ಉಪೇಂದ್ರ ನನ್ನ ಗುರು ಇದ್ದಂತೆ, ನಾನು ಅವರ ಶಿಷ್ಯ; ಡಿ.25ರಂದು ಮ್ಯಾಕ್ಸ್ ಸಿನಿಮಾ ಬಿಡುಗಡೆಗೆ ಪ್ರಮುಖ ಕಾರಣ ತಿಳಿಸಿದ ಸುದೀಪ್
ಕ್ರಿಸ್ಮಸ್ ಸಂದರ್ಭದಲ್ಲಿ ರಜೆಗಳಿರುತ್ತವೆ. ಜನರ ಮೂಡ್ ಸಹ ಚೆನ್ನಾಗಿರುತ್ತದೆ. ಇಂಥ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡಿದರೆ, ಚಿತ್ರಕ್ಕೂ ಅನುಕೂಲ ಎಂಬುದು ನಿರ್ಮಾಪಕರ ನಂಬಿಕೆ. ಅದೇ ಕಾರಣಕ್ಕೆ ಈ ಸಮಯದಲ್ಲಿ ಮ್ಯಾಕ್ಸ್ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ’ ಎಂದು ಕಿಚ್ ಸುದೀಪ್ ಹೇಳಿದ್ದಾರೆ. (ವರದಿ -ಚೇತನ್ ನಾಡಿಗೇರ್)
ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರವು ಡಿಸೆಂಬರ್ 25ರಂದು ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಅದಕ್ಕೂ ಕೇವಲ ಐದು ದಿನ ಮೊದಲು ಉಪೇಂದ್ರ ಅಭಿನಯದ ‘ಯುಐ’ ಚಿತ್ರ ತೆರೆಗೆ ಬರುತ್ತಿದೆ. ಬಿಡುಗಡೆ ದಿನಾಂಕವನ್ನು ಒಂದು ತಿಂಗಳ ಮೊದಲೇ ಘೋಷಣೆ ಮಾಡಿದ್ದು ಉಪೇಂದ್ರ. ಈಗ ಕೆಲವು ದಿನಗಳ ಹಿಂದೆ ಸುದೀಪ್ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಯಿತು. ಕೆಲವೇ ದಿನಗಳ ಅಂತರದಲ್ಲಿ ಎರಡು ದೊಡ್ಡ ಚಿತ್ರಗಳು ಬಿಡುಗಡೆ ಆಗುತ್ತಿರುವುದರಿಂದ ಕ್ಲಾಶ್ ಆಗುವುದಲ್ಲದೆ, ಪ್ರೇಕ್ಷಕರಿಗೂ ಕಷ್ಟವಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ.
ಈ ಕುರಿತು ಭಾನುವಾರ ರಾತ್ರಿ ನಡೆದ ‘ಮ್ಯಾಕ್ಸ್’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುದೀಪ್, ಇದು ಕ್ಲಾಶ್ ಅಲ್ಲ ಮತ್ತು ಇದರಿಂದ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ. ‘ಉಪೇಂದ್ರ ಅವರು ಮೊದಲು ಸ್ಟಾರ್ ಆದವರು. ಅವರ ಕೊಡುಗೆ ದೊಡ್ಡದು. ಅವರಿಂದ ಎಷ್ಟೋ ವಿಷಯಗಳಿಂದ ಕಲಿತಿದ್ದೇವೆ. ನಮ್ಮ ಚಿತ್ರ ಬಿಡುಗಡೆ ಆಗುತ್ತಿರುವ ಬಗ್ಗೆ ಅವರೇ ತಲೆ ಕೆಡಿಸಿಕೊಂಡಿಲ್ಲ. ನಾವ್ಯಾಕೆ ಡಿಸೆಂಬರ್ 25ರಂದು ಬರುತ್ತಿದ್ದೇವೆ ಎಂದು ಅವರಿಗೂ ಗೊತ್ತಿದೆ. ಡಿ.25ರಂದು ಚಿತ್ರ ಬಿಡುಗಡೆ ಆಗುತ್ತಿರುವುದಕ್ಕೆ ಪ್ರಮುಖ ಕಾರಣ ರಜೆಯ ಸೀಸನ್. ಚಿತ್ರದಲ್ಲಿ ನಾನು ನಟಿಸುತ್ತಿದ್ದರೂ, ಹಣ ಹಾಕುತ್ತಿರುವವರು ಬೇರೆಯವರು. ಅವರ ಪ್ಲಾನ್ ಬೇರೆಯೇ ಇರುತ್ತದೆ. ಆಗಸ್ಟ್ ತಿಂಗಳಲ್ಲೇ ಚಿತ್ರ ಬಿಡುಗಡೆ ಮಾಡುವ ಪ್ರಯತ್ನ ಮಾಡಲಾಗಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಕೆಲಸ ಬಾಕಿ ಇದ್ದುದರಿಂದ ಇನ್ನೊಂದು ತಿಂಗಳು ಮುಂದೆ ಹೋಗುವ ಪರಿಸ್ಥಿತಿ ಇತ್ತು. ಒಂದು ತಿಂಗಳ ಬದಲು, ಡಿಸೆಂಬರ್‌ಲ್ಲಿ ರಜೆಯ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ನಿರ್ಮಾಪಕರಿಗೆ ಇತ್ತು. ಅದರಂತೆ ಡಿಸೆಂಬರ್‌ನಲ್ಲಿ ಬಿಡುಗಡೆಯಾಗುತ್ತಿದೆ’ ಎಂದರು.
ಇದರಿಂದ ಯಾವುದೇ ಕ್ಲಾಶ್ ಇಲ್ಲ ಎನ್ನುವ ಸುದೀಪ್, ‘ಇದರಿಂದ ಉಪೇಂದ್ರ ಅವರ ತಂಡಕ್ಕೆ ಯಾವುದೇ ತೊಂದರೆ ಇಲ್ಲ. ಅದು ದೊಡ್ಡ ಸಿನಿಮಾ. ಆ ಚಿತ್ರದ ಬಗ್ಗೆ ನಾವು ಹೆದರಬೇಕು. ಉಪೇಂದ್ರ ನಮ್ಮ ಗುರುವಿದ್ದಂತೆ. ಅವರು ಮೊದಲು ಬರುತ್ತಿದ್ದಾರೆ. ಅವರ ಶಿಷ್ಯನಾಗಿ ನಾನು ಐದು ದಿನಗಳ ನಂತರ ಬರುತ್ತಿದ್ದೇನೆ. ಇಲ್ಲಿ ಯಾವುದೇ ಕ್ಲಾಶ್ ಇಲ್ಲ. ಸೋಷಿಯಲ್ ಮೀಡಿಯಾದಲ್ಲಿ ಯಾರದೋ ಹೆಸರಲ್ಲಿ ಇನ್ಯಾರೋ ಈ ತರಹದ್ದನ್ನೆಲ್ಲಾ ಶುರು ಮಾಡುತ್ತಾರೆ. ಇದು ಆರೋಗ್ಯಕರವಲ್ಲ. ಒಂದಕ್ಕಿಂತ ಹೆಚ್ಚು ದೊಡ್ಡ ಚಿತ್ರಗಳು ಬಂದರೆ ಚಿತ್ರರಂಗಕ್ಕೆ ಸಮಸ್ಯೆ ಇಲ್ಲ. ಇದರಿಂದ ಅನುಕೂಲವೇ ಆಗುತ್ತದೆ. ಇದರಿಂದ ಕ್ಲಾಶ್ ಏನೂ ಇಲ್ಲ’ ಎಂದರು.
ಕ್ರಿಸ್ಮಸ್ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಯಾಕೆ?
ಒಳ್ಳೆಯ ಸಮಯದಲ್ಲೇ ಚಿತ್ರ ಬಿಡುಗಡೆ ಆಗುತ್ತಿದೆ ಎಂದ ಸುದೀಪ್. ‘ನಮ್ಮಲ್ಲಿ ಕೆಲವು ದಿನಗಳಂದು ಚಿತ್ರ ಬಿಡುಗಡೆಯಾದರೆ, ಚಿತ್ರಗಳು ಗೆಲ್ಲುತ್ತವೆ ಎಂಬ ನಂಬಿಕೆ ಇದೆ. ವರಮಹಾಲಕ್ಷ್ಮೀ ಹಬ್ಬ, ದೀಪಾವಳಿ, ಕ್ರಿಸ್ಮಸ್ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡುವುದಕ್ಕೆ ಪ್ರಯತ್ನ ಮಾಡಲಾಗುತ್ತದೆ ಮತ್ತು ಈ ಸಂದರ್ಭದಲ್ಲಿ ಬಿಡುಗಡೆಯಾದ ಎಷ್ಟೋ ಚಿತ್ರಗಳು ಗೆದ್ದ ಇತಿಹಾಸವೂ ಇದೆ. ಕ್ರಿಸ್ಮಸ್ ಸಂದರ್ಭದಲ್ಲಿ ರಜೆಗಳಿರುತ್ತವೆ. ಜನರ ಮೂಡ್ ಸಹ ಚೆನ್ನಾಗಿರುತ್ತದೆ. ಇಂಥ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡಿದರೆ, ಚಿತ್ರಕ್ಕೂ ಅನುಕೂಲ ಎಂಬುದು ನಿರ್ಮಾಪಕರ ನಂಬಿಕೆ. ಅದೇ ಕಾರಣಕ್ಕೆ ಈ ಸಮಯದಲ್ಲಿ ಚಿತ್ರ ಬಿಡುಗಡೆ ಮಾಡುತ್ತಿದ್ದಾರೆ’ ಎಂದರು.
ಇಷ್ಟು ವರ್ಷಗಳಲ್ಲಿ ಯಾವತ್ತೂ ಹೀಗೆ ಗ್ಯಾಪ್ ಆಗಿರಲಿಲ್ಲ
ವರ್ಷದ ಕೊನೆಗೆ ಚಿತ್ರ ಬಿಡುಗಡೆಯಾಗದಿದ್ದರೆ ದೊಡ್ಡ ಗ್ಯಾಪ್ ಆಗುತ್ತಿತ್ತು ಎನ್ನುವ ಸುದೀಪ್, ‘ಕ್ರಿಕೆಟ್, ‘ಬಿಗ್ ಬಾಸ್’ ಮುಂದಿನ ಕಾರಣಗಳಿಂದ ಇತ್ತೀಚೆಗೆ ಚಿತ್ರಗಳು ನಿಧಾನವಾಗುತ್ತಿವೆ. ಒಂದು ಪಕ್ಷ ಚಿತ್ರವನ್ನು ಮುಂದಿನ ವರ್ಷ ಬಿಡುಗಡೆ ಮಾಡಿದ್ದರೆ, ನನ್ನ ಚಿತ್ರವೊಂದು ಬಿಡುಗಡೆಯಾಗಿ ಎರಡೂವರೆ ವರ್ಷಗಳ ಗ್ಯಾಪ್ ಆಗುತ್ತಿತ್ತು. ಚಿತ್ರರಂಗಕ್ಕೆ ಬಂದು ಇಷ್ಟು ವರ್ಷಗಳಲ್ಲಿ ಯಾವತ್ತೂ ಹೀಗೆ ಗ್ಯಾಪ್ ಆಗಿರಲಿಲ್ಲ. ಈ ಬಾರಿ ಅಂಥದ್ದೊಂದು ಗ್ಯಾಪ್ ಆಗೋದು ತಪ್ಪಿತು. ನನಗೂ ಪ್ರತಿ ದಿನ ಕೆಲಸ ಮಾಡಬೇಕೆಂಬ ಆಸೆ ಇದ್ದೇ ಇದೆ. ಆದರೆ, ಕೆಲವೊಮ್ಮೆ ಅದು ಸಾಧ್ಯವಾಗುವುದಿಲ್ಲ. ಹೀಗೆ ತಡವಾಗುವುದರಿಂದ ತಪ್ಪು ಮಾಡುತ್ತಿದ್ದೇವಾ? ಎಂದನಿಸುತ್ತದೆ. ಏಕೆಂದರೆ, ಅಭಿಮಾನಿಗಳು ಕಾಯುತ್ತಿರುತ್ತಾರೆ. ಯಾವಾಗಲೂ ಚಿತ್ರದ ಬಗ್ಗೆ ಕೇಳುತ್ತಿರುತ್ತಾರೆ. ಅವರಿಗೆ ನಾನು ಸದಾ ಚಿರಋಣಿ. ಅವರು ತೋರಿಸುವ ಪ್ರೀತಿಯೇ ನಮಗೆ ಇನ್ನಷ್ಟು ಸಿನಿಮಾ ಮಾಡೋಕೆ ಪ್ರೇರಣೆ’ ಎಂದರು ಸುದೀಪ್.
‘ಮ್ಯಾಕ್ಸ್’ ಚಿತ್ರವನ್ನು ವಿ ಕ್ರಿಯೇಷನ್ಸ್ ಬ್ಯಾನರ್‌ನಡಿ ಕಲೈಪುಲಿ ಎಸ್ ಧನು ಮತ್ತು ಕಿಚ್ಚ ಕ್ರಿಯೇಷನ್ಸ್ ಸಂಸ್ಥೆಯಡಿ ಸುದೀಪ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರವನ್ನು ವಿಜಯ್ ಕಾರ್ತಿಕೇಯ ನಿರ್ದೇಶಿಸಿದ್ದು, ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ.