Yash on South Movies: ‘ಒಂದು ಕಾಲದಲ್ಲಿ ಉತ್ತರದವರಿಗೆ ಸೌತ್ ಸಿನಿಮಾಗಳೆಂದರೆ ಗೇಲಿಯಾಗಿತ್ತು, ಆದ್ರೆ ಈಗ..’; ಯಶ್ ಕೊಟ್ಟ ಉತ್ತರ ಹೀಗಿದೆ..
ಇತ್ತೀಚಿನ ಕೆಲ ವರ್ಷಗಳಲ್ಲಿ ಬಾಲಿವುಡ್ ಮಂದಿಯೂ ಸೌತ್ ಸಿನಿಮಾಗಳಿಗೆ ಫಿದಾ ಆಗಿದ್ದಾರೆ. ಅವಕಾಶ ಕೊಟ್ಟರೆ, ಸೌತ್ ಸಿನಿಮಾಗಳಲ್ಲಿ ನಟಿಸುತ್ತೇನೆ ಎನ್ನುತ್ತಿರುವ ಬಾಲಿವುಡ್ ನಟರೇನು ಕಡಿಮೆ ಇಲ್ಲ.
ಸಿನಿಮಾ ಅಂತ ಬಂದರೆ, ಮೊದಲ ಪ್ರಾಶಸ್ತ್ಯ ಏನಿದ್ದರೂ ಬಾಲಿವುಡ್ ಅನ್ನೋ ಮಾತಿತ್ತು. ಅದ್ಯಾವ ಮಟ್ಟಿಗೆ ಅಂದರೆ, ಹಿಂದಿ ಚಿತ್ರೋದ್ಯಮವೊಂದೇ, ಉಳಿದಿದ್ದೆಲ್ಲವೂ ನಗಣ್ಯ. ಇದೀಗ ಕಾಲಚಕ್ರ ಬದಲಾಗಿದೆ. ಸಿನಿಮಾ ಮೂಡಿಬರುತ್ತಿರುವ ರೀತಿ, ಅದಕ್ಕೆ ಹೂಡಿಕೆ ಮಾಡುತ್ತಿರುವ ಬಂಡವಾಳ ಮತ್ತು ಸಿಗುವ ಪ್ರತಿಕ್ರಿಯೆ ಸೌತ್ ಸಿನಿಮಾಗಳನ್ನು ಬೇರೆಯದೇ ಮಗ್ಗುಲಿಗೆ ಹೊರಳುವಂತೆ ಮಾಡಿವೆ.
ಇತ್ತೀಚಿನ ಕೆಲ ವರ್ಷಗಳಲ್ಲಿ ಬಾಲಿವುಡ್ ಮಂದಿಯೂ ಸೌತ್ ಸಿನಿಮಾಗಳಿಗೆ ಫಿದಾ ಆಗಿದ್ದಾರೆ. ಅವಕಾಶ ಕೊಟ್ಟರೆ, ಸೌತ್ ಸಿನಿಮಾಗಳಲ್ಲಿ ನಟಿಸುತ್ತೇನೆ ಎನ್ನುತ್ತಿರುವ ಬಾಲಿವುಡ್ ನಟರಿಗೇನು ಕಡಿಮೆ ಇಲ್ಲ. ಈಗೇಕೆ ಈ ಮಾತು ಬಂತೆಂದರೆ, ಒಂದು ಕಾಲದಲ್ಲಿ ಸೌತ್ ಸಿನಿಮಾಗಳೆಂದರೆ ಗೇಲಿ ಮಾಡುತ್ತಿದ್ದ ಉತ್ತರ ಭಾರತದ ಸಿನಿಮಾ ಪ್ರೇಕ್ಷಕ, ಇದೀಗ ದಕ್ಷಿಣದ ಸಿನಿಮಾಗಳಿಗೆ ಮಾರುಹೋಗಿದ್ದಾನೆ. ಇದೇ ವಿಚಾರವನ್ನು ನಟ ಯಶ್, ಮುಂಬೈನಲ್ಲಿ ಮತ್ತೆ ಪ್ರಸ್ತಾಪಿಸಿದ್ದಾರೆ.
ದಕ್ಷಿಣದ ಸಿನಿಮಾಗಳನ್ನು ಗೇಲಿ ಮಾಡುತ್ತಿದ್ದದ್ದೇ ಹೆಚ್ಚು..
ರಾಕಿಂಗ್ ಸ್ಟಾರ್ ಯಶ್ ಇತ್ತೀಚೆಗಷ್ಟೇ ಮುಂಬೈನಲ್ಲಿ ಇಂಡಿಯಾ ಟುಡೇ ಕಾನ್‌ಕ್ಲೇವ್‌ನಲ್ಲಿ ಭಾಗವಹಿಸಿದ್ದರು. ಈ ವೇಳೆ ದಕ್ಷಿಣ ಮತ್ತು ಉತ್ತರದ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. 'ಕಳೆದ 10 ವರ್ಷಗಳಿಂದ ನಮ್ಮ ಡಬ್ಬಿಂಗ್ ಚಿತ್ರಗಳು ಉತ್ತರ ಭಾರತದಲ್ಲಿ ಬಹಳ ಜನಪ್ರಿಯವಾಗಿವೆ. ಆದರೆ ಅವುಗಳನ್ನು ಉತ್ತರ ಭಾರತದ ಜನ ವಿಭಿನ್ನ ದೃಷ್ಟಿಕೋನದಿಂದ ನೋಡಿದ್ದಾರೆ. ಸೌತ್ ಸಿನಿಮಾಗಳೆಂದರೆ ಅವರು ಗೇಲಿ ಮಾಡುತ್ತಿದ್ದದೇ ಹೆಚ್ಚು. ಇದೀಗ ಕಾಲ ಬದಲಾಗಿದೆ. ಸೌತ್ ಸಿನಿಮಾಗಳನ್ನು ಜನ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಈ ಮೊದಲೆಲ್ಲ ಅತ್ಯಂತ ಕೆಟ್ಟದಾಗಿ ಡಬ್ ಮಾಡಿ ಯೂಟ್ಯೂಬ್‌ಗಳಲ್ಲಿ ಪ್ರಸಾರ ಮಾಡಲಾಗುತ್ತಿತ್ತು" ಎಂದು ಯಶ್ ಹೇಳಿಕೊಂಡಿದ್ದಾರೆ.
ರಾಜಮೌಳಿಗೆ ಕ್ರೆಡಿಟ್ ಕೊಟ್ಟ ಯಶ್..
"ರಾಜಮೌಳಿ ನಿರ್ದೇಶನದಲ್ಲಿ ಮೂಡಿಬಂದ ಬಾಹುಬಲಿ ಮೊದಲ ಮತ್ತು ಎರಡನೇ ಭಾಗ ಮಾಡಿದ ಸಾಧನೆ ಎಂಥದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ಆ ಸಿನಿಮಾಗಳಿಂದಲೇ ಸೌತ್ ಸಿನಿಮಾಗಳ ಪಥ ಬೇರೆಯ ದಿಕ್ಕಿಗೆ ಹರಿಯಿತು. ಒಂದು ಪರ್ವತವನ್ನು ಒಡೆಯಲು ಬಯಸಿದರೆ, ಅದಕ್ಕಾಗಿ ನಿಮ್ಮಿಂದ ನಿರಂತರ ಶ್ರಮ ಸಂದಾಯವಾಗಬೇಕು. ಬಾಹುಬಲಿ ಸಿನಿಮಾ ಆ ಕೆಲಸ ಮಾಡಿದೆ. ಕೆಜಿಎಫ್ ಇನ್ನೊಂದು ಬೇರೆ ರೀತಿಯ ಪ್ರಯತ್ನ" ಎಂದಿದ್ದಾರೆ ಯಶ್.