೀವ ಹೋದರೂ, ಹೃದಯ ಬದುಕಿದೆ. ತನ್ನದೇ ಹೆಸರಿನ ಬೇರೆ ಜೀವಕ್ಕೆ ಉಸಿರಾದ್ಲು ಸ್ನೇಹಾ ಎಂಬ ಕ್ಯಾಪ್ಷನ್ ನೀಡಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಸೀತಾ ರಾಮ ಸೀರಿಯಲ್ ಮತ್ತು ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಪ್ರೋಮೋ ಬಿಡುಗಡೆ ಆಗಿದ್ದೇ ತಡ, ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಸಿಹಿ ಮತ್ತು ಸ್ನೇಹಾಳನ್ನು ಅಪಘಾತದಲ್ಲಿ ಸಾಯಿಸಿದ್ದಕ್ಕೆ ವೀಕ್ಷಕರು ಕೊಂಚ ಗರಂ ಆಗಿಯೇ ಕಿಡಿ ಕಾರುತ್ತಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ, ಸೀತಾರಾಮ ಸೀರಿಯಲ್ನಲ್ಲಿ ಸಿಹಿ ಇಲ್ಲ ಅಂದ್ಮೇಲೆ ಇನ್ನು ಮುಂದೆ ನಾವ್ಯಾರೂ ಈ ಸೀರಿಯಲ್ ನೋಡಲ್ಲ" ಎಂದು ಕಾಮೆಂಟ್ ಮೇಲೆ ಕಾಮೆಂಟ್ ಹಾಕುತ್ತಿದ್ದಾರೆ ವೀಕ್ಷಕರು.
"ಜೀ ಕನ್ನಡ ವಾಹಿನಿಗೆ ಬರೀ ಸಾಯಿಸುವ ದರಿದ್ರ ಅಂಟಿದೆ. ಅತ್ತ ಸ್ನೇಹ ಇತ್ತ ಸಿಹಿ, ಇನ್ನು ಮುಂದೆ ಜೀ ಕನ್ನಡ ವಾಹಿನಿಯವರು ಬರೀ ರಿಯಾಲಿಟಿ ಶೋ ಮಾಡ್ಕೋಂಡು ಇರಿ. ನಿಮ್ಮ ಬಯಸಿದ ಬಾಗಿಲು ಶಾಶ್ವತವಾಗಿ ಮುಚ್ಚಿ ಹೋಗುತ್ತದೆ" ಎಂದೂ ಕಾಮೆಂಟ್ ಬಾಕ್ಸ್ನಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ ವೀಕ್ಷಕರು. "ಅಯ್ಯೋ ದೇವ್ರೆ ಇಷ್ಟು ದಿನ ಮನೆ ಮನೆ ಕಥೆ ಆಗಿತ್ತು.. ಈಗ ದೆವ್ವದ ಕಥೆನಾ? ಕಥೆ ಎಳೆಯೋಕು ಮಿತಿ ಇರಬೇಕು" ಎಂದು ಬೇಸರ ಹೊರಹಾಕಿದ್ದಾರೆ ಸೀರಿಯಲ್ ನೋಡುಗರು.
ಶೀಘ್ರದಲ್ಲಿ ಮುಗಿಯಲಿದೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ..
ಜೀ ಕನ್ನಡದಲ್ಲೀಗ ಒಂದು ಹೊಸ ಸೀರಿಯಲ್ ಆಗಮನದ ಸನಿಹದಲ್ಲಿದೆ. ನಿನ್ನೆಯಷ್ಟೇ ನಾ ನಿನ್ನ ಬಿಡಲಾರೆ ಸೀರಿಯಲ್ನ ಪ್ರೋಮೋ ಬಿಡುಗಡೆ ಮಾಡಿ, ವೀಕ್ಷಕರಿಗೆ ಸರ್ಪ್ರೈಸ್ ಕೊಟ್ಟಿತ್ತು ಜೀ ಕನ್ನಡ ವಾಹಿನಿ. ಈ ಮೂಲಕ ಶೀಘ್ರದಲ್ಲಿ ಈ ಸೀರಿಯಲ್ ಪ್ರಸಾರ ಆರಂಭಿಸಲಿದೆ. ಹಾಗಾದರೆ, ಒಂದು ಹೊಸ ಸೀರಿಯಲ್ ಬರಬೇಕು ಎಂದಾದರೆ, ಇನ್ನೊಂದು ಮುಗಿಯಲೇಬೇಕಲ್ಲವೇ? ಅದೇ ರೀತಿ ಸದ್ಯ ಪುಟ್ಟಕ್ಕನ ಮಕ್ಕಳು ಸೀರಿಯಲ್ ನೋಡುತ್ತಿದ್ದರೆ, ಎಲ್ಲವೂ ಕೊನೇ ಹಂತಕ್ಕೆ ಬಂದು ನಿಂತಿದೆ.
ಸಿಂಗಾರಮ್ಮನ ಅಂತ್ಯದ ಮೂಲಕ ಸೀರಿಯಲ್ ಕೊನೆ
ಸ್ನೇಹಾಳ ಸಾವಿನ ಹಿಂದೆ ಆ ಸಿಂಗಾರಮ್ಮನ ಕೈವಾಡ ಇದೇ ಎಂಬುದು ಈಗಾಗಲೇ ಗೊತ್ತಾಗಿದೆ. ಅದೇ ರೀತಿ ಕಂಠಿಯೂ ಸಿಂಗಾರಮ್ಮನ ಮೇಲೆ ಸೇಡು ತೀರಿಸಿಕೊಳ್ಳಲಿದ್ದಾನೆ. ಆಕೆಯನ್ನು ಮತ್ತೆ ಕಾನೂನಿಗೆ ಒಪ್ಪಿಸುತ್ತಾನೋ ಅಥವಾ ಪತ್ನಿ ಕಳೆದುಕೊಂಡ ನೋವಲ್ಲಿ ಅವಳನ್ನೂ ಹತ್ಯೆ ಮಾಡುತ್ತಾನೋ ಎಂಬುದು ಸದ್ಯದ ಕುತೂಹಲ. ಈ ಮೂಲಕ ಸುಖಾಂತ್ಯ ಕಾಣುವ ಬದಲು, ಸ್ನೇಹಾ ಇಲ್ಲದ ನೋವಿನಲ್ಲಿಯೇ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಕೊನೆಯಾಗಲಿದೆ.
ಬ್ರಹ್ಮಗಂಟು ಸೀರಿಯಲ್ ಸಮಯ ಬದಲಾಗುತ್ತಾ?
ಸದ್ಯ ಪುಟ್ಟಕ್ಕನ ಮಕ್ಕಳು 6:30ಕ್ಕೆ ಪ್ರಸಾರ ಕಾಣುತ್ತಿದೆ. ಈ ಸೀರಿಯಲ್ ಮುಗಿಯುತ್ತಿದ್ದಂತೆ, 10 ಗಂಟೆಗೆ ಪ್ರಸಾರ ಕಾಣುತ್ತಿರುವ ಬ್ರಹ್ಮಗಂಟು ಸೀರಿಯಲ್ 6;30ಕ್ಕೆ ಆಗಮಿಸುವ ಸಾಧ್ಯತೆ ಇದೆ. 10 ಗಂಟೆಯ ಸ್ಲಾಟ್ಗೆ ಹಾರರ್ ಸೀರಿಯಲ್ ನಾ ನಿನ್ನ ಬಿಡಲಾರೆ ಬಂದು ಕೂರಲಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ವಿಭಾಗ